ಹೊಳೆಯುವ ಹಸಿರು ಸೀರೆಯೊಂದನ್ನು ಕೈಗಿಟ್ಟು "ದಯವಿಟ್ಟು ಚಿತೆಗೆ ಬೆಂಕಿಯಿಡುವ ಮೊದಲು ಈ ಸೀರೆಯನ್ನು ಶವದ ಮೇಲೆ ಇರಿಸಿ" ಎಂದು ಸತ್ತ ಮಹಿಳೆಯ ಸಂಬಂಧಿಕರೊಬ್ಬರು ಸಂದೀಪನ್ ವಾಳ್ವೆ ಅವರ ಬಳಿ ವಿನಂತಿಸಿದರು. ಸಂದೀಪನ್ ಅವರಿಗೆ ಇಂತಹ ವಿನಂತಿಗಳು ಹೊಸದಲ್ಲ. ಅವರು ಆ ಮಹಿಳೆಯ ವಿನಂತಿಯಂತೆ ಅದನ್ನು ನಡೆಸಿಕೊಟ್ಟರು.
ಮಹಾರಾಷ್ಟ್ರದ ಉಸ್ಮಾನಾಬಾದ್ ನಗರದ ಶ್ಮಶಾನದಲ್ಲಿ 15 ಶವಗಳು ಅಂತ್ಯಕ್ರಿಯೆಗಾಗಿ ಸಾಲಿನಲ್ಲಿ ಕಾಯುತ್ತಿದ್ದವು. ಆ ಸಾಲಿನಲ್ಲಿ ವಾಳ್ವೆಯವರು ಮೊದಲಿಗೆ ತಮಗೆ ಶವ ಸಂಸ್ಕಾರದ ಸಹಾಯಕ್ಕಾಗಿ ನಿಗದಿಪಡಿಸಲಾದ ಶವವನ್ನು ಹುಡುಕಿಕೊಂಡರು. ನಂತರ ಪಿಪಿಇ ಕಿಟ್ ಮತ್ತು ಕೈಗವಸು ಧರಿಸಿ, ಸೀರೆಯನ್ನು ದೇಹದ ಮೇಲೆ ಎಷ್ಟು ಸಾಧ್ಯವೋ ಅಷ್ಟು ಕಾಳಜಿಯಿಂದ ಇರಿಸಿ, ಗಾಳಿಯಾಡದ ಬಿಳಿ ಬಾಡಿ-ಬ್ಯಾಗ್‌ನಲ್ಲಿ ಶವವನ್ನು ಕಟ್ಟಿದರು. "ತಾವೂ ವೈರಸ್ ಸೋಂಕಿಗೆ ಒಳಗಾಗಬಹುದೆಂದು ಅವರ ಸಂಬಂಧಿಕರು ಹೆದರಿದ್ದರು" ಎಂದು ಅವರು ಹೇಳುತ್ತಾರೆ.
ಕಳೆದ ವರ್ಷ ಮಾರ್ಚ್‌ನಲ್ಲಿ ಕೋವಿಡ್ ಪಿಡುಗು ಪ್ರಾರಂಭವಾದಾಗಿನಿಂದ ಉಸ್ಮಾನಾಬಾದ್ ನಗರ ಪರಿಷತ್ತಿನ ಉದ್ಯೋಗಿಯಾದ ವಾಳ್ವೆ (45) ಕೋವಿಡ್ -19 ಸೋಂಕಿತರ ಶವಗಳನ್ನು ಅಂತ್ಯಕ್ರಿಯೆ ಮಾಡುತ್ತಿದ್ದಾರೆ. ಅವರು ಈವರೆಗೆ 100ಕ್ಕೂ ಹೆಚ್ಚು ಅಂತ್ಯಕ್ರಿಯೆಗಳನ್ನು ಪೂರೈಸಿದ್ದಾರೆ. ಕೊರೋನಾದ ಎರಡನೇ ಅಲೆಯು ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ಹಾನಿಯುಂಟುಮಾಡಿದೆ. ಈ ವರ್ಷದ ಏಪ್ರಿಲ್ ಆರಂಭದಿಂದ ಸುಮಾರು 15-20 ಮೃತ ದೇಹಗಳನ್ನು ಪ್ರತಿದಿನ ಶವಾಗಾರಕ್ಕೆ ತರಲಾಗುತ್ತಿದೆಯೆಂದು ಅವರು ಹೇಳುತ್ತಾರೆ. ಇದು ವಾಳ್ವೆ ಮತ್ತು ಅವರ ಸಹೋದ್ಯೋಗಿಗಳ ಮೇಲೆ ಒತ್ತಡವನ್ನುಂಟುಮಾಡುತ್ತಿದೆ ಮತ್ತು ಜನರಲ್ಲಿ ಭೀತಿಯನ್ನು ಹುಟ್ಟಿಸುತ್ತಿದೆ.
ವಾಳ್ವೆ ಹೇಳುತ್ತಾರೆ, "ವೈರಸ್ ಭಯವು ಕೆಲವು ಜನರು ತಮ್ಮ ಕುಟುಂಬ ಸದಸ್ಯರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಮಾಡಿಸುತ್ತಿದೆ. ಹೀಗಾಗಿ ಸತ್ತ ವ್ಯಕ್ತಿಯನ್ನು ಸುಡುವ ಮೊದಲು ಕೆಲವು ಪ್ರಾಥಮಿಕ ವಿಧಿಗಳನ್ನು ನೆರವೇರಿಸುವಂತೆ ಅವರು ನಮ್ಮನ್ನು ವಿನಂತಿಸುತ್ತಾರೆ. ಇದು ಸಂಕಷ್ಟದ ಸಮಯ. ಸತ್ತವರ ಪ್ರೀತಿಪಾತ್ರರ ಅನುಪಸ್ಥಿತಿಯಲ್ಲಿ ಅಂತ್ಯಕ್ರಿಯೆ ನಡೆಯುವುದು ಹೃದಯ ವಿದ್ರಾವಕವಾದುದು. ಆದರೆ ಸತ್ತಿರುವವರಿಗೆ ಅವರ ಅಂತಿಮ ವಿಧಿಗಳನ್ನು ಹೇಗೆ ನಡೆಸಲಾಯಿತು ಎಂದು ತಿಳಿಯುವುದಿಲ್ಲ ಎನ್ನುವದು ಸಮಾಧಾನಕರ ವಿಷಯವಾಗಿದೆ."









