ಶಾನು ಅವರಿಗೆ ಶಂಖಗಳನ್ನು ಕೆತ್ತಿ ಬಳೆಗಳನ್ನು ತಯಾರಿಸುವ ಕೆಲಸವನ್ನು ಕಲಿಸಿಕೊಟ್ಟವರು ಅವರ ಸಹೋದರ ಸಂಬಂಧಿ ಬಿಸ್ವಸಾಥ್ ಸೇನ್.
ನಾನು ಬಳೆಗಳ ಮೇಲೆ ಡಿಸೈನ್ ಗಳನ್ನು ಕೆತ್ತಿ ಅವುಗಳನ್ನು ಮಾರಲು ಮಾಹಾಜನರಿಗೆ (ಕಾಂಟ್ರಾಕ್ಟರ್ ಗಳಿಗೆ) ಕೊಡುತ್ತೇನೆ. ನಾನು ಸಾಮಾನ್ಯ ಶಂಖದ ಬಳೆಗಳನ್ನು ತಯಾರಿಸುತ್ತೇನೆ. ಆದರೆ ಚಿನ್ನದ ಲೇಪನ ಮಾಡಲು ಬಳೆಗಳನ್ನು ಹಾಗೂ ಶಂಖಗಳನ್ನು ಕಳಿಸುವವರೂ ಇದ್ದಾರೆ," ಎಂದು 31 ವರ್ಷದ ಶಾನು ಫೋಷ್ ವಿವರಿಸುತ್ತಾರೆ. ಅವರು ಈ ಕೆಲಸದಲ್ಲಿಯೇ ತನ್ನ ಅರ್ಧ ಜೀವನವನ್ನು ಕಳೆದಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಾರಖ್‌ಪುರದ ಶಂಖಬನಿಕ್ ಕಾಲೋನಿಯಲ್ಲಿರುವ ವರ್ಕ್‌ಶಾಪ್‌ಗಳಲ್ಲಿ ಶಂಖದ ಕೆಲಸ ಮಾಡುವ ಇಂತಹ ಅನೇಕ ಕುಶಲಕರ್ಮಿಗಳಿದ್ದಾರೆ. ಈ ಪ್ರದೇಶದ ಸುತ್ತಮುತ್ತ ಶಂಖದ ಕೆಲಸ ಮಾಡುವ ಅನೇಕ ವರ್ಕ್‌ಶಾಪ್‌ಗಳಿವೆ. "ಲಾಲ್ಕುಠಿಯಿಂದ ಘೋಷ್ಪಾರದ ವರೆಗೆ ಇರುವ ಪ್ರದೇಶಗಳಲ್ಲಿ ತುಂಬಾ ಮಂದಿ ಶಂಖ ಕುಶಲಕರ್ಮಿಗಳು ಬಳೆಗಳನ್ನು ತಯಾರಿಸುತ್ತಾರೆ," ಎಂದು ಶಾನು ಫೋಷ್ ಹೇಳುತ್ತಾರೆ.
ಇಲ್ಲಿನ ಮಹಾಜನರು ಅಂಡಮಾನ್ ಮತ್ತು ಚೆನ್ನೈನಿಂದ ಶಂಖಗಳನ್ನು ಆಮದು ಮಾಡಿಕೊಳ್ಳುತ್ತಾರೆ. ಈ ಶಂಖಗಳು ಸಮುದ್ರ ಬಸವನ ಹುಳುಗಳ (ಸೀ ಸ್ನೈಲ್) ಮೇಲೆ ಹುಟ್ಟುವ ಚಿಪ್ಪುಗಳು. ಈ ಶಂಖಗಳನ್ನು ಊದಿ ಶಬ್ದ ಹೊಮ್ಮಿಸಲು ಮತ್ತು ಬಳೆಗಳನ್ನು ತಯಾರಿಸಲು ಬಳಸುತ್ತಾರೆ. ಸಣ್ಣ ಮತ್ತು ಹಗುರವಾದ ಶಂಖಗಳನ್ನು ಡ್ರಿಲ್ ಮಾಡುವಾಗ ತುಂಡಾಗುವುದರಿಂದ ದಪ್ಪ ಮತ್ತು ಭಾರವಾದ ಶಂಖಗಳಿಂದ ಬಳೆಗಳನ್ನು ತಯಾರಿಸಲಾಗುತ್ತದೆ. ಹಾಗಾಗಿ ಹಗುರವಾದ ಶಂಖಗಳನ್ನು ಊದುವ ವಾದ್ಯಗಳನ್ನು ಮಾಡಲು ಬಳಸಿದರೆ ಭಾರ ಹಾಗೂ ದಪ್ಪದ ಶಂಖಗಳನ್ನು ಬಳೆಗಳನ್ನು ತಯಾರಿಸಲು ಬಳಸಲಾಗುತ್ತದೆ.
ಶಂಖದ ಒಳಹೊರಗನ್ನು ಸ್ವಚ್ಚಗೊಳಿಸಿದ ನಂತರವೇ ಇಡೀ ಪ್ರಕ್ರಿಯೆ ಆರಂಭವಾಗುವುದು. ಚಿಪ್ಪನ್ನು ಶುಚಿಗೊಳಿಸಿ ಸಲ್ಪ್ಯೂರಿಕ್ ಆಸಿಡ್ ಬೆರೆಸಿರುವ ಬಿಸಿನೀರಿನಿಂದ ತೊಳೆಯಲಾಗುತ್ತದೆ. ಇದಾದ ಮೇಲೆ ಹೊಳಪು ನೀಡಲಾಗುತ್ತದೆ. ಬಳೆಯಲ್ಲಿ ರಂದ್ರ ಇಲ್ಲವೇ ಉಬ್ಬುಗಳು, ಬಿರುಕುಗಳು ಇದ್ದರೆ ಅವುಗಳನ್ನು ಸರಿಪಡಿಸುತ್ತಾರೆ.
ಬಳೆಗಳನ್ನು ಶಂಖದಿಂದ ಬೇರ್ಪಡಿಸುವ ಮೊದಲು ಅವುಗಳನ್ನು ಸುತ್ತಿಗೆಯಿಂದ ಬಡಿದು ಮುರಿದು ನಂತರ ಡ್ರಿಲ್‌ನ ಸಹಾಯದಿಂದ ಕತ್ತರಿಸಲಾಗುತ್ತದೆ. ಇವುಗಳನ್ನು ಕುಶಲಕರ್ಮಿಗಳು ಉಜ್ಜಿ ಹೊಳಪು ನೀಡುತ್ತಾರೆ. "ಕೆಲವರು ಶಂಖವನ್ನು ಒಡೆದರೆ ಇತರರು ಬಳೆಗಳನ್ನು ತಯಾರಿಸುತ್ತಾರೆ. ನಾವೆಲ್ಲಾ ಬೇರೆ ಬೇರೆ ಮಹಾಜನರ ಅಡಿಯಲ್ಲಿ ಕೆಲಸ ಮಾಡುತ್ತೇವೆ," ಎಂದು ಹೇಳುತ್ತಾರೆ ಶಾನು.
ಶಂಖಬನಿಕ್ ಕಾಲೋನಿ ಶಂಖಗಳ ವರ್ಕ್‌ಶಾಫ್‌ಗಳಿಂದ ತುಂಬಿಹೋಗಿದೆ. ಅವುಗಳಲ್ಲಿ ಹೆಚ್ಚಿನವು ಸಣ್ಣ ಮಲಗುವ ಕೋಣೆ ಅಥವಾ ಗ್ಯಾರೇಜ್‌ನಷ್ಟು ಸಣ್ಣವು. ಶಾನು ಅವರ ವರ್ಕ್‌ಶಾಪ್‌ಗೆ ಒಂದೇ ಕಿಟಕಿಯಿದ್ದು ಕೋಣೆಯ ಗೋಡೆಗಳು ಶಂಖವನ್ನು ಕತ್ತರಿಸುವಾಗ ಬರುವ ಬಿಳಿ ಧೂಳಿನಿಂದ ಮುಚ್ಚಿಹೋಗಿವೆ. ಒಂದು ಮೂಲೆಯಲ್ಲಿ ಎರಡು ಗ್ರೈಂಡಿಂಗ್ ಮಿಷನ್‌ಗಳಿದ್ದರೆ ಇನ್ನೊಂದು ಮೂಲೆ ಕಚ್ಚಾ ಶಂಖಗಳಿಂದ ತುಂಬಿದೆ.
ಹೆಚ್ಚಿನ ಮಹಾಜನರು ತಮ್ಮ ಅಂಗಡಿಯಲ್ಲಿಯೇ ತಮ್ಮ ಉತ್ಪನ್ನಗಳನ್ನು ಮಾರುತ್ತಾರೆ. ಆದರೆ ಬಳೆಗಳನ್ನು ಮಾರಲು ಪ್ರತೀ ಬುಧವಾರ ನಡೆಯುವ ಸಗಟು ಮಾರುಕಟ್ಟೆಯಿದೆ.
ಕೆಲವೊಮ್ಮೆ ಚಿನ್ನ ಲೇಪಿಸಿರುವ ಬಳೆಗಳನ್ನು ಆರ್ಡರ್ ಮಾಡಿದ ಗ್ರಾಹಕರಿಗೆ ಮಹಾಜನರು ನೇರವಾಗಿ ಮಾರಾಟ ಮಾಡುತ್ತಾರೆ.
ಶಂಖಗಳ ಕೊರತೆಯಿಂದಾಗಿ ಶಂಖದ ಬಳೆಗಳ ಹಾಗೂ ಶಂಖಗಳ ಮಾರಾಟ ಕೆಲವು ವರ್ಷಗಳಿಂದ ಕುಸಿದಿದೆ ಎಂದು ಶಾನು ಹೇಳುತ್ತಾರೆ. "ಕಚ್ಚಾ ವಸ್ತುಗಳು ಕಡಿಮೆ, ಕೈಗೆಟುಕುವ ಬೆಲೆಯಲ್ಲಿರಬೇಕು. ಅವುಗಳ ಬ್ಲ್ಯಾಕ್ ಮಾರ್ಕೆಟ್ ಬಗ್ಗೆ ಸರ್ಕಾರ ಗಂಭೀರವಾಗಿ ಗಮನಹರಿಸಬೇಕು." ಎಂದು ಶಾನು ಹೇಳುತ್ತಾರೆ.
ಶಂಖದಿಂದ ಬಳೆ ಹಾಗೂ ಇತರ ಅಲಂಕಾರಿಕ ವಸ್ತುಗಳನ್ನು ತಯಾರಿಸುವಾಗ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಬೇಕು. ಅಭಿಷೇಕ್ ಸೇನ್ ಶಂಖಬನಿಕ್ ಕಾಲೋನಿಯಲ್ಲಿ ಕೆಲಸ ಮಾಡುವ 23 ವರ್ಷದ ಕುಶಲಕರ್ಮಿ. "ಶಂಖವನ್ನು ತಿಕ್ಕುವಾಗ ಅದರ ದೂಳು ನಮ್ಮ ಮೂಗು ಮತ್ತು ಬಾಯಿಯ ಒಳಗೆ ಹಾರುತ್ತದೆ. ನಾವು ಅಪಾಯಕಾರಿ ರಾಸಾಯನಿಕಗಳನ್ನು ಬಳಸುತ್ತೇವೆ," ಎಂದು ಅವರು ಹೇಳುತ್ತಾರೆ. ಅಭಿಷೇಕ್ ಶಂಖದ ಬಳೆಗಳನ್ನು, ಶಂಖವಾದ್ಯವನ್ನು ವಿನ್ಯಾಸಗೊಳಿಸುತ್ತಾರೆ.
"ನನ್ನ ಆದಾಯ ಕೆಲಸದ ಗುಣಮಟ್ಟ ಮತ್ತು ರೀತಿಯನ್ನು ಅವಲಂಬಿಸಿದೆ. ಶಂಖದ ಬಳೆ ಅಗಲವೂ ಭಾರವೂ ಆದಷ್ಟು ನನ್ನ ಸಂಬಳ ಕೂಡ ಹೆಚ್ಚಾಗುತ್ತದೆ. ಕೆಲವೊಮ್ಮೆ 1,000 ರುಪಾಯಿ ಸಂಪಾದಿಸಿದರೆ ಇನ್ನೂ ಕೆಲವೊಮ್ಮೆ ಕೇವಲ 350 ರುಪಾಯಿ ಮಾತ್ರ. ಹೆಚ್ಚಿನ ದಿನಗಳಲ್ಲಿ ಬೆಳಗ್ಗೆ 9:30 ಕ್ಕೆ ಕೆಲಸ ಆರಂಭಿಸಿದರೆ ಮಧ್ಯಾಹ್ನ 3 ಗಂಟೆ ವರೆಗೆ ಮಾಡಿ ಹೋಗುತ್ತೇನೆ, ಮತ್ತೆ ಸಂಜೆ 6 ಗಂಟೆಗೆ ಆರಂಭಿಸಿದರೆ 9 ಗಂಟೆಯ ವರೆಗೆ ಕೆಲಸ ಮಾಡಿ ಹೋಗುತ್ತೇನೆ," ಎಂದು ಅಭಿಷೇಕ್ ಹೇಳುತ್ತಾರೆ.
32ರ ಹರೆಯದ ಸಜಲ್ ಕಳೆದ 12 ವರ್ಷಗಳಿಂದ ಶಂಖಗಳನ್ನು ಗ್ರೈಂಡ್ ಮಾಡಿ ಪಾಲಿಶ್ ಮಾಡುವ ಕೆಲಸ ಮಾಡುತ್ತಾರೆ. "ನಾನು ಮೊದಲ ಬಾರಿ ಕೆಲಸ ಆರಂಭಿಸುವಾಗ ಒಂದು ಜೊತೆಗೆ (ಬಳೆಗಳಿಗೆ) ಎರಡೂವರೆ ರುಪಾಯಿ ಕೊಡುತ್ತಿದ್ದರು. ಈಗ ನಾನು ನಾಲ್ಕು ರುಪಾಯಿ ಸಂಪಾದಿಸುತ್ತಿದ್ದೇನೆ," ಎನ್ನುತ್ತಾರೆ. ಇವರು ಶಂಖಗಳ ಫಿನಿಷಿಂಗ್ ಮಾಡುತ್ತಾರೆ. ಜಿಂಕ್ ಆಕ್ಸೈಡ್ ಹಾಗೂ ಅಂಟನ್ನು ಬೆರೆಸಿ ಪೇಸ್ಟ್ ತಯಾರಿಸಿ ಬಳೆಗಳಲ್ಲಿ ಇರುವ ರಂದ್ರ, ಬಿರುಕುಗಳನ್ನು ಮುಚ್ಚುತ್ತಾರೆ. ಸಜಲ್ ದಿನಕ್ಕೆ 300-400 ರುಪಾಯಿ ಸಂಪಾದಿಸುತ್ತಾರೆ.
"ನಾವು ತಯಾರಿಸುವ ಶಂಖ ಮತ್ತು ಬಳೆಗಳು ಅಸ್ಸಾಂ, ತ್ರಿಪುರ, ಕನ್ಯಾಕುಮಾರಿ ಮತ್ತು ಬಾಂಗ್ಲಾದೇಶಕ್ಕೆ ಹೋಗುತ್ತವೆ. ಉತ್ತರ ಪ್ರದೇಶದಿಂದ ಸಗಟು ವ್ಯಾಪಾರಿಗಳು ಇಲ್ಲಿಗೆ ಬಂದು ಖರೀದಿಸುತ್ತಾರೆ," ಎಂದು ಸುಶಾಂತ್ ಧರ್ ಹೇಳುತ್ತಾರೆ. 42 ವರ್ಷ ಪ್ರಾಯದ ಇವರು ಶಂಖಗಳ ಮೇಲೆ ಹೂವು, ಎಲೆ, ದೇವತೆಗಳು ಮತ್ತು ಇನ್ನಿತರ ಡಿಸೈನ್‌ಗಳನ್ನು ಮಾಡುತ್ತಾರೆ. "ನಾವು ತಿಂಗಳಿಗೆ ಹೆಚ್ಚುಕಮ್ಮಿ 5,000 ದಿಂದ 6,000 ಸಂಪಾದನೆ ಮಾಡುತ್ತೇವೆ. ಮಾರುಕಟ್ಟೆ ಕುಸಿಯುತ್ತಿದೆ ಮತ್ತು ಸಾಮಗ್ರಿಗಳ ಬೆಲೆ ಹೆಚ್ಚಾಗುತ್ತಿದೆ. ಮಳೆಗಾಲದಲ್ಲಿ ಹೋಲ್ ಸೇಲ್ ಗ್ರಾಹಕರು ಬಾರದೇ ತುಂಬಾ ತೊಂದರೆಯಾಗುತ್ತದೆ," ಎಂದು ಸುಶಾಂತ್ ಹೇಳುತ್ತಾರೆ.
"ನಾನು ದಿನಕ್ಕೆ 50 ಜೋಡಿ ಬಳೆಗಳನ್ನು ತಯಾರಿಸಿದರೆ 500 ರುಪಾಯಿ ಮಾಡಬಹುದು. ಆದರೆ, ಒಂದೇ ದಿನದಲ್ಲಿ 50 ಜೋಡಿ ಶಂಖದ ಬಳೆಗಳನ್ನು ಮಾಡುವುದು ಸಾಧ್ಯವಾಗದ ಮಾತು," ಎನ್ನುತ್ತಾರೆ ಶಾನು.
ಕುಸಿಯುತ್ತಿರುವ ಮಾರುಕಟ್ಟೆ, ಆರ್ಥಿಕ ಸಮಸ್ಯೆ ಮತ್ತು ಸರ್ಕಾರದ ಬೆಂಬಲವಿಲ್ಲದೆ ಶಾನು ಹಾಗೂ ಶಂಖಬನಿಕ್ ಕಾಲೋನಿಯ ಇತರ ಕುಶಲಕರ್ಮಿಗಳಿಗೆ ವ್ಯಾಪಾರದಲ್ಲಿ ಒಳ್ಳೆಯ ಭವಿಷ್ಯವಿಲ್ಲದಂತಾಗಿದೆ.
ಅನುವಾದಕರು: ಚರಣ್ ಐವರ್ನಾಡು