ಈ ದಿನ ನಾವು 170ಕ್ಕೂ ಹೆಚ್ಚು ಜನರನ್ನು ಒಳಗೊಂಡ ಪರಿಯ ವಿಶಿಷ್ಟ ಅನುವಾದ ತಂಡದ ಅಚ್ಚರಿದಾಯಕ ಸಾಧನೆಗಳನ್ನು ಕೊಂಡಾಡುತ್ತೇವೆ - ಅವರಲ್ಲಿ ಕನಿಷ್ಠ 45 ಜನರು ಯಾವುದೇ ಸಮಯದಲ್ಲಿ ಕೈಗೆಟುಕುವಂತೆ ಸಕ್ರಿಯರಾಗಿದ್ದಾರೆ. ನಾವು ಈ ದಿನವನ್ನು ಆಚರಿಸುತ್ತಿರುವ ಹೊತ್ತು ಒಳ್ಳೆಯ ತಂಡವೊಂದು ಜೊತೆಗಿದೆಯೆನ್ನುವ ಹೆಮ್ಮೆ ನಮ್ಮದು. ವಿಶ್ವಸಂಸ್ಥೆಯು ಸೆಪ್ಟೆಂಬರ್ ತಿಂಗಳ 30ನೇ ದಿನವನ್ನು ಅಂತರರಾಷ್ಟ್ರೀಯ ಅನುವಾದ ದಿನವಾಗಿ ಆಚರಿಸುತ್ತದೆ.
ವಿಶ್ವ ಸಂಸ್ಥೆ ಹೇಳುವಂತೆ, "ರಾಷ್ಟ್ರಗಳನ್ನು ಒಟ್ಟುಗೂಡಿಸುವಲ್ಲಿ, ಮಾತುಕತೆ, ತಿಳುವಳಿಕೆ ಮತ್ತು ಸಹಕಾರವನ್ನು ಸುಗಮಗೊಳಿಸುವಲ್ಲಿ, ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಭಾಷಿಕ ವೃತ್ತಿಪರರ ಕೆಲಸಕ್ಕೆ ಗೌರವ ಸಲ್ಲಿಸಲು ಈ ದಿನವು ಒಂದು ಅವಕಾಶವಾಗಿದೆ..." ಮತ್ತು ಹೆಚ್ಚು. ಆದ್ದರಿಂದ ಇಂದು, ನಾವು ಬೇರೆ ಯಾವುದೇ ಸುದ್ದಿತಾಣಗಳಿಗೆ ಸಾಟಿಯಾಗದ ನಮ್ಮ ಅನುವಾದ ತಂಡಕ್ಕೆ ಗೌರವ ಸಲ್ಲಿಸುತ್ತೇವೆ.
ನಮ್ಮ ಅನುವಾದಕರ ತಂಡದಲ್ಲಿ ವೈದ್ಯರು, ಭೌತಶಾಸ್ತ್ರಜ್ಞರು, ಭಾಷಾಶಾಸ್ತ್ರಜ್ಞರು, ಕವಿಗಳು, ಗೃಹಿಣಿಯರು, ಶಿಕ್ಷಕರು, ಕಲಾವಿದರು, ಪತ್ರಕರ್ತರು, ಬರಹಗಾರರು, ಎಂಜಿನಿಯರ್‌ಗಳು, ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಹೀಗೆ ಹಲವು ಹಿನ್ನೆಲೆಯ ಜನರಿದ್ದಾರೆ. ನಮ್ಮ ತಂಡದ ಅತ್ಯಂತ ಹಿರಿಯ ಅನುವಾದಕರೆಂದರೆ 84 ವರ್ಷ ಪ್ರಾಯದವರು ಮತ್ತು ಕಿರಿಯರೆಂದರೆ 22 ವರ್ಷದವರು. ಕೆಲವರು ಭಾರತದ ಹೊರಗೆ ನೆಲೆಗೊಂಡಿದ್ದರೆ, ಉಳಿದವರು ದೇಶದೊಳಗಿನ ದೂರದ ಸ್ಥಳಗಳಲ್ಲಿ ವಾಸಿಸುತ್ತಾರೆ, ಇವರಲ್ಲಿ ಕೆಲವರು ವಾಸಿಸುವ ಸ್ಥಳಗಳಲ್ಲಿ ತುಂಬಾ ಕಳಪೆ ಸಂಪರ್ಕ ಸೌಲಭ್ಯವಿದೆ
ಪರಿಯ ಬೃಹತ್ ಭಾಷಾಂತರ ಕಾರ್ಯಕ್ರಮವು ಖಂಡಿತವಾಗಿಯೂ ನಮ್ಮ ಹಲವು ಮಿತಿಗಳ ನಡುವೆಯೂ, ಈ ರಾಷ್ಟ್ರವನ್ನು ಅದರ ಭಾಷೆಗಳನ್ನು ಗೌರವಿಸುವುದು ಮತ್ತು ಸಮಾನವಾಗಿ ನಡೆಸಿಕೊಳ್ಳುವ ದೃಷ್ಟಿಯಿಂದ ಒಟ್ಟಿಗೆ ತರುವ ಗುರಿಯನ್ನು ಹೊಂದಿದೆ. ʼಪರಿʼಯ ಪ್ರತಿಯೊಂದು ಲೇಖನವು 13 ಭಾಷೆಗಳಲ್ಲಿ ಲಭ್ಯವಿದೆ - ಅಥವಾ ಶೀಘ್ರದಲ್ಲೇ ಇರಲಿದೆ. 13 ಭಾಷೆಗಳಲ್ಲಿ ಲಭ್ಯವಿರುವ ʼಪರಿʼಯ ಒಂದು ವಿಶಿಷ್ಟ ಲೇಖನ ಇಲ್ಲಿದೆ (ನಮ್ಮ ಸ್ವಾತಂತ್ರ್ಯಗಳಿಗಾಗಿ ಭಗತ್ ಸಿಂಗ್ ಝುಗ್ಗಿಂಯಾ ಅವರ ಹೋರಾಟ). ಮತ್ತು ನಮ್ಮ ತಂಡವು ಸುಮಾರು 6,000 ಲೇಖನಗಳನ್ನು ಹೀಗೆ ಹದಿಮೂರು ಭಾಷೆಗಳಲ್ಲಿ ಮೂಡಿಬರಲು ಕಾರಣವಾಗಿದೆ, ಅವುಗಳಲ್ಲಿ ಅನೇಕ ಲೇಖನಗಳು ಬಹುಮಾಧ್ಯಮ ವಿಭಾಗಕ್ಕೆ ಸೇರುತ್ತವೆ.



