“ನಾನು ಮಾಡಿದ್ದು, ನಾನು ಮಾಡಿದ್ದು…” ಎನ್ನುತ್ತ ನಾನು ಕೇಳಿದ ಪ್ರಶ್ನೆಗೆ ಎಲ್ಲರಿಗಿಂತ ಮೊದಲೇ ಉತ್ಸಾಹದಿಂದಲೇ ಉತ್ತರಿಸುತ್ತ ಅಮನ್ ಮೊಹಮ್ಮದ್ ಕೈ ಎತ್ತಿದ. ಸುಮಾರು ಹನ್ನೆರಡು ಮಂದಿಯಿದ್ದ ಗುಂಪಿನ ಜೊತೆಯಲ್ಲಿ ಮಾತನಾಡುತ್ತ, ಈ ವರ್ಷದ ವಿನಾಯಕ ಚತುರ್ಥಿ ಹಬ್ಬ ನಡೆಸುವುದರಲ್ಲಿ ಪ್ರಧಾನ ಪಾತ್ರ ವಹಿಸಿದ್ದು ಯಾರು ಎಂದು ನಾನು ಕೇಳಿದ್ದೆ. “2,000 ರೂಪಾಯಿಗಳನ್ನು ಆತ ಒಬ್ಬನೇ ಸಂಗ್ರಹಿಸಿದ್ದಾನೆ,” ಎಂದು ಆ ಗುಂಪಿನವರ ಪೈಕಿ ಅತ್ಯಂತ ಹಿರಿಯ ವ್ಯಕ್ತಿ ಟಿ. ರಾಗಿಣಿ ಹೇಳಿದರು. ಬೇರೆ ಯಾರೂ ಕೂಡ ಆಕೆಯ ಮಾತನ್ನು ಅಲ್ಲಗಳೆಯಲಿಲ್ಲ.
ಈ ವರ್ಷ ಸಂಗ್ರಹಿಸಿದ್ದ ಒಟ್ಟು ವಂತಿಗೆ ಮೊತ್ತದ ಪೈಕಿ ಆತನ ಪಾಲು ಅತ್ಯಧಿಕ. ಅಂದರೆ, ಹಬ್ಬದ ಪ್ರಯುಕ್ತ ಸಂಗ್ರಹಿಸಿದ ರೂ. 3,000 ಒಟ್ಟು ಮೊತ್ತದಲ್ಲಿ ಮುಕ್ಕಾಲು ಭಾಗದಷ್ಟು. ಆಂಧ್ರ ಪ್ರದೇಶದ ಅನಂತಪುರ ಪಟ್ಟಣದ ಸನಿಹದಲ್ಲೇ ಇರುವ ಸಾಯಿ ನಗರದ ಬೀದಿಗಳಲ್ಲಿ ಸಂಚರಿಸುವ ವಾಹನಗಳನ್ನು ನಿಲ್ಲಿಸಿ ಅವರು ವಂತಿಗೆ ಸಂಗ್ರಹಿಸಿದ್ದರು.
ಅದು ತನ್ನ ನೆಚ್ಚಿನ ಹಬ್ಬ ಎಂದು ಅಮನ್ ಹೇಳಿದ. ನನಗೆ ಆಶ್ಚರ್ಯವೆನಿಸಿತು.
2018ರಲ್ಲಿ ಸಾಯಿ ನಗರದಲ್ಲಿ ವಿನಾಯಕ ಚತುರ್ಥಿ ಹಬ್ಬ ಮುಗಿದು ಕೆಲವು ವಾರಗಳ ಕಳೆದಿದ್ದರೂ, ಅದೊಂದು ಭಾನುವಾರ ಕೆಲವೊಂದು ಹುಡುಗರು ಸೇರಿ ನಡೆಸುತ್ತಿದ್ದ ಹಬ್ಬದ ಅಣಕು ಪ್ರದರ್ಶನ ಗಮನಿಸಿದೆ. ಅವರ ಒಂದಿಷ್ಟು ಫೋಟಗಳನ್ನು ಕೂಡ ಕ್ಲಿಕ್ಕಿಸಿದೆ. ಅವರು ʼಅವ್ವಾ ಅಪ್ಪಾಚಿʼ ಎಂಬ ಮಕ್ಕಳ ಅಚ್ಚುಮೆಚ್ಚಿನ ಆಟದ ರೀತಿಯಲ್ಲೇ ಈ ಆಟ ಆಡುತ್ತಿದ್ದರು. ಅದು ವಿನಾಯಕ ಚತುರ್ಥಿ ಹಬ್ಬದ ದೃಶ್ಯ ಮತ್ತು ಅವರ ಪೈಕಿ ಒಬ್ಬ ಹುಡುಗ ಹಿಂದೂ ದೇವತೆ ಗಣೇಶನ ಹಾಗೆ ನಟಿಸುತ್ತಿದ್ದ. ಇನ್ನಿಬ್ಬರು ಮಕ್ಕಳು ಅವನನ್ನು ಹೊತ್ತುಕೊಂಡು ಹೋಗುತ್ತಿದ್ದರು ಮತ್ತು ಕೊನೆಗೆ ಗಣಪತಿ ವಿಗ್ರಹದ ವಿಸರ್ಜಜನೆ ಮಾಡುವ ರೀತಿಯಲ್ಲಿ ನೆಲದ ಮೇಲೆ ಇಳಿಸಿದರು.
ವಿನಾಯಕ ದೇವರ ಪಾತ್ರ ಮಾಡಿದ್ದ ಆ ಪುಟ್ಟ ಬಾಲಕನ ಹೆಸರು ಅಮನ್ ಮೊಹಮ್ಮದ್. ಈಗ ಹನ್ನೊಂದು ವರ್ಷ ಪ್ರಾಯದ ಹುಡುಗನಾಗಿರುವ ಅವನನ್ನು ಕವರ್ ಫೋಟೊದಲ್ಲಿ ಮೊದಲ ಸಾಲಿನಲ್ಲಿ (ಎಡ ಭಾದಗ ತುತ್ತ ತುದಿಯಲ್ಲಿ) ನೋಡಬಹುದು.
ಈ ವರ್ಷ ಅಗಸ್ಟ್ ತಿಂಗಳಲ್ಲಿ ವಿನಾಯಕ ಚತುರ್ಥಿ ಹಬ್ಬದ ವೇಳೆ ಅಮನ್ ಮತ್ತು ಅವನ ಗೆಳೆಯರು ತಮ್ಮ ಗಣಪತಿ ವಿಗ್ರಹವನ್ನು 2*2 ಅಳತೆಯ ಪೆಂಡಾಲ್ ಒಂದರಲ್ಲಿ ಸ್ಥಾಪಿಸಿದ್ದರು. ಇದು ಇಡೀ ಅನಂತಪುರ ಪಟ್ಟಣದಲ್ಲೇ ಅತೀ ಸಣ್ಣ ಪೆಂಡಾಲ್. ನಾನು ಪೋಟೊ ಕ್ಲಿಕ್ಕಿಸುವ ಮೊದಲೇ ಅವರ ಪೆಂಡಾಲನ್ನು ತೆಗೆಯಲಾಗಿತ್ತು. ರೂ. 1,000 ತೆತ್ತು ವಿಗ್ರಹ ತರಲಾಗಿತ್ತು ಮತ್ತು ಉಳಿದ ರೂ. 2,000 ಮಂಟಪ ಮತ್ತು ಅಲಂಕಾರಕ್ಕೆ ಖರ್ಚಾಯಿತು ಎಂದು ಮಕ್ಕಳು ತಿಳಿಸಿದರು. ಸಾಯಿ ನಗರ 3ನೇ ಕ್ರಾಸಿನ ಬಳಿ ಇರುವ ದರ್ಗಾಕ್ಕೆ ತಾಗಿಕೊಂಡೇ ವಿಗ್ರಹ ಇರಿಸಲಾಗಿತ್ತು.
ಕಾರ್ಮಿಕರ ಕೇರಿಗಳ ಮಕ್ಕಳು ಬಹಳ ಸಮಯದಿಂದ ಹಬ್ಬ ಆಚರಿಸುತ್ತಿದ್ದಾರೆ. ಅವರ ಹೆತ್ತವರು- ಅವರ ಪೈಕಿ ಹೆಚ್ಚಿನವರು ದಿನಗೂಲಿ ಕಾರ್ಮಿಕರು ಅಥವಾ ಮನೆಗೆಲಸದ ಜನರು ಇಲ್ಲವೇ ಪಟ್ಟಣದಲ್ಲಿ ಕೂಲಿ ಕೆಲಸ ಮಾಡುವವರು- ಕೂಡ ಮಕ್ಕಳ ವಿನಾಯಕ ಚತುರ್ಥಿ ಆಚರಣೆಗೆ ವಂತಿಗೆ ನೀಡುತ್ತಾರೆ. ಅವುಗಳ ಪೈಕಿ ಅತ್ಯಂತ ಹಳೆಯ ಪೆಂಡಾಲ್ 14 ವರ್ಷ ಹಳೆಯದಾಗಿದ್ದರೆ, ಇತ್ತೀಚಿಗಿನದು ಎಂದರೆ, ಐದು ವರ್ಷ ಹಿಂದಿನದ್ದು.
“ನಾವು ವಿನಾಯಕಚತುರ್ಥಿ ಮತ್ತು ಪೀರ್ಲಾ ಪಂಡಗಾ (ರಾಯಲಸೀಮಾ ಪ್ರದೇಶದಲ್ಲಿ ಮುಹರ್ರಮ್ ಹಬ್ಬದ ಹೆಸರು) ಆಚರಿಸುತ್ತೇವೆ”, ಎಂದು 14 ವರ್ಷ ಪ್ರಾಯದ ರಾಗಿಣಿ ಹೇಳಿದಳು. ಮಕ್ಕಳ ದೃಷ್ಟಿಯಲ್ಲಿ ವಿನಾಯಕ ಚತುರ್ಥಿ ಮತ್ತು ಪೀರ್ಲಾ ಪಂಡಗಾ ಎರಡೂ ಒಂದೇ. ಎರಡೂ ಆಚರಣೆಗಳ ಪ್ರಧಾನ ಆಕರ್ಷಣೆ ಎಂದರೆ ಪೆಂಡಾಲ್ ಮತ್ತು ಇದಕ್ಕಾಗಿ ಮಕ್ಕಳು ವಂತಿಗೆ ಸಂಗ್ರಹ ಕೂಡ ಮಾಡಲು ಅವಕಾಶ ನೀಡಲಾಗಿದೆ. ಹೀಗೆ ಸಂಗ್ರಹಿಸಿದ ವಂತಿಗೆ ಹಣದಿಂದಲೇ ಪೆಂಡಾಲ್ ನಿರ್ಮಿಸಲಾಗುತ್ತದೆ. “ಮನೆಗಳನ್ನು ಹೇಗೆ ನಿರ್ಮಿಸಲಾಗುತ್ತದೆ ಎಂದು ನಾವು ಯು ಟ್ಯೂಬ್ ನಲ್ಲಿ ನೋಡಿದೆವು” ಎಂದು ಎಸ್. ಸನಾ (11) ಹೇಳಿದಳು. “ನಾನು ಕಲೆತ ಮಣ್ಣು ಹೊತ್ತು ತರುವ ಮೂಲಕ ಸಹಾಯ ಮಾಡಿದೆ. ಬಿದಿರು ಮತ್ತು ಸೆಣಬು ನಾರು ಬಳಸಿ ಪೆಂಡಾಲ್ ನಿರ್ಮಿಸಿದೆವು. ಆಮೇಲೆ ಶೀಟುಗಳನ್ನು ಹೊದಿಸಿದೆವು ಮತ್ತು ಅದರೊಳಗೆ ನಮ್ಮ ವಿನಾಯಕನನ್ನು ಕೂರಿಸಿದೆವು”
ಅವರ ಗುಂಪಿನೊಳಗೆ ಹಿರಿಯರಾದ ರಾಗಿಣಿ ಮತ್ತು ಇಮ್ರಾನ್ (ಈತನ ವಯಸ್ಸು ಕೂಡ 14) ಪೆಂಡಾಲ್ ನಿರ್ವಹಣೆಯನ್ನು ಪಾಳಿಯಲ್ಲಿ ಮಾಡುತ್ತಾರೆ. “ನಾನು ಕೂಡ ಪೆಂಡಾಲ್ ನೋಡಿಕೊಂಡಿದ್ದೇನೆ,” ಎಂದು ಏಳು ವರ್ಷ ಪ್ರಾಯದ ಎಸ್. ಚಾಂದ್ ಬಾಷಾ ಹೇಳಿದ. “ನಾನು ನಿಯಮಿತವಾಗಿ ಶಾಲೆಗೆ ಹೋಗುತ್ತಿಲ್ಲ. ಕೆಲವು ದಿನ ಹೋದರೆ, ಇನ್ನು ಕೆಲವು ದಿನ ಹೋಗುವುದಿಲ್ಲ. ಹಾಗಾಗಿ, ನಾನು ಅದನ್ನು (ಗಣಪತಿ ವಿಗ್ರಹ) ನೋಡಿಕೊಳ್ಳುವ ಕೆಲಸ ಮಾಡಿದೆ.” ಪೂಜೆ ಮಾಡುವ ಮತ್ತು ಪೆಂಡಾಲಿಗೆ ಬರುವವರಿಗೆ ಪ್ರಸಾದ ಹಂಚುವ ಕೆಲಸ ಕೂಡ ಮಕ್ಕಳೇ ನಿರ್ವಹಿಸುತ್ತಾರೆ. ಮಕ್ಕಳ ಪೈಕಿ ಯಾರಾದರೊಬ್ಬರ ತಾಯಿ ಪ್ರಸಾದ -ಪುಳಿಯೋಗರೆ- ಬೇಯಿಸುತ್ತಾರೆ.
ಅನಂತಪುರ ಕಾರ್ಮಿಕರ ಕೇರಿಗಳಲ್ಲಿ ವಿನಾಯಕ ಚತುರ್ಥಿ ಜನಪ್ರಿಯ ಹಬ್ಬವಾಗಿರುವ ಕಾರಣ ಸಂಭ್ರಮೋಲ್ಲಾಸಗಳು ಹಬ್ಬದ ಬಳಿಕವೂ ಒಂದಿಷ್ಟು ದಿನಗಳ ಕಾಲ ಮುಂದುವರಿಯುತ್ತವೆ. ಮಕ್ಕಳು ಆವೆ ಮಣ್ಣಿನಿಂದ ವಿಗ್ರಹ ತಯಾರಿಸುತ್ತಾರೆ ಮತ್ತು ಒಂದಿಷ್ಟು ಕಟ್ಟಿಗೆ ಮತ್ತು ಬಿದಿರು ತುಂಡುಗಳು, ಮನೆಯಿಂದ ತಂದ ಹಾಸು ಮತ್ತಿತರ ಗಜರಿ ಸಾಮಾನುಗಳನ್ನು ಬಳಸಿ ಮಂಟಪ ನಿರ್ಮಿಸುತ್ತಾರೆ ಮತ್ತು ಶಾಲೆಗೆ ರಜೆ ಇದ್ದಾಗ ಹಬ್ಬದ ದೃಶ್ಯಾವಳಿಗಳ ಅಣಕು ಪ್ರದರ್ಶನ ನಡೆಸುತ್ತಾರೆ.
ಪಟ್ಟಣಕ್ಕೆ ತಾಗಿಕೊಂಡಿರುವ ಬಡವರ ಕೇರಿಗಳಲ್ಲಿ ಇಂತಹ ಅಣಕು ಪ್ರದರ್ಶನಗಳು ಜನಪ್ರಿಯ ಆಟ. ಇಲ್ಲಿ ಸಂಪನ್ಮೂಲಗಳ ಕೊರತೆಯನ್ನು ಮಕ್ಕಳು ಕಲ್ಪನೆಗಳ ಮೂಲಕ ನೀಗಿಸುತ್ತಾರೆ. ಒಂದು ಮಗು ಕೋಲನ್ನು ಬಳಸಿ ಪ್ರತಿ ಸಾರಿ ವಾಹನ ಹಾದು ಹೋಗುವಾ ಮೇಲಕ್ಕೆತ್ತಿ ಬಳಿಕ ಕೆಳಕ್ಕಿಳಿಸಿ ʼರೈಲ್ ಗೇಟ್ʼ ಆಟ ಆಡುತ್ತಿದ್ದುದನ್ನು ನಾನು ನೋಡಿದ್ದೆ. ವಿನಾಯಕಚತುರ್ಥಿ ಹಬ್ಬ ಮುಗಿದ ಬಳಿಕ ಗಜವದನ ವಿನಾಯಕಕೂಡ ಇಂತಹ ಆಟಗಳ ಭಾಗವಾಗುತ್ತಾನೆ.
ಅನುವಾದ: ದಿನೇಶ ನಾಯಕ್