ಅಬ್ದುಲ್ ಲತೀಫ್ ಬಜ್ರಾನ್ ಮೇ ತಿಂಗಳ ಮೊದಲ ವಾರದಲ್ಲಿ ರಜೌರಿ ಜಿಲ್ಲೆಯಲ್ಲಿರುವ ಪೆರಿಯಿಂದ ತಮ್ಮ ಜಾನುವಾರುಗಳೊಡನೆ – ಕುರಿ, ಆಡುಗಳು, ಕುದುರೆಗಳು ಮತ್ತು ಒಂದು ನಾಯಿ – ಕಾಶ್ಮೀರದ ಬೆಟ್ಟಗಳಲ್ಲಿ ಮೇವು ಹುಡುಕಿಕೊಂಡು ಹೊರಟಿದ್ದರು. ಅವರೊಡನೆ ಅವರ ಮಗ ತಾರೀಖ್ ಮತ್ತು ಇನ್ನೂ ಕೆಲವರನ್ನು ಜೊತೆಯಲ್ಲಿ ಕರೆದೊಯ್ದಿದ್ದರು. “ನಾನು ನನ್ನ ಕುಟುಂಬವನ್ನು [ಹೆಂಡತಿ ಮತ್ತು ಸೊಸೆ] ಕೆಲವು ದುರ್ಬಲವಾಗಿದ್ದ ಜಾನುವಾರುಗಳೊಡನೆ, ಆಹಾರ, ಆಶ್ರಯ ಮತ್ತು ಇತ್ಯಾದಿ ಅವಶ್ಯ ವಸ್ತುಗಳೊಡನೆ ಮಿನಿ ಟ್ರಕ್ಕಿನಲ್ಲಿ ಕಳಿಸಿದ್ದೆ” ಎಂದು ಜಮ್ಮುವಿನ ಈ 65 ವರ್ಷದ ಹಿರಿಯ ಪಶುಪಾಲಕ ತಿಳಿಸಿದರು.
ಆದರೆ ಎರಡು ವಾರಗಳ ನಂತರ, “ನನಗೆ ಅವರನ್ನು ನೋಡಿ ಆಘಾತವಾಗಿತ್ತು [ನೋವಿನಿಂದ]” ಎಂದು ಅವರು ಹೇಳುತ್ತಾರೆ. ಅವರು ಅವರೆಲ್ಲ ಅವರು ತಲುಪಬೇಕಿದ್ದ ಸ್ಥಳವಾದ ಮಿನಿಮಾರ್ಗವನ್ನು (ಭಾರತ-ಪಾಕಿಸ್ಥಾನ ಗಡಿ) ತಲುಪಿ, ಅಲ್ಲಿ ಬೇಸಗೆ ಕಾಲದ ಶಿಬಿರವನ್ನು ಸ್ಥಾಪಿಸಿರಬಹುದು ಎಂದು ಭಾವಿಸಿದ್ದರು.
ಆದರೆ ಅವರು ತಲುಪಬೇಕಿದ್ದ ಸ್ಥಳದಿಂದ ಹದಿನೈದು ದಿನಗಳಷ್ಟು ದೂರವಿದ್ದರು. ಹವಾಮಾನದ ಕಾರಣದಿಂದಾಗಿ ಅವರು ಮಿನಿಮಾರ್ಗ್ ತಲುಪದೆ ಅಲ್ಲಿ ನಿಂತಿದ್ದರು ಎಂದು ಅವರು ಹೇಳುತ್ತಾರೆ. ಅವರು ಜೋಜಿಲಾ ಪಾಸ್ ಎನ್ನುವಲ್ಲಿ ಹಿಮ ಕರಗಲಿ ಎಂದು ಕಾಯುತ್ತಿದ್ದರು.
ಪ್ರತಿವರ್ಷ ಬೇಸಗೆ ಬರುತ್ತಿದ್ದ ಹಾಗೆ ಜಮ್ಮು ಪ್ರದೇಶದಲ್ಲಿ ಹುಲ್ಲು ಒಣಗತೊಡಗುತ್ತದೆ. ಹೀಗಾಗಿ ಬಕರ್ವಾಲ್ ರೀತಿಯ ಪಶುಪಾಲಕ ಸಮುದಾಯಗಳು ಮೇವು ಹುಡುಕಿಕೊಂಡು ಕಾಶ್ಮೀರದ ಕಣಿವೆಗಳಿಗೆ ವಲಸೆ ಹೋಗುತ್ತಾರೆ. ನಂತರ ಅವರು ವಾಪಸ್ ಬರುವುದು ಅಕ್ಟೋಬರ್ ತಿಂಗಳ ಸುಮಾರಿಗೆ, ಆಗ ಇಲ್ಲಿ ಮತ್ತೆ ವಾತಾವರಣ ತಣ್ಣಗಾಗಿರುತ್ತದೆ.
ಆದರೆ ಎತ್ತರದ ಪ್ರದೇಶಗಳಲ್ಲಿನ ಮೈದಾನಗಳು ಹಿಮಾವೃತವಾಗಿದ್ದಾಗ, ಅಬ್ದುಲ್ ಅವರಂತಹ ಪಶುಪಾಲಕರು ಸಿಕ್ಕಿಹಾಕಿಕೊಂಡು ಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ಊರಿನಲ್ಲಿ ಹುಲ್ಲು ಸಿಗದ ಕಾರಣ ಅಲ್ಲಿಗೆ ಹೋಗುವಂತಿರುವುದಿಲ್ಲ, ಹಾಗೆಂದು ಎತ್ತರದ ಪ್ರದೇಶಕ್ಕೂ ಹಿಮದ ಕಾರಣಕ್ಕೆ ಹೋಗಲಾಗುವುದಿಲ್ಲ.











