ಯುವಕ ತಲಾಬ್ ಹುಸೇನ್ ಸಾಬೂನು ಬೆರೆಸಿದ ಬಿಸಿನೀರಿನಲ್ಲಿ ಅದ್ದಿರುವ ಕಂಬಳಿಯನ್ನು ತುಳಿಯುತ್ತಿದ್ದಾನೆ. ದೂರದಿಂದ ನೋಡುವವರಿಗೆ ಅವನು ಕುಣಿಯುತ್ತಿರುವ ಹಾಗೆ ಕಾಣುತ್ತಿತ್ತು. ಅವನ ಮುಖದಲ್ಲಿ ನಗು ಲಾಸ್ಯವಾಡುತ್ತಿತ್ತು. "ನೆನೆಸಿದ ಕಂಬಳಿಯ ಮೇಲೆ ಸಮತೋಲನ ಕಾಪಾಡಿಕೊಂಡು ನಿಲ್ಲಬೇಕು" ಎಂದು ಅವನು ಹೇಳುತ್ತಾನೆ. ಇನ್ನೊಬ್ಬ ವ್ಯಕ್ತಿ ಬಂದು ಅದಕ್ಕೆ ಮತ್ತೆ ಸೋಪು ಬೆರೆಸಿದ ನೀರನ್ನು ಸುರಿಯುವಾಗ ತಲಾಬ್ ಆಧಾರಕ್ಕೆ ತನ್ನ ಮುಂದೆ ಇರುವ ಮರವನ್ನು ಹಿಡಿದುಕೊಳ್ಳುತ್ತಾನೆ.
ಅದು ಜಮ್ಮುವಿನ ಸಾಂಬಾ ಜಿಲ್ಲೆಯ ಸಣ್ಣ ಬಕರ್ವಾಲ್ ನೆಲೆಯಾಗಿತ್ತು. ಅಲ್ಲಿ ಚಳಿಗಾಲದ ಒಂದು ರಾತ್ರಿ ಹೊಸದಾಗಿ ತಯಾರಿಸಿದ ಉಣ್ಣೆ ಕಂಬಳಿಗಳನ್ನು ತೊಳೆಯುವ ಸಲುವಾಗಿ ನೀರು ಕಾಯಿಸಲು ಒಲೆಯನ್ನು ಉರಿಸಲಾಗುತ್ತಿತ್ತು. ಅಲ್ಲಿದ್ದ ಬೆಳೆಕೆಂದರೆ ಅದೊಂದೇ.
ಉಣ್ಣೆಯ ಕಂಬಳಿಗಳನ್ನು ಪರಿಶಿಷ್ಟ ಪಂಗಡದ ಸಮುದಾಯಗಳ ಸದಸ್ಯರಿಂದ ತಯಾರಿಸಲಾಗುತ್ತದೆ - ಮೇಘ್ ಮತ್ತು ಮೀಂಗ್ ಸಮುದಾಯಗಳು ಉಣ್ಣೆಯ ಕುಶಲತೆಗೆ ಹೆಸರುವಾಸಿಯಾಗಿವೆ. ಕಂಬಳಿಗಳನ್ನು ಮಾಡಿದ ನಂತರ, ಅವುಗಳನ್ನು ಬಕರ್ವಾಲ್ ಗಂಡಸರು ತೊಳೆದು ಒಣಗಿಸುತ್ತಾರೆ. ಕಂಬಳಿಗಳಿಗೆ ದಾರ ಮತ್ತು ನೂಲನ್ನು ಸಾಮಾನ್ಯವಾಗಿ ಬಕರ್ವಾಲ್ ಮಹಿಳೆಯರು ತಯಾರಿಸುತ್ತಾರೆ ಮತ್ತು ನೂಲಿಗೆ ಬಕರ್ವಾಲ್ ಕುಟುಂಬಗಳು ಮನೆಯಲ್ಲಿ ಬಣ್ಣ ಹಾಕುತ್ತವೆ.












