ದೊಡ್ಡ ಹುಣಸೆ ಮರಗಳಿಂದ ಸುತ್ತುವರೆದಿರುವ ಅವರ ವರ್ಕ್ಶಾಪ್ನಲ್ಲಿ ಕುಳಿತುಕೊಂಡು, ಮಣಿರಾಮ್ ಮಾಂಡವಿ ಅವರು ಕೊಳಲನ್ನು ತಯಾರಿಸುತ್ತಾರೆ – ಗಾಳಿಯ ಸಹಾಯದಿಂದ ಸಂಗೀತವನ್ನು ಹೊರಹೊಮ್ಮಿಸುವ ವಾದ್ಯ ಅದು. ಇದು ಪ್ರಾಣಿಗಳನ್ನು ಹೆದರಿಸಲು ಉಪಯೋಗಿಸುವ ಒಂದು ಪರಿಣಾಮಕಾರಿ 'ಆಯುಧ'ವಾಗಿಯೂ ಸಹ ಕಾರ್ಯನಿರ್ವಹಿಸುತ್ತದೆ. 42 ವರ್ಷದ ಮಣಿರಾಮ್ ಅವರು ಚಿಕ್ಕವರಾಗಿದ್ದಾಗ ಕಾಡಿನಲ್ಲಿ ಹುಲಿಗಳು, ಚಿರತೆಗಳು ಮತ್ತು ಕರಡಿಗಳು ಇದ್ದವು ಎಂದು ಹೇಳುತ್ತಾರೆ, ಕೊಳಲನ್ನು ಬಾರಿಸಿದಾಗ ಅವು ನಮ್ಮಿಂದ ದೂರ ಉಳಿಯುತ್ತಿದ್ದವು ಎನ್ನುತ್ತಾರೆ.
ಅವರು ಬಿದಿರಿನ ವಾದ್ಯವನ್ನು 'ತಿರುಗುವ ಕೊಳಲು' ಎಂದು ಕರೆಯುತ್ತಾರೆ - ಅಥವಾ ಛತ್ತೀಸ್ಗಢಿಯಲ್ಲಿ ಉಕುಡ ಕೊಳಲು ಎಂದು ಕರೆಯುತ್ತಾರೆ. ಈ ವಾದ್ಯಕ್ಕೆ ಬಾಯಿ ಇರುವುದಿಲ್ಲ, ಕೇವಲ ಎರಡು ರಂಧ್ರಗಳಿವೆ, ಮತ್ತು ಗಾಳಿಯಿಂದ ಊದಬೇಕಾಗುತ್ತದೆ.
42 ವರ್ಷದ ಮಣಿರಾಮ್ ತಯಾರಿಸುವ ಪ್ರತಿಯೊಂದು ಕೊಳಲು, ಪಟ್ಟಣದಲ್ಲಿ ಮತ್ತು ಕರಕುಶಲ ಸಂಸ್ಥೆಗಳ ವತಿಯಿಂದ ನಡೆಯುವ ವಸ್ತುಪ್ರದರ್ಶನದ ಸಮಯದಲ್ಲಿ ಸುಮಾರು ಒಂದಕ್ಕೆ 50 ರೂಗಳಿಗೆ ಮಾರಾಟವಾಗುತ್ತವೆ. ನಂತರ ಗ್ರಾಹಕರು ಸುಮಾರು ಒಂದಕ್ಕೆ 300 ರೂಪಾಯಿ ಕೊಟ್ಟು ಖರೀದಿಸುತ್ತಾರೆ.
ಅದು ಅಂದಿನ ಕೊಳಲು ತಯಾರಕ ಮಂದರ್ ಸಿಂಗ್ ಮಾಂಡವಿ ಅವರೊಂದಿಗಿನ ಆಕಸ್ಮಿಕ ಭೇಟಿಯು, ಸುಮಾರು ಮೂರು ದಶಕಗಳ ಹಿಂದೆ ಮಣಿರಾಮ್ ಅವರನ್ನು ಬಾನ್ಸುರಿ ಕ್ರಾಫ್ಟ್ಗೆ ಕರೆತರಲು ಕಾರಣವಾಯಿತು. "ನನಗೆ ಆಗ ಸುಮಾರು 15 ವರ್ಷ ವಯಸ್ಸಾಗಿತ್ತು, ಮತ್ತು ಕಾಡಿನಿಂದ ಉರುವಲು ತರಲು ಹೋಗಿದ್ದೆ. ಆಗ ಅವರು ನನ್ನನ್ನು ಕರೆದು 'ನೀನು ಶಾಲೆಗೆ ಹೋಗುತ್ತಿಲ್ಲವಲ್ಲ ಬಾ, ನಾನು ನಿನಗೆ ಏನಾದರೂ ಕಲಿಸುತ್ತೇನೆ” ಎಂದು ಮಂದರ್ ಹೇಳಿದ್ದರಂತೆ ಎಂದು ಮಣಿರಾಮ್ ಹೇಳುತ್ತಾರೆ. ಹಾಗಾಗಿ ಮಣಿರಾಮ್ ಸಂತೋಷದಿಂದ ಶಾಲೆಯನ್ನು ತೊರೆದರು ಮತ್ತು ಅಂದಿನಿಂದ ದಿವಂಗತ ಮಾಸ್ಟರ್ ಕುಶಲಕರ್ಮಿಯೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದ್ದರು.
ಮಣಿರಾಮ್ ಅವರು ಈಗ ಕೆಲಸ ಮಾಡುತ್ತಿರುವ ಕೊಳಲಿನ ವರ್ಕ್ಶಾಪ್ ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯ ಅಬುಜ್ಮದ್ (ಓರ್ಚಾ) ಬ್ಲಾಕ್ನ ಅರಣ್ಯದಲ್ಲಿರುವ ಗೊಂಡ ಆದಿವಾಸಿ ಸಮುದಾಯದವರ ಕುಗ್ರಾಮವಾದ ಘಡಬಂಗಲ್ನ ಅಂಚಿನಲ್ಲಿದೆ. ಎಲ್ಲಾ ಗಾತ್ರದ ಬಿದಿರಿನ ತುಂಡುಗಳನ್ನು ಸುತ್ತಲೂ ಜೋಡಿಸಲಾಗುತ್ತದೆ ಮತ್ತು ಉಪಕರಣಗಳನ್ನು ಬಿಸಿಮಾಡಲು ಬಳಸುವ ಸಣ್ಣ ಬೆಂಕಿಯಿಂದ ಹೊಗೆಯು ಚಳಿಗಾಲದ ಗಾಳಿಯಲ್ಲಿ ತೇಲಿದಂತೆ ಕಾಣುತ್ತದೆ. ಒಂದು ಬದಿಯಲ್ಲಿ ಸಿದ್ಧಪಡಿಸಿದ ಕೊಳಲುಗಳು ಮತ್ತು ವಿವಿಧ ಗಾತ್ರದ ಉಳಿಗಳು ಮತ್ತು ಚಾಕುಗಳನ್ನು ಸಂಗ್ರಹಿಸಲು ತಾತ್ಕಾಲಿಕ ಶೆಡ್ ಇದೆ. ಮಣಿರಾಮ್ ದಿನಕ್ಕೆ ಸುಮಾರು ಎಂಟು ಗಂಟೆಗಳ ಕಾಲ ತಮ್ಮ ವರ್ಕ್ʼಶಾಪ್ʼನಲ್ಲಿ ಕೆಲಸ ಮಾಡುತ್ತಾರೆ. ಬಿದಿರನ್ನು ಸರಿಯಾದ ಗಾತ್ರಕ್ಕೆ ಕತ್ತರಿಸುವುದು, ನಯಗೊಳಿಸುವುದು ಮತ್ತು ಉಳಿಯಲ್ಲಿ ಕೆತ್ತುವುದು. ನಂತರ ಹೂವಿನ ಮತ್ತು ಜ್ಯಾಮಿತೀಯ ವಿನ್ಯಾಸಗಳನ್ನು ಕೆತ್ತಿಸಲು ಬಿಸಿಯಾದ ಉಪಕರಣವನ್ನು ಬಳಸಿ, ಶಾಖದೊಂದಿಗೆ ಕೊಳಲಿನ ಮೇಲೆ ಮಬ್ಬು ಮತ್ತು ಗಾಢ ಬಣ್ಣದ ಮಾದರಿಗಳನ್ನು ರಚಿಸುತ್ತಾರೆ.
ಕೊಳಲುಗಳನ್ನು ತಯಾರಿಸುವ ಕೆಲಸವಿಲ್ಲದಿರುವಾಗ, ಮಣಿರಾಮ್ ತನ್ನ ಎರಡು ಎಕರೆ ಜಮೀನಿನಲ್ಲಿ ಮಳೆ-ಆಧಾರಿತ ಭತ್ತವನ್ನು ಬೆಳೆಯುವ ಕೆಲಸದಲ್ಲಿ ನಿರತನಾಗಿರುತ್ತಾರೆ. ಅದು ಹೆಚ್ಚಾಗಿ ಅವರ ಕುಟುಂಬಕ್ಕಾಗಿಯೇ ಆಗಿರುತ್ತದೆ ಮತ್ತು ಅವರ ಕುಟುಂಬದಲ್ಲಿ ಹೆಂಡತಿ ಮತ್ತು ಮೂವರು ಮಕ್ಕಳು ಇದ್ದಾರೆ, ಅವರೆಲ್ಲ ಯುವಕರು. ಬೇಸಾಯದ ಕೆಲಸಗಳನ್ನು ಮಾಡುವ ಅವರ ಪುತ್ರರು ಈ ಕುಶಲತೆಯನ್ನು ಕಲಿಯಲು ಆಸಕ್ತಿ ಹೊಂದಿಲ್ಲ ಎಂದು ಅವರು ಹೇಳುತ್ತಾರೆ (ಈ ಕಲೆಯನ್ನು ಸಮುದಾಯದಲ್ಲಿ ಪುರುಷರು ಮಾತ್ರ ಅಭ್ಯಾಸ ಮಾಡುತ್ತಾರೆ).
ಕೊಳಲು ತಯಾರಿಕೆಗೆ ಬೇಕಾದ ಬಿದಿರು, ನಾರಾಯಣಪುರ ಪಟ್ಟಣದಿಂದ ಬರುತ್ತದೆ “ಸುಮಾರು 20 ವರ್ಷಗಳ ಹಿಂದೆ, ಇಲ್ಲಿಯೇ ಕಾಡು ಇತ್ತು ಮತ್ತು ನಾವು ಸುಲಭವಾಗಿ ಬಿದಿರನ್ನು ಹುಡುಕುತ್ತಿದ್ದೆವು. ಈಗ ಬೆಲೆಬಾಳುವ ಬಿದಿರನ್ನು ಹುಡುಕಲು ಸರಿಸುಮಾರು ಒಂದು ಗಂಟೆಯ ನಡಿಗೆಯಲ್ಲಿ.ಕನಿಷ್ಠ 10 ಕಿಲೋಮೀಟರ್ಗಳಷ್ಟು ಹೋಗಬೇಕಾಗುತ್ತದೆ, ”ಎಂದು ಅವರು ಹೇಳುತ್ತಾರೆ. "ಕಾಡು ದಟ್ಟವಾಗಿತ್ತು ಮತ್ತು ಸಗುನ್ (ತೇಗ) ಮತ್ತು ಜಾಮೂನ್ (ಭಾರತೀಯ ಬ್ಲ್ಯಾಕ್ಬೆರಿ) ಮತ್ತು ಮೋದಿಯಾನಂತಹ (ಸ್ಥಳೀಯ ಪ್ಲಮ್ ಹಣ್ಣು) ದೊಡ್ಡ ಮರಗಳಿಂದ ತುಂಬಿತ್ತು. ಈಗ ದೊಡ್ಡ ಮರಗಳಿಲ್ಲ, ತೂಗಾಡುವ ಕೊಳಲುಗಳನ್ನು ಮಾಡುವುದನ್ನು ಮುಂದುವರಿಸಲು ಕಷ್ಟವಾಗುತ್ತದೆ.
ನಾವು ಮಾತನಾಡುವಾಗ, ಆ ಹುಣಸೆ ಹಣ್ಣಿನ ಮರದ ನೆರಳಿನಲ್ಲಿರುವ ವರ್ಕಶಾಪಿನಲ್ಲಿ ಕುಳಿತು, ಮಣಿರಾಮ್ ಕಳೆದು ಹೋದ ಸಮೃದ್ಧಿಯ ಸಮಯವನ್ನು ನೆನಪಿಸಿಕೊಳ್ಳುತ್ತಾ, ದುಃಖಿತರಾಗಿ ಕಣ್ಣೀರಿಡುತ್ತಾರೆ: “ಇಲ್ಲಿ ಮೊಲಗಳು ಮತ್ತು ಜಿಂಕೆಗಳು ಇದ್ದವು ಮತ್ತು ಅಗಾಗ ನೀಲ್ಗಾಯ್ ಕೂಡ ಬರುತ್ತಿದ್ದವು. ಕಾಡುಹಂದಿಗಳು ಸಂಪೂರ್ಣವಾಗಿ ಇಲ್ಲವಾಗಿವೆ 'ಕಾಡಿನಲ್ಲಿ ಏಕೆ ಏನೂ ಇಲ್ಲ? ಕಾಡಿನಲ್ಲಿ ಮರಗಳು ಮತ್ತು ಪ್ರಾಣಿಗಳು ಇದ್ದವಾ?’ ... ನಾಳೆ ನಮ್ಮ ಮಕ್ಕಳು ನನ್ನನ್ನು ಹೀಗೆ ಕೇಳಿದರೆ – ಈ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರವಿಲ್ಲ.
ಅನುವಾದ: ಅಶ್ವಿನಿ ಬಿ ವಡ್ಡಿನಗದ್ದೆ