“ಅವರು ನಾವು ದೆಹಲಿ ಪ್ರವೇಶಿಸದಂತೆ ತಡೆದಿದ್ದರು” ಎನ್ನುತ್ತಾರೆ ಬಿಟ್ಟು ಮಲನ್.‌ ಬುಟ್ಟರ್‌ ಸರಿನ್ಹ್‌ ಗ್ರಾಮದ ಅಂಚಿನಲ್ಲಿ ನಿಂತು ನಮ್ಮೊಂದಿಗೆ ಮಾತನಾಡುತ್ತಿದ್ದ ಅವರು “ಈಗ ಪಂಜಾಬಿನ ಪ್ರತಿ ಹಳ್ಳಿಯ ಬಾಗಿಲೂ ಅವರ ಪಾಲಿಗೆ ಮುಚ್ಚಲ್ಪಟ್ಟಿವೆ” ಎಂದರು.

ರೈತರಾದ ಬಿಟ್ಟು ಮಲನ್ ಶ್ರೀ ಮುಕ್ತಸರ್ ಸಾಹಿಬ್ ಜಿಲ್ಲೆಯ ಮಲನ್ ಗ್ರಾಮದಲ್ಲಿ ಐದು ಎಕರೆ ಜಮೀನು ಹೊಂದಿದ್ದಾರೆ. ಇಲ್ಲಿ ʼಅವರುʼ ಎಂದರೆ ಕೇಂದ್ರದಲ್ಲಿ ಆಡಳಿತದಲ್ಲಿರುವ ಮತ್ತು ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ದಿಸಿರುವ ಬಿಜೆಪಿ. ʼನಾವುʼ ಎಂದರೆ ದೆಹಲಿಗೆ ಪ್ರವೇಶವನ್ನು ನಿರಾಕರಿಸಲ್ಪಟ್ಟಿದ್ದ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನಾ ನಿರತರಾಗಿದ್ದ ಸಾವಿರಾರು ರೈತರು.

ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿನ ಕಿಸಾನ್‌ ಆಂದೋಲನ ಮತ್ತು ಅದರ ಶಿಬಿರಗಳ ನೆನಪುಗಳು ಪಂಜಾಬಿನ ರೈತರ ನೆನಪಿನಲ್ಲಿ ಆಳವಾಗಿ ಬೇರೂರಿವೆ. ಈ ರಾಜ್ಯದ ಸಾವಿರಾರು ರೈತರು ಈ ಹಿಂದೆ ಮೂರು ಬೇಸಿಗೆಗಳ ಕೆಳಗೆ ಪ್ರತಿರೋಧ ಮತ್ತು ಭರವಸೆಯ ಸುದೀರ್ಘ ಮೆರವಣಿಗೆಯನ್ನು ಪ್ರಾರಂಭಿಸಿದ್ದರು. ತಮ್ಮ ಕೃಷಿ ಬದುಕಿಗೆ ಬೆದರಿಕೆಯಾಗಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆನ್ನುವ ಏಕೈಕ ಬೇಡಿಕೆಯೊಂದಿಗೆ ಸಾವಿರಾರು ರೈತರು ಸಂಘಟಿತರಾಗಿ ತಮ್ಮ ಟ್ರ್ಯಾಕ್ಟರ್‌ ಹಾಗೂ ಟ್ರೈಲರುಗಳ ಬೆಂಗಾವಲಿನೊಂದಿಗೆ ರಾಷ್ಟ್ರ ರಾಜಧಾನಿಗೆ ಲಗ್ಗೆಯಿಟ್ಟಿದ್ದರು.

ತಮ್ಮ ಮನವಿಗಳೊಂದಿಗೆ ದೆಹಲಿಯ ಗಡಿಯಲ್ಲಿ ಬೀಡುಬಿಟ್ಟ ರೈತರಿಗೆ ಅಲ್ಲಿ ಎದುರಾಗಿದ್ದು ತಮ್ಮ ಅಹವಾಲನ್ನು ಕೇಳುವ ಕಿವಿಯಲ್ಲ ಬದಲಿಗೆ ದೊಡ್ಡ ದೊಡ್ಡ ತಡೆ ಗೋಡೆಗಳು. ನಂತರ ಈ ಪ್ರತಿಭಟನೆ 2 ಡಿಗ್ರಿಯ ಮೈ ಕೊರೆಯುವ ಚಳಿ, 45 ಡಿಗ್ರಿ ಬಿಸಿಲನ್ನು ಲೆಕ್ಕಿಸದೆ ಸುಮಾರು ಒಂದು ವರ್ಷಗಳ ತನಕ ಸಾಗಿತು. ಅಲ್ಲಿನ ಮೈಕೊರೆಯುವ ಚಳಿ ಮತ್ತು ಸುಡುವ ಸೆಕೆಯ ನಡುವೆ ಕಬ್ಬಿಣದ ಟ್ರೈಲರುಗಳೇ ಅವರ ಮನೆಯಾಗಿದ್ದವು ಎಂದು ಈ ಹೋರಾಟದಲ್ಲಿ ಭಾಗವಹಿಸಿದ್ದವರು ಹೇಳುತ್ತಾರೆ.

ಹಲವು ಏರಿಳಿತಗಳನ್ನು ಒಳಗೊಂಡಿದ್ದ ಅವರ 358 ದಿನಗಳ ಹೋರಾಟಕ್ಕಾಗಿ ಅವರು ದೆಹಲಿಯಲ್ಲಿ ಅವರು ಸ್ಥಾಪಿಸಿದ್ದ ಬಿಡಾರಗಳಿಂದ 700ಕ್ಕೂ ಹೆಚ್ಚು ಶವಗಳನ್ನು ಪಂಜಾಬಿಗೆ ಕಳುಹಿಸಲಾಗಿತ್ತು. ಪ್ರತಿಯೊಂದು ಶವವೂ ಈ ಹೋರಾಟದ ಮೂಲಕ ಸಾಕ್ಷಿಗಳಾಗಿದ್ದವು. ಆದರೆ ಇದರಿಂದ ಹೋರಾಟ ಧೃತಿಗೆಡಲಿಲ್ಲ. ಅವರ ತ್ಯಾಗ ಮತ್ತು ಹೋರಾಟ ಮುಂದೆ ಒಂದು ವರ್ಷಗಳ ಕಾಲ ನಿರಾಕರಣೆಯ ಧೋರಣೆ ತೋರಿದ್ದ ಸರ್ಕಾರ ಮಂಡಿಯೂರಿ ಕುಳಿತಿತು. ನವೆಂಬರ್ 19, 2021ರಂದು ಕಾನೂನುಗಳನ್ನು ರದ್ದುಪಡಿಸುವುದಾಗಿ ಪ್ರಧಾನಿ ಘೋಷಿಸಿದರು.

ಈಗ ಪಂಜಾಬಿನಲ್ಲಿ ಅದನ್ನೆಲ್ಲ ಮರಳಿಸುವ ಸಮಯ. ಇಂದು ಬಿಟ್ಟು ಮಲನ್‌ ಅವರಂತಹ ಅನೇಕ ರೈತರು ತಾವು ದೆಹಲಿಯಲ್ಲಿ ಎದುರಿಸಿದ್ದನ್ನು ತಿರುಗಿ ಕೊಡಲು ಸಿದ್ಧರಾಗಿದ್ದಾರೆ. ಎಪ್ರಿಲ್‌ 23ರಂದು ತನ್ನಂತಹ ರೈತರು ಎದುರಿಸಿದ ಸಂಕಷ್ಟಗಳನ್ನು ತಿರುಗಿಸಿ ಕೊಡುವುದು ತನ್ನ ಕರ್ತವ್ಯ ಎಂದು ಬಿಟ್ಟು ಭಾವಿಸಿದ್ದಾರೆ. ಇದೇ ನಿಟ್ಟಿನಲ್ಲಿ ಅವರು ಬುಟ್ಟರ್ ಸರಿನ್ಹ್ ಗ್ರಾಮದಲ್ಲಿ ಫರೀದ್‌ಕೋಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹನ್ಸ್ ರಾಜ್ ಹನ್ಸ್ ಅವರನ್ನು ಧೈರ್ಯದಿಂದ ಎದುರಿಸಿದರು.

ವಿಡಿಯೋ ನೋಡಿ: ʼಪಂಜಾಬ್‌ ರೈತರು ಬಿಜೆಪಿ ಅಭ್ಯರ್ಥಿಗಳ ಪ್ರಚಾರದ ಸಮಯದಲ್ಲಿ ಲೆಕ್ಕ ಚುಕ್ತಾ ಮಾಡುತ್ತಿರುವುದುʼ

2020ರ ಸಮಯದಲ್ಲಿ ದೆಹಲಿ ಪ್ರವೇಶ ನಿರಾಕರಿಸಲ್ಪಟ್ಟ ರೈತರು ಈಗ ಬಿಜೆಪಿ ಅಭ್ಯರ್ಥಿಗಳಿಗೆ ಅದರ ರುಚಿ ತೋರಿಸುತ್ತಿದ್ದಾರೆ

“ನಮಗೆ ಪ್ರಾಣಿಗಳ ಮೇಲೆ ಗಾಡಿ ಹತ್ತಿಸುವುದನ್ನು ಸಹ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಿರುವಾಗ ಲಖೀಂಪುರ ಖೇರಿಯಲ್ಲಿ [ಅಜಯ್‌ ಮಿಶ್ರಾ] ತೇನಿಯ ಮಗ ನಿರ್ದಯವಾಗಿ ರೈತರ ಕಾಲುಗಳ ಮೇಲೆ ಜೀಪನ್ನು ಹತ್ತಿಸಿ ಹಲವರ ಜೀವ ತೆಗೆದ. ಖನೌರಿ ಮತ್ತು ಶಂಭು ಗಡಿಗಳಲ್ಲಿ ಗುಂಡಿನ ಮಳೆಯನ್ನೇ ಸುರಿಸಲಾಯಿತು. ಪ್ರೀತ್‌ ಪಾಲ್‌ ಮಾಡಿದ ತಪ್ಪಾದರೂ ಏನು? ಅವರ ಮೂಳೆಗಳು ಮುರಿದಿದ್ದವು. ಅವರ ದವಡೆ ಒಡೆದಿತ್ತು. ಅವನು ಮಾಡಿದ ಏಕೈಕ ತಪ್ಪೆಂದರೆ ಲಂಗರ್‌ನಲ್ಲಿ ಹಸಿದವರಿಗೆ ಊಟ ಬಡಿಸಿದ್ದು. ಇದೀಗ ಅವನು ಚಂಡೀಗಢದ ಪಿಜಿಐ [ಆಸ್ಪತ್ರೆಯಲ್ಲಿ] ಮಲಗಿದ್ದಾನೆ; ಅವನನ್ನು ವಿಚಾರಿಸಲು ಹೋಗಿದ್ದೀರಾ ನೀವು” ಎಂದು ಬಿಟ್ಟು ಹನ್ಸ್‌ ರಾಜ್‌ ಅವರೆದುರು ಪ್ರಶ್ನೆಗಳ ಸುರಿಮಳೆಯನ್ನೇ ಸುರಿದರು.

"ಇಬ್ಬರು ಚಿಕ್ಕ ಮಕ್ಕಳ ತಂದೆಯಾದ ಪಟಿಯಾಲಾದ 40 ವರ್ಷದ ವ್ಯಕ್ತಿಯೊಬ್ಬರು ಅಶ್ರುವಾಯು ಶೆಲ್ ದಾಳಿಯಲ್ಲಿ ಕಣ್ಣುಗಳನ್ನು ಕಳೆದುಕೊಂಡರು. ಅವರು ಕೇವಲ ಮೂರು ಎಕರೆ ಭೂಮಿಯನ್ನು ಹೊಂದಿದ್ದಾರೆ. ನೀವು ಅವರ ಮನೆಗೆ ಭೇಟಿ ನೀಡಿದ್ದೀರಾ? ಇಲ್ಲ. ನೀವು ಸಿಂಘುವಿಗೆ ಹೋಗುವ ಸಾಹಸ ಮಾಡಿದ್ದೀರಾ? ಇಲ್ಲ." ಹನ್ಸ್ ರಾಜ್ ಹನ್ಸ್ ಅವರ ಬಳಿ ಪ್ರಶ್ನೆಗಳಿಗೆ ಉತ್ತರವಿರಲಿಲ್ಲ.

ಪಂಜಾಬಿನ ಉದ್ದಕ್ಕೂ ಹಳ್ಳಿಗಳ ಗಡಿಗಳಲ್ಲಿ ಸಾವಿರಾರು ಬಿಟ್ಟು ಅವರಂತಹ ರೈತರು ಬಿಜೆಪಿ ಅಭ್ಯರ್ಥಿಗಳ ಬರವಿಗಾಗಿ ಕಾಯುತ್ತಿದ್ದಾರೆ. ಪಂಜಾಬಿನಲ್ಲಿ ಜೂನ್‌ 1ರಂದು ಚುನಾವಣೆ ನಡೆಯಲಿದೆ. ಕೇಸರಿ ಪಕ್ಷವು 13 ಕ್ಷೇತ್ರಗಳಲ್ಲಿ 9ಕ್ಕೆ ಮಾತ್ರ ಅಭ್ಯರ್ಥಿಗಳನ್ನು ಘೋಷಿಸಿತ್ತು. ಆದರೆ ನಂತರ  ಮೇ 17ರಂದು ಇನ್ನೂ ನಾಲ್ಕು ಹೆಸರುಗಳನ್ನು ಪಟ್ಟಿಗೆ ಸೇರಿಸಿತು. ಅವರೆಲ್ಲರನ್ನೂ ರೈತರು ಕಪ್ಪು ಬಾವುಟ ಘೋಷಣೆಗಳು ಮತ್ತು ಪ್ರಶ್ನೆಗಳೊಂದಿಗೆ ಊರಿನ ಬಾಗಿಲಿನಲ್ಲೇ ತಡೆಯುತ್ತಿದ್ದಾರೆ. ಊರಿನ ಒಳಗೆ ಕಾಲಿಡುವುದಕ್ಕೂ ಬಿಡುತ್ತಿಲ್ಲ.

"ಪ್ರಣೀತ್ ಕೌರ್ ಅವರನ್ನು ನಮ್ಮ ಹಳ್ಳಿಗೆ ಬರಲು ನಾವು ಬಿಡುವುದಿಲ್ಲ. ದಶಕಗಳಿಂದ ಅವರಿಗೆ ನಿಷ್ಠರಾಗಿರುವ ಕುಟುಂಬಗಳನ್ನು ಸಹ ನಾವು ಪ್ರಶ್ನಿಸಿದ್ದೇವೆ" ಎಂದು ಪಟಿಯಾಲ ಜಿಲ್ಲೆಯ ದಕಲಾ ಗ್ರಾಮದಲ್ಲು ನಾಲ್ಕು ಎಕರೆ ಜಮೀನು ಹೊಂದಿರುವ ರೈತ ರಘಬೀರ್ ಸಿಂಗ್ ಹೇಳುತ್ತಾರೆ. ಪ್ರಣೀತ್ ಕೌರ್ ಪಟಿಯಾಲದಿಂದ ನಾಲ್ಕು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಮತ್ತು ಅವರು ಪಂಜಾಬಿನ ಮಾಜಿ ಕಾಂಗ್ರೆಸ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪತ್ನಿ. ಇಬ್ಬರೂ 2021ರಲ್ಲಿ ಕಾಂಗ್ರೆಸ್ ತೊರೆದು ಕಳೆದ ವರ್ಷ ಬಿಜೆಪಿಗೆ ಸೇರಿದ್ದರು. ಇತರ ಬಿಜೆಪಿ ಅಭ್ಯರ್ಥಿಗಳಂತೆ, ಅವರನ್ನು ಸಹ ಅನೇಕ ಸ್ಥಳಗಳಲ್ಲಿ ಕಪ್ಪು ಬಾವುಟಗಳು ಮತ್ತು 'ಮುರ್ದಾಬಾದ್' ಘೋಷಣೆಗಳೊಂದಿಗೆ ಸ್ವಾಗತಿಸಲಾಗುತ್ತಿದೆ.

ಅಮೃತಸರ, ಹೋಶಿಯಾರಪುರ, ಗುರುದಾಸಪುರ ಮತ್ತು ಬಟಿಂಡಾದಲ್ಲಿಯೂ ಅವರ ಪಕ್ಷದ ಅಭ್ಯರ್ಥಿಗಳು ಇದೇ ರೀತಿಯ ಸ್ವಾಗತವನ್ನು ಎದುರಿಸುತ್ತಿದ್ದಾರೆ. ಮೂರು ಬಾರಿಯ ಕಾಂಗ್ರೆಸ್ ಸಂಸದ ಮತ್ತು ಪ್ರಸ್ತುತ ಲುಧಿಯಾನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವ್ನೀತ್ ಸಿಂಗ್ ಬಿಟ್ಟು ಅವರು ತಮ್ಮ ಉಮೇದುವಾರಿಕೆಯನ್ನು ಘೋಷಿಸಿದ ಒಂದು ತಿಂಗಳ ನಂತರ, ಹಳ್ಳಿಗಳಲ್ಲಿ ಪ್ರಚಾರ ಮಾಡಲು ಸಾಕಷ್ಟು ಕಷ್ಟಪಡುತ್ತಿದ್ದಾರೆ.

PHOTO • Courtesy: BKU (Ugrahan)
PHOTO • Vishav Bharti

ಎಡ: ಬರ್ನಾಲಾ (ಸಂಗ್ರೂರ್) ದಲ್ಲಿ ರೈತರು ಆಡಳಿತ ಪಕ್ಷದ ಅಭ್ಯರ್ಥಿಗಳು ತಮ್ಮ ಗ್ರಾಮಕ್ಕೆ ಪ್ರವೇಶಿಸದಂತೆ ತಡೆಯಲು ಮಾನವ ಗೋಡೆ ನಿರ್ಮಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಲ: ಇತ್ತೀಚಿನ ಪ್ರತಿಭಟನೆಯ ಸಮಯದಲ್ಲಿ ಪಂಜಾಬಿನ ಮನರೇಗಾ ಮಜ್ದೂರ್ ಯೂನಿಯನ್ ಅಧ್ಯಕ್ಷ ಶೇರ್ ಸಿಂಗ್ ಫರ್ವಾಹಿ (ಧ್ವಜದ ಹಿಂದೆ)

PHOTO • Courtesy: BKU (Dakaunda)
PHOTO • Courtesy: BKU (Dakaunda)

ಸಂಗ್ರೂರಿನ ಮತ್ತೊಂದು ಗ್ರಾಮವಾದ ಮೆಹಲ್ಕಲಾನ್ ಎನ್ನುವಲ್ಲಿ ಬಿಜೆಪಿ ಅಭ್ಯರ್ಥಿಗಳು ಪ್ರವೇಶಿಸದ ಹಾಗೆ ರೈತರು ಗ್ರಾಮದ ಅಂಚಿನಲ್ಲಿ ಕಾವಲು ಕಾಯುತ್ತಿದ್ದಾರೆ. ಇದು ರೈತ ಪ್ರತಿರೋಧದ ಇತಿಹಾಸದಲ್ಲಿ ಮುಳುಗಿರುವ ಪ್ರದೇಶ

ದೇಶದ ಇತರ ಭಾಗಗಳಲ್ಲಿ, ರಾಜಕಾರಣಿಗಳು ಅಲ್ಪಸಂಖ್ಯಾತ ವಿರೋಧಿ ಧೋರಣೆ ಮತ್ತು 'ಭಾವನೆಗಳನ್ನು ನೋಯಿಸುವ' ಭಾಷಣಗಳಿಂದ ಜನರನ್ನು ಸೆಳೆಯುತ್ತಿರಬಹುದು. ಆದರೆ ಪಂಜಾಬಿನಲ್ಲಿ, ರೈತರು ಅವರನ್ನು 11 ಪ್ರಶ್ನೆಗಳೊಂದಿಗೆ ಎದುರಿಸುತ್ತಾರೆ (ವರದಿಯ ಕೆಳಗೆ ನೋಡಿ). ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಕಾನೂನು ಖಾತರಿಗಳ ಬಗ್ಗೆ; ವರ್ಷವಿಡೀ ನಡೆದ ಹೋರಾಟದಲ್ಲಿ ಮಡಿದ ರೈತರ ಬಗ್ಗೆ; ಲಖಿಂಪುರದ ಹುತಾತ್ಮರ ಬಗ್ಗೆ; ಖನೌರಿಯಲ್ಲಿ ತಲೆಗೆ ಗುಂಡು ತಗುಲಿ ಕೊಲ್ಲಲ್ಪಟ್ಟ ಶುಭಕರಣ್ ಬಗ್ಗೆ; ರೈತರ ಮೇಲಿನ ಸಾಲದ ಹೊರೆಯ ಬಗ್ಗೆ ಹೀಗೆ ಹಲವು ಬಗೆಯಲ್ಲಿ ಅವರನ್ನು ಪ್ರಶ್ನಿಸಲಾಗುತ್ತದೆ.

ರೈತರು ಮಾತ್ರವಲ್ಲ, ಕೃಷಿ ಕಾರ್ಮಿಕರು ಕೂಡ ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷದ ಅಭ್ಯರ್ಥಿಗಳನ್ನು ಪ್ರಶ್ನಿಸುತ್ತಿದ್ದಾರೆ. "ಬಜೆಟ್ ಕಡಿಮೆ ಮಾಡುವ ಮೂಲಕ ಬಿಜೆಪಿ ಮನರೇಗಾ ಯೋಜನೆಯನ್ನು ಕೊಂದಿದೆ. ಅವು ರೈತರಿಗೆ ಮಾತ್ರವಲ್ಲ, ಕೃಷಿ ಕಾರ್ಮಿಕರಿಗೂ ಅಪಾಯಕಾರಿ" ಎಂದು ಪಂಜಾಬಿನ ಮನರೇಗಾ ಮಜ್ದೂರ್ ಯೂನಿಯನ್ ಅಧ್ಯಕ್ಷ ಶೇರ್ ಸಿಂಗ್ ಫರ್ವಾಹಿ ಹೇಳುತ್ತಾರೆ.

ಹೀಗಾಗಿ ಅವರೂ ಹೋರಾಟದ ಕಣದಲ್ಲಿದ್ದಾರೆ. ಕೃಷಿ ಕಾನೂನುಗಳನ್ನು 18 ತಿಂಗಳ ಹಿಂದೆ ರದ್ದುಪಡಿಸಲಾಯಿತು ಆದರೆ ಆ ಹೋರಾಟದಿಂದ ಆದ ಗಾಯಗಳು ಇನ್ನೂ ಗುಣವಾಗಿಲ್ಲ. ಆ ಕಾನೂನುಗಳೆಂದರೆ: ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮೇಲಿನ ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಕಾಯ್ದೆ, 2020 ; ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ, 2020 ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020 . ಈ ಕಾಯ್ದೆಗಳನ್ನು ಹಿಂಬಾಗಿಲಿನಿಂದ ಮತ್ತೆ ಪರಿಚಯಿಸಲಾಗುತ್ತಿದೆ ಎಂದು ರೈತರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವ ಹೊತ್ತಿನಲ್ಲಿ, ಪಂಜಾಬಿನಲ್ಲಿ ಪ್ರಚಾರ ಇನ್ನಷ್ಟು ತೀವ್ರಗೊಳ್ಳುತ್ತಿದೆ ಮತ್ತು ರೈತರ ಪ್ರತಿರೋಧವೂ ಹೆಚ್ಚಾಗುತ್ತಿದೆ. ಮೇ 4ರಂದು ಪಟಿಯಾಲಾದ ಸೆಹ್ರಾ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಣೀತ್ ಕೌರ್ ಅವರ ಪ್ರವೇಶವನ್ನು ವಿರೋಧಿಸಿ ಸುರಿಂದರ್ ಪಾಲ್ ಸಿಂಗ್ ಎಂಬ ರೈತ ಇತರ ರೈತರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾಗ ಸಾವನ್ನಪ್ಪಿದ್ದರು. ಪ್ರಣೀತ್ ಕೌರ್ ಅವರ ಭದ್ರತಾ ಸಿಬ್ಬಂದಿ ರಸ್ತೆಯನ್ನು ತೆರವುಗೊಳಿಸಲು ಪ್ರಯತ್ನಿಸಿದಾಗ ಅವರು ಸಾವನ್ನಪ್ಪಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ, ಆದರೆ ಅವರು ಆರೋಪಗಳನ್ನು ತೀವ್ರವಾಗಿ ನಿರಾಕರಿಸಿದ್ದಾರೆ.

ಈಗಷ್ಟೇ ಗೋಧಿ ಕೊಯ್ಲು ಮುಗಿಸಿರುವ ರೈತರು ತುಲನಾತ್ಮಕವಾಗಿ ಸಾಕಷ್ಟು ಬಿಡುವಾಗಿದ್ದಾರೆ. ಮತ್ತು ಮುಂದಿನ ದಿನಗಳಲ್ಲಿ ಈ ಸನ್ನಿವೇಶಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳು ಕಾಣುತ್ತಿವೆ. ಅದರಲ್ಲೂ ವಿಶೇಷವಾಗಿ ಸಂಗ್ರೂರ್‌ ರೀತಿಯ ಊರುಗಳಲ್ಲಿ. ಇದು ರೈತ ಹೋರಾಟದ ಭದ್ರಕೋಟೆಯಾಗಿದ್ದು ಇದು ಪ್ರತಿರೋಧದ ಇತಿಹಾಸವನ್ನು ಹೊಂದಿದೆ. ಇಲ್ಲಿನ ಮಕ್ಕಳು ತೇಜಾ ಸಿಂಗ್ ಸ್ವಾತಂತರ್, ಧರಂ ಸಿಂಗ್ ಫಕ್ಕರ್ ಮತ್ತು ಜಾಗೀರ್ ಸಿಂಗ್ ಜೋಗಾ ಅವರಂತಹ ಉಗ್ರ ರೈತ ಹೋರಾಟಗಾರರ ಕತೆಯನ್ನು ಕೇಳುತ್ತಾ ಬೆಳೆಯುತ್ತಾರೆ.

ಹಳ್ಳಿಯನ್ನು ಪ್ರವೇಶಿಸುತ್ತಿದ್ದಂತೆ ಬಿಜೆಪಿ ಅಭ್ಯರ್ಥಿಗಳು ಎದುರಿಸುವ ಪ್ರಶ್ನೆಗಳ ಪಟ್ಟಿ

ಮುಂದೆ ಇನ್ನಷ್ಟು ಕಷ್ಟಗಳು ಬಿಜೆಪಿಗೆ ಎದುರಾಗಲಿವೆ. ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು ಏಕ್ತಾ ಉಗ್ರಾಹನ್) ನಾಯಕ ಝಂಡಾ ಸಿಂಗ್ ಜೆಥುಕೆ ಇತ್ತೀಚೆಗೆ ಬರ್ನಾಲಾದಲ್ಲಿ ಹೀಗೆ ಹೇಳಿದರು: "ಒಂದು ವಾರ ಕಾಯಿರಿ. ಅವರನ್ನು ಹಳ್ಳಿಗಳಿಂದ ಮಾತ್ರವಲ್ಲದೆ ಪಂಜಾಬಿನ ಪಟ್ಟಣಗಳಿಂದ ಸಹ ಓಡಿಸುವುದನ್ನು ನೀವು ನೋಡುತ್ತೀರಿ. ಅವರು ದೆಹಲಿಯಲ್ಲಿ ಅವರು ಗೋಡೆಗಳು ಮತ್ತು ಮೊಳೆಗಳನ್ನು ನಮ್ಮನ್ನು ಹೇಗೆ ತಡೆದರೆನ್ನುವುದು ನೆನಪಿದೆಯೇ? ನಾವು ಅಡೆತಡೆಗಳು ಅಥವಾ ಮೊಳೆಗಳಿಂದ ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ. ನಾವು ಮಾನವ ಗೋಡೆಗಳಿಂದ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಲಖೀಂಪುರದಂತೆ ಅವರು ನಮ್ಮ ಮೇಲೆ ವಾಹನ ಚಲಾಯಿಸಬಹುದು, ಆದರೆ ನಮ್ಮ ದೇಹ ಬಳಸಿ ನಮ್ಮ ಹಳ್ಳಿಗಳಿಗೆ ಅವರ ಪ್ರವೇಶವನ್ನು ತಡೆಯಲು ನಾವು ಸಿದ್ಧರಿದ್ದೇವೆ.”

ಆದರೂ ಬಿಜೆಪಿ ರೈತರ ನ್ಯಾಯಪರತೆಗೆ ಕತಜ್ಞರಾಗಿರಬೇಕು ಎಂದು ಶಿರೋಮಣಿ ಅಕಾಲಿ ದಳದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಹೇಳುತ್ತಾರೆ. “ಅವರು ಹಳ್ಳಿಗಳಿಗೆ ಪ್ರವೇಶವನ್ನು ನಿರ್ಬಂಧಿಸಿದ್ದಾರೆ. ಬಿಜೆಪಿ ನಾಯಕರಿಗೆ ದೆಹಲಿಯಲ್ಲಿ ರೈತರಿಗೆ ಮಾಡಿದಂತೆ ಅಶ್ರುವಾಯು ಶೆಲ್‌ ಅಥವಾ ರಬ್ಬರ್‌ ಬುಲೆಟ್‌ ಸಿಡಿಸಿ ಸ್ವಾಗತಿಸುತ್ತಿಲ್ಲ ಎನ್ನುವುದನ್ನು ಅವರು ಮನಗಾಣಬೇಕು” ಎಂದು ಅವರು ಹೇಳುತ್ತಾರೆ.

ಪ್ರತಿರೋಧ ಹಾಗೂ ಜನಪ್ರಿಯ ಕ್ರಿಯೆಗಳ ನೆನಪು ಇಲ್ಲಿಗೆ ಹೊಸದಲ್ಲ. ಕೇವಲ 28 ತಿಂಗಳ ಹಿಂದೆ, ಈ ರಾಜ್ಯದ ಜನರು ಪ್ರಧಾನಿ ನರೇಂದ್ರ ಮೋದಿಯವರನ್ನು ಫಿರೋಜಪುರದ ಫ್ಲೈಓವರ್ ಮೇಲೆ ತಡೆದಿದ್ದರು. ಇಂದು ಅದೇ ರೈತರು ಅವರ ಪಕ್ಷದ ಅಭ್ಯರ್ಥಿಗಳನ್ನು ತಡೆಯುತ್ತಿದ್ದಾರೆ. ಮೋದಿ ಸರ್ಕಾರದಿಂದ ಎರಡು ಬಾರಿ ವಿವಿಧ ರಾಜ್ಯಗಳ ರಾಜ್ಯಪಾಲರಾಗಿ ನೇಮಕಗೊಂಡ ಸತ್ಯಪಾಲ್ ಮಲಿಕ್ ತಮಗೆ ಆ ಹುದ್ದೆಗಳನ್ನು ನೀಡಿದ ಪಕ್ಷಕ್ಕೆ ಹೀಗೆ ಹೇಳಿದ್ದರು: "ಪಂಜಾಬಿಗಳು ತಮ್ಮ ಶತ್ರುಗಳನ್ನು ಸುಲಭವಾಗಿ ಮರೆಯುವುದಿಲ್ಲ."

ಅನುವಾದ: ಶಂಕರ. ಎನ್. ಕೆಂಚನೂರು

Vishav Bharti

ବିଶବ ଭାରତୀ ଚଣ୍ଡୀଗଡ଼ର ଜଣେ ସାମ୍ବାଦିକ ଏବଂ ସେ ଗତ ଦୁଇ ଦଶନ୍ଧି ହେଲା ପଞ୍ଜାବର କୃଷି କ୍ଷେତ୍ରରେ ସଂକଟ ଏବଂ କୃଷକମାନଙ୍କର ପ୍ରତିରୋଧମୂଳକ ଆନ୍ଦୋଳନ ସଂପର୍କରେ ରିପୋର୍ଟ କରିଆସୁଛନ୍ତି ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Vishav Bharti
Editor : P. Sainath

ପି. ସାଇନାଥ, ପିପୁଲ୍ସ ଆର୍କାଇଭ୍ ଅଫ୍ ରୁରାଲ ଇଣ୍ଡିଆର ପ୍ରତିଷ୍ଠାତା ସମ୍ପାଦକ । ସେ ବହୁ ଦଶନ୍ଧି ଧରି ଗ୍ରାମୀଣ ରିପୋର୍ଟର ଭାବେ କାର୍ଯ୍ୟ କରିଛନ୍ତି ଏବଂ ସେ ‘ଏଭ୍ରିବଡି ଲଭସ୍ ଏ ଗୁଡ୍ ଡ୍ରଟ୍’ ଏବଂ ‘ଦ ଲାଷ୍ଟ ହିରୋଜ୍: ଫୁଟ୍ ସୋଲଜର୍ସ ଅଫ୍ ଇଣ୍ଡିଆନ୍ ଫ୍ରିଡମ୍’ ପୁସ୍ତକର ଲେଖକ।

ଏହାଙ୍କ ଲିଖିତ ଅନ୍ୟ ବିଷୟଗୁଡିକ ପି.ସାଇନାଥ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru