ದ್ರೌಪದಿ ಸಬರ್ ಕಣ್ಣೀರನ್ನು ತಡೆಯಲಾಗದೆ ತನ್ನ ಸೆರಗಿನ ತುದಿಯಿಂದ ಕಣ್ಣುಗಳನ್ನು ಒರೆಸಿಕೊಳ್ಳುತ್ತಲೇ ಇದ್ದರ. ಅವರ ಮೊಮ್ಮಕ್ಕಳಾದ ಮೂರು ವರ್ಷದ ಗಿರೀಶ ಮತ್ತು ಒಂಬತ್ತು ತಿಂಗಳ ವಿರಾಜ್ ಒಡಿಶಾದ ಗುಡಭೆಲೀ ಗ್ರಾಮದಲ್ಲರುವ ಮನೆಯ ಹೊರಗೆ ಅಜ್ಜಿಯ ಬಳಿ ಸದ್ದಿಲ್ಲದೆ ಆಡುತ್ತಿದ್ದರು. ತನ್ನ ಮೊಮ್ಮಗಳು ತುಳಸಾಳ (25) ಸಾವಿಗಾಗಿ ಶೋಕಿಸುತ್ತಿರುವ 65 ವರ್ಷದ ಹಿರಿಯ ಮಹಿಳೆಯನ್ನು ಸಮಾಧಾನಪಡಿಸಲು ಅವರ ಕುಟುಂಬ ಸದಸ್ಯರು ಪ್ರಯತ್ನಿಸಿದರು.
“ಇನ್ನು ನಾವು ಯಾರನ್ನು ʼನಮ್ಮ ಮಗಳೆಂದುʼ ಕರೆಯುವುದು?” ಎಂದು ಅವರು ಶೂನ್ಯದತ್ತ ನೋಡುತ್ತಾ ಅಳುತ್ತಿದ್ದರು.
ನುವಾಪಾಡ ಜಿಲ್ಲೆಯ ಖಾರಿಯಾರ್ ಬ್ಲಾಕಿನಲ್ಲಿರುವ ತಮ್ಮ ಅರ್ಧ ಮುಗಿದ ಇಟ್ಟಿಗೆ ಮನೆಯ ಮುಂದೆ ಪ್ಲಾಸ್ಟಿಕ್ ಚಾಪೆಯ ಮೇಲೆ ಕುಳಿತಿದ್ದ ತುಳಸಾ ಅವರ ಕುಟುಂಬವು ಸಬರ್ ಆದಿವಾಸಿ ಸಮುದಾಯಕ್ಕೆ ಸೇರಿದೆ, ಆ ಕುಟುಂಬವೀಗ ಅವರ ಹಠಾತ್ ನಿರ್ಗಮನದ ದುಃಖವನ್ನು ನಿಭಾಯಿಸಲು ಪ್ರಯತ್ನಿಸುತ್ತಿದೆ. ಆಕೆಯ ಪೋಷಕರು - ತಾಯಿ ಪದ್ಮಿನಿ ಮತ್ತು ತಂದೆ ದೇಬಾನಂದ್ - ತಮ್ಮ ಮಗಳ ಮಕ್ಕಳ ಬಗ್ಗೆ ಚಿಂತಿತರಾಗಿದ್ದಾರೆ, ವಿಶೇಷವಾಗಿ ವಿರಾಜ್, ಅವನು ತಾಯಿ ಸತ್ತಾಗ ಇನ್ನೂ ಶುಶ್ರೂಷೆಯಲ್ಲಿದ್ದ. "ನಾನು ಮತ್ತು ನನ್ನ ಸೊಸೆ ಪದ್ಮಿನಿ ಈ ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇವೆ" ಎಂದು ದ್ರೌಪದಿ ಹೇಳಿದರು.
ಮಕ್ಕಳ ತಂದೆ, ತುಳಸಾರ ಪತಿ ಭೋಸಿಂಧೂ(27) ಊರಿನಲ್ಲಿಲ್ಲ. ಅವರು ಹಳ್ಳಿಯಿಂದ ದಕ್ಷಿಣಕ್ಕೆ ೫೦೦ ಕಿಲೋಮೀಟರ್ ದೂರದಲ್ಲಿರುವ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ರಂಗಾಪುರ ಎಂಬಲ್ಲಿ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಡಿಸೆಂಬರ್ 2021ರಲ್ಲಿ ತಮ್ಮ ತಾಯಿ ಮತ್ತು ತುಳಸಾರ ಕಿರಿಯ ಸಹೋದರಿ ದೀಪಾಂಜಲಿ ಅವರೊಂದಿಗೆ ಆರು ತಿಂಗಳ ಕಾಲ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡಲು ಅಲ್ಲಿಗೆ ಹೋಗಿದ್ದರು. ಅವರು ಅಲ್ಲಿ ದಿನಕ್ಕೆ ಸುಮಾರು 200 ರೂ. ಗಳಿಸುತ್ತಿದ್ದರು.
ಜನವರಿ 24, 2022ರ ರಾತ್ರಿ, ತುಳಸಾ ಸಬರ್ ಗುಡಭೆಲೀಯಲ್ಲಿರುವ ತನ್ನ ಹೆತ್ತವರ ಮನೆಯಿಂದ 20 ಕಿಲೋಮೀಟರ್ ದೂರದಲ್ಲಿರುವ ಚನಟಮಾಲ್ ಗ್ರಾಮದ ಮನೆಯಲ್ಲಿದ್ದರು. ಅಂದು ರಾತ್ರಿ 8 ಗಂಟೆ ಸುಮಾರಿಗೆ ತೀವ್ರ ಹೊಟ್ಟೆ ನೋವು ಎಂದು ಅವರು ದೂರಿದರು. "ನಾನು ಅವಳನ್ನು ಖರಿಯಾರ್ (ಪಟ್ಟಣ)ದ ಉಪ ವಿಭಾಗೀಯ ಆಸ್ಪತ್ರೆಗೆ ಕರೆದೊಯ್ದೆ" ಎಂದು ಆಕೆಯ ಮಾವ ದಸಮೂ ಸಬರ್(57) ಹೇಳುತ್ತಾರೆ. "ಅಲ್ಲಿನ ವೈದ್ಯರು ಪರಿಸ್ಥಿತಿ ಗಂಭೀರವಾಗಿದೆಯಾದ್ದರಿಂದ ನುವಾಪಾಡ ಜಿಲ್ಲಾ ಪ್ರಧಾನ ಆಸ್ಪತ್ರೆಗೆ ಹೋಗುವಂತೆ ಹೇಳಿದರು. ಆದರೆ ನಾವು ಅಲ್ಲಿಗೆ ತಲುಪುವ ಹೊತ್ತಿಗಾಗಲೇ ತುಳಸಾ ತೀರಿಕೊಂಡಿದ್ದಳು."
ಆಸ್ಪತ್ರೆಗೆ ಹೋಗಲು ಸಾಕಷ್ಟು ದೂರ ಪ್ರಯಾಣಿಸಿದ ಕುಟುಂಬದ ಅನುಭವ - ಖರಿಯಾರ್‌ಗೆ 20 ಕಿಲೋಮೀಟರ್ ಮತ್ತು ಅಲ್ಲಿಂದ ನುವಾಪಾಡಕ್ಕೆ ಇನ್ನೂ 50 - ಒಡಿಶಾದ ಬುಡಕಟ್ಟು ಪ್ರದೇಶಗಳಲ್ಲಿನ ಜನರು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಪ್ರವೇಶಿಸಲು ಪ್ರಯತ್ನಿಸಲು ಮಾಡುವ ಸಾಹಸ ಸಾಮಾನ್ಯವೇನಲ್ಲ. ಗ್ರಾಮೀಣ ಒಡಿಶಾದ ಈ ಭಾಗಗಳಲ್ಲಿನ 134 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ (ಸಿಎಚ್ ಸಿ) ತಜ್ಞ ವೈದ್ಯರ ಕೊರತೆಯು ಜನರಿಗೆ ತುರ್ತು ಸಮಯದಲ್ಲಿ ಬ್ಲಾಕ್ ಅಥವಾ ಜಿಲ್ಲಾ ಕೇಂದ್ರಗಳಿಗೆ ಪ್ರಯಾಣಿಸುವ ಅನಿವಾರ್ಯತೆಯನ್ನು ಸೃಷ್ಟಿಸಿದೆ.
ಗ್ರಾಮೀಣ ಆರೋಗ್ಯ ಅಂಕಿಅಂಶ 2019-20 ರ ಪ್ರಕಾರ, ಒಡಿಶಾದ ಬುಡಕಟ್ಟು ಪ್ರದೇಶಗಳಲ್ಲಿನ ಸಿಎಚ್‌ಸಿಗಳಲ್ಲಿ ಕನಿಷ್ಠ 536 ತಜ್ಞ ವೈದ್ಯರ - ವೈದ್ಯರು, ಶಸ್ತ್ರಚಿಕಿತ್ಸಕರು, ಸ್ತ್ರೀರೋಗ ತಜ್ಞರು ಮತ್ತು ಮಕ್ಕಳ ತಜ್ಞರು - ಅಗತ್ಯವಿದೆ, ಆದರೆ ಕೊರತೆಯಿರುವುದು 461. ಮೂರು ಹಂತದ ಗ್ರಾಮೀಣ ಆರೋಗ್ಯ ಮೂಲಸೌಕರ್ಯದಲ್ಲಿ ಅತ್ಯುನ್ನತ ಆರೋಗ್ಯ ಸೌಲಭ್ಯವಾದ ಸಿಎಚ್‌ಸಿ ಇಲ್ಲಿ ಸರಾಸರಿ ಒಂದು ಲಕ್ಷ ಜನರಿಗೆ ಒಂದರಂತೆ ಸೇವೆ ಸಲ್ಲಿಸುತ್ತದೆ.
ದುಃಖಿತ ಕುಟುಂಬವು, ಆಕೆಯ ಪತಿ ದೂರದ ತೆಲಂಗಾಣದಲ್ಲಿದ್ದಿದ್ದರಿಂದ ಇನ್ನಷ್ಟು ಸಂಕಷ್ಟಗಳನ್ನು ಎದುರಿಸಬೇಕಾಯಿತು.
ಭೋಸಿಂಧೂ ತನ್ನ ಪತ್ನಿಯ ಅಂತಿಮ ಸಂಸ್ಕಾರವನ್ನು ನಿರ್ವಹಿಸಲು ಊರಿಗೆ ಸಾಧ್ಯವಾಗಲಿಲ್ಲ. "ನಾನು ಅವನ ಹೆಂಡತಿಯ ನಿಧನದ ಬಗ್ಗೆ ಹೇಳಿದಾಗ, ನನ್ನ ಮಗ ಉದ್ಯೋಗದಾತನ ಬಳಿ ರಜೆ ನೀಡಬೇಕೆಂದು ಕೇಳಿದ, ಆದರೆ ಅವನಿಗೆ ಅನುಮತಿ ನೀಡಲಿಲ್ಲ" ಎಂದು ದಸಮೂ ಹೇಳುತ್ತಾರೆ. ಪೆದ್ದಪಲ್ಲಿಯಿಂದ ಕುಟುಂಬವು ಹಿಂದಿರುಗಲು ವ್ಯವಸ್ಥೆ ಮಾಡುವಂತೆ ಸ್ಥಳೀಯ ಕಾರ್ಮಿಕ ಗುತ್ತಿಗೆದಾರನಿಗೆ (ಅಥವಾ ಸರ್ದಾರ್ ) ಅವರು ಮಾಡಿದ ಮನವಿಗಳು ವ್ಯರ್ಥವಾದವು.
ಭೋಸಿಂಧೂ ಅವರನ್ನು ಗ್ರಾಮದಿಂದ ಸುಮಾರು 60 ಜನರೊಂದಿಗೆ ತೆಲಂಗಾಣದ ಭಟ್ಟಿಗಳಿಗೆ ಕಳುಹಿಸಿದ್ದ ಸರ್ದಾರ್ , ತಾನು ಕೊಟ್ಟಿರುವ 111,000 ರೂ.ಗಳ ಮುಂಗಡವನ್ನು ಹಿಂತಿರುಗಿಸುವಂತೆ ಕುಟುಂಬವನ್ನು ಕೇಳಿದರು. ಸರ್ದಾರ್ ಇಟ್ಟಿಗೆ ಭಟ್ಟಿಯ ಮಾಲೀಕರು ಅದನ್ನು ಕೇಳುತ್ತಾರೆ ಎಂದು ಆಪಾದನೆಯನ್ನು ಅವರ ತಲೆಗೆ ರವಾನಿಸುತ್ತಾನೆ.
*****
ಭೋಸಿಂಧೂವಿನಂತೆ, ನುವಾಪಾಡದ ಸಬರ್ ಸಮುದಾಯದ ಅನೇಕರು ಕೆಲಸಕ್ಕಾಗಿ, ಅಲ್ಪಾವಧಿಅಥವಾ ದೀರ್ಘಾವಧಿಗೆ ಅಥವಾ ಋತುಮಾನಕ್ಕೆ ತಕ್ಕಂತೆ ವಲಸೆ ಹೋಗುತ್ತಾರೆ, ವಿಶೇಷವಾಗಿ ದೊಡ್ಡ ದೊಡ್ಡ ಖರ್ಚುಗಳಿಗೆ ಹಣ ಹೊಂದಿಸಬೇಕಾದ ಹೊಂದಿರುವಾಗ. ಜಿಲ್ಲೆಯ ಸುಮಾರು ಅರ್ಧದಷ್ಟು ಪ್ರದೇಶ ಅರಣ್ಯದಿಂದ ಆವೃತವಾಗಿದೆ, ಮತ್ತು ಸಾಂಪ್ರದಾಯಿಕವಾಗಿ ಇಲ್ಲಿನ ಆದಿವಾಸಿ ಸಮುದಾಯಗಳು ಮಹುವಾ ಹೂವುಗಳು ಮತ್ತು ಚಾರ್ ಬೀಜಗಳು (ಚಿರೋಂಜಿ) ಯಂತಹ ವೃಕ್ಷೇತರ ಅರಣ್ಯ ಉತ್ಪನ್ನಗಳನ್ನು (ಎನ್‌ಟಿಎಫ್‌ಪಿ) ಮಾರಾಟ ಮಾಡುವುದರಿಂದ ಬರುವ ಆದಾಯವನ್ನು ಅವಲಂಬಿಸಿವೆ. ಅವರು ಮಳೆಯಾಶ್ರಿತ ಬೆಳೆಗಳ ಜೀವನಾಧಾರ ಕೃಷಿಯನ್ನು ಸಹ ಅಭ್ಯಾಸ ಮಾಡುತ್ತಾರೆ. ಆದಾಗ್ಯೂ, ಅರಣ್ಯ ಉತ್ಪನ್ನಗಳು ಲಾಭದಾಯಕವಲ್ಲ, ಮತ್ತು ಮಳೆ-ಆಧಾರಿತ ಬೆಳೆಗಳ ಸುಸ್ಥಿರತೆಯ ಮೇಲೆ ಬರಗಾಲ ಮತ್ತು ಮಳೆಯ ಕೊರತೆ ಪರಿಣಾಮ ಬೀರಿದೆ. ಜಿಲ್ಲೆಯಲ್ಲಿ ನೀರಾವರಿಯೆನ್ನುವುದು ಬಹುತೇಕ ಅಸ್ತಿತ್ವದಲ್ಲಿಲ್ಲ.
"ಮುಂಗಾರು ಋತುವಿನ ನಂತರ ನಿಯಮಿತ ಕೃಷಿ ಕೆಲಸ ಲಭ್ಯವಿಲ್ಲದ, ನಮ್ಮ ಏಕೈಕ ಭರವಸೆ ಎಂಜಿಎನ್ಆರ್‌ಇಜಿಎ, ಆದರೆ ತಡವಾದ ಪಾವತಿಯ ಕಾರಣದಿಂದಾಗಿ ನಾವು ಇತರ ಆದಾಯ ಮೂಲಗಳನ್ನು ಹುಡುಕುವುದು ಅನಿವಾರ್ಯವಾಗಿದೆ" ಎಂದು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಯೋಜನೆಯಡಿ ತಮ್ಮ ಕುಟುಂಬದ ಅನುಭವದ ಬಗ್ಗೆ ದಸಮೂ ಹೇಳುತ್ತಾರೆ. "ನನ್ನ ಮಗ ಮತ್ತು ನನ್ನ ಹೆಂಡತಿ ರಸ್ತೆ ಸುಧಾರಣಾ ಯೋಜನೆಯಲ್ಲಿ ಕೆಲಸ ಮಾಡಿದ್ದರು, ಆದರೆ ಅವರ ವೇತನವನ್ನು ಇನ್ನೂ ಪಾವತಿಸಿಲ್ಲ. ಬಾಕಿ ಇರುವ ಒಟ್ಟು ಮೊತ್ತ ಸುಮಾರು 4,000 ರೂಪಾಯಿಗಳು" ಎಂದು ಅವರು ಹೇಳುತ್ತಾರೆ.
ಖಾರಿಫ್ ಋತುವಿನಲ್ಲಿ ಉದ್ಯೋಗ ಆಯ್ಕೆಗಳು ಕಡಿಮೆ ಎಂದು ದಸಮೂ ಅವರ ನೆರೆಮನೆಯವರಾದ ರವೀಂದ್ರ ಸಾಗರಿಯಾ ಹೇಳುತ್ತಾರೆ. "ಅದಕ್ಕಾಗಿಯೇ ಈ ಪ್ರದೇಶದ ಜನರು ಪ್ರತಿ ವರ್ಷ ನವೆಂಬರಿನಿಂದ ವಲಸೆ ಹೋಗುತ್ತಾರೆ," ಎಂದು ಅವರು ಮುಂದುವರೆದು ಹೇಳುತ್ತಾರೆ. ಈ ಬಾರಿ ಕೆಲಸಕ್ಕೆ ಹೋದ ಗ್ರಾಮದ 60 ಜನರಲ್ಲಿ 20 ಜನರು ಯುವಕರು ಎಂದು ಅವರು ಹೇಳುತ್ತಾರೆ.
ನುವಾಪಾಡ ಸಬರ್ ಸಮುದಾಯದಲ್ಲಿ ಕೇವಲ ಶೇಕಡಾ 56ರಷ್ಟು ಜನರು ಮಾತ್ರ ಸಾಕ್ಷರರಾಗಿದ್ದಾರೆ, ಇದು ಗ್ರಾಮೀಣ ಒಡಿಶಾದ ಸರಾಸರಿ ಶೇಕಡಾ 70ಕ್ಕಿಂತ ಕಡಿಮೆಯಾಗಿದೆ. ಶಾಲಾ ಶಿಕ್ಷಣ ಹೊಂದಿರುವ ಕೆಲವರು ಮುಂಬೈಗೆ ಹೋಗುವ ಮಾರ್ಗವನ್ನು ಕಂಡುಕೊಳ್ಳುತ್ತಾರೆ ಆದರೆ ಭೋಸಿಂಧು ಅವರಂತಹ ಇತರರು ಇಟ್ಟಿಗೆ ಗೂಡುಗಳಲ್ಲಿ ದಿನಗೂಲಿ ಗಳಿಸಲು ಕುಟುಂಬದ ಸಂಯೋಜಿತ ಶ್ರಮವನ್ನು ಅಡಮಾನ ಇಡುತ್ತಾರೆ, ಅಲ್ಲಿ ಅವರು ಅಮಾನವೀಯ ಪರಿಸ್ಥಿತಿಗಳಲ್ಲಿ 12 ಗಂಟೆಗಳ ಕಾಲ ಬಿಸಿ ಇಟ್ಟಿಗೆಗಳನ್ನು ತಲೆಯ ಮೇಲೆ ಹೊರುತ್ತಾರೆ.
ಸ್ಥಳೀಯ ಸರ್ದಾರ್‌ಗಳು ಕೌಶಲರಹಿತ ಕೆಲಸಗಾರರಿಗೆ ಇಟ್ಟಿಗೆ ಗೂಡುಗಳಲ್ಲಿ ಉದ್ಯೋಗದ ವ್ಯವಸ್ಥೆ ಮಾಡುತ್ತಾರೆ, ಕೆಲಸಕ್ಕೆ ಬರುವವರ ಒಟ್ಟು ವೇತನದ ಒಂದು ಭಾಗವನ್ನು ಮುಂಚಿತವಾಗಿ ಪಾವತಿಸುತ್ತಾರೆ. ಭೋಸಿಂಧೂ ಕುಟುಂಬಕ್ಕೆ ಅವರ ಮನೆಯ ನಿರ್ಮಾಣವನ್ನು ಪೂರ್ಣಗೊಳಿಸಲು ಹಣದ ಅಗತ್ಯವಿತ್ತು, ಹೀಗಾಗಿ ಅವರು ಕೆಲಸಕ್ಕೆ ಸೇರಿಕೊಂಡರು.
ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ ಅವರಿಗೆ ಒಂದು ಮನೆಯನ್ನು ಮಂಜೂರು ಮಾಡಲಾಗಿದೆ ಎಂದು ದಸಮೂ ಹೇಳುತ್ತಾರೆ, "ಆದರೆ ಅದನ್ನು ಪೂರ್ಣಗೊಳಿಸಲು ಮಂಜೂರಾದ 1.3 ಲಕ್ಷ ರೂಪಾಯಿಗಳು ಸಾಕಾಗುತ್ತಿರಲಿಲ್ಲ." ಕುಟುಂಬವು ತಮ್ಮ ಮನರೇಗಾ ವೇತನದ ರೂ. 19,752 ಉಳಿಸಿತ್ತು, ಅದು ಅವರ ಜೂನ್ 2020ರವರೆಗಿನ ಸಂಪಾದನೆ, ಆದರೆ ಅವರಿಗೆ ಇನ್ನೂ ಒಂದು ಲಕ್ಷ ರೂಪಾಯಿಗಳ ಅಗತ್ಯವಿತ್ತು. "ನಾವು ಸಾಲ ತೆಗೆದುಕೊಂಡೆವು, ಮತ್ತು ಅದನ್ನು ಮರುಪಾವತಿಸಲು, ನಮಗೆ ಸರ್ದಾರನಿಂದ ಹಣ ಪಡೆದೆವು" ಎಂದು ಅವರು ಹೇಳುತ್ತಾರೆ.
ಇದು 2021ರಲ್ಲಿ ಕುಟುಂಬವು ಪಡೆದ ಮೊದಲ ಸಾಲವೇನಲ್ಲ. ತುಳಸಾ ಗರ್ಭಧಾರಣೆಯು ಕಷ್ಟಕರವಾಗಿತ್ತು, ಇದರಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು, ಮತ್ತು ವಿರಾಜ್ ಅಕಾಲಿಕವಾಗಿ ಜನಿಸಿದನು. ಜನನದ ನಂತರದ ಮೊದಲ ಮೂರು ತಿಂಗಳಲ್ಲಿ, ತಾಯಿ ಮತ್ತು ಮಗುವಿಗೆ ಎರಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಯಿತು - ನುವಾಪಾಡ ಜಿಲ್ಲಾ ಪ್ರಧಾನ ಆಸ್ಪತ್ರೆ ಮತ್ತು 200 ಕಿಲೋಮೀಟರ್ ದೂರದಲ್ಲಿರುವ ಸಂಬಲ್ಪುರದ ವೀರ ಸುರೇಂದ್ರ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ.
"ನಾವು ನಮ್ಮ ಒಂದೂವರೆ ಎಕರೆ ಭೂಮಿಯನ್ನು 35,000 ರೂಪಾಯಿಗಳಿಗೆ ಒತ್ತೆ ಇಟ್ಟಿದ್ದೇವೆ ಮತ್ತು ತುಳಸಾ ತನ್ನ ಸ್ವಸಹಾಯ ಗುಂಪಿನ (ಎಸ್ ಎಚ್ ಜಿ) ಮೂಲಕ 30,000 ರೂಪಾಯಿಗಳ ಬ್ಯಾಂಕ್ ಸಾಲವನ್ನು ವೈದ್ಯಕೀಯ ವೆಚ್ಚಕ್ಕಾಗಿ ತೆಗೆದುಕೊಂಡಳು" ಎಂದು ದಸಮೂ ಹೇಳುತ್ತಾರೆ. ಅವರ ಸಾಲಗಳನ್ನು ಮರುಪಾವತಿಸಲು ಕುಟುಂಬವು ಗುತ್ತಿಗೆದಾರನಿಂದ ಮುಂಗಡವನ್ನು ತೆಗೆದುಕೊಂಡು ಕಳೆದ ವರ್ಷ ಡಿಸೆಂಬರ್ ನಲ್ಲಿ ತೆಲಂಗಾಣಕ್ಕೆ ಹೋಗಿತ್ತು.
ನುವಾಪಾಡ ಒಡಿಶಾದ ಅತ್ಯಂತ ಬಡ ಜಿಲ್ಲೆಗಳಲ್ಲಿ ಒಂದಾಗಿದೆ. ಇಲ್ಲಿಂದ ಮತ್ತು ರಾಜ್ಯದ ಇತರ ದಕ್ಷಿಣ ಮತ್ತು ಪಶ್ಚಿಮ ಜಿಲ್ಲೆಗಳ ಜನರು ಆಂಧ್ರಪ್ರದೇಶ, ಛತ್ತೀಸ್ ಗಢ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಕೆಲಸ ಮಾಡಲು ವಲಸೆ ಹೋಗುತ್ತಾರೆ ಎಂದು 2020 ರಲ್ಲಿ ಭಾರತದ ಆಂತರಿಕ ವಲಸೆಯ ಬಗ್ಗೆ ನಡೆಸಲಾಗದ ಅಧ್ಯಯನವು ಹೇಳುತ್ತದೆ. ಒಡಿಶಾದಿಂದ ಸುಮಾರು ಐದು ಲಕ್ಷ ಕಾರ್ಮಿಕರು ವಲಸೆ ಹೋಗುತ್ತಾರೆ, ಅವರಲ್ಲಿ ಎರಡು ಲಕ್ಷ ಜನರು ಬೊಲಾಂಗೀರ್, ನುವಾಪಾಡ, ಕಲಹಂಡಿ, ಬೌಧ್, ಸೋನೆಪುರ್ ಮತ್ತು ಬರ್ಘರ್ ಜಿಲ್ಲೆಗಳಿಂದ ವಲಸೆ ಹೋಗುತ್ತಾರೆ ಎಂದು ಸ್ಥಳೀಯ ಎನ್‌ಜಿಒ ಸಂಗ್ರಹಿಸಿದ ಮಾಹಿತಿಯಲ್ಲಿ ಸೇರಿಸಲಾಗಿದೆ.
ಸಂಬಲ್ ಪುರ ನಗರದಲ್ಲಿ ನೆಲೆಗೊಂಡಿರುವ ವಾಟರ್ ಇನಿಶಿಯೇಟಿವ್ ಒಡಿಶಾದ ಸ್ಥಾಪಕರಾದ ಖ್ಯಾತ ಹೋರಾಟಗಾರರಾದ ರಂಜನ್ ಪಾಂಡಾ ಅವರು ವಲಸೆ ಕಾರ್ಮಿಕರ ಸಮಸ್ಯೆಗಳನ್ನು ನಿಕಟವಾಗಿ ಗಮನಿಸಿದ್ದಾರೆ. "ಈ ಪ್ರದೇಶದ ಜನರು ಅನೇಕ ಪರಸ್ಪರ ಸಂಬಂಧಿತ ಅಂಶಗಳ, ವಿಶೇಷವಾಗಿ ಹವಾಮಾನ ಬದಲಾವಣೆಯ ಅಪಾಯಗಳು ಮತ್ತು ಭೇದ್ಯತೆಗಳನ್ನು ಎದುರಿಸುತ್ತಿದ್ದಾರೆ" ಎಂದು ಅವರು ಹೇಳುತ್ತಾರೆ. "ಇಲ್ಲಿ ನೈಸರ್ಗಿಕ ಸಂಪನ್ಮೂಲಗಳ ನಿರಂತರ ಅವನತಿ ಮತ್ತು ಸ್ಥಳೀಯ ಉದ್ಯೋಗ ಯೋಜನೆಗಳ ವೈಫಲ್ಯವೂ ಇದೆ."
*****
"ನೀನು ಅವಳನ್ನು ನೋಡಿರಬಹುದು. ಅವಳು ಸುಂದರವಾಗಿದ್ದಳು" ಎಂದು ದ್ರೌಪದಿ ತನ್ನ ಮೊಮ್ಮಗಳ ಬಗ್ಗೆ ಕಣ್ಣೀರು ಸುರಿಸುತ್ತಾ ಹೇಳಿದರು.
ತುಳಸಾ ಸಾಯುವ ಮೊದಲು ಅರಡಾ ಗ್ರಾಮ ಪಂಚಾಯಿತಿಯ ಹಳ್ಳಿಯಿಂದ ಹಳ್ಳಿಗೆ ಓಡಾಡಿಕೊಂಡು ರಾಜ್ಯದಲ್ಲಿ 2022ರ ಪಂಚಾಯತ್ ಚುನಾವಣೆಗಾಗಿ ಪ್ರಚಾರ ಮಾಡುತ್ತಿದ್ದರು( ಫೆಬ್ರವರಿ 16ರಿಂದ 24ರವರೆಗೆ ನಡೆಯಿತು). ಚನಟಮಾಲ್, ಆದಿವಾಸಿ ಪ್ರಧಾನ ಗ್ರಾಮ, ಅರಡಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುತ್ತದೆ, ಮತ್ತು ಅವರು ಸಮಿತಿ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಸ್ಥಾನವನ್ನು ಪರಿಶಿಷ್ಟ ಪಂಗಡದ ಮಹಿಳಾ ಅಭ್ಯರ್ಥಿಗೆ ಮೀಸಲಿಡಲಾಗಿತ್ತು, ಮತ್ತು ತುಳಸಾ ತನ್ನ ಹಳ್ಳಿಯಲ್ಲಿ ಶಾಲೆಯನ್ನು ಮುಗಿಸಿದ ಏಕೈಕ ಆದಿವಾಸಿ ಮಹಿಳೆಯಾಗಿದ್ದರಿಂದ ಮತ್ತು ಅವರು ಸ್ವಸಹಾಯ ಗುಂಪನ್ನು ಸಹ ಮುನ್ನಡೆಸುತ್ತಿದ್ದರಿಂದ ಅವರದು ಜನಪ್ರಿಯ ಆಯ್ಕೆಯಾಗಿತ್ತು. "ನಮ್ಮ ಸಂಬಂಧಿಕರು ಅವಳನ್ನು ಹೋರಾಡಲು ಪ್ರೋತ್ಸಾಹಿಸಿದರು" ಎಂದು ದಸಮೂ ಹೇಳುತ್ತಾರೆ.
ಚುನಾವಣೆಗೆ ನಿಲ್ಲುವುದು ಬೇಡವೆಂದು ತುಳಸಾಗೆ ದ್ರೌಪದಿ ಸಲಹೆ ನೀಡಿದ್ದರು. "ಅವಳು ಕೇವಲ ಆರು ತಿಂಗಳ ಹಿಂದೆಯಷ್ಟೇ ಅನಾರೋಗ್ಯದಿಂದ ಸುಧಾರಿಸಿಕೊಂಡಿದ್ದಳು, ಹೀಗಾಗಿ ನಾನು ಅದನ್ನು ವಿರೋಧಿಸುತ್ತಿದ್ದೆ" ಎಂದು ದುಃಖಿತ ಅಜ್ಜಿ ಹೇಳಿದರು. "ಅದರಿಂದಾಗಿಯೇ ಅವಳು ಸತ್ತಳು. "
ವಲಸೆಯು ಚುನಾವಣೆಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಖರಿಯಾರ್ ಬ್ಲಾಕ್‌ನ ಬರ್ಗಾಂವ್ ಗ್ರಾಮ ಪಂಚಾಯಿತಿಯಲ್ಲಿ ಸರಪಂಚ್ ಹುದ್ದೆಗೆ ನಿಂತಿದ್ದ ಸ್ಥಳೀಯ ನಾಯಕ ಸಂಜಯ್ ತಿವಾರಿ ಹೇಳಿದರು. ಮತದಾರರ ಸಂಖ್ಯೆ ಕುಸಿಯುತ್ತದೆ, ವಿಶೇಷವಾಗಿ ಬಡ ವರ್ಗಗಳಿಂದ ಎಂದು ಅವರು ಹೇಳಿದರು. ನುವಾಪಾಡ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಲಸಿಗರು ಮತ ಚಲಾಯಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು, ಅವರಲ್ಲಿ 300 ಜನರು ಬರ್ಗಾಂವ್‌ನಿಂದ ಬಂದವರು ಎಂದು ಅಂದಾಜಿಸಲಾಗಿದೆ.
"ನಮ್ಮ ದೇಶದಲ್ಲಿ ಚುನಾವಣೆಗಳನ್ನು ಹಬ್ಬಗಳಾಗಿ ಆಚರಿಸಲಾಗುತ್ತದೆ ಎಂದು ನಾವು ಹೇಳಿಕೊಳ್ಳುತ್ತೇವೆ, ಆದರೆ ಭೋಸಿಂಧೂ ಮತ್ತು ಅವರ ತಾಯಿಯಂತಹ ವಲಸಿಗರಿಗೆ ತಮ್ಮ ಹತ್ತಿರದ ಮತ್ತು ಆತ್ಮೀಯರ ಅಂತಿಮ ವಿಧಿಗಳನ್ನು ಮಾಡಲು ಮನೆಗೆ ಮರಳಲು ಸಹ ಅನುಮತಿ ಸಿಗುವುದಿಲ್ಲ, ಇದಕ್ಕೆ ಏನೂ ಅರ್ಥವಿಲ್ಲ" ಎಂದು ತಿವಾರಿ ಹೇಳಿದರು.
ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳನ್ನು ಕಡಿಮೆ ಮಾಡಿದ ಕೋವಿಡ್-19 ಲಾಕ್ ಡೌನ್‌ಗಳು ಅವರನ್ನು ವಲಸೆ ಹೋಗುವಂತೆ ಮಾಡಿವೆ ಎನ್ನುವುದು ಭೋಸಿಂಧೂ ಅವರ ನೆರೆಯವರಾದ ಸುಬಾಶ್ ಬೆಹೆರಾ ಅವರ ನಂಬಿಕೆ. "ಇಲ್ಲಿ ಉದ್ಯೋಗಾವಕಾಶಗಳು ಲಭ್ಯವಿದ್ದಿದ್ದರೆ ಅವರು ತಮ್ಮ ಹೆಂಡತಿಯನ್ನು ಏಕಾಂಗಿಯಾಗಿ ಬಿಟ್ಟು ಇಟ್ಟಿಗೆ ಗೂಡುಗಳಿಗೆ ಹೋಗುತ್ತಿರಲಿಲ್ಲ" ಎಂದು ಅವರು ಹೇಳುತ್ತಾರೆ.
“ಎಲ್ಲಿ ಹೋದೆ ಮಗಳೇ? ಯಾಕೆ ನಮ್ಮನ್ನು ಬಿಟ್ಟು ಹೋದೆ?”
ತುಳಸಾರ ನೆನಪಿನಲ್ಲಿ ತೋಡಿಕೊಳ್ಳುತಿದ್ದ ದ್ರೌಪದಿಯವರ ಅಳಲು ಆ ಸಮುದಾಯದ ಪರಿಸ್ಥಿತಿಯ ಅನುರಣನದಂತಿತ್ತು.
*****
ಅಡಿ ಟಿಪ್ಪಣಿ : ತುಳಸಾ ಸಾವಿನ ಒಂದು ವಾರದ ನಂತರ , ಪತ್ರಕರ್ತ ಅಜಿತ್ ಪಾಂಡಾ ಕುಟುಂಬದ ಪರಿಸ್ಥಿತಿಯ ಬಗ್ಗೆ ಟ್ವೀಟ್ ಮಾಡಿ , ತಮ್ಮ ಟ್ವೀಟಿನಲ್ಲಿ ಒಡಿಶಾದ ಮುಖ್ಯಮಂತ್ರಿ , ನುವಾಪಾಡ ಜಿಲ್ಲಾಧಿಕಾರಿ ಮತ್ತು ರಾಮಗುಂಡಂನ ಪೊಲೀಸ್ ಆಯುಕ್ತರ ಅಧಿಕೃತ ಹ್ಯಾಂಡಲ್‌ಗಳನ್ನು ಟ್ಯಾಗ್ ಮಾಡಿದ್ದರು . ಪೊಲೀಸರು ಭೋಸಿಂಧೂ , ಅವರ ತಾಯಿ ಮತ್ತು ದೀಪಾಂಜಲಿ ಅವರನ್ನು 24 ಗಂಟೆಗಳಲ್ಲಿ ಪತ್ತೆ ಮಾಡಿದರು ಮತ್ತು ಇಟ್ಟಿಗೆ ಗೂಡು ಮಾಲೀಕರಿಗೆ ಅವರನ್ನು ಛತ್ತೀಸಗಢದ ರಾಯ್‌ಪುರಕ್ಕೆ ಕಳುಹಿಸುವಂತೆ ತಿಳಿಸಿದರು . ಉಳಿದ ಇಬ್ಬರ ಪರವಾಗಿ ಅವರು ಹಿಂತಿರುಗುವವರೆಗೆ ದೀಪಾಂಜಲಿ ಅಲ್ಲಿಯೇ ಇರಬೇಕೆಂದು ಇಟ್ಟಿಗೆ ಗೂಡಿನ ಮಾಲೀಕರು ಒತ್ತಾಯಿಸಿದರು , ಆದರೆ ಅಂತಿಮವಾಗಿ ಅವರು ಅಧಿಕೃತ ಒತ್ತಡಕ್ಕೆ ಮಣಿದು ಎಲ್ಲರನ್ನೂ ಹೋಗಲು ಬಿಟ್ಟರು .
ತುಳಸಾ ಅವರ ಕುಟುಂಬದ ಮೂವರು ಸದಸ್ಯರನ್ನು ರಾಯ್‌ಪುರದಿಂದ ಅವರನ್ನು ಕೆಲಸಕ್ಕೆ ಕಳುಹಿಸಿದ್ದ ಸರ್ದಾರ್ ಕರೆತಂದರು ಮತ್ತು ಅಲ್ಲಿಂದ ಚನಟಮಾಲ್‌ನಲ್ಲಿರುವ ಅವರ ಮನೆಯಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಒಡಿಶಾದ ಬಲಂಗಿರ್ ಜಿಲ್ಲೆಯ ಕಾಂತಾಬಾಂಜಿ ನಿಲ್ದಾಣಕ್ಕೆ ರೈಲಿನಲ್ಲಿ ಕರೆತಂದರು. ರೈಲ್ವೆ ನಿಲ್ದಾಣದಲ್ಲಿ ಮುಂಗಡವಾಗಿ ಪಾವತಿಸಿದ ಹಣವನ್ನು ಮರುಪಾವತಿಸಲು ಅದೇ ಇಟ್ಟಿಗೆ ಭಟ್ಟಿಗೆ ಕೆಲಸಕ್ಕೆ ಮರಳುವುದಾಗಿ ಒಪ್ಪಿಕೊಂಡಿರುವುದಾಗಿ ಖಾಲಿ ಕಾಗದದ ಹಾಳೆಗೆ ಸಹಿ ಹಾಕಿಸಿಕೊಳ್ಳಲಾಯಿತು ಎಂದು ದಸಮೂ ಹೇಳುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು