ರುಖಾಬಾಯಿ ಪಡವಿ ತನ್ನ ಬೆರಳುಗಳನ್ನು ಬಟ್ಟೆಯ ಮೇಲೆ ಆಡಿಸುವ ತನ್ನ ಬಯಕೆಯನ್ನು ತಡೆಯದಾದರು. ನಮ್ಮ ಮಾತಿನ ನಡುವೆಯೇ ಹಾಗೆ ಮಾಡುವ ಮೂಲಕ ಅವರು ಇನ್ನೊಂದು ಕಾಲಕ್ಕೆ ಹೋಗಿ ಬರುತ್ತಿದ್ದರು ಎನ್ನುವುದು ನನ್ನ ಅರಿವಿಗೆ ಬಂತು.
"ಇದು ನನ್ನ ಮದುವೆಯ ಸೀರೆ" ಎಂದು ಅಕ್ರಾನಿ ತಾಲ್ಲೂಕಿನ ಗುಡ್ಡಗಾಡು ಮತ್ತು ಬುಡಕಟ್ಟು ಪ್ರದೇಶದಲ್ಲಿ ಮಾತನಾಡುವ ಬುಡಕಟ್ಟು ಭಾಷೆಯಾದ ಭಿಲ್ ಭಾಷೆಯಲ್ಲಿ ನನಗೆ ತಿಳಿಸಿದರು. ಚಾರ್ಪಾಯಿ (ಮಂಚ) ಮೇಲೆ ಕುಳಿತು, 90 ವರ್ಷದ ವೃದ್ಧೆ ತನ್ನ ತೊಡೆಯ ಮೇಲೆ ತಿಳಿ ಗುಲಾಬಿ ಮತ್ತು ಚಿನ್ನದ ಅಂಚಿನ ಹತ್ತಿ ಸೀರೆಯ ನುಣಪನ್ನು ಆನಂದಿಸುತ್ತಿದ್ದರು.
“ನನ್ನ ಪೋಷಕರು ಅವರು ಕಷ್ಟಾರ್ಜಿತ ಹಣದಿಂದ ತಂದ ಸೀರೆಯಿದು. ಈ ಸೀರೆ ನನಗೆ ಅವರ ನೆನಪನ್ನು ತರುತ್ತದೆ” ಎಂದು ಅವರು ಮಗುವಿನಂತೆ ನಗುತ್ತಾ ಹೇಳಿದರು.
ರುಖಾಬಾಯಿ ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯ ಅಕ್ರಾನಿ ತಾಲ್ಲೂಕಿನ ಮೊಜಾರಾ ಎಂಬ ಹಳ್ಳಿಯಲ್ಲಿ ಜನಿಸಿದರು. ಈ ಪ್ರದೇಶದಲ್ಲೇ ಅವರ ಇಡೀ ಬದುಕು ಕಳೆದಿದೆ.
“ನನ್ನ ಮದುವೆಗೆ ಪೋಷಕರು 600 ರೂಪಾಯಿ ಖರ್ಚು ಮಾಡಿದ್ದರು. ಆಗ ಅದು ಬಹಳ ದೊಡ್ಡ ಮೊತ್ತ. ಆಗ ಈ ಸೀರೆ ಸೇರಿದಂತೆ ಒಟ್ಟು ಐದು ರೂಪಾಯಿಯನ್ನು ಬಟ್ಟೆಗೆಂದು ಖರ್ಚು ಮಾಡಿದ್ದರು” ಎಂದು ಅವರು ಹೇಳುತ್ತಾರೆ. ಆಭರಣಗಳನ್ನು ಅವರ ಪ್ರೀತಿಯ ಅಮ್ಮ ಮನೆಯಲ್ಲೇ ತಯಾರಿಸಿದ್ದರು.
“ಆಗ ಅಲ್ಲಿ ಅಕ್ಕಸಾಲಿಗ ಅಥವಾ ಕುಶಲಕರ್ಮಿ ಇದ್ದಿರಲಿಲ್ಲ. ನನ್ನಮ್ಮ ಬೆಳ್ಳಿಯ ಕಾಸುಗಳಿಂದ ನೆಕ್ಲೇಸ್ ತಯಾರಿಸಿದ್ದರು. ಅವರು ಕಾಸುಗಳನ್ನು ತೂತು ಮಾಡಿ ಗೋದ್ಧಿ [ಕೈಯಿಂದ ತಯಾರಿಸಿದ ವಲ್ಲಿ] ದಾರದಲ್ಲಿ ಪೋಣಿಸಿದ್ದರು” ರುಖಾಬಾಯಿ ಆ ದಿನಗಳನ್ನು ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಾ ನಕ್ಕು ಹೇಳಿದರು. ನಂತರ ಮತ್ತೆ “ಅದು ಸಿಲ್ವರ್ ಕಾಸು ಈಗಿನ ಹಾಗೆ ಕಾಗದದ ಹಣವಲ್ಲ” ಎಂದು ಹೇಳಿದರು.
ತನ್ನ ಮದುವೆ ಆಡಂಭರದಿಂದ ನಡೆದಿತ್ತು ಎಂದ ಅವರು ಮದುವೆಯಾದ ಕೂಡಲೇ ಯುವ ವಧು ಮೊಜಾರಾದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ತನ್ನ ಅತ್ತೆ-ಮಾವನ ಗ್ರಾಮವಾದ ಸುರ್ವಾನಿಗೆ ತೆರಳಿದರು. ಅಲ್ಲಿಂದಲೇ ಅವರ ಬದುಕಿಗೆ ತಿರುವು ದೊರೆಯಿತು. ಅಲ್ಲಿಂದ ಮುಂದೆ ಅವರ ಬದುಕು ಸರಳವಾಗಿರಲಿಲ್ಲ ಮತ್ತು ಸಂತೋಷದಾಯಕವಾಗಿಯೂ ಇರಲಿಲ್ಲ.
“ನನಗೆ ಅದು ಬೇರೆ ಮನೆಯಾದರೂ ಇನ್ನು ಮುಂದೆ ನಾನು ಅಲ್ಲಿಯೇ ಇರಬೇಕೆನ್ನುವುದು ನನಗೆ ಮನವರಿಕೆಯಾಯಿತು” ಎಂದು ಅವರು ಹೇಳಿದರು. “ನಂತರ ನಾನು ಋತುಮತಿಯಾದೆ. ಅಲ್ಲಿಗೆ ನಾನು ದೊಡ್ಡವಳಾದೆ ಎಂದು ಪರಿಗಣಿಸಲಾಯಿತು” ಎಂದು ಹಿರಿಯ ಮಹಿಳೆ ಹೇಳಿದರು.
“ಆದರೆ ನನಗೆ ಗಂಡ ಎಂದರೇನು, ಮದುವೆ ಎಂದರೇನು ಎನ್ನುವುದರ ಸುಳಿವು ಇದ್ದಿರಲಿಲ್ಲ.”
ಅವರು ಆಗಿನ್ನೂ ಚಿಕ್ಕ ಹುಡುಗಿಯಾಗಿದ್ದರು. ಅದು ಸ್ನೇಹಿತರೊಂದಿಗೆ ಆಡಬಹುದಾದ ವಯಸ್ಸು. ಅವರ ಬಾಲ್ಯ ವಿವಾಹವು ಅವರಿಗೆ ಅದಕ್ಕೆ ಹೊಂದಿಕೊಳ್ಳಲು ಮತ್ತು ತನ್ನ ವಯಸ್ಸಿಗೆ ಮೀರಿದ ಕಷ್ಟವನ್ನು ಸಹಿಸುವುದನ್ನು ಅನಿವಾರ್ಯವಾಗಿಸಿತು.
"ನಾನು ರಾತ್ರಿಯಿಡೀ ಮೆಕ್ಕೆಜೋಳ ಮತ್ತು ಧಾನ್ಯ ಬೀಸಬೇಕಾಗಿತ್ತು. ನನ್ನ ಅತ್ತೆ, ಅತ್ತಿಗೆ, ನನ್ನ ಪತಿ ಮತ್ತು ನನಸಾಕಾಗುವಷ್ಟು – ಐದು ಜನರಿಗೆ.”
ಕೆಲಸ ಅವರನ್ನು ದಣಿಸಿತ್ತು, ಜೊತೆಗೆ ನಿರಂತರ ಬೆನ್ನು ನೋವನ್ನೂ ನೀಡಿತ್ತು. “ಈಗ ಮಿಕ್ಸಿ ಮತ್ತೆ ಮಿಲ್ಲುಗಳು ಬಂದಿರುವುದರಿಂದಾಗಿ ಬದುಕು ಸಲುಭವಾಗಿದೆ.”
ಆ ದಿನಗಳಲ್ಲಿ ಅವರಿಗೆ ತಾನು ಅನುಭವಿಸುತ್ತಿದ್ದ ಪ್ರಕ್ಷುಬ್ಧತೆಯನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲೂ ಆಗುತ್ತಿರಲಿಲ್ಲ. ಯಾರೂ ತನ್ನ ಮಾತುಗಳಿಗೆ ಕಿವಿಗೊಡುತ್ತಿರಲಿಲ್ಲ ಎಂದು ಅವರು ಹೇಳುತ್ತಾರೆ. ಇಚ್ಛಾಶಕ್ತಿ ಮತ್ತು ಸಹಾನುಭೂತಿಯುಳ್ಳ ಕೇಳುಗರ ಕೊರತೆಯ ಹೊರತಾಗಿಯೂ, ರುಖಾಬಾಯಿ ಓರ್ವ ಅಸಾಧಾರಣ ಸಂಗಾತಿಯನ್ನು ಕಂಡುಕೊಂಡರು – ಅದೊಂದು ನಿರ್ಜೀವ ವಸ್ತು.ಅವರು ಹಳೆಯ ಕಾಲದ ಟ್ರಂಕಿನಲ್ಲಿ ಇರಿಸಲಾಗಿದ್ದ ಮಣ್ಣಿನ ಪಾತ್ರೆಯೊಂದನ್ನು ಹೊರತೆಗೆದು ತೋರಿಸಿದರು. “ನಾನು ಅವುಗಳೊಂದಿಗೆ ಬಹಳ ಸಮಯ ಕಳೆದಿದ್ದೇನೆ. ಚುಲ್ ಎದುರು ಎಲ್ಲಾ ಒಳ್ಳೆಯ ಮತ್ತು ಕೆಟ್ಟ ವಿಷಯಗಳ ಬಗ್ಗೆ ಯೋಚಿಸುತ್ತಿದ್ದೆ. ಪಾತ್ರೆಗಳನ್ನು ನನ್ನ ತಾಳ್ಮೆಯುಳ್ಳ ಕೇಳುಗರಾಗಿದ್ದವು.”
ಇದೇನೂ ಅಪರೂಪವಲ್ಲ. ಗ್ರಾಮೀಣ ಮಹಾರಾಷ್ಟ್ರದ ಅನೇಕ ಭಾಗಗಳಲ್ಲಿ, ಮಹಿಳೆಯರು ಮತ್ತೊಂದು ಸರಳ ಅಡುಗೆ ಸಾಧನವಾದ ಬೀಸುಕಲ್ಲಿನಲ್ಲಿ ತಮ್ಮ ಸಂಗಾತಿಯನ್ನು ಕಂಡುಕೊಂಡಿದ್ದರು. ಪ್ರತಿದಿನ ಹಿಟ್ಟು ಬೀಸುವಾಗ ಎಲ್ಲಾ ವಯಸ್ಸಿನ ಮಹಿಳೆಯರೂ ತಮ್ಮ ತಮ್ಮ ಗಂಡಂದಿರು, ಸಹೋದರರು ಮತ್ತು ಮಕ್ಕಳು ಕೇಳದ ಸಂಗತಿಗಳನ್ನು ಈ ಬೀಸುಕಲ್ಲಿನ ಬಳಿ ಹೇಳಿಕೊಳ್ಳುತ್ತಿದ್ದರು. ಇದರಲ್ಲಿ ನೋವು, ನಲಿವು, ಹೃದಯ ವಿದ್ರಾವಕ ಹಾಡುಗಳು ಸೇರಿದ್ದವು. ಬೀಸುಕಲ್ಲಿನ ಹಾಡುಗಳ ಕುರಿತು ನೀವು ನಮ್ಮ ಪರಿ ಗ್ರೈಂಡ್ ಮಿಲ್ ಪ್ರಾಜೆಕ್ಟ್ ಸರಣಿಯನ್ನು ಇಲ್ಲಿ ಓದಬಹುದು.
ಟ್ರಂಕ್ ತೆರೆಯುತ್ತಿದ್ದಂತೆ ರುಖಾಬಾಯಿಗೆ ತನ್ನ ಉತ್ಸಾಹವನ್ನು ತಡೆಯಲು ಸಾಧ್ಯವಾಗಲಿಲ್ಲ. “[ಒಣಗಿದ ಸೋರೆಕಾಯಿಯಿಂದ ಕೆತ್ತಲಾದ ಸಟ್ಟುಗ]. ನಾವು ಮೊದಲು ಈ ರೀತಿ ನೀರು ಕುಡಿಯುತ್ತಿದ್ದೆವು" ಎಂದು ಅವರು ಹೇಳುತ್ತಾ ಕುಡಿಯುತ್ತಿದ್ದ ರೀತಿಯನ್ನು ಅನುಕರಿಸಿ ತೋರಿಸಿದರು. ಅವರು ಹಾಗೆ ತೋರಿಸುವ ಮೂಲಕ ಸಂತೋಷವನ್ನು ಅನುಭವಿಸುತ್ತಿದ್ದರು.
ಮದುವೆಯಾದ ಒಂದು ವರ್ಷದೊಳಗೆ ರುಖಾಬಾಯಿ ತಾಯಿಯಾದರು. ಅಷ್ಟೊತ್ತಿಗಾಗಲೇ ಅವರು ಮನೆ ಮತ್ತು ಕೃಷಿ ಕೆಲಸಗಳನ್ನು ಹೇಗೆ ನಿರ್ವಹಿಸುವುದು ಎನ್ನುವುದನ್ನು ಕಲಿತಿದ್ದರು.
ಮಗು ಹುಟ್ಟಿದಾಗ ಮನೆಯನ್ನು ನಿರಾಶೆ ಆವರಿಸಿತು. "ಮನೆಯಲ್ಲಿ ಪ್ರತಿಯೊಬ್ಬರೂ ಗಂಡು ಮಗುವನ್ನು ಬಯಸಿದ್ದರು, ಆದರೆ ಹೆಣ್ಣು ಮಗು ಜನಿಸಿತು. ಇದರಿಂದ ನನಗೇನೂ ತೊಂದರೆಯಾಗಲಿಲ್ಲ, ಏಕೆಂದರೆ ಮಗುವನ್ನು ನಾನೇ ನೋಡಿಕೊಳ್ಳಬೇಕಾಗಿತ್ತು" ಎಂದು ಅವರು ಹೇಳುತ್ತಾರೆ.
ಅದರ ನಂತರ ರುಖಾಬಾಯಿಗೆ ಐದು ಹೆಣ್ಣು ಮಕ್ಕಳಾದರು. "ಒಬ್ಬ ಗಂಡು ಮಗ ಬೇಕೆನ್ನುವ ಹಠವಿತ್ತು. ಕೊನೆಗೆ, ನಾನು ಅವರಿಗೆ ಇಬ್ಬರು ಗಂಡು ಮಕ್ಕಳನ್ನು ನೀಡಿದೆ. ಅದರ ನಂತರ ನಾನು ಸ್ವತಂತ್ರಳಾದೆ" ಎಂದು ಅವರು ಹಿಂದಿನ ದಿನಗಳ ನೆನಪಿನಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಾ ಹೇಳುತ್ತಾರೆ.
ಎಂಟು ಮಕ್ಕಳಿಗೆ ಜನ್ಮ ನೀಡಿದ ನಂತರ, ಅವರ ದೇಹ ತುಂಬಾ ದುರ್ಬಲವಾಯಿತು. "ಕುಟುಂಬವು ಬೆಳೆದಿತ್ತು ಆದರೆ ನಮ್ಮ ಎರಡು ಗುಂಡಾ [ಸರಿಸುಮಾರು 2,000 ಚದರ ಅಡಿ] ಜಮೀನಿನಲ್ಲಿ ಇಳುವರಿ ಬರುತ್ತಿರಲಿಲ್ಲ. ಹೀಗಾಗಿ ತಿನ್ನಲು ಇರುತ್ತಿರಲಿಲ್ಲ. ಹೆಣ್ಣುಮಕ್ಕಳಿಗೆ ಮತ್ತು ಹೆಂಗಸರಿಗೆ ಹೆಚ್ಚು ತಿನ್ನಲು ಕೊಡುತ್ತಿರಲಿಲ್ಲ. ನನಗೆ ನಿರಂತರ ಬೆನ್ನು ನೋವಿದ್ದ ಕಾರಣ ಆ ಆಹಾರ ನನಗೆ ಪೋಷಕಾಂಶ ನೀಡುತ್ತಿರಲಿಲ್ಲ” ಬದುಕು ನಡೆಸಲು ಹೆಚ್ಚು ಸಂಪಾದಿಸುವುದು ಅನಿವಾರ್ಯವಾಗಿತ್ತು. “ಬೆನ್ನು ನೋವಿನ ನಡುವೆಯೂ ನಾನು ಮತ್ತು ನನ್ನ ಗಂಡ ಮೋಟ್ಯಾ ಪಡವಿ ದಿನಕ್ಕೆ 50 ಪೈಸೆ ಕೂಲಿಗೆ ರಸ್ತೆ ಕೆಲಸ ಮಾಡಲು ಹೋಗುತ್ತಿದ್ದೆವು.”
ಈಗ ರುಖಾಬಾಯಿ ತನ್ನ ಕುಟುಂಬದ ಮೂರನೇ ತಲೆಮಾರು ಬೆಳೆಯವುದನ್ನು ನೋಡುತ್ತಿದ್ದಾರೆ. "ಇದು ಹೊಸ ಜಗತ್ತು" ಎಂದು ಅವರು ಹೇಳುತ್ತಾರೆ ಮತ್ತು ಈ ಬದಲಾವಣೆಯು ಒಂದಷ್ಟು ಒಳ್ಳೆಯದನ್ನು ತಂದಿದೆ ಎಂದು ಒಪ್ಪಿಕೊಳ್ಳುತ್ತಾರೆ.
ನಮ್ಮ ಮಾತುಕತೆ ಮುಗಿಯುತ್ತಿದ್ದಂತೆ ಅವರು ಈಗಿನ ವೈಚಿತ್ರ್ಯವೊಂದನ್ನು ಹೇಳಿದರು. “ಹಿಂದೆ ಮುಟ್ಟಿನ ಸಮಯದಲ್ಲಿ ನಾವು ಮನೆಯ ಎಲ್ಲ ಕಡೆ ಓಡಾಡುತ್ತಿದ್ದೆವು. ಈಗ ಮಹಿಳೆಯರಿಗೆ ಅಡುಗೆ ಮನೆಯೊಳಗೆ ಪ್ರವೇಶವಿಲ್ಲ” ಎಂದು ಅವರು ಒಂದು ಬಗೆಯ ಅಸಹನೆಯಿಂದ ಹೇಳುತ್ತಾರೆ. “ದೇವರ ಫೋಟೊಗಳು ಮನೆಯೊಳಗೆ ಬಂದವು ಆದರೆ ಮನೆಯೊಳಗಿದ್ದ ಹೆಂಗಸರು ಮನೆಯಿಂದ ಹೊರಗೆ ತಳ್ಳಲ್ಪಟ್ಟರು.”
ಅನುವಾದ: ಶಂಕರ. ಎನ್. ಕೆಂಚನೂರು