ಫೆಬ್ರವರಿಯ ಸಂಜೆ 4 ಗಂಟೆ, ಜೈಪುರದ ರಾಜಸ್ಥಾನ ಪೋಲೋ ಕ್ಲಬ್‌ನಲ್ಲಿ ಉರಿ ಬಿಸಿಲು.
ತಲಾ ನಾಲ್ಕು ಆಟಗಾರರಿರುವ ಎರಡೂ ತಂಡಗಳು ತಮ್ಮ ತಮ್ಮ ಸ್ಥಾನದಲ್ಲಿವೆ.
ಈ ಪ್ರದರ್ಶನ ಪಂದ್ಯಕ್ಕಾಗಿ ಪಿಡಿಕೆಎಫ್ ತಂಡದ ಭಾರತೀಯ ಮಹಿಳಾ ಆಟಗಾರರು ಟೀಮ್ ಪೊಲೊಫ್ಯಾಕ್ಟರಿ ಇಂಟರ್‌ನ್ಯಾಶನಲ್ ವಿರುದ್ಧ ಸೆಣಸುತ್ತಿದ್ದಾರೆ - ಇದು ಭಾರತದಲ್ಲಿ ಆಡಲಾಗುತ್ತಿರುವ ಮೊದಲ ಅಂತರರಾಷ್ಟ್ರೀಯ ಮಹಿಳಾ ಪೋಲೋ ಪಂದ್ಯ.
ಪ್ರತಿಯೊಬ್ಬ ಆಟಗಾರರೂ ಕೈಯಲ್ಲೊಂದು ಮರದ ಮ್ಯಾಲೆಟ್ ಹಿಡಿದುಕೊಂಡು ಆಟ ಆರಂಭವಾಗುವುದಕ್ಕೆ ಕಾಯುತ್ತಿದ್ದಾರೆ. ಅಶೋಕ್ ಶರ್ಮಾ ಅವರಿಗೆ ಇದು ಆ ಸೀಸನ್‌ನ ಮೊದಲ ಆಟ. ಆದರೆ ಅವರಿಗೆ ಈ ಕ್ರೀಡೆ ಹೊಸದೇನಲ್ಲ.
ಕುಶಲಕರ್ಮಿ ಅಶೋಕ್ ಅವರು ಪೋಲೋ ಆಟಗಾರರ ಕಿಟ್‌ಗೆ ಬೇಕಾದ ಬೆತ್ತದ ಕೋಡುಗಳಿಂದ ಮಾಡಿದ ಸ್ಟಿಕ್‌ಗಳನ್ನು ತಯಾರಿಸುವ ಅವರ ಕುಟುಂಬದ ಮೂರನೇ ತಲೆಮಾರಿನವರು. ಇವರಿಗೆ ಇದರಲ್ಲಿ 55 ವರ್ಷಗಳ ಅನುಭವವಿದೆ. "ಮ್ಯಾಲೆಟ್‌ಗಳನ್ನು ತಯಾರಿಸುವ ಕೌಶಲ್ಯಕ್ಕಾಗಿಯೇ ನಾನು ಹುಟ್ಟಿದ್ದೇನೆ" ಎಂದು ಅವರು ಹೆಮ್ಮೆಯಿಂದ ಹೇಳುತ್ತಾ ತಮ್ಮ ಕುಟುಂಬದ 100 ವರ್ಷಗಳ ಪರಂಪರೆಯ ಬಗ್ಗೆ ಮಾತನಾಡುತ್ತಾರೆ. ಹಾರ್ಸ್‌ಬ್ಯಾಕ್ ಪೋಲೋ ವಿಶ್ವದ ಅತ್ಯಂತ ಪ್ರಾಚೀನ ಕುದುರೆ ಸವಾರಿ ಕ್ರೀಡೆಗಳಲ್ಲಿ ಒಂದು.
ಅವರು ಜೈಪುರ ನಗರದಲ್ಲಿಯೇ ಅತ್ಯಂತ ಹಳೆಯ ಮತ್ತು ಹೆಚ್ಚು ಬೇಡಿಕೆಯಿರುವ ವರ್ಕ್‌ಶಾಪ್ ಪೋಲೋ ಹೌಸನ್ನು ನಡೆಸುತ್ತಿದ್ದಾರೆ. ಇದೇ ಅವರ ಮನೆಯೂ ಆಗಿದ್ದು ತಮ್ಮ ಪತ್ನಿ ಮೀನಾ ಮತ್ತು 'ಜೀತು' ಎಂದು ಪ್ರೀತಿಯಿಂದ ಕರೆಯುವ 37 ವರ್ಷ ಪ್ರಾಯದ ಅವರ ಸೋದರಳಿಯ ಜಿತೇಂದ್ರ ಜಂಗಿದ್ ಅವರೊಂದಿಗೆ ಇಲ್ಲಿ ವಿವಿಧ ಬಗೆಯ ಮ್ಯಾಲೆಟ್‌ಗಳನ್ನು ತಯಾರಿಸುತ್ತಾರೆ. ಇವರು ರಾಜಸ್ಥಾನದಲ್ಲಿ ಇತರ ಹಿಂದುಳಿದ ವರ್ಗ ಎಂದು ಪರಿಗಣಿಸಲ್ಪಟ್ಟಿರುವ ಜಂಗಿಡ್ ಸಮುದಾಯಕ್ಕೆ ಸೇರಿದವರು.
ಅಂಪೈರ್ ಪರಸ್ಪರ ಎದುರು ಬದುರಾಗಿ ಸಾಲಾಗಿ ನಿಂತಿರುವ ತಂಡಗಳ ನಡುವೆ ಚೆಂಡನ್ನು ಉರುಳಿಸುತ್ತಿದ್ದಂತೆ ಪಂದ್ಯ ಆರಂಭವಾಗುತ್ತದೆ. ಎಪ್ಪತ್ತೆರಡು ವರ್ಷ ವಯಸ್ಸಿನವರು ಪಂದ್ಯವನ್ನು ನೋಡುತ್ತಾ ತಮ್ಮ ಹಳೆಯ ದಿನಗಳಿಗೆ ಹೋಗುತ್ತಾರೆ. "ನಾನು ಮೈದಾನಕ್ಕೆ ಸೈಕಲ್‌ನಲ್ಲಿ ಹೋಗುತ್ತಿದ್ದೆ, ಆಮೇಲೆ ಒಂದು ಸ್ಕೂಟರ್ ಖರೀದಿಸಿದೆ,” ಎಂದು ಅಶೋಕ್ ಶರ್ಮಾ ಹೇಳುತ್ತಾರೆ. ಆದರೆ 2018 ರಲ್ಲಿ ಮೆದುಳಿನಲ್ಲಿ ಲಘುವಾದ ಪಾರ್ಶ್ವವಾಯು ಉಂಟಾದ ಮೇಲೆ ಅದೂ ನಿಂತು ಹೋಯಿತು.
ಇಬ್ಬರು ಪುರುಷ ಆಟಗಾರರು ಬಂದು ನಮಸ್ತೆ "ಪೋಲಿ ಜಿ" ಎಂದು ಅಶೋಕ್ ಅವರಿಗೆ ಹೇಳಿದರು. ಜೈಪುರದ ಪೋಲೋ ಬಳಸುವ ಸರ್ಕಲ್ ನಲ್ಲಿ ಅಶೋಕ್ ಅವರನ್ನು ಅವರ ನಾನಿ (ತಾಯಿಯ ಅಜ್ಜಿ) ಇಟ್ಟ ಈ ಅಡ್ಡಹೆಸರಿನಿಂದಲೇ ಕರೆಯುತ್ತಾರೆ. "ಈಗೀಗ ನಾನು ಹೆಚ್ಚು ಹೆಚ್ಚು ಮೈದಾನಕ್ಕೆ ಬರಲು ಬಯಸುತ್ತೇನೆ. ಇದರಿಂದ ನಾನು ಇನ್ನೂ ಕೆಲಸ ಮಾಡುತ್ತಿದ್ದೇನೆ ಎಂದು ಹೆಚ್ಚಿನ ಆಟಗಾರರಿಗೆ ಗೊತ್ತಾಗಿ ತಮ್ಮ ಸ್ಟಿಕ್‌ಗಳನ್ನು ರಿಪೇರಿ ಮಾಡಿಸಲು ನನ್ನ ಬಳಿ ಬರುತ್ತಾರೆ" ಎಂದು ಅವರು ಹೇಳುತ್ತಾರೆ.
ಸರಿಸುಮಾರು ಎರಡು ದಶಕಗಳ ಹಿಂದೆ ಅಶೋಕ್ ಅವರ ವರ್ಕ್‌ಶಾಪ್ ಗೆ ಬರುವವರನ್ನು ಬಿಳಿ ಗೋಡೆಯೇ ಕಾಣದಂತೆ ಜೋಡಿಸಿರುವ ಹಾಗೂ ಸೀಲಿಂಗ್‌ನಿಂದ ತಲೆ ಮೇಲಕ್ಕೆ ನೇತುಹಾಕಿರುವ ಮಾರಾಟಕ್ಕೆ ಸಿದ್ದವಾಗಿರುವ ಮ್ಯಾಲೆಟ್ ಗಳು ಸ್ವಾಗತಿಸುತ್ತಿದ್ದವಂತೆ. "ದೊಡ್ಡ ದೊಡ್ಡ ಆಟಗಾರರು ಬಂದು ಅವರಿಗೆ ಇಷ್ಟವಾದ ಸ್ಟಿಕ್ಕನ್ನು ಆರಿಸಿ ನನ್ನೊಂದಿಗೆ ಕುಳಿತು ಚಹಾ ಕುಡಿದು ಹೋಗುತ್ತಿದ್ದರು" ಎಂದು ಅವರು ಹೇಳುತ್ತಾರೆ.
ಆಟ ಪ್ರಾರಂಭವಾಗುತ್ತಿದ್ದಂತೆ ನಾವು ರಾಜಸ್ಥಾನ ಪೋಲೋ ಕ್ಲಬ್‌ನ ಮಾಜಿ ಕಾರ್ಯದರ್ಶಿ ವೇದ್ ಅಹುಜಾ ಅವರ ಪಕ್ಕದಲ್ಲಿ ಕುಳಿತುಕೊಂಡಿದ್ದೆವು. "ಪ್ರತಿಯೊಬ್ಬರೂ ಪಾಲಿ ತಯಾರು ಮಾಡುವ ಮ್ಯಾಲೆಟ್‌ಗಳನ್ನು ಬಳಸುತ್ತಾರೆ" ಎಂದು ಅವರು ನಗುತ್ತಾ ಹೇಳಿದರು. "ಪಾಲಿ ನಮ್ಮ ಕ್ಲಬ್‌ಗೆ ಬಿದಿರಿನ ಬೇರುಗಳಿಂದ ಮಾಡಿದ ಪೋಲೋ ಚೆಂಡುಗಳನ್ನು ಸಹ ಸರಬರಾಜು ಮಾಡುತ್ತಿದ್ದರು" ಎಂದು ಅಹುಜಾ ನೆನಪಿಸಿಕೊಳ್ಳುತ್ತಾರೆ.
ಅಶೋಕ್ ಅವರು ಹೇಳುವಂತೆ ಸಿರಿವಂತರಿಗೆ ಇಲ್ಲವೇ ಮಿಲಿಟರಿಯವರಿಗೆ ಮಾತ್ರ ಪೋಲೊ ಆಡಲು ಸಾಧ್ಯ. 1892ರಲ್ಲಿ ಸ್ಥಾಪಿಸಲಾದ ಇಂಡಿಯನ್ ಪೋಲೋ ಅಸೋಸಿಯೇಷನ್ (IPA) ನಲ್ಲಿ 2023ರ ಹೊತ್ತಿಗೆ ಕೇವಲ 386 ಆಟಗಾರರು ಮಾತ್ರ ಹೆಸರು ನೋಂದಾಯಿಸಿಕೊಂಡಿದ್ದಾರೆ. ಪಂದ್ಯಗಳನ್ನು ನಾಲ್ಕರಿಂದ ಆರು ಚಕ್ಕರ್‌ಗಳಾಗಿ ವಿಭಾಗಿಸಲಾಗುತ್ತದೆ ಮತ್ತು ಪ್ರತಿ ಸುತ್ತಿನ ನಂತರ ಪ್ರತಿ ಆಟಗಾರನು ಬೇರೆಯೇ ಕುದುರೆಯನ್ನು ಏರಬೇಕಾಗುತ್ತದೆ. ಹಾಗಾಗಿ " ಒಂದು ಪಂದ್ಯವನ್ನು ಆಡಲು ಒಬ್ಬ ವ್ಯಕ್ತಿ ಕನಿಷ್ಠ ಐದು ಅಥವಾ ಆರು ಸ್ವಂತ ಕುದುರೆಗಳನ್ನು ಹೊಂದಿರಬೇಕು,” ಎಂದು ಅವರು ಹೇಳುತ್ತಾರೆ.
ರಾಜಸ್ಥಾನದಲ್ಲಿ ಹಿಂದಿನ ರಾಜಮನೆತನದವರು ಕ್ರೀಡೆಯನ್ನು ಪೋಷಿಸುತ್ತಿದ್ದರು. "ನನ್ನ ಚಿಕ್ಕಪ್ಪ ಕೇಶು ರಾಮ್ 1920 ರ ದಶಕದಲ್ಲಿ ಜೋಧ್‌ಪುರ ಮತ್ತು ಜೈಪುರದ ರಾಜರಿಗೆ ಪೋಲೋ ಸ್ಟಿಕ್‌ಗಳನ್ನು ತಯಾರಿಸುತ್ತಿದ್ದರು" ಎಂದು ಅವರು ಹೇಳುತ್ತಾರೆ.
ಕಳೆದ ಮೂರು ದಶಕದಿಂದ ಪಂದ್ಯ, ಉತ್ಪಾದನೆ ಮತ್ತು ನಿಯಂತ್ರಣ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿರುವ ಅರ್ಜೆಂಟೀನಾ ಇಡೀ ಪೊಲೊ ಜಗತ್ತನ್ನು ಇಂದು ಆಳುತ್ತಿದೆ. "ಅವರ ಪೋಲೋ ಕುದುರೆಗಳು, ಹಾಗೆಯೇ ಅವರ ಪೋಲೋ ಮ್ಯಾಲೆಟ್‌ಗಳು ಮತ್ತು ಫೈಬರ್ ಗ್ಲಾಸ್ ಬಾಲ್‌ಗಳು ಭಾರತದಲ್ಲಿ ಸೂಪರ್‌ಹಿಟ್ ಆಗಿವೆ. ಆಟಗಾರರು ತರಬೇತಿಗಾಗಿ ಅರ್ಜೆಂಟೀನಾಗೆ ಹೋಗುತ್ತಿದ್ದಾರೆ,” ಎಂದು ಅಶೋಕ್ ಹೇಳುತ್ತಾರೆ.
"ಅರ್ಜೆಂಟೀನಾದ ಸ್ಟಿಕ್‌ಗಳಿಂದಾಗಿ ನನ್ನ ಉದ್ಯೋಗಕ್ಕೆ ಕುತ್ತು ಬಂದಿತ್ತು, ಆದರೆ ಅದೃಷ್ಟವಶಾತ್ ನಾನು ಮೂವತ್ತು-ನಲವತ್ತು ವರ್ಷಗಳ ಹಿಂದೆ ಸೈಕಲ್ ಪೋಲೋ ಮ್ಯಾಲೆಟ್‌ಗಳನ್ನು ತಯಾರಿಸಲು ಪ್ರಾರಂಭಿಸಿದ್ದರಿಂದ ನನಗೆ ಇನ್ನೂ ಕೆಲಸವಿದೆ" ಎಂದು ಅವರು ಹೇಳುತ್ತಾರೆ.
ಸೈಕಲ್ ಪೋಲೋವನ್ನು ಯಾವುದೇ ರೀತಿಯಲ್ಲಿ ತಯಾರಿಸಲ್ಪಟ್ಟ ಹಾಗೂ ಯಾವುದೇ ಗಾತ್ರದ ಸಾಮಾನ್ಯ ಸೈಕಲ್‌ನಲ್ಲಿ ಆಡಬಹುದು. ಕುದುರೆಯ ಆಟಕ್ಕಿಂತ ಇದು ಭಿನ್ನವಾಗಿದ್ದು, "ಈ ಆಟವನ್ನು ಸಾಮಾನ್ಯರೂ ಆಡಬಹುದು" ಎಂದು ಅಶೋಕ್ ಹೇಳುತ್ತಾರೆ. ಸೈಕಲ್ ಪೋಲೋ ಸ್ಟಿಕ್‌ಗಳನ್ನು ತಯಾರಿಸುವುದರಿಂದ ವಾರ್ಷಿಕವಾಗಿ ಅವರಿಗೆ 2.5 ಲಕ್ಷ ರುಪಾಯಿ ಆದಾಯ ಬರುತ್ತದೆ.
ಅಶೋಕ್ ಅವರು ಕೇರಳ, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ನಾಗರಿಕರ ಮತ್ತು ಸೇನಾ ತಂಡಗಳಿಂದ ತಲಾ 100 ಸೈಕಲ್ ಪೋಲೋ ಮ್ಯಾಲೆಟ್‌ಗಳನ್ನು ತಯಾರಿಸಲು ವರ್ಷದ ಆರ್ಡರ್‌ಗಳನ್ನು ತೆಗೆದುಕೊಳ್ಳುತ್ತಾರೆ. "ಈ ಆಟಗಾರರು ಸಾಮಾನ್ಯವಾಗಿ ಬಡವರಾಗಿರುವುದರಿಂದ ನಾನು ಹೀಗೆ ಮಾಡಬೇಕಾಗಿದೆ" ಎಂದು ಪ್ರತಿ ಸ್ಟಿಕ್ಕನ್ನು ಕೇವಲ 100 ರೂಪಾಯಿಗಳನ್ನು ಏಕೆ ಮಾರುತ್ತೇನೆ ಎಂಬುದನ್ನು ಎಂದು ವಿವರಿಸುತ್ತಾರೆ. ಅವರು ಅಪರೂಪದ ಕ್ಯಾಮೆಲ್ ಪೋಲೋ ಮತ್ತು ಎಲಿಫೆಂಟ್ ಪೋಲೋಗಾಗಿ ಮ್ಯಾಲೆಟ್ ಗಳನ್ನು ತಯಾರಿಸಿ ಕೊಡುವ ಆರ್ಡರ್‌ಗಳನ್ನು ಪಡೆಯುತ್ತಾರೆ. ಅಲ್ಲದೆ ಉಡುಗೊರೆ ನೀಡಲು ಬಳಸುವ ಸಣ್ಣ ಸಣ್ಣ ಗಿಫ್ಟ್ ಸೆಟ್‌ಗಳನ್ನೂ ಮಾಡಿಕೊಡುತ್ತಾರೆ
"ಇವತ್ತು ಯಾವ ಗ್ರಾಹಕರೂ ಬಂದಿಲ್ಲ," ನಾವು ಮೈದಾನದಿಂದ ಹೊರಗೆ ಹೋಗುವಾಗ ಅಶೋಕ್ ಹೇಳಿದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಮೈದಾನದಲ್ಲಿ ನಡೆದಾಗ 40,000 ಕ್ಕೂ ಹೆಚ್ಚು ಜನರು ಅದರಲ್ಲಿ ಭಾಗವಹಿಸಿದ್ದರು ಮತ್ತು ಅನೇಕರು ಮರಗಳ ಮೇಲೆ ಕುಳಿತು ಆಟ ವೀಕ್ಷಿಸಿದ್ದರು ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಅಂತಹ ನೆನಪುಗಳು ಕಾಲ ಕಾಲಕ್ಕೆ ಅವರಲ್ಲಿ ಚೈತನ್ಯವನ್ನು ತುಂಬಿವೆ ಮತ್ತು ಮ್ಯಾಲೆಟ್‌ಗಳನ್ನು ತಯಾರಿಸುವ ಅವನ ಕುಟುಂಬದ ಸುದೀರ್ಘ ಪರಂಪರೆಯನ್ನು ಮುಂದುವರಿಸುವಂತೆ ಮಾಡಿವೆ.
*****
“ಇದು ಕೇವಲ ಒಂದು ಬೆತ್ತವಷ್ಟೇ. ಈ ಕೆಲಸ ಮಾಡಲು ಏನಾದರೂ ಕುಶಲತೆಯ ಅಗತ್ಯ ಇದೆಯೇ? ಎಂದು ಜನ ನನ್ನನ್ನು ಕೇಳುತ್ತಾರೆ."
ಮ್ಯಾಲೆಟ್ ಅನ್ನು ತಯಾರಿಸುವುದೆಂದರೆ, "ಬೇರೆ ಬೇರೆ ನೈಸರ್ಗಿಕ ಕಚ್ಚಾ ವಸ್ತುಗಳನ್ನು ಒಟ್ಟಿಗೆ ಸೇರಿಸಿ ಇದನ್ನು ತಯಾರಿಸುವಾಗ ಸಿಗುವ ಆಟದ ಒಂದು ಅಮೂರ್ತ ಭಾವನೆಯನ್ನು ಪಡೆಯುವುದು. ಸಮತೋಲನ, ಫ್ಲೆಕ್ಸಿಬಿಲಿಟಿ, ಗಟ್ಟಿತನ, ಮತ್ತು ಹಗುರತೆ ಒಟ್ಟುಗೂಡಿ ಈ ಭಾವನೆ ಸಿಗುತ್ತದೆ. ಇದು ಜರ್ಕ್ ಹೊಡೆಯುವ ಹಾಗೆ ಇರಬಾರುದು.”
ಅವರ ಮನೆಯ ಮೂರನೇ ಮಹಡಿಯಲ್ಲಿ ಇರುವ ವರ್ಕ್‌ಶಾಪ್‌ಗೆ ಹೋಗಲು ನಾವು ಒಂದೊಂದೇ ಕಿರಿದಾದ ಮೆಟ್ಟಿಲುಗಳನ್ನು ಮಂದಬೆಳಕಿನಲ್ಲಿ ಹತ್ತಿದೆವು. ಪಾರ್ಶ್ವವಾಯು ಆದ ಮೇಲೆ ಇವರಿಗೆ ಇದು ಕಷ್ಟವಾಗಿದೆ. ಆದರೂ ಈ ಮೆಟ್ಟಿಲುಗಳನ್ನು ಹತ್ತಿ ಕೆಲಸ ಮಾಡಲು ಅವರು ದೃಢ ನಿರ್ಧಾರ ಮಾಡಿದ್ದಾರೆ. ಹಾರ್ಸ್‌ಬ್ಯಾಕ್ ಪೊಲೊ ಮ್ಯಾಲೆಟ್‌ಗಳ ದುರಸ್ತಿ ಕಾರ್ಯವನ್ನು ವರ್ಷಪೂರ್ತಿ ಮಾಡುತ್ತಾರೆ, ಸೈಕಲ್ ಪೋಲೊ ಮ್ಯಾಲೆಟ್ ತಯಾರಿಕೆಯು ಸೆಪ್ಟೆಂಬರ್‌ನಿಂದ ಮಾರ್ಚ್‌ವರೆಗೆ ಸೀಸನ್ ಸಮಯದಲ್ಲಿ ಮಾತ್ರ ಮಾಡುತ್ತಾರೆ.
"ಕಠಿಣ ಕೆಲಸಗಳನ್ನು ಜೀತು ಮೇಲಿನ ಮಹಡಿಯಲ್ಲಿ ಮಾಡುತ್ತಾರೆ. ಮೇಡಂ ಮತ್ತು ನಾನು ನಮ್ಮ ಕೋಣೆಯಲ್ಲಿ ಉಳಿದ ಕೆಲಸವನ್ನು ಕೆಳಗೆ ಮಾಡುತ್ತೇವೆ," ಎಂದು ಅಶೋಕ್ ಹೇಳುತ್ತಾರೆ. ಅವರು ತಮ್ಮ ಪಕ್ಕದಲ್ಲಿ ಕುಳಿತಿರುವ ತಮ್ಮ ಪತ್ನಿ ಮೀನಾರನ್ನು ‘ಮೇಡಂ’ ಎಂದು ಕರೆಯುತ್ತಾರೆ. ತನ್ನ ಅರವತ್ತರ ಹರೆಯದಲ್ಲಿ ತನ್ನನ್ನು ತನ್ನ ಗಂಡ 'ಬಾಸ್' ಎಂದು ಕರೆಯುವಾಗ ಅವರು ನಗುತ್ತಾರೆ. ನಮ್ಮೊಂದಿಗೆ ಮಾತನಾಡುತ್ತಲೇ ಅವರು ತಮ್ಮ ಫೋನ್‌ನಲ್ಲಿ ಗ್ರಾಹಕರಿಗೆ ಚಿಕಣಿ ಮ್ಯಾಲೆಟ್ ಸೆಟ್ ಮಾದರಿಗಳ ಫೋಟೋ ಕಳಿಸುತ್ತಿದ್ದರು.
ಈ ಕೆಲಸ ಮುಗಿದ ಮೇಲೆ ನಮಗೆ ತಿನ್ನಲು ಕಚೋರಿಗಳನ್ನು ಫ್ರೈ ಮಾಡಲು ಅಡುಗೆಮನೆಗೆ ತೆರಳಿದರು. "ನಾನು 15 ವರ್ಷಗಳಿಂದ ಪೋಲೋ ಕೆಲಸ ಮಾಡುತ್ತಿದ್ದೇನೆ" ಎಂದು ಮೀನಾ ಹೇಳುತ್ತಾರೆ.
ಗೋಡೆಯ ಮೇಲೆ ಸಿಕ್ಕಿಸಿದ್ದ ಹಳೆಯ ಮ್ಯಾಲೆಟ್ ಒಂದನ್ನು ತೆಗೆದುಕೊಂಡು ಅಶೋಕ್ ಪೋಲೋ ಸ್ಟಿಕ್‌ನ ಮೂರು ಮುಖ್ಯ ಭಾಗಗಳನ್ನು ವಿವರಿಸಿದರು: ಬೆತ್ತದ ದಂಡ, ಮರದ ಹೆಡ್ ಮತ್ತು ಹತ್ತಿ ಜೋಲಿಯೊಂದಿಗೆ ರಬ್ಬರ್ ಅಥವಾ ರೆಕ್ಸಿನ್ ನಿಂದ ಮಾಡಿದ ಹ್ಯಾಂಡಲ್. ಪ್ರತಿಯೊಂದು ಭಾಗದ ತಯಾರಿಕೆಯನ್ನು ಅವರ ಕುಟುಂಬದ ಬೇರೆ ಬೇರೆ ಸದಸ್ಯರು ಮಾಡುತ್ತಾರೆ.
ಮನೆಯ ಮೂರನೇ ಮಹಡಿಯಲ್ಲಿ ಕೆಲಸ ಮಾಡುತ್ತಿರುವ ಜೀತುವಿನಿಂದ ತಯಾರಿಕಾ ಪ್ರಕ್ರಿಯೆ ಆರಂಭವಾಗುತ್ತದೆ. ಬೆತ್ತವನ್ನು ತುಂಡು ಮಾಡಲು ತಾವೇ ತಯಾರಿಸಿದ ಕಟರ್ ಮೆಷಿನ್ ಬಳಸುತ್ತಾರೆ. ಈ ಬೆತ್ತವನ್ನು ಸಪೂರ ಮಾಡಲು ಅವರು ರಾಂಡಾ (ಪ್ಲೇನ್) ಬಳಸುತ್ತಾರೆ. ಅದು ದಂಡವನ್ನು ಫ್ಲೆಕ್ಸಿಬಲ್ ಮಾಡಿ ಆಟ ಆಡುವಾಗ ಬಾಗುವಂತೆ ಮಾಡುತ್ತದೆ.
"ನಾವು ಬೆತ್ತದ ಕೆಳಭಾಗದಲ್ಲಿ ಮೊಳೆಗಳನ್ನು ಹಾಕುವುದಿಲ್ಲ. ಏಕೆಂದರೆ ಅದರಿಂದ ಕುದುರೆಗಳಿಗೆ ಗಾಯವಾಗಬಹುದು" ಎಂದು ಅಶೋಕ್ ಹೇಳುತ್ತಾರೆ. "ಮಾನೋ ಅಗರ್ ಘೋಡಾ ಲಂಗ್ಡಾ ಹೋ ಗಯಾ ತೋ ಆಪ್ಕೆ ಲಾಕೋಂ ರೂಪಾಯಿ ಬೇಕಾರ್ [ಕುದುರೆ ಕುಂಟಾದರೆ ಲಕ್ಷ ರೂಪಾಯಿಗಳು ನಷ್ಟವಾಗುತ್ತದೆ]." ಎಂದು ಹೇಳುತ್ತಾರೆ.
"ನನ್ನ ಕೆಲಸ ತುಂಬಾ ಟೆಕ್ನಿಕಲ್" ಎಂದು ಜೀತು ಹೇಳುತ್ತಾರೆ. ಅವರು ಮೊದಲು ಪೀಠೋಪಕರಣಗಳನ್ನು ತಯಾರಿಸುತ್ತಿದ್ದರು ಮತ್ತು ಈಗ ರಾಜಸ್ಥಾನ ಸರ್ಕಾರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ 'ಜೈಪುರ್ ಫೂಟ್' ವಿಭಾಗದಲ್ಲಿ ಉದ್ಯೋಗಿಯಾಗಿದ್ದಾರೆ. ಈ ವಿಭಾಗದಲ್ಲಿ ಕೈಗೆಟುಕುವ ವೆಚ್ಚದಲ್ಲಿ ಪ್ರಾಸ್ಥೆಟಿಕ್ ಅಂಗಗಳನ್ನು ತಯಾರಿಸುವ ಕುಶಲಕರ್ಮಿಗಳು ಕೆಲಸ ಮಾಡುತ್ತಾರೆ.
ಜೀತು ಅವರು ಮ್ಯಾಲೆಟ್‌ನ ಹೆಡ್ ಅನ್ನು ತೋರಿಸುತ್ತಾ ಬೆತ್ತದ ಶಾಫ್ಟ್ ಒಳಗೆ ಹೋಗಲು ಡ್ರಿಲ್ಲಿಂಗ್ ಯಂತ್ರ ಬಳಸಿ ಹೇಗೆ ತೂತು ಮಾಡುತ್ತಾರೆ ಎಂಬುದನ್ನು ತೋರಿಸಿದರು. ನಂತರ ಈ ಕೆಲಸವನ್ನು ಮಾಡಲು ಮೀನಾ ಅವರ ಕೈಗೆ ನೀಡಿದರು.
ಅವರ ಮನೆಯಲ್ಲಿ ಎರಡು ಮಲಗುವ ಕೋಣೆಗಳೊಂದಿಗೆ ಅಡುಗೆ ಮನೆ ನೆಲ ಮಹಡಿಯಲ್ಲಿದೆ. ಬೇಕಾದ ಕಡೆ ನಡೆದಾಡಲು ಸುಲಭವಾಗುವಂತೆ ಮೀನಾ ಅಲ್ಲಿಯೇ ಕೆಲಸ ಮಾಡುತ್ತಾರೆ. ಅವರು ಅಡುಗೆ ಕೆಲಸ ಮುಗಿಸಿದ ನಂತರ ಮತ್ತು ಮೊದಲು ಮಧ್ಯಾಹ್ನ 12 ರಿಂದ ಸಂಜೆ 5 ರವರೆಗೆ ಮ್ಯಾಲೆಟ್‌ನ ಕೆಲಸ ಮಾಡುತ್ತಾರೆ. ತುರಾತುರಿಯಲ್ಲಿ ಆರ್ಡರ್‌ಗಳು ಬಂದರೆ ಅವರ ಕೆಲಸದ ಸಮಯ ಇನ್ನೂ ಹೆಚ್ಚಾಗುತ್ತದೆ.
ಮೀನಾ ಅವರು ಮ್ಯಾಲೆಟ್ ತಯಾರಿಕೆಯಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುವ ಶಾಫ್ಟ್ ಅನ್ನು ಗಟ್ಟಿ ಮಾಡುವ ಮತ್ತು ಗ್ರಿಪ್ ಬೈಂಡ್ ಮಾಡುವಂತಹ ಕೆಲಸವನ್ನು ಮಾಡುತ್ತಾರೆ. ಫೆವಿಕಾಲ್ ಅಂಟನ್ನು ಅದ್ದಿದ ಹತ್ತಿಯ ಪಟ್ಟಿಗಳನ್ನು ಬೆತ್ತದ ತೆಳುವಾದ ತುದಿಗೆ ಅಂಟಿಸುವ ಕೆಲಸ ಕೂಡ ಮಾಡುತ್ತಾರೆ. ಇದಾದ ನಂತರ ಅವರು ಅದರ ಆಕಾರವನ್ನು ಹಾಗೇ ಇರುವಂತೆ ಮಾಡಲು 24 ಗಂಟೆಗಳ ಕಾಲ ನೆಲದ ಮೇಲೆ ಒಣಗಿಸುತ್ತಾರೆ.
ನಂತರ ಅವರು ರಬ್ಬರ್ ಅಥವಾ ರೆಕ್ಸಿನ್ ಹ್ಯಾಂಡಲ್ ಗಳನ್ನು ಜೋಡಿಸಿ, ಅಂಟು ಮತ್ತು ನೇಲ್‌ಗಳನ್ನು ಬಳಸಿ ದಪ್ಪವಾದ ಹಿಡಿಕೆಗಳ ಮೇಲೆ ಹತ್ತಿ ಜೋಲಿಗಳನ್ನು ಕಟ್ಟುತ್ತಾರೆ. ಈ ಹ್ಯಾಂಡಲ್ ನೋಡಲು ಅಚ್ಚುಕಟ್ಟಾಗಿ ಕಾಣಬೇಕು ಮತ್ತು ಜೋಲಿ ಬಲವಾಗಿರಬೇಕು. ಹಾಗಿದ್ದರೆ ಮಾತ್ರ ಸ್ಟಿಕ್ ಆಟಗಾರನ ಮಣಿಕಟ್ಟಿನಿಂದ ಜಾರಿಕೊಳ್ಳುವುದಿಲ್ಲ.
ಇವರ 36 ವರ್ಷದ ಮಗ, ಸತ್ಯಂ ಕೂಡ ಈ ಕೆಲಸವನ್ನು ಇವರ ಜೊತೆಯಾಗಿ ಮಾಡುತ್ತಿದ್ದರು. ಆದರೆ ರಸ್ತೆ ಅಪಘಾತದ ನಂತರ ಅವರ ಕಾಲಿಗೆ ಮೂರು ಶಸ್ತ್ರಚಿಕಿತ್ಸೆಯಾದ ಮೇಲೆ ನೆಲದ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಮ್ಮೊಮ್ಮೆ ಸಂಜೆ ಅವರು ಅಡುಗೆಮನೆಯಲ್ಲಿ ಸಬ್ಜಿ (ತರಕಾರಿ) ಬೇಯಿಸುವುದು ಇಲ್ಲವೇ ಊಟಕ್ಕೆ ಧಾಬಾ ಶೈಲಿಯಲ್ಲಿ ದಾಲ್ಗೆ ತಡ್ಕಾ (ಮಸಾಲೆ) ಮಾಡುವ ಮೂಲಕ ತಮ್ಮ ಮನೆಯವರಿಗೆ ನೆರವಾಗುತ್ತಾರೆ.
ಅವರ ಪತ್ನಿ ರಾಖಿ ಮನೆಯಿಂದ ಕಾಲ್ನಡಿಗೆಯ ದೂರದಲ್ಲಿರುವ ಪಿಜ್ಜಾ ಹಟ್‌ನಲ್ಲಿ ವಾರದ ಏಳು ದಿನಗಳ ಕಾಲ ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ಕೆಲಸ ಮಾಡುತ್ತಾರೆ. ಮನೆಯಲ್ಲಿ ಬಿಡುವಿನ ವೇಳೆಯಲ್ಲಿ ಬ್ಲೌಸ್ ಮತ್ತು ಕುರ್ತಾಗಳಂತಹ ಮಹಿಳೆಯರ ಬಟ್ಟೆಗಳನ್ನು ಹೊಲಿಯುತ್ತಾರೆ ಮತ್ತು ತಮ್ಮ ಮಗಳು ನೈನಾಳೊಂದಿಗೆ ಸಮಯ ಕಳೆಯುತ್ತಾರೆ. ಈ ಏಳು ವರ್ಷದ ಮಗು ತಂದೆ ಸತ್ಯಂ ಅವರ ನೆರವಿನೊಂದಿಗೆ ಹೋಮ್ ವರ್ಕ್ ಮಾಡುತ್ತಾಳೆ.
ನೈನಾ 9 ಇಂಚಿನ ಮಿನಿಯೇಚರ್ ಮ್ಯಾಲೆಟ್‌ನೊಂದಿಗೆ ಆಡುತ್ತಾಳೆ. ಆದರೆ ಅದು ಹಾಳಾಗಬಹುದು ಎಂದು ಅವಳ ಕೈಯಿಂದ ವಾಪಾಸ್ ತೆಗೆದುಕೊಳ್ಳುತ್ತಾರೆ. ಎರಡು ಸ್ಟಿಕ್ ಗಳ, ಮರದ ಬೇಸ್ ಮೇಲೆ ಇಟ್ಟಿರುವ ಚೆಂಡಿನಂತೆ ಕೃತಕ ಮುತ್ತು ಇರುವ ಮಿನಿಯೇಚರ್ ಸೆಟ್ ಒಂದನ್ನು ಅವರು 600 ರುಪಾಯಿಗೆ ಮಾರುತ್ತಾರೆ. ಆಟಕ್ಕೆ ಬಳಸುವ ದೊಡ್ಡ ಮ್ಯಾಲೆಟ್‌ಗಿಂತ ಉಡುಗೊರೆ ನೀಡಲು ಬಳಸುವ ಮಿನಿಯೇಚರ್ ಮ್ಯಾಲೆಟ್‌ಗಳನ್ನು ಮಾಡಲು ಹೆಚ್ಚು ಶ್ರಮ ಬೇಕಾಗುತ್ತದೆ ಎಂದು ಮೀನಾ ಹೇಳುತ್ತಾರೆ. "ಇದನ್ನು ಮಾಡಲು ಹೆಚ್ಚು ಶ್ರಮ ಪಡಬೇಕು," ಎನ್ನುತ್ತಾರೆ.
ಮ್ಯಾಲೆಟ್ ತಯಾರಿಕೆಯಲ್ಲಿ- ಹೆಡ್ ಮತ್ತು ಬೆತ್ತದ ಶಾಫ್ಟನ್ನು ಒಟ್ಟಿಗೆ ಜೋಡಿಸುವುದು ಅತ್ಯಂತ ಪ್ರಮುಖ ಕೆಲಸ. ಇದರಲ್ಲಿ ಸ್ಟಿಕ್‌ಗೆ ಒಂದು ಸಮತೋಲನ ಬರುತ್ತದೆ. "ಸಮತೋಲನವನ್ನು ತರುವುದು ಎಲ್ಲರಿಗೂ ಮಾಡಲಾಗದ ಕೆಲಸ," ಎಂದು ಮೀನಾ ಹೇಳುತ್ತಾರೆ. ಇದು ಮ್ಯಾಲೆಟ್ ನ ಒಂದು ಅಮೂರ್ತ ಲಕ್ಷಣವಾಗಿದೆ. "ಅದನ್ನು ನಾನೇ ಮಾಡುತ್ತೇನೆ," ಎಂದು ಅಶೋಕ್ ವಿವರಿಸುತ್ತಾರೆ.
ತನ್ನ ಎಡಗಾಲನ್ನು ಚಾಚಿ ನೆಲದ ಮೇಲಿನ ಕೆಂಪು ಗಡ್ಡಿ (ಕುಶನ್) ಮೇಲೆ ಕುಳಿತು ಮ್ಯಾಲೆಟ್‌ನ ಹೆಡ್ ಮೇಲೆ ಕೊರೆದ ಚೆಡ್ ಸುತ್ತಲೂ ಅಂಟು ಹಚ್ಚುವಾಗ ಅವರು ಬೆತ್ತದ ದಂಡವನ್ನು ಹೆಬ್ಬೆರಳು ಮತ್ತು ತೋರುಬೆರಳಿನ ನಡುವೆ ಇಟ್ಟಿರುತ್ತಾರೆ. ಕಳೆದ ಐದೂವರೆ ದಶಕಗಳಲ್ಲಿ ಎಷ್ಟು ಬಾರಿ ಬೆತ್ತದ ದಂಡವನ್ನು ತನ್ನ ಕಾಲ್ಬೆರಳುಗಳ ನಡುವೆ ಇರಿಸಿದ್ದೀರಿ ಎಂದು ಕೇಳಿದಾಗ "ಲೆಕ್ಕವಿಲ್ಲದಷ್ಟು" ಎಂದು ಅಶೋಕ್ ಹೇಳುತ್ತಾರೆ.
“ಯೇ ಚೂಡಿ ಹೋ ಜಾಯೇಗಿ, ಫಿಕ್ಸ್ ಹೋ ಜೇಗಿ ಫಿರ್ ಯೇ ಬಾಹರ್ ನಹಿ ನಿಕ್ಲೇಗಿ [ಇದು ಬಳೆಯನ್ನು ಹೋಲುತ್ತದೆ ಮತ್ತು ಈ ಬಳೆಯ ರಿಮ್‌ನಲ್ಲಿ ಅದು ಹೊರಬಾರದ ಹಾಗೆ ಸರಿಯಾಗಿ ಕೂರಬೇಕು], ” ಎಂದು ಜೀತು ವಿವರಿಸುತ್ತಾರೆ. ಚೆಂಡಿನ ನಿರಂತರ ಹೊಡೆತವನ್ನು ತಡೆದುಕೊಳ್ಳಲು ಬೆತ್ತ ಮತ್ತು ಮರವನ್ನು ಬಿಗಿಯಾಗಿ ಕಟ್ಟಲಾಗಿದೆ.
ಒಂದು ತಿಂಗಳಲ್ಲಿ ಸರಿಸುಮಾರು 100 ಮ್ಯಾಲೆಟ್‌ಗಳನ್ನು ತಯಾರಿಸಲಾಗುತ್ತದೆ. ಅಶೋಕ್ ಅವರ 40 ವರ್ಷಗಳ ಸಹವರ್ತಿ ಮೊಹಮ್ಮದ್ ಶಫಿ ವಾರ್ನಿಷ್ ಮಾಡುತ್ತಾರೆ. ವಾರ್ನಿಷ್ ಮ್ಯಾಲೆಟ್‌ಗೆ ಹೊಳಪನ್ನು ನೀಡುತ್ತದೆ ಮತ್ತು ತೇವಾಂಶ ಹಾಗೂ ಕೊಳಕಿನಿಂದ ಕಾಪಾಡುತ್ತದೆ. ಶಫಿ ಮ್ಯಾಲೆಟ್ ನ ಒಂದು ಬದಿಯಲ್ಲಿ ಬಣ್ಣದಿಂದ ಕ್ಯಾಲಿಗ್ರಾಫ್ ಮಾಡುವ ಮೂಲಕ ಕೆಲಸ ಮುಗಿಸುತ್ತಾರೆ. ನಂತರ ಅಶೋಕ್, ಮೀನಾ ಮತ್ತು ಜೀತು ಹ್ಯಾಂಡಲ್ ಕೆಳಗೆ 'ಜೈಪುರ್ ಪೋಲೋ ಹೌಸ್' ಎಂಬ ಲೇಬಲ್ ಅಂಟಿಸುತ್ತಾರೆ.
ಒಂದು ಮ್ಯಾಲೆಟ್ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳ ಬೆಲೆ 1,000 ರುಪಾಯಿ. ಮಾರಾಟದಲ್ಲಿ ಇದರ ಅರ್ಧದಷ್ಟು ಮೊತ್ತವನ್ನೂ ವಸೂಲು ಮಾಡಲು ಸಾಧ್ಯವಿಲ್ಲ ಎಂದು ಅಶೋಕ್ ಅವರು ಹೇಳುತ್ತಾರೆ. ಒಂದು ಮ್ಯಾಲೆಟನ್ನು 1,600 ರುಪಾಯಿಗೆ ಮಾರಲು ಅವರು ಪ್ರಯತ್ನಿಸುತ್ತಾರೆ. ಆದರೆ ಎಂದಿಗೂ ಅದರಿಂದ ಅವರು ಯಶಸ್ವಿಯಾಗಿಲ್ಲ. “ಆಟಗಾರರು ಸರಿಯಾಗಿ ಹಣ ಕೊಡುವುದಿಲ್ಲ. ಒಂದು ಸಾವಿರ ಇಲ್ಲವೇ ಹನ್ನೆರಡು ನೂರು ರೂಪಾಯಿಗಳನ್ನು ಕೊಡುತ್ತಾರೆ,” ಎಂದು ಅವರು ಹೇಳುತ್ತಾರೆ.
ಮ್ಯಾಲೆಟ್‌ನ ಪ್ರತಿಯೊಂದು ಭಾಗವನ್ನು ತುಂಬಾ ಎಚ್ಚರಿಕೆಯಿಂದ ಮಾಡಿದರೂ ಕಡಿಮೆ ಆದಾಯ ಬರುತ್ತಿದೆ. " ಅಸ್ಸಾಂ ಮತ್ತು ರಂಗೂನ್‌ನಿಂದ ಬರುವ ಬೆತ್ತಗಳನ್ನು ಕೋಲ್ಕತ್ತಾದಿಂದ ತರಿಸಲಾಗುತ್ತದೆ" ಎಂದು ಅಶೋಕ್ ಹೇಳುತ್ತಾರೆ. ಇವು ಸರಿಯಾದ ತೇವಾಂಶ, ಫ್ಲೆಕ್ಸಿಬಿಲಿಟಿ ಮತ್ತು ಗಟ್ಟಿತನವನ್ನು ಹೊಂದಿರಬೇಕು.
“ಕೋಲ್ಕತ್ತಾದ ಪೂರೈಕೆದಾರರು ದಪ್ಪವಾದ ಬೆತ್ತಗಳನ್ನು ಮಾರಾಟ ಮಾಡುತ್ತಾರೆ. ಇವು ಪೊಲೀಸ್ ಸಿಬ್ಬಂದಿಗೆ ಲಾಠಿ ಮತ್ತು ವಯಸ್ಸಾದವರಿಗೆ ವಾಕಿಂಗ್ ಸ್ಟಿಕ್‌ಗಳನ್ನು ತಯಾರಿಸಲು ಉಪಯೋಗವಾಗುತ್ತವೆ. ಆ ಸಾವಿರದ ಪೈಕಿ ಕೇವಲ ನೂರು ಮಾತ್ರ ನನಗೆ ಬೇಕಾದ ಬೆತ್ತಗಳು ಇರುತ್ತವೆ” ಎನ್ನುತ್ತಾರೆ ಅಶೋಕ್. ಅವರ ಪೂರೈಕೆದಾರರು ಕಳುಹಿಸುವ ಹೆಚ್ಚಿನ ಬೆತ್ತಗಳು ಮ್ಯಾಲೆಟ್ ತಯಾರಿಸಲು ಸಾಧ್ಯವಾಗದಷ್ಟು ದಪ್ಪವಾಗಿರುತ್ತವೆ. ಆದ್ದರಿಂದ ಕೊರೋನಕ್ಕೆ ಮೊದಲು ಮುಂಚಿತವಾಗಿ ಅವರು ಪ್ರತಿ ವರ್ಷ ಕೋಲ್ಕತ್ತಾಗೆ ಹೋಗಿ ಸ್ಥಳದಲ್ಲಿಯೇ ಆರಿಸಿ ತರುತ್ತಿದ್ದರು. "ಈಗ ನನ್ನ ಜೇಬಿನಲ್ಲಿ ಒಂದು ಲಕ್ಷ ರೂಪಾಯಿ ಇದ್ದರೆ ಮಾತ್ರ ನಾನು ಕೋಲ್ಕತ್ತಾಗೆ ಹೋಗಬಹುದು," ಎಂದು ಅವರು ಹೇಳುತ್ತಾರೆ.
ಅಶೋಕ್ ಹೇಳುವ ಪ್ರಕಾರ, ಅನೇಕ ವರ್ಷಗಳ ಟ್ರಯಲ್ ಆಂಡ್ ಎರರ್ ನಂತರ ಸ್ಥಳೀಯ ಮರದ ಮಾರುಕಟ್ಟೆಯಲ್ಲಿ ಸಿಗುವ ಸ್ಟೀಮ್ ಬೀಚ್ ಮತ್ತು ಮೇಪಲ್ ಮರವನ್ನು ಮ್ಯಾಲೆಟ್‌ನ ಹೆಡ್ ತಯಾರಿಸಲು ಬಳಸಲಾಗುತ್ತಿದೆ.
ಅವರು ಈ ಮರಗಳನ್ನು ಖರೀದಿಸುವಾಗ ಯಾಕೆ ಖರೀದಿಸುತ್ತಿದ್ದಾರೆ ಎಂಬುದನ್ನು ಮಾರಾಟಗಾರರಿಗೆ ಹೇಳಿಲ್ಲ. "ನೀವು ಏನೋ ದೊಡ್ಡ ಕೆಲಸ ಮಾಡುತ್ತಿದ್ದೀರಿ ಎಂದು ಅವರು ದರವನ್ನು ಹೆಚ್ಚಿಸುತ್ತಾರೆ!" ಎಂದು ಅಶೋಕ್ ಹೇಳುತ್ತಾರೆ.
ಹಾಗಾಗಿ ಮರಗಳನ್ನು ಮಾರಾಟ ಮಾಡುವವರಿಗೆ ಇವರು ಟೇಬಲ್‌ಗಳಿಗೆ ಬೇಕಾದ ಮರದ ಕಾಲುಗಳನ್ನು ತಯಾರಿಸುತ್ತಿರುವುದಾಗಿ ಹೇಳುತ್ತಾರೆ. "ಯಾರಾದರೂ ನಾನು ರೋಲಿಂಗ್ ಪಿನ್‌ಗಳನ್ನು ಮಾಡುತ್ತೇನೆಯೇ ಎಂದು ಕೇಳಿದರೆ ನಾನು ಹೌದು ಎಂದು ಹೇಳುತ್ತೇನೆ!" ಅವರು ನಗುತ್ತಾ ಹೇಳುತ್ತಾರೆ.
"ನನ್ನ ಬಳಿ 15-20 ಲಕ್ಷ ರೂಪಾಯಿ ಇದ್ದಿದ್ದರೆ, ಯಾರೂ ನನ್ನನ್ನು ತಡೆಯಲು ಸಾಧ್ಯವಿರಲಿಲ್ಲ" ಎಂದು ಅವರು ಹೇಳುತ್ತಾರೆ. ಗುಣಮಟ್ಟದ ಮ್ಯಾಲೆಟ್ ಹೆಡ್ ತಯಾರಿಸಲು ಅವರು ಅರ್ಜೆಂಟೀನಾ ಮೂಲದ ಟಿಪುವಾನಾ ಟಿಪು ಮರವನ್ನು ಕಂಡುಕೊಂಡಿದ್ದಾರೆ.. "ಇದು ತುಂಬಾ ಹಗುರ ಮತ್ತು ಮುರಿಯುವುದಿಲ್ಲ, ಆದರೆ ಅದು ಸಿಪ್ಪೆ ಸುಲಿಯುತ್ತದೆ" ಎಂದು ಅವರು ಹೇಳುತ್ತಾರೆ.
ಅರ್ಜೆಂಟೀನಾದ ಸ್ಟಿಕ್ ಗಳ ಬೆಲೆ ಕನಿಷ್ಠ 10,000 -12,000 ರುಪಾಯಿ. "ದೊಡ್ಡ ದೊಡ್ಡ ಆಟಗಾರರು ಅರ್ಜೆಂಟೀನಾದಿಂದ ಇವುಗಳನ್ನು ಆರ್ಡರ್ ಮಾಡುತ್ತಾರೆ," ಎಂದು ಅವರು ಹೇಳುತ್ತಾರೆ.
ಇಂದು ಅಶೋಕ್ ಕಸ್ಟಮ್ ಆರ್ಡರ್‌ನಲ್ಲಿ ಹಾರ್ಸ್‌ಬ್ಯಾಕ್ ಪೋಲೋ ಮ್ಯಾಲೆಟ್‌ಗಳನ್ನು ತಯಾರಿಸುತ್ತಾರೆ ಮತ್ತು ವಿದೇಶಿ ಮ್ಯಾಲೆಟ್‌ಗಳನ್ನು ರಿಪೇರಿ ಮಾಡುತ್ತಾರೆ. ಜೈಪುರ ಜಿಲ್ಲೆಯು ಭಾರತದಲ್ಲಿ ಅತಿ ಹೆಚ್ಚು ಪೋಲೋ ಕ್ಲಬ್‌ಗಳನ್ನು ಹೊಂದಿದೆ ಎಂಬ ವಾಸ್ತವದ ಹೊರತಾಗಿಯೂ, ನಗರದ ಸಣ್ಣ ಸಣ್ಣ ಕ್ರೀಡಾ ಸಾಮಗ್ರಿಗಳ ಅಂಗಡಿಗಳು ಮ್ಯಾಲೆಟ್‌ಗಳನ್ನು ಮಾರಾಟ ಮಾಡುವುದಿಲ್ಲ.
"ಯಾರಾದರೂ ಪೋಲೋ ಸ್ಟಿಕ್‌ಗಳನ್ನು ಕೇಳಿಕೊಂಡು ಬಂದರೆ ನಾವು ಯಾವಾಗಲೂ ಅವರನ್ನು ಪೋಲೋ ವಿಕ್ಟರಿ ಎದುರು ಇರುವ ಜೈಪುರ ಪೋಲೋ ಹೌಸ್‌ಗೆ ಕಳುಹಿಸುತ್ತೇವೆ" ಎಂದು ಹೇಳುತ್ತಾ ಲಿಬರ್ಟಿ ಸ್ಪೋರ್ಟ್ಸ್‌ನ (1957) ಅನಿಲ್ ಛಾಬ್ರಿಯಾ ಅಶೋಕ್ ಅವರ ಬ್ಯುಸಿನೆಸ್ ಕಾರ್ಡನ್ನು ನನಗೆ ನೀಡಿದರು.
ಪೋಲೋ ವಿಕ್ಟರಿ ಸಿನಿಮಾವನ್ನು (ಈಗ ಹೋಟೆಲ್ ಆಗಿದೆ) ಅಶೋಕ್ ಅವರ ತಂದೆಯ ಚಿಕ್ಕಪ್ಪ ಕೇಶು ರಾಮ್ ಅವರು 1933 ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಜೈಪುರ ತಂಡವು ಕಂಡ ಐತಿಹಾಸಿಕ ವಿಜಯದ ಸ್ಮರಣಾರ್ಥವಾಗಿ ನಿರ್ಮಿಸಿದರು. ಕೇಶು ರಾಮ್ ಅವರು ತಂಡದೊಂದಿಗೆ ಪ್ರವಾಸ ಮಾಡಿದ ಏಕೈಕ ಪೋಲೋ ಮ್ಯಾಲೆಟ್ ಕುಶಲಕರ್ಮಿ.
ಇಂದು ಐತಿಹಾಸಿಕ ಜೈಪುರ ತಂಡದ ಮಾನ್ ಸಿಂಗ್ II, ಹನುತ್ ಸಿಂಗ್ ಮತ್ತು ಪೃಥಿ ಸಿಂಗ್ ಎಂಬ ಮೂವರು ಸದಸ್ಯರ ಹೆಸರಿನಲ್ಲಿ ಜೈಪುರ ಮತ್ತು ದೆಹಲಿಯಲ್ಲಿ ವಾರ್ಷಿಕ ಪೋಲೋ ಪಂದ್ಯಾವಳಿಗಳನ್ನು ನಡೆಸಲಾಗುತ್ತದೆ. ಅಷ್ಟಾದರೂ ಭಾರತದ ಪೋಲೋ ಇತಿಹಾಸದಲ್ಲಿ ಅಶೋಕ್ ಮತ್ತು ಅವರ ಕುಟುಂಬದ ಕೊಡುಗೆಯ ಬಗ್ಗೆ ಸ್ವಲ್ಪ ಮನ್ನಣೆ ಇದ್ದೇ ಇದೆ.
"ಜಬ್ ತಕ್ ಕೇನ್ ಕಿ ಸ್ಟಿಕ್ಸ್ ಸೆ ಖೇಲೆಂಗೆ, ತಬ್ ತಕ್ ಪ್ಲೇಯರ್ಸ್ ಕೋ ಮೇರೆ ಪಾಸ್ ಆನಾ ಹಿ ಪಡೇಗಾ [ ಎಲ್ಲಿವರೆಗೆ ಬೆತ್ತದಿಂದ ಮಾಡಿದ ಕೋಲುಗಳೊಂದಿಗೆ ಆಡುವರೋ , ಅಲ್ಲಿ ವರೆಗೆ ಆಟಗಾರರು ನನ್ನ ಬಳಿ ಬರಲೇ ಬೇಕು]" ಎಂದು ಅವರು ಹೇಳುತ್ತಾರೆ.
ಈ ವರದಿಗೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಮ್‌ಎಮ್‌ಎಫ್) ನ ಫೆಲೋಶಿಪ್ ಬೆಂಬಲ ಪಡೆಯಲಾಗಿದೆ.
ಅನುವಾದ: ಚರಣ್ ಐವರ್ನಾಡು