ದಶರಥ ಸಿಂಗ್ ಅವರು ಈ ವರ್ಷದ ಆರಂಭದಿಂದಲೂ ಪಡಿತರ ಚೀಟಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಪ್ರತಿ ಬಾರಿ ಉಮರಿಯಾ ಜಿಲ್ಲೆಯ ಸ್ಥಳೀಯ ಅಧಿಕಾರಿಗಳ ಕಚೇರಿಗೆ ಹೋದಾಗಲೂ ಅವರ ಅರ್ಜಿ ಇನ್ನೂ ಪಾಸ್ ಆಗಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಿದ್ದಾರೆ.
"ರೂ. 1,500 ನೀಡಿದರೆ ಅರ್ಜಿ ಸ್ವೀಕೃತವಾಗುತ್ತದೆಂದು ಅಲ್ಲಿ ಅವರು ಸಲಹೆ ನೀಡುತ್ತಾರೆ" ಎಂದು ದಶರಥ್ ಆರೋಪಿಸುತ್ತಾರೆ. "ಆದರೆ ನಾನು ಕೊಟ್ಟಿಲ್ಲ ..."
ಮಧ್ಯಪ್ರದೇಶದ ಉಮರಿಯಾ ಜಿಲ್ಲೆಯ ಬಂದೋಗಘರ್ ತಹಸಿಲ್‌ನ ಕಟಾರಿಯಾ ಎಂಬ ಹಳ್ಳಿಯ ನಿವಾಸಿಯಾದ ದಶರಥ್ ಅವರು ತನ್ನ ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಾರೆ. ಜೊತೆಗೆ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಕೆಲಸಗಳಲ್ಲಿ ಕೆಲಸ ಮಾಡುವ ಮೂಲಕ ತಿಂಗಳ ಕೆಲವು ದಿನ ಸುಮಾರು 100 ರೂಪಾಯಿ ದಿನಗೂಲಿ ಪಡೆಯುತ್ತಾರೆ. ಆದರೆ ಈ ಸಂಪಾದನೆ ಅವರ ಬದುಕಿನ ಅಗತ್ಯಗಳಿಗೆ ಸಾಲದೆ ಆಗಾಗ ಸ್ಥಳೀಯ ಖಾಸಗಿ ಲೇವಾದೇವಿಗಾರರಿಂದ ಸಣ್ಣ ಸಾಲಗಳನ್ನು ಪಡೆಯುತ್ತಾರೆ. ಇತ್ತೀಚೆಗೆ ಲಾಕ್‌ಡೌನ್ ಸಮಯದಲ್ಲಿ ಅವರು ರೂಪಾಯಿ 1,500 ಸಾಲವಾಗಿ ಪಡೆದಿದ್ದರು.
ಬಡ ಕುಟುಂಬಗಳ ಪಾಲಿಗೆ ಪಡಿತರ ಚೀಟಿಯೆನ್ನುವುದು ಸಾಮಾನ್ಯ ಕಾಲದಲ್ಲಿಯೇ ಬಹಳ ನಿರ್ಣಾಯಕ. ಲಾಕ್‌ಡೌನ್ ಕಾಲದಲ್ಲಿ ಇದು ಇನ್ನಷ್ಟು ಉಪಯುಕ್ತವೆನ್ನಿಸುತ್ತದೆ. ರೇಷನ್ ಕಾರ್ಡ್ ಇಲ್ಲದ ಕಾರಣ ದಶರಥ್ ಕುಟುಂಬ ಮಾರುಕಟ್ಟೆಯಿಂದ ಆಹಾರ ಧಾನ್ಯ ಖರೀದಿಸಬೇಕಾದ ಅನಿವಾರ್ಯತೆಗೆ ಈಡಾಗಿದೆ. "ಕೃಷಿ ಈ ಸಮಯದಲ್ಲಿ ನಮ್ಮನ್ನು ಉಳಿಸಲು ಸಹಾಯ ಮಾಡಿದೆ" ಎಂದು ದಶರಥ್ ಅವರ ಪತ್ನಿ 25 ವರ್ಷದ ಸರಿತಾ ಸಿಂಗ್ ಹೇಳುತ್ತಾರೆ. ಕುಟುಂಬವು 2.5 ಎಕರೆಗಿಂತ ಕಡಿಮೆ ಭೂಮಿಯನ್ನು ಹೊಂದಿದ್ದು ಅಲ್ಲಿ ಅವರು ಮುಖ್ಯವಾಗಿ ಗೋಧಿ ಮತ್ತು ಮೆಕ್ಕೆಜೋಳದ ಜೊತೆಗೆ ಕೊಡೋ ಮತ್ತು ಕುಟ್ಕಿ ಕಿರುಧಾನ್ಯಗಳನ್ನು ಬೆಳೆಯುತ್ತಾರೆ.
ಈ ನಡುವೆ 40 ವರ್ಷದ ದಶರಥ್ ಪಡಿತರ ಚೀಟಿಯನ್ನು ಸಂಪಾದಿಸುವ ಸಲುವಾಗಿ ತನ್ನ ಅದೃಷ್ಟವನ್ನು ಪರೀಕ್ಷಿಸುತ್ತಲೇ ಇದ್ದಾರೆ. "ಈ ವರ್ಷ ಜನವರಿ 26 ರಂದು [ಕಟಾರಿಯಾದಲ್ಲಿ] ನಡೆದ ಗ್ರಾಮ ಸಭೆಯಲ್ಲಿ, ಕಾರ್ಡ್ ಪಡೆಯಲು ಒಂದು ಅರ್ಜಿ ತುಂಬಿಸುವುದು ಬಾಕಿಯಿದೆ ಎಂದು ತಿಳಿಸಲಾಯಿತು" ಎಂದು ಅವರು ಹೇಳುತ್ತಾರೆ.
ಅವರ ಸರಪಂಚರು ಆ ಅರ್ಜಿಯನ್ನು ತುಂಬಿಸುವ ಸಲುವಾಗಿ ಗ್ರಾಮದಿಂದ 70 ಕಿಲೋಮೀಟರ್ ದೂರದಲ್ಲಿರುವ ಮನ್ಪುರ ಪಟ್ಟಣದ ಲೋಕ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದು ತಿಳಿಸಿದರು. ಅಲ್ಲಿಗೆ ಬಸ್‌ನಲ್ಲಿ ಒಮ್ಮೆ ಒಂದು ಕಡೆಯ ಪ್ರಯಾಣಕ್ಕೆ 30 ರೂಪಾಯಿಗಳು ಬೇಕಾಗುತ್ತದೆ. ದಶರಥ್ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಎರಡು ಬಾರಿ ಅಲ್ಲಿಗೆ ಹೋಗಿ ಬಂದರು. ಎಂದರೆ ನಾಲ್ಕು ಟಿಕೇಟುಗಳು ಮತ್ತು ನಾಲ್ಕು ಬಸ್ ಪ್ರಯಾಣ. ಮಾರ್ಚ್ 23 ರಂದು (ಮಧ್ಯಪ್ರದೇಶದಲ್ಲಿ) ಲಾಕ್‌ಡೌನ್ ಪ್ರಾರಂಭವಾಗುವ ಮೊದಲು, ಅವರು ತಮ್ಮ ಗ್ರಾಮದಿಂದ 30 ಕಿಲೋಮೀಟರ್ ದೂರದಲ್ಲಿರುವ ಬಂಧೋಘರ್ ಪಟ್ಟಣದ ತಹಸಿಲ್ ಮಟ್ಟದ ಕಚೇರಿಗೆ ಹೋದರು. ಅಲ್ಲಿ ಅವರಿಗೆ ಒಂದು ಪ್ರತ್ಯೇಕ ಗುರುತಿನ ಚೀಟಿ ಮಾಡಿಸುವಂತೆ ಹೇಳಲಾಯಿತು. ಇದರಿಂದಾಗಿ ಅಂದೂ ಅವರು ಅರ್ಜಿಯ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ಆ ಪ್ರತ್ಯೇಕ ಗುರುತು ಗುರುತಿನ ಚೀಟಿ ಪಡೆಯಲು ಮನ್ಪುರದಲ್ಲಿನ ಕೇಂದ್ರದ ಅಧಿಕಾರಿಗಳು ದಶರಥ್ ಅವರನ್ನು ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಕಾರ್ಕೆಲಿಯ ಬ್ಲಾಕ್-ಲೆವೆಲ್ ಕಚೇರಿಗೆ ಕಳಿಸಿದರು, “ನನ್ನ ಹೆಸರಿನಲ್ಲಿ ಪ್ರತ್ಯೇಕ ಗುರುತಿನ ಚೀಟಿಯ ಅಗತ್ಯವಿದೆ ಎಂದು ಅವರು ಹೇಳಿದರು. ನನ್ನ ಅಣ್ಣ-ತಮ್ಮಂದಿರು ಸೇರಿದಂತೆ ಇತರ ಕುಟುಂಬ ಸದಸ್ಯರೊಂದಿಗೆ ನನ್ನ ಕಾರ್ಡ್ ಜಂಟಿಯಾಗಿತ್ತು. ಹಾಗಾಗಿ ನಾನು ಕಾರ್ಕೆಲಿಗೆ ಹೋಗಿ ಪ್ರತ್ಯೇಕ ಗುರುತಿನ ಚೀಟಿ ಮಾಡಿಸಿಕೊಂಡೆ ”ಎಂದು 10ನೇ ತರಗತಿವರೆಗೆ ವಿದ್ಯಾಭ್ಯಾಸ ಹೊಂದಿರುವ ದಶರಥ್ ಹೇಳುತ್ತಾರೆ.






