ಇಂದು, ಮತ್ತೊಮ್ಮೆ ಪೀಪಲ್ಸ್ ಆರ್ಕೈವ್ಸ್ ಆಫ್ ರೂರಲ್ ಇಂಡಿಯಾದಲ್ಲಿ ವಿಶ್ವ ಅನುವಾದ ದಿನ ಮತ್ತು ಯಾವುದೇ ಜರ್ನಲಿಸಮ್ ಹೊಂದಲು ಬಯಸಬಹುದಾದ ಅನುವಾದ ತಂಡದ ಕೆಲಸವನ್ನು ನಾವು ಸಂಭ್ರಮಿಸುತ್ತಿದ್ದೇವೆ. ಪರಿ ಜಗತ್ತಿನಲ್ಲೇ ಅತಿಹೆಚ್ಚು ಭಾಷೆಯಲ್ಲಿ ಪ್ರಕಟವಾಗುವ ಜರ್ನಲಿಸಮ್ ವೆಬ್ಸೈಟ್ ಎನ್ನುವುದು ನನ್ನ ನಂಬಿಕೆ. ನನ್ನ ಅಭಿಪ್ರಾಯ ತಪ್ಪಿದ್ದಲ್ಲಿ ತಿದ್ದಿಕೊಳ್ಳಲು ಸಿದ್ಧ. ನಮ್ಮ ಪರಿ ವೆಬ್‌ಸೈಟ್ 170 ಅನುವಾದಕರ ಅದ್ಭುತ ತಂಡವನ್ನು ಹೊಂದಿದೆ ಮತ್ತು 14 ಭಾಷೆಗಳಲ್ಲಿ ತನ್ನ ವರದಿ, ಲೇಖನಗಳನ್ನು ಪ್ರಕಟಿಸುತ್ತದೆ. ಹೌದು 40 ಭಾಷೆಗಳಲ್ಲಿ ಪ್ರಕಟಿಸುವ ಮಾಧ್ಯಮ ಸಂಸ್ಥೆಗಳಿವೆ. ಆದರೆ ಅವುಗಳಲ್ಲಿ ಬಲವಾದ ಶ್ರೇಣಿಕರಣವಿದೆ. ಅಲ್ಲಿ ಕೆಲವು ಭಾಷೆಗಳು ಹೆಚ್ಚು ಸಮಾನವೆನ್ನಿಸಿಕೊಳ್ಳುತ್ತವೆ.
ಅಲ್ಲದೆ, ನಾವು 'ಪ್ರತಿ ಭಾರತೀಯ ಭಾಷೆಯೂ ನಿಮ್ಮ ಭಾಷೆ' ಎಂಬ ತತ್ವದ ಮೇಲೆ ಪ್ರಕಟಿಸುತ್ತೇವೆ. ಮತ್ತು ಇದು ಭಾಷೆಗಳ ನಡುವೆ ಸಮಾನತೆಯನ್ನು ಸೂಚಿಸುತ್ತದೆ. ಒಂದು ತುಣುಕು ಒಂದು ಭಾಷೆಯಲ್ಲಿ ಕಾಣಿಸಿಕೊಂಡರೆ, ಅದು ಎಲ್ಲಾ 14 ಭಾಷೆಯಲ್ಲಿಯೂ ಕಾಣಿಸಿಕೊಳ್ಳುವುದನ್ನು ನೋಡುವುದು ನಮ್ಮ ನಿಯಮವಾಗಿದೆ. ಛತ್ತೀಸ್ ಗಢಿ ಈ ವರ್ಷ ಪರಿಯ ಭಾಷಾ ಕುಟುಂಬವನ್ನು ಸೇರಿಕೊಂಡಿತು. ಭೋಜ್ ಪುರಿ ಮುಂದಿನ ಸಾಲಿನಲ್ಲಿದೆ.
ಭಾರತೀಯ ಭಾಷೆಗಳನ್ನು ಉತ್ತೇಜಿಸುವುದು ಇಡೀ ಸಮಾಜಕ್ಕೆ ಅತ್ಯಗತ್ಯ ಎಂದು ನಾವು ನಂಬುತ್ತೇವೆ. ಇಲ್ಲಿನ ಭಾಷಾ ಶ್ರೀಮಂತಿಕೆಯ ಕುರಿತು ಗಾದೆಯೇ ಇದೆ. ಇಲ್ಲಿ ಮೂರ್ನಾಲ್ಕು ಮೈಲಿಗೆ ನೀರಿನ ರುಚಿ ಬದಲಾದರೆ, ಪ್ರತಿ ಹತ್ತು, ಹನ್ನೆರಡು ಮೈಲಿಗೆ ಭಾಷೆ ಬದಲಾಗುತ್ತದೆ.
ಆದರೆ ನಾವು ಈ ಕುರಿತು ಇನ್ನು ಮುಂದೆ ಈ ಸಂತೃಪ್ತಿ ಹೊಂದಲು ಸಾಧ್ಯವಿಲ್ಲ. ಸುಮಾರು 800 ಜೀವಂತ ಭಾಷೆಗಳನ್ನು ಹೊಂದಿರುವ ಈ ದೇಶವು ಕಳೆದ 50 ವರ್ಷಗಳಲ್ಲಿ 225 ಭಾಷೆಗಳ ಸಾವಿಗೆ ಸಾಕ್ಷಿಯಾಗಿದೆ ಎಂದು ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ ನಮಗೆ ಹೇಳುತ್ತಿರುವ ಸಮಯದಲ್ಲಿ ನಮ್ಮ ಭಾಷಾ ಸಮೃದ್ಧಿಯ ಕುರಿತು ಖಷಿಪಡುವುದು ಸಾಧ್ಯವಿಲ್ಲ. ಈ ಶತಮಾನದ ಅಂತ್ಯದ ವೇಳೆಗೆ ವಿಶ್ವದ 90-95 ಪ್ರತಿಶತದಷ್ಟು ಮಾತನಾಡುವ ಭಾಷೆಗಳು ಅಳಿದುಹೋಗುತ್ತವೆ ಅಥವಾ ಗಂಭೀರವಾಗಿ ಅಳಿವಿನಂಚಿನಲ್ಲಿರಲಿವೆ ಎಂದು ವಿಶ್ವಸಂಸ್ಥೆ ಪ್ರತಿಪಾದಿಸುವ ಸಮಯದಲ್ಲಿ, ಪ್ರಪಂಚದಾದ್ಯಂತ ಪ್ರತಿ ಹದಿನೈದು ದಿನಗಳಿಗೊಮ್ಮೆ ಕನಿಷ್ಠ ಒಂದು ಸ್ಥಳೀಯ ಭಾಷೆ ಸಾಯುತ್ತಿರುವ ಸಮಯದಲ್ಲಿ ನಮ್ಮ ಭಾಷಾ ಸಮೃದ್ಧಿಯ ಕುರಿತು ಸಂಭ್ರಮಿಸುವುದಾದರೂ ಹೇಗೆ?
ಒಂದು ಭಾಷೆ ಸತ್ತಾಗ, ನಮ್ಮ ಸಮಾಜದ ಒಂದು ಭಾಗ, ನಮ್ಮ ಸಂಸ್ಕೃತಿ, ನಮ್ಮ ಇತಿಹಾಸದ ಒಂದು ಭಾಗವೂ ಸಾಯುತ್ತದೆ. ಅದರೊಂದಿಗೆ ನೆನಪುಗಳು, ಸಂಗೀತ, ಪುರಾಣಗಳು, ಹಾಡುಗಳು, ಕಥೆಗಳು, ಕಲೆ, ಮೌಖಿಕ ಪರಂಪರೆ, ಮೌಖಿಕ ಸಂಪ್ರದಾಯಗಳು ಮತ್ತು ಜೀವನ ವಿಧಾನ ಸಾಯುತ್ತವೆ. ಒಂದು ಭಾಷೆ ಸಾಯುವುದೆಂದರೆ ಒಂದು ಸಮುದಾಯದ ಸಾಮರ್ಥ್ಯ ಮತ್ತು ಪ್ರಪಂಚದೊಂದಿಗಿನ ಸಂಪರ್ಕ, ಅದರ ಅಸ್ಮಿತೆ ಮತ್ತು ಘನತೆಯನ್ನು ಕಳೆದುಕೊಳ್ಳುವುದು. ಇದು ರಾಷ್ಟ್ರಕ್ಕೆ ಅದರ ಒಟ್ಟಾರೆ ಮತ್ತು ಈಗಾಗಲೇ ಅಳಿವಿನಂಚಿನಲ್ಲಿರುವ ವೈವಿಧ್ಯತೆಯ ನಷ್ಟವಾಗಿದೆ. ನಮ್ಮ ಪರಿಸರ ವಿಜ್ಞಾನ, ಜೀವನೋಪಾಯಗಳು ಮತ್ತು ಪ್ರಜಾಪ್ರಭುತ್ವ ಎಲ್ಲವೂ ನಮ್ಮ ಭಾಷೆಗಳ ಭವಿಷ್ಯದೊಂದಿಗೆ ಸಂಕೀರ್ಣವಾಗಿ ಸಂಬಂಧ ಹೊಂದಿವೆ. ಅವು ತರುವ ಅಗಾಧ ವೈವಿಧ್ಯತೆಯು ಎಂದಿಗೂ ಹೆಚ್ಚು ಅಮೂಲ್ಯವೆಂದು ನಮಗೆ ತೋರಲಿಲ್ಲ. ಆದರೂ, ಅವುಗಳ ಪರಿಸ್ಥಿತಿ ಎಂದೂ ಇಷ್ಟು ಅನಿಶ್ಚಿತವಾಗಿರಲಿಲ್ಲ.
ಪರಿ ಭಾರತೀಯ ಭಾಷೆಗಳನ್ನು ಕಥೆಗಳು, ಕವಿತೆಗಳು ಮತ್ತು ಹಾಡುಗಳ ಮೂಲಕ ಆಚರಿಸುತ್ತದೆ. ಇವುಗಳ ಅನುವಾದಗಳ ಮೂಲಕ. ಗ್ರಾಮೀಣ ಭಾರತದ ದೂರದ ಭಾಗಗಳಲ್ಲಿ ವಾಸಿಸುವ ಅಂಚಿನಲ್ಲಿರುವ ಸಮುದಾಯಗಳಿಂದ ಅನೇಕ ನಿಧಿಗಳು ನಮಗೆ ಸಿಕ್ಕಿವೆ, ಈ ಪ್ರದೇಶದ ಪ್ರತಿಯೊಂದು ಸಮುದಾಯದವರೂ ತಮ್ಮದೇ ಆದ ವಿಶಿಷ್ಟ ಭಾಷೆಯಲ್ಲಿ ಮಾತನಾಡುತ್ತಾರೆ. ನಮ್ಮ ಸಮರ್ಪಿತ ಭಾಷಾಂತರಕಾರರ ತಂಡವು ಇವುಗಳನ್ನು ಮುಂದಕ್ಕೆ ಕೊಂಡೊಯ್ಯಲು ಕೆಲಸ ಮಾಡುತ್ತಿದೆ - ಹೊಸ ಅಕ್ಷರಗಳು ಮತ್ತು ನುಡಿಗಟ್ಟುಗಳಲ್ಲಿ, ಅನೇಕ ಹೊಸ ಭೂಪ್ರದೇಶಗಳಲ್ಲಿ, ಮತ್ತು ಅವುಗಳ ಉಗಮ ಸ್ಥಳದಿಂದ ದೂರದಲ್ಲಿ. ಇವು ಭಾರತೀಯ ಭಾಷೆಗಳಿಂದ ಇಂಗ್ಲಿಷಿಗೆ ಏಕಮುಖ ಭಾಷಾಂತರಗಳಲ್ಲ. ಪರಿಯ ಭಾಷಾ ಜಗತ್ತು ವೈವಿಧ್ಯತೆಯ ದೊಡ್ಡ ಗುರಿಯ ಸುತ್ತಲೂ ತೆರೆದುಕೊಳ್ಳುತ್ತದೆ.
ನಮ್ಮ ಅನುವಾದ ತಂಡವು ಈ ದೇಶದ ವಿಸ್ಮಯಕಾರಿ ಶ್ರೀಮಂತಿಕೆಯ ಅತ್ಯಲ್ಪ ಪ್ರಾತಿನಿಧ್ಯವಾಗಿದ್ದು, ಇಂದು ನಾವು ಪ್ರಸ್ತುತ ಕೆಲಸ ಮಾಡುತ್ತಿರುವ ಪ್ರತಿಯೊಂದು ಭಾರತೀಯ ಭಾಷೆಗಳಿಂದ ಒಂದೊಂದು ಸಣ್ಣ ರತ್ನವನ್ನು ತಂದು ನಿಮ್ಮ ಮುಂದಿರಿಸಿದ್ದೇವೆ: ಅಸ್ಸಾಮಿ, ಬಂಗಾಳಿ, ಛತ್ತೀಸ್ ಗಢಿ, ಹಿಂದಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು,ತೆಲುಗು ಮತ್ತು ಉರ್ದು ಈ ಭಾಷೆಗಳ ಸಣ್ಣ ತುಣುಕುಗಳು ಇಲ್ಲಿವೆ. ನೀವು ಈ ಏಕತೆಯನ್ನು ವೈವಿಧ್ಯತೆಯಲ್ಲಿ ಆನಂದಿಸುತ್ತೀರಿ, ಅದರ ವೈವಿಧ್ಯತೆಯನ್ನು ಆನಂದಿಸುತ್ತೀರಿ ಎಂದು ನಾವು ಭಾವಿಸುತ್ತೇವೆ.
ಕನ್ನಡ ಭಾಷೆಯ ಮೇರು ಬರಹಗಾರ ಪಿ.ಲಂಕೇಶರ ಈ ಕವಿತೆಯಲ್ಲಿ ' ಅವ್ವ ' ಕೇವಲ ತ್ಯಾಗದ ಸಂಕೇತವಾಗಿರದೆ, ಈ ದೇಶದ ಅತ್ಯಂತ ಸಾಮಾನ್ಯ ಜನರ ಧೈರ್ಯ ಮತ್ತು ಹೋರಾಟಗಳ ಸಂಕೇತವಾಗಿಯೂ ಕಾಣಿಸಿಕೊಳ್ಳುತ್ತಾಳೆ.
ಕವನ – ಅವ್ವ
ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ,
ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳ ಬಂದಿಯ ಗೆದ್ದು,
ಹೆಂಟೆಗೊಂಡು ಮೊಗೆ ನೀರು ಹಿಗ್ಗಿ ;
ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,
ಹೂವಲ್ಲಿ ಹೂವಾಗಿ, ಕಾಯಲ್ಲಿ ಕಾಯಾಗಿ
ಹಸುರು ಗದ್ದೆಯ ನೋಡಿಕೊಂಡು,
ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.
ಸತ್ತಳು ಈಕೆ :
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?
ಎಷ್ಟು ಸಲ ಈ ಮುದುಕಿ ಅತ್ತಳು
ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ ;
ಎಷ್ಟು ಸಲ ಹುಡುಕುತ್ತ ಊರೂರು ಅಲೆದಳು
ತಪ್ಪಿಸಿಕೊಂಡ ಮುದಿಯ ಎಮ್ಮೆಗೆ?
ಸತಿಸಾವಿತ್ರಿ, ಜಾನಕಿ, ಊರ್ಮಿಳೆಯಲ್ಲ ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ ;
ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ ;
ದೇವರ ಪೂಜಿಸಲಿಲ್ಲ ; ಹರಿಕತೆ ಕೇಳಲಿಲ್ಲ ;
ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ.
ಬನದ ಕರಡಿಯ ಹಾಗೆ
ಚಿಕ್ಕಮಕ್ಕಳ ಹೊತ್ತು
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದ
ನೊಂದ ನಾಯಿಯ ಹಾಗೆ ಬೈದು, ಗೊಣಗಿ, ಗುದ್ದಾಡಿದಳು ;
ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ ;
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.
ಈಕೆ ಉರಿದೆದ್ದಾಳು
ಮಗ ಕೆಟ್ಟರೆ, ಗಂಡ ಬೇರೆ ಕಡೆ ಹೋದಾಗ ಮಾತ್ರ.
ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ ;
ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ ;
ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.
ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು ;
ಹೆತ್ತದ್ದಕ್ಕೆ, ಸಾಕಿದ್ದಕ್ಕೆ : ಮಣ್ಣಲ್ಲಿ ಬದುಕಿ,
ಮನೆಯಿಂದ ಹೊಲಕ್ಕೆ ಹೋದಂತೆ
ತಣ್ಣಗೆ ಮಾತಾಡುತ್ತಲೇ ಹೊರಟು ಹೋದುದಕ್ಕೆ
ಕವಿ: ಪಿ.ಲಂಕೇಶ್
ಮೂಲ: ಚಿತ್ರ ಸಮೂಹ