ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲೆಯ ಈ ಆದಿವಾಸಿ ಹಾಡಿಯ ಬೀದಿಗಳಲ್ಲಿ ಒಂದು ಕಾಲದಲ್ಲಿ ಬನಮ್ ಮತ್ತು ಗಬ್ಗುಬಿಯ ವಿಶಿಷ್ಟ ಸದ್ದು ಅನುರಣಿಸುತ್ತಿತ್ತು. ಆ ಸಂಗೀತವು ಛಾಟಿನಾದ ನಡುವೆ ಹೋಗುವಾಗ ಸಿಗುವ ದಾರಿ ಬದಿಯ ಮನೆಯ ಗೋಡೆಗಳ ಮಣ್ಣಿನಂತೆ ಘಮಿಸುತ್ತಿತ್ತು. ಅದು ಸೋನಾರ್ ಬಾಂಗ್ಲಾದ ನಾದದಂತಿತ್ತು.
ಈಗ ಆ ಸಂಗೀತ ಮತ್ತು ಅದರ ಮಾಧುರ್ಯ ಎರಡೂ ಮರೆಯಾಗುತ್ತಿವೆ.
“ನಾವು ಹೆಚ್ಚಾಗಿ ಈ ವಾದ್ಯಗಳನ್ನು ನಮ್ಮ ಪರಬಗಳಲ್ಲಿ ನುಡಿಸುತ್ತೇವೆ [ಹಬ್ಬಗಳು], ಎನ್ನುತ್ತಾರೆ 42 ವರ್ಷದ ಗಣೇಶ್ ಸೊರೇನ್. ಇವರು ಸಂತಾಲರ ಹಾಡಿಗಳೇ ಹೆಚ್ಚಾಗಿರುವ ರಾಜ್ನಗರ್ ಬ್ಲಾಕ್ನ ಗುಲಗಚ್ಚಿ ಗ್ರಾಮದ ನಿವಾಸಿ. ಕೃಷಿ ಕೂಲಿಯಾಗಿರುವ ಇವರು ಬನಮ್ ಕೂಡ ನುಡಿಸುತ್ತಾರೆ. ಇವರು ಸ್ವತಃ ಎರಡು ತಂತಿಗಳಿರುವ ಗುಬ್ಗುಬಿಯನ್ನು ರಚಿಸಿದ್ದು ಅದನ್ನೂ ಇವರೇ ನುಡಿಸುತ್ತಾರೆ. ಒಂದು ತಂತಿಯ ಬನಮ್ ಇಲ್ಲಿನ ಸಂತಾಲರು ಮತ್ತು ಇತರ ಆದಿವಾಸಿಗಳನ್ನು ಪ್ರತಿನಿಧಿಸುವ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಗೀತ ವಾದ್ಯವೂ ಹೌದು.
ಅವರ ಪಾಲಿಗೆ ಅವರು ಸೃಷ್ಟಿಸುವ ಸಂಗೀತವು ಸಂತಾಲರ ಸ್ವಾತಂತ್ರ್ಯ ಮತ್ತು ಜಲ್,ಜಂಗಲ್, ಜಮೀನ್ ಹೋರಾಟದ ಪ್ರತೀಕವಾಗಿದೆ. ಈ ಸಮಸ್ಯೆ ಇಂದಿಗೂ ಜೀವಂತವಾಗಿದೆ
"ನಾವು ಸಿಧು-ಕನ್ಹು ಹಬ್ಬದಲ್ಲಿ ಬನಾಮ್ ನುಡಿಸಿದ್ದೇವೆ" ಎಂದು ಛಾಟಿನಾದಲ್ಲಿ ಕೃಷಿ ಕಾರ್ಮಿಕರೂ ಆಗಿರುವ 46 ವರ್ಷದ ಹೋಪನ್ ಸೊರೆನ್ ಹೇಳುತ್ತಾರೆ. ಈ ಹಬ್ಬಕ್ಕೆ ಸಿಧು ಮುರ್ಮು ಮತ್ತು ಕನ್ಹು ಮುರ್ಮು - 1855ರಲ್ಲಿ ಬ್ರಿಟಿಷರ ವಿರುದ್ಧ ದೊಡ್ಡ ಹೂಲ್ (ದಂಗೆ)ಯನ್ನು ಮುನ್ನಡೆಸಿದ ಸಂತಾಲ್ ನಾಯಕರ ಹೆಸರಿಡಲಾಗಿದೆ. ಇವರ ಬಂಧನಕ್ಕೆ ಬ್ರಿಟಿಷ್ ಸರಕಾರ ಆಗಿನ ಕಾಲದಲ್ಲಿ 10,000 ರೂಪಾಯಿಗಳ ಬಹುಮಾನ ಘೋಷಿಸಿತ್ತೆಂದರೆ ಅವರಿಂದ ಬ್ರಿಟಿಷರು ಅವರಿಂದ ಎದುರಿಸಿದ್ದ ಭಯವನ್ನು ಅಂದಾಜಿಸಬಹುದು. ಆಗಿನ ಕಾಲಕ್ಕೆ ಇದು ಬಹಳ ದೊಡ್ಡ ಮೊತ್ತವಾಗಿತ್ತು. ಈ ರಕ್ತಸಿಕ್ತ ದಂಗೆಯಲ್ಲಿ, ಬ್ರಿಟಿಷರು ಬಿಲ್ಲು ಮತ್ತು ಬಾಣಗಳನ್ನು ಹೊಂದಿದ್ದ 60,000 ಸಂತಾಲರಲ್ಲಿ ಕನಿಷ್ಠ 15,000 ಜನರನ್ನು ತಮ್ಮ ಬಂದೂಕುಗಳಿಂದ ಕೊಂದರು. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಉತ್ಸವದಲ್ಲಿ ಬನಮ್ ಅನ್ನು ನುಡಿಸಲಾಗುತ್ತದೆ. ಈ ಹಬ್ಬದ ಮೂಲಕ ಜನರಲ್ಲಿ ಅವರೆಲ್ಲರ ನೆನಪು ಜೀವಂತವಾಗಿರುತ್ತದೆ.
"ನಮ್ಮ ಬಾಲ್ಯದಲ್ಲಿ ಸಾಕಷ್ಟು ಜನ ಖ್ಯಾತ ಬನಮ್ ವಾದ್ಯ ನುಡಿಸುವವರಿದ್ದರು. ಅವರ ಸಂಗೀತ ರೇಡಿಯೋದಲ್ಲಿಯೂ ಪ್ರಸಾರವಾಗುತ್ತಿತ್ತು. ನಾನು ಅವರು ನುಡಿಸುವುದನ್ನ ಬಹಳ ಎಚ್ಚರಿಕೆಯಿಂದ ಗಮನಿಸುತ್ತಿದ್ದೆ. ಮತ್ತು ಅದರಿಂದ ಹೊರಡುತ್ತಿದ್ದ ಶಬ್ಧ ಮತ್ತು ಅದರ ಮಾಧುರ್ಯವನ್ನು ಅನುಸರಿಸಿ ನಾವೆಲ್ಲ ಈ ವಾದ್ಯಗಳನ್ನು ತಯಾರಿಸಲು ಮತ್ತು ನುಡಿಸಲು ಕಲಿತಿದ್ದೇವೆ," ಎಂದು ಹೊಪನ್ ಸೊರೆನ್ ಹೇಳುತ್ತಾರೆ.
ಗಣೇಶ್ ಸೊರೆನ್ ಅವರ ಗುಬ್ಗುಬಿಗೆ ಐತಿಹಾಸಿಕ ಮಹತ್ವವಿದೆ. ಈ ನಿಟ್ಟಿನಲ್ಲಿ, ಈ ಸಂಯೋಜನೆಗಳ ಧ್ವನಿಗಳು ಸ್ವಾತಂತ್ರ್ಯ, ನೀರು, ಅರಣ್ಯ ಮತ್ತು ಭೂಮಿಗಾಗಿ ಅವರ ಹೋರಾಟಗಳನ್ನು ಪ್ರತಿಬಿಂಬಿಸುತ್ತವೆ. ಈ ಸಮಸ್ಯೆಗಳು ಇಂದಿಗೂ ಮುಂದುವರೆದಿದೆ. ಗಣೇಶ್ ಮತ್ತು ಹೋಪನ್ ಇಬ್ಬರೂ ಈ ಪ್ರದೇಶದ ಮಹಾಜನ್ರ (ಸ್ಥಳೀಯ ಲೇವಾದೇವಿ ನಡೆಸುವ ಜಮೀನುದಾರರು) ಹೊಲಗಳಲ್ಲಿ ಕೆಲಸ ಮಾಡುತ್ತಾರೆ. ಈ ಪ್ರದೇಶದಲ್ಲಿ ನಿಗದಿತ ವೇತನ 240 ರೂ ಆಗಿದ್ದರೂ ಅದು ಕಾಗದಗಳ ಮೇಲಷ್ಟೇ ಉಳಿದಿದೆ, ಅವರಿಗೆ ತಿಂಗಳೆಲ್ಲ ದುಡಿದರೂ ದಿನಗೂಲಿಯಾಗಿ ಸಿಗುವುದು ದಿನಕ್ಕೆ 100-200 ರೂಪಾಯಿ ಮಾತ್ರ. ಅಪರೂಪಕ್ಕೆ ಕಟ್ಟಡ ನಿರ್ಮಾಣ ಕೆಲಸಗಳಿಗೆ ಹೋದಾಗ ಮಾತ್ರ ದಿನಕ್ಕೆ 260 ರೂಪಾಯಿಗಳ ಕೂಲಿ ದೊರೆಯುತ್ತದೆ. ಪಶ್ಚಿಮ ಬಂಗಾಳದಲ್ಲಿ MGNREGA ಕೆಲಸದ ಕೂಲಿ ದಿನಕ್ಕೆ ದಾಖಲೆಗಳಲ್ಲಿ 240 ಎಂದಿದೆಯಾದರೂ ಅವರಿಗೆ ಸಿಗುವುದು 182-202 ರೂಪಾಯಿಗಳವರೆಗೆ ಮಾತ್ರ. ಈ ವರ್ಷದಲ್ಲಿ ಹೆಚ್ಚೆಂದರೆ 25 ದಿನಗಳು ಸಿಗುತ್ತವೆ.
ಸ್ಥಳೀಯ (MGNREGA ಅಲ್ಲದ) ವೇತನಗಳು ಹೆಚ್ಚಾಗಿದ್ದವು, ಆದರೆ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿದೆ ಎಂದು ಈ ಪ್ರದೇಶದ ನಿವಾಸಿಗಳು ನನಗೆ ಹೇಳುತ್ತಾರೆ. ದಿನಗೂಲಿಯಾಗಿ 240 ರೂಪಾಯಿಗಳನ್ನು ನಿಗದಿಪಡಿಸಲಾಗಿತ್ತು. ಆದರೆ ಇತ್ತೀಚೆಗೆ ದರವು ಕುಸಿಯಲು ಪ್ರಾರಂಭಿಸಿತು ಮತ್ತು ಕರೋನಾ ಸಾಂಕ್ರಾಮಿಕ ಮತ್ತು ಲಾಕ್ಡೌನ್ನಿಂದ ಮತ್ತಷ್ಟು ಕಡಿಮೆಯಾಯಿತು. ಅದೇನೇ ಇದ್ದರೂ, ಉತ್ತಮ ಮಳೆಯಿಂದಾಗಿ, ಬೇಸಾಯವು ಆಶಾದಾಯಕ ರೀತಿಯಲ್ಲಿ ಪ್ರಾರಂಭವಾಗಿದೆ, ಮತ್ತು ಅವರು ಕೆಲವು ದಿನಗಳು ಅಥವಾ ವಾರಗಳವರೆಗೆ ಮತ್ತೆ ಮೊದಲಿನಂತೆ ದಿನಕ್ಕೆ 240 ರೂಪಾಯಿಗಳ ವೇತನ ಪಡೆಯುವ ನಿರೀಕ್ಷೆಯಿದೆ.
ಪ್ರತಿಯೊಂದು ಬನಮ್ ಮತ್ತು ಗಬ್ಗುಬಿ ಭಿನ್ನವಾಗಿ ನಿರ್ಮಿತವಾಗಿರುತ್ತವೆ ಮತ್ತು ಇದು ಕಲಾವಿದನ ವೈಯಕ್ತಿಕ ಸೃಜನಶೀಲತೆಯನ್ನು ಪ್ರತಿಬಿಂಬಿಸುತ್ತದೆ. ಇದರಿಂದಾಗಿ ವಾದ್ಯದ ರೂಪ ಮತ್ತು ರಚನೆಯು ಅದನ್ನು ರಚಿಸುವ ಮತ್ತು ನುಡಿಸುವ ವ್ಯಕ್ತಿಯ ಗುಣದೊಂದಿಗೆ ಬದಲಾಗುತ್ತದೆ. ಹೊಪೊನ್ ಸೊರೆನ್ ಅವರ ಮರದ ಬನಮ್ ಅನ್ನು ಬಾಸ್ಲೆ (ಕಮಾನಿನಂತೆ ಬ್ಲೇಡ್ ಹೊಂದಿರುವ ಕೊಡಲಿ) ಮತ್ತು ರುಕಾ (ಉಳಿ) ಮುಂತಾದ ಸಾಧನಗಳಿಂದ ಕೆತ್ತಲಾಗಿದೆ.
ಗಣೇಶ್ ಸೊರೆನ್ ಅವರ ಬನಮ್ ವಿಶಿಷ್ಟ ಸೌಂದರ್ಯವನ್ನು ಹೊಂದಿದೆ, ಮತ್ತು ಹಲವು ಭಾಗಗಳಿಂದ ಕೂಡಿದೆ. ಇದರಲ್ಲಿ ತೆಂಗಿನ ಚಿಪ್ಪು, ಪ್ರಾಣಿಗಳ ಚರ್ಮ ಮತ್ತು ಛತ್ರಿ ಕೋಲು ಇವೆ.
ಕೋಲ್ಕತ್ತಾದ ರವೀಂದ್ರ ಭಾರತಿ ವಿಶ್ವವಿದ್ಯಾಲಯದ ಬುಡಕಟ್ಟು ಸಂಗೀತಶಾಸ್ತ್ರಜ್ಞರಾದ ಡಾ. ನಿಬೇದಿತಾ ಲಾಹಿರಿ ಅವರ ಪ್ರಕಾರ, “ಬನಮ್ ಒಂದೇ ತಂತಿಯ ಸಾಧನವಾಗಿದ್ದು, ಇದು ಬಹುಶಃ ಪಿಟೀಲು ಕುಟುಂಬಕ್ಕೆ ಸೇರಿದ್ದು, ಅದನ್ನು ಬಿಲ್ಲಿನಿಂದ ನುಡಿಸಬಹುದು ಮತ್ತು ತಾಳವಾದ್ಯವನ್ನು ಹೊಂದಿರುತ್ತದೆ. ಇದು ಕಾರ್ಡೋಫೋನ್ ಆಗಿದ್ದು ಅದನ್ನು ನೇರವಾಗಿ ಕೈಯಿಂದ ನುಡಿಸುವ ಉಪಕರಣದಂತೆ ನುಡಿಸಲಾಗುವುದಿಲ್ಲ. ಇದನ್ನು ತಂತಿಗಳಿಂದ ಅಥವಾ ಕೆಲವು ಪ್ರಾಣಿಗಳ ಕೂದಲಿನೊಂದಿಗೆ ಮಾಡಿದ ಚಾರ್ [ಬಿಲ್ಲು]ನಿಂದ ಮಾತ್ರ ನುಡಿಸಬಹುದು. ಫ್ಯಾಂಟರ್ ಬನಮ್, ಬೇಲ್ ಬನಮ್ ಮುಂತಾದವುಗಳನ್ನು ಒಳಗೊಂಡಂತೆ ಬಂಗಾಳದಾದ್ಯಂತ ನೀವು ಅನೇಕ ಬಗೆಯ ಬನಮ್ಗಳನ್ನು ಕಾಣಬಹುದು - ಅವುಗಳ ತಯಾರಕರು ಅವುಗಳನ್ನು ತಮ್ಮದೇ ಆದ, ವಿಶಿಷ್ಟ ಶೈಲಿಯಲ್ಲಿ ರಚಿಸುತ್ತಾರೆ.”
ಗಣೇಶ್ ಸೊರೆನ್ ಅವರ ಗುಬ್ಗುಬಿ ಬುಡಕಟ್ಟು ಜನಾಂಗಕ್ಕೆ ಮತ್ತು ಖೋಮೋಕ್ನ ಪೂರ್ವಜರಿಗೆ ಸೇರಿದ್ದು, ಇದು ಬಂಗಾಳಿ ಜಾನಪದ ಸಂಗೀತದ ಜನಪ್ರಿಯ ಸಾಧನವಾಗಿದೆ. ಅವರು ಅದನ್ನು ಧೋಲ್ (ಡ್ರಮ್) ಅನ್ನು ಬಳಸಿ ಒಂದಿಷ್ಟು ವಿಶಿಷ್ಟವಾಗಿ ತಯಾರಿಸಿದ್ದಾರೆ, ಅದನ್ನು ತಯಾರಿಸಲು ಅವರ ಮಗನ ಆಟಿಕೆಗಳಲ್ಲಿ ಒಂದನ್ನು ಬಳಸಿದ್ದಾರೆ. ಅದರ ರಾಗವು, ಅವರ ಮಗನ ಮುಗ್ಧ ನಗುವನ್ನು ನೆನಪಿಸಿದರೆ ಅದರ ಸದ್ದು ಕಾಡಿನ ನೆನಪನ್ನು ತರುತ್ತದೆ ಎನ್ನುತ್ತಾರೆ ಗಣೇಶ್. "ನನ್ನ ಮನಸ್ಸನ್ನು ಪ್ರಫುಲ್ಲವಾಗಿಡಲು ನಾನು ಈಗ 15 ವರ್ಷಗಳಿಂದ ಎರಡೂ ವಾದ್ಯಗಳನ್ನು ನುಡಿಸುತ್ತಿದ್ದೇನೆ" ಎಂದು ಅವರು ಹೇಳುತ್ತಾರೆ. "ದಿನದ ಶ್ರಮದ ಕೆಲಸ ಮುಗಿಸಿದ ನಂತರ ನಾನು ಪ್ರತಿ ಸಂಜೆ ಅವುಗಳನ್ನು ನುಡಿಸುತ್ತಿದ್ದೆ ಮತ್ತು ಜನರು ಕೇಳಲು ಬರುತ್ತಿದ್ದರು. ಆದರೆ ಇಂದು ಅವರಿಗೆ ಮನರಂಜನೆಯ ಹಲವು ಆಯ್ಕೆಗಳಿವೆ ಹೀಗಾಗಿ ಈ ಹಳೆಯ ಸಹಜೀವಿಯ ಸಂಗೀತವನ್ನು ಯಾರೂ ಕೇಳಲು ಬಯಸುವುದಿಲ್ಲ.”
ಹಳ್ಳಿಯ ಅನೇಕ ಪುರುಷರು ಕಟ್ಟಡ ಕಾರ್ಮಿಕರಾಗಿ ಅಥವಾ ವಿವಿಧ ಪಟ್ಟಣಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ ಮತ್ತು ಅವರಲ್ಲಿ ಕೆಲವರು ಈಗಲೂ ಬನಮ್ ವಾದ್ಯವನ್ನು ತಮ್ಮೊಂದಿಗೆ ಒಯ್ಯುತ್ತಾರೆ. ಆದರೆ ಈಗಿನವರು ಈ ಸಂಗೀತ ಸಂಪ್ರದಾಯವನ್ನು ಕಲಿಯಲು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ ಎಂದು ಗಣೇಶ್ ಮತ್ತು ಹೊಪೊನ್ ಹೇಳುತ್ತಾರೆ. "ಈ ವಿಶಿಷ್ಟ ಧ್ವನಿಯನ್ನು ಸೃಷ್ಟಿಸಬಲ್ಲ ಜ್ಞಾನ ಮತ್ತು ಕರಕುಶಲತೆ ಹೊಂದಿರುವವರು ಹಳ್ಳಿ ಮತ್ತು ಸಮುದಾಯದಲ್ಲಿ ಕೆಲವೇ ಜನರು ಉಳಿದಿದ್ದಾರೆ" ಎಂದು ಹೊಪೊನ್ ಹೇಳುತ್ತಾರೆ.
"ನಮ್ಮ ಸ್ಥಳೀಯ ಶಾಲೆಯಲ್ಲಿ ಕೆಲವು ಉತ್ಸಾಹಿ ವಿದ್ಯಾರ್ಥಿಗಳು ಇರಬಹುದು, ಅಲ್ಲಿ ಕಲಿಸಲು ಸಾಧ್ಯವಾಗುತ್ತದೆ" ಎಂದು ಗಣೇಶ್ ಹೇಳುತ್ತಾರೆ. ಆದರೆ, ಅವರು ಹೇಳುತ್ತಾರೆ, ಈ ಪೀಳಿಗೆ ಸ್ಟ್ರೀಮ್ ಮಾಡಿದ ಸಂಗೀತ ಮತ್ತು ಮೊಬೈಲ್ ಅಪ್ಲಿಕೇಶನ್ಗಳಿಗೆ ಮರುಳಾಗಿದ್ದಾರೆ, ಎಲ್ಲವೂ ಒಂದು ಗುಂಡಿಯನ್ನು ಕ್ಲಿಕ್ ಮಾಡಿದರೆ ಸಿಗುತ್ತದೆ. ಬನಮ್ ಕುರಿತು ಅವರಲ್ಲಿ ಹೇಗೆ ಆಸಕ್ತಿ ಮೂಡಿಸಲು ಸಾಧ್ಯ?
ಗಣೇಶ ಅಥವಾ ಹೊಪನ್ ಅವರ ಬಳಿ ಮೊಬೈಲ್ ಫೋನ್ ಇಲ್ಲ, ಅವರಿಂದ ಅದನ್ನು ಖರೀದಿಸಲು ಸಹ ಸಾಧ್ಯವಿಲ್ಲ.
ಗಣೇಶ್ ಮತ್ತು ಹೊಪನ್ ಇಬ್ಬರೂ ತಮ್ಮ ಪ್ರೀತಿಯ ಬನಮ್ ಸಂಗೀತದ ಪತನಕ್ಕೆ ತಮ್ಮ ಕಷ್ಟದ ಆರ್ಥಿಕ ಪರಿಸ್ಥಿತಿ ಕಾರಣವೆನ್ನುತ್ತಾರೆ. ಅವರು ಬಡ ಕೃಷಿ ಕಾರ್ಮಿಕರಾಗಿದ್ದು, ಅವರು ದಿನವಿಡೀ ಕೆಲಸ ಮಾಡುವ ಮೂಲಕ ಅಲ್ಪ ಪ್ರಮಾಣದ ಹಣವನ್ನು ಸಹ ಗಳಿಸುತ್ತಾರೆ. "ನಾನು ಬನಮ್ ನುಡಿಸಲು ಬಯಸಿದರೆ, ನನ್ನ ಇಡೀ ಕುಟುಂಬವು ಹಲವು ದಿನಗಳವರೆಗೆ ಹಸಿದಿರಬೇಕಾಗುತ್ತದೆ" ಎಂದು ಗಣೇಶ್ ಹೇಳುತ್ತಾರೆ.
ಗಣೇಶ್ ಹೇಳುವಂತೆ “ಸಂಗೀತ ಎಷ್ಟೇ ಮಧುರವಾಗಿದ್ದರೂ ಅದು ನಮ್ಮ ಹೊಟ್ಟೆ ತುಂಬಿಸುವುದಿಲ್ಲ.”
ಅನುವಾದ: ಶಂಕರ ಎನ್. ಕೆಂಚನೂರು