ಮಳೆಗಾಲ ಮುಗಿದ ನಂತರ ವರ್ಷದಲ್ಲಿ ಸುಮಾರು ಆರು ತಿಂಗಳು ಮಹಾರಾಷ್ಟ್ರದ ಮರಾಠಾವಾಡಾ ಪ್ರದೇಶದ ರೈತರು ಕಬ್ಬು ಕಟಾವು ಮಾಡುವ ಕೆಲಸವನ್ನು ಹುಡುಕಿಕೊಂಡು ಮನೆಯಿಂದ ಹೊರಡುತ್ತಾರೆ. "ನನ್ನ ತಂದೆ ಇದನ್ನು ಮಾಡಿದ್ದರು, ನಾನು ಮತ್ತು ನನ್ನ ಮಗ ಕೂಡ ಇದನ್ನು ಮಾಡಬೇಕಾಗಿದೆ" ಎಂದು ಅಡ್ಗಾಂವ್ ಮೂಲದ, ಪ್ರಸ್ತುತ ಔರಂಗಾಬಾದಿನಲ್ಲಿ ವಾಸಿಸುತ್ತಿರುವ ಅಶೋಕ್ ರಾಥೋಡ್ ಹೇಳುತ್ತಾರೆ. ಅವರು ಬಂಜಾರ ಸಮುದಾಯಕ್ಕೆ ಸೇರಿದವರು (ಈ ಸಮುದಾಯವನ್ನು ರಾಜ್ಯದಲ್ಲಿ ಇತರ ಹಿಂದುಳಿದ ವರ್ಗಗಳಡಿ ಪಟ್ಟಿ ಮಾಡಲಾಗಿದೆ). ಈ ಪ್ರದೇಶದ ಕಬ್ಬು ಕಟಾವು ಕೆಲಸ ಮಾಡುವವರಲ್ಲಿ ಅನೇಕರು ಇಂತಹ ಅಂಚಿನಲ್ಲಿರುವ ಗುಂಪುಗಳಿಗೆ ಸೇರಿದವರು.
ತಮ್ಮದೇ ಊರಿನಲ್ಲಿ ಕೆಲಸ ಸಿಗದ ಕಾರಣ ಈ ಜನರು ಈ ರೀತಿಯ ಹಂಗಾಮಿ ವಲಸೆ ಹೋಗುತ್ತಾರೆ. ಇಡೀ ಕುಟುಂಬಗಳು ಸ್ಥಳಾಂತರಗೊಂಡಾಗ, ಮಕ್ಕಳು ಸಹ ಅವರೊಂದಿಗೆ ವಲಸೆ ಹೋಗಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಅವರಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ.
ಸಕ್ಕರೆ ಮತ್ತು ರಾಜಕೀಯ ಮಹಾರಾಷ್ಟ್ರದಲ್ಲಿ ನಿಕಟ ಸಂಬಂಧ ಹೊಂದಿವೆ. ಬಹುತೇಕ ಎಲ್ಲ ಸಕ್ಕರೆ ಕಾರ್ಖಾನೆಗಳ ಮಾಲೀಕರು ತಮ್ಮ ಜೀವನೋಪಾಯಕ್ಕಾಗಿ ತಮ್ಮನ್ನು ಅವಲಂಬಿಸಿರುವ ಕಾರ್ಮಿಕರ ರೂಪದ ವೋಟ್ ಬ್ಯಾಂಕ್ ಬಳಸಿಕೊಂಡು ನೇರವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ.
"ಅವರು ಕಾರ್ಖಾನೆಗಳನ್ನು ಹೊಂದಿದ್ದಾರೆ, ಸರ್ಕಾರವನ್ನು ನಡೆಸುತ್ತಾರೆ, ಎಲ್ಲವೂ ಅವರ ಕೈಯಲ್ಲಿದೆ" ಎಂದು ಅಶೋಕ್ ಹೇಳುತ್ತಾರೆ.
ಆದರೆ ಕಾರ್ಮಿಕರ ಬದುಕಿನ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. "ಅವರು ಆಸ್ಪತ್ರೆ ನಿರ್ಮಿಸಬಲ್ಲ ಶಕ್ತಿಯಿದೆ [...] ಜನರು ಕೆಲಸವಿಲ್ಲದಿರುವಾಗ ಸುಮ್ಮನೆ ಕುಳಿತಿರುತ್ತಾರೆ. ಅತಂಹವರಲ್ಲಿ 500 ಜನರಿಗೆ ಕೆಲಸ ಕೊಡಬಹುದು [...] ಆದರೆ ಇಲ್ಲ. ಅವರು ಹಾಗೆ ಮಾಡುವುದಿಲ್ಲ" ಎಂದು ಅವರು ಹೇಳುತ್ತಾರೆ.
ಈ ಚಿತ್ರವು ಕಬ್ಬು ಕಟಾವು ಕೆಲಸ ಹುಡುಕಿಕೊಂಡು ವಲಸೆ ಹೋಗುವ ರೈತರು ಮತ್ತು ಕೃಷಿ ಕಾರ್ಮಿಕರ ಕಥೆ ಮತ್ತು ಅಲ್ಲಿ ಅವರು ಎದುರಿಸುವ ಸವಾಲುಗಳನ್ನು ಹೇಳುತ್ತದೆ.
ಎಡಿನ್ಬರ್ಗ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಗ್ಲೋಬಲ್ ಚಾಲೆಂಜಸ್ ರಿಸರ್ಚ್ ಫಂಡ್ ಅನುದಾನ ಸಹಾಯದೊಂದಿಗೆ ಈ ಚಲನಚಿತ್ರವನ್ನು ನಿರ್ಮಿಸಲಾಗಿದೆ.
ಅನುವಾದ
: ಶಂಕರ.
ಎನ್.
ಕೆಂಚನೂರು