`ಬೌಲ್' ಪದದ ಮೂಲವಿರುವುದು ಸಂಸ್ಕøತದ `ವಟುಲ' ಪದದಲ್ಲಿ. ಹುಚ್ಚು, ಆವಾಹನೆ, ಅಸ್ತವ್ಯಸ್ತ ಇತ್ಯಾದಿ ಅರ್ಥಗಳು ಈ ಪದಕ್ಕಿವೆ. ಇನ್ನು ಬಂಗಾಲದ ನೆಲದಲ್ಲಿ ಹುಟ್ಟಿದ ಸಂಗೀತ ಪ್ರಕಾರವೊಂದಕ್ಕೂ `ಬೌಲ್' ಎಂಬ ಹೆಸರಿದೆ.
ಅಸಲಿಗೆ ಬೌಲ್ ಜನಾಂಗದವರು ಅಲೆಮಾರಿಗಳು. ಇವರ ಧರ್ಮವು ಹಿಂದೂ, ಇಸ್ಲಾಂ ಮತ್ತು ಬುದ್ಧಿಸಂನ ತತ್ವಗಳನ್ನೊಳಗೊಂಡಿದ್ದು ಇತರರೊಂದಿಗೆ ಸುಲಭವಾಗಿ ಬೆರೆಯುತ್ತಾ ಜೀವಿಸುವ ಸ್ನೇಹಜೀವಿಗಳು ಇವರು. ಅಂತೆಯೇ ಸಮಾಜದ ಸಾಂಪ್ರದಾಯಿಕ ರೂಢಿಗಳನ್ನು ಧಿಕ್ಕರಿಸಿ ಸಂಗೀತವನ್ನೇ ಈ ಜಗತ್ತನ್ನು ಒಗ್ಗೂಡಿಸುವ ಶಕ್ತಿಯೆಂದು ಬಲವಾಗಿ ನಂಬಿದವರು. ಅವರ ಹಾಡುಗಳಲ್ಲಿರುವುದು ಕೂಡ ಜೀವನದ ಇಂತಹ ಉದಾತ್ತ ತತ್ವಗಳೇ. ಹಾಗೆ ನೋಡಿದರೆ ಬೌಲ್ ಗಳನ್ನು ಇಂಥದ್ದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸಿದರೆ ತಪ್ಪಾದೀತು. ಗುರುವೊಬ್ಬನ ಮಾರ್ಗದರ್ಶನದ ಮೂಲಕವಾಗಿ ಜೀವನವಿಧಾನವನ್ನು ಖುದ್ದಾಗಿ ಆರಿಸಿಕೊಂಡು, ತಮ್ಮ ಜೀವನವನ್ನು ರೂಪಿಸಿಕೊಂಡವರಿವರು.
ಬೌಲ್ ಗಳು ತಮ್ಮ ಸಂಸ್ಕøತಿಯಂತೆಯೇ ವೇಷಭೂಷಣಗಳಿಂದಲೂ ಇತರರಿಗಿಂತ ವಿಭಿನ್ನವಾಗಿ ನಿಲ್ಲುವವರು. ಬೌಲ್ ಗಂಡಸರು ಸಾಮಾನ್ಯವಾಗಿ ತಮ್ಮ ಕತ್ತರಿಸದ ಕೂದಲು ಮತ್ತು ಕೇಸರಿ ಬಣ್ಣದ ಉಡುಪಿನೊಂದಿಗೆ ಕಾಣಸಿಕ್ಕರೆ ಹೆಂಗಸರು ಕಟ್ಟದೆ ಇಳಿಬಿಟ್ಟ ಕೂದಲು ಮತ್ತು ಕೇಸರಿ ಬಣ್ಣದ ಸೀರೆಗಳನ್ನುಟ್ಟು ಕಂಗೊಳಿಸುತ್ತಾರೆ. ಇನ್ನು ರುದ್ರಾಕ್ಷ ಮಾಲೆಗಳು ಮತ್ತು ಒಂದೇ ಒಂದು ತಂತಿಯನ್ನು ಹೊಂದಿರುವ `ಇಕ್-ತಾರಾ' ಇವರಲ್ಲಿ ಎದ್ದುಕಾಣುವ ಅಂಶಗಳು. ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ಹಾಡುಗಳನ್ನೇ ನಂಬಿಕೊಂಡಿರುವ ಬೌಲ್ ಜನಾಂಗದವರು ಹಾಡುತ್ತಾ ಜನರಿಂದ ಕಾಣಿಕೆಯಾಗಿ ಪಡೆದ ಮೊತ್ತದಿಂದಲೇ ಇಂದಿಗೂ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಬೌಲ್ ಹಾಡುಗಾರನ ಜನಪ್ರಿಯತೆಯ ಆಧಾರದ ಮೇಲೆ 200-1000 ರೂಪಾಯಿಗಳ ಆದಾಯವು ತಮ್ಮ ಗಾಯನ ಕಾರ್ಯಕ್ರಮವೊಂದರಲ್ಲಿ ಇವರಿಗೆ ಸಿಗುತ್ತದಂತೆ.




