ವಾರ್ಧಾ ಜಿಲ್ಲೆಯ 23 ವಯಸ್ಸಿನ ಪ್ರಫುಲ್ಲ ಕಾಲೋಕರರ ಹಳ್ಳಿಗೆ ಕರೋನಾ ವೈರಸ್ ತಲುಪುವುದೋ ಇಲ್ಲವೋ ಗೊತ್ತಿಲ್ಲ. “ನನಗೆ ಗೊತ್ತಿಲ್ಲ, ಆದರೆ ಅದರ ಆರ್ಥಿಕ ಪರಿಣಾಮಗಳು ಈಗಾಗಲೆ ನಮ್ಮೂರನ್ನು ಮುಟ್ಟಿವೆ” ಎಂದು ಹೇಳುತ್ತಾರೆ.
ಪ್ರಫುಲ್ಲರ ಚಂದಾನಿ ಹಳ್ಳಿಯಲ್ಲಿ ದಿನಕ್ಕೆ 500 ಲೀಟರ್ ಸಂಗ್ರಹವಾಗುತ್ತಿದ್ದ ಹಾಲು ಮಾರ್ಚಿ, 25ರಂದು ಕೋವಿಡ್-19 ಲಾಕ್ ಡೌನ್ ಪ್ರಾರಂಭವಾದ ಮೇಲೆ ಸೊನ್ನೆಗೆ ಇಳಿದಿತ್ತು. ಸುಮಾರು 520 ಜನಸಂಖ್ಯೆ ಇರುವ ಆರವಿ ತಾಲೂಕಿನ ಈ ಹಳ್ಳಿಯಲ್ಲಿ ವಾಸಿಸುತ್ತಿರುವ ಬಹುತೇಕರು ನಂದಗೌಳಿಗ ಸಮುದಾಯದವರು.
ವಾರ್ಧಾ ಜಿಲ್ಲೆಯಲ್ಲಿರುವ ಬೋರ್ ಹುಲಿ ಸಂರಕ್ಷಿತಾರಣ್ಯದ ಸುತ್ತಲಿನ ಸುಮಾರು 40-50 ಹಳ್ಳಿಗಳಲ್ಲಿ ವಾಸಿಸುತ್ತಿರುವ ನಂದಗೌಳಿಗರು ಅರೆ ದನಗಾಹಿ ಸಮುದಾಯದವರು. ಗೌಳಿಗರು ಎಂದು ಕರೆಯಲ್ಪಡುವ ಇವರು ಸ್ಥಳೀಯ ಗೌಳವ ತಳಿಯ ಹಸುವನ್ನು ಸಾಕುತ್ತಾರೆ ಮತ್ತು ಇಡೀ ವಾರ್ಧಾದ ಜನರಿಗೆ ಹಸುವಿನ ಹಾಲು, ಮೊಸರು, ಬೆಣ್ಣೆ, ತುಪ್ಪ ಮತ್ತು ಖೋವಾವನ್ನು ಪೂರೈಸುವವರು ಇವರೇ. “ನಂದಗೌಳವರ ಹಾಲಿನ ಮಾರಾಟ ಕಮ್ಮಿ ಅಂದ್ರೂ 25,000 ಲೀಟರ್ ಕಮ್ಮಿಯಾಗಿದೆ.” ಲಾಕ್ ಡೌನಿನ ಮೊದಲ 15 ದಿನಗಳಲ್ಲಿ ವಾರ್ಧಾದಲ್ಲಿ ಸಮುದಾಯದವರು ಅನುಭವಿಸಿದ ನಷ್ಟವನ್ನು ಕಾಲೋಕರ್ ಲೆಕ್ಕ ಹಾಕುತ್ತಾ ಹೇಳುತ್ತಾರೆ.
ಬೇಗ ಕೆಡುವಂತಹ ಈ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಕುಸಿದಿದ್ದರಿಂದ ಹೈನು ಉದ್ದಿಮೆಯು ಸಂಕಷ್ಟಕ್ಕೆ ಸಿಲುಕಿತು. ಕೇವಲ ಸಾಮಾನ್ಯ ಜನರು ಹಾಲಿನ ಬಳಕೆಯನ್ನು ಕಡಿಮೆ ಮಾಡಿದುದು ಮಾತ್ರವಲ್ಲ, ಹೋಟೆಲುಗಳು, ತಿನಿಸು ಅಂಗಡಿಗಳು, ಸಿಹಿ ತಿಂಡಿ ಅಂಗಡಿಗಳು ಮುಚ್ಚಿದ್ದರಿಂದ ಹೈನು ಉತ್ಪನ್ನಗಳಿಗೆ ಬೇಡಿಕೆ ಇನ್ನೂ ಕುಸಿಯಿತು. ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ ಸಹ ಸಂಸ್ಥೆಯಾದ ಮದರ್ ಡೈರಿಯೂ ಸೇರಿದಂತೆ ದೊಡ್ಡ ಹೈನು ಉದ್ದಿಮೆಗಳೇ ರೈತರಿಂದ ಹಾಲು ಕೊಳ್ಳುವುದನ್ನು ನಿಲ್ಲಿಸಿದವು.
ಈ ಉದ್ದಿಮೆಯಲ್ಲಿನ ಉತ್ಪಾದಕರಿಂದ ಹಿಡಿದು ಗ್ರಾಹಕರವರೆಗಿನ ಉದ್ದವಾದ ಪೂರೈಕೆಯ ಸರಪಳಿಯಲ್ಲಿರುವ ಪ್ರತಿಯೊಬ್ಬರಿಗೂ ಸಾವಿರಾರು ರೂಪಾಯಿಗಳ ದಿನದ ಆದಾಯಕ್ಕೆ ಆಗಿರುವ ಈ ಹಣಕಾಸಿನ ನಷ್ಟವು ಬಹುಶಃ ತುಂಬಾ ದಿನಗಳವರೆಗೆ ಕಾಡಲಿದೆ ಎಂದು ಕಾಲೋಕರ್ ಅಂದಾಜಿಸುತ್ತಾರೆ. ಪ್ರಫುಲ್ಲರವರು ನಂದಗೌಳವ ಸಮುದಾಯದ ಏಕೈಕ ಪಿ.ಎಚ್.ಡಿ ವಿದ್ಯಾರ್ಥಿ. ನಾಗಪುರ ವಿಶ್ವವಿದ್ಯಾನಿಲಯದಲ್ಲಿ ವಾರ್ಧಾದ ಹತ್ತಿ ಆರ್ಥಿಕತೆಯ ವಿಷಯದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.






