ರಕ್ತ ಹೊರತೆಗೆಯುವುದು ಸುಮಾರು 3,000 ವರ್ಷಗಳ ಕಾಲ ಚಾಲ್ತಿಯಲ್ಲಿದ್ದ ಸಾಮಾನ್ಯ ವೈದ್ಯಕೀಯ ಚಿಕಿತ್ಸೆಯಾಗಿದೆ.
ಈ ಕಲ್ಪನೆಯ ಮೂಲವು ಮೂಲತಃ ಹಿಪೊಕ್ರೆಟಿಸ್ನಿಂದ ಪ್ರಾರಂಭವಾಯಿತು ಮತ್ತು ಮಧ್ಯಯುಗದಲ್ಲಿ ಯುರೋಪಿನಲ್ಲಿ ಬಹಳ ಜನಪ್ರಿಯವಾಗಿತ್ತು: ದೇಹದ ನಾಲ್ಕು ಬಗೆಯ ದೋಷಗಳಿವೆ - ರಕ್ತ, ಕಫ, ಕಪ್ಪು ಪಿತ್ತರಸ ಮತ್ತು ಹಳದಿ ಪಿತ್ತರಸ - ಇವುಗಳ ಸಮತೋಲನವು ತೊಂದರೆಗೊಳಗಾದಾಗ, ರೋಗವು ಸಂಭವಿಸುತ್ತದೆ. ಹಿಪೊಕ್ರೆಟಿಸ್ನ ಸುಮಾರು 500 ವರ್ಷಗಳ ನಂತರ, ಇವುಗಳಲ್ಲಿ ಪ್ರಮುಖವಾದದ್ದು ರಕ್ತ ಎಂದು ಗ್ಯಾಲೆನ್ ಘೋಷಿಸಿದರು. ಈ ಆಲೋಚನೆ ಮತ್ತು ಶಸ್ತ್ರಚಿಕಿತ್ಸೆಯಲ್ಲಿನ ವಿವಿಧ ಪ್ರಯೋಗಗಳು, ಮತ್ತು ಕೆಲವೊಮ್ಮೆ ಮೂಢನಂಬಿಕೆ, ರೋಗಿಯ ಜೀವವನ್ನು ಉಳಿಸಲು ದೇಹದಿಂದ ರಕ್ತವನ್ನು ತೆಗೆದುಹಾಕುವ ಅಥವಾ ಕೆಟ್ಟ ರಕ್ತ ಬಸಿದು ತೆಗೆಯುವ ಅಭ್ಯಾಸಕ್ಕೆ ಕಾರಣವಾಯಿತು.
ಹಿರುಡೋ ಮೆಡಿಸಿನಾಲಿಸ್ ಲೀಚ್ ಸೇರಿದಂತೆ ರಕ್ತ ಹೊರತೆಗೆಯುವುದಕ್ಕಾಗಿ ಜಿಗಣೆಗಳನ್ನು ಬಳಸಲಾಗುತ್ತಿತ್ತು. ಈ ಚಿಕಿತ್ಸೆಗೆ 3,000 ವರ್ಷಗಳಲ್ಲಿ ಎಷ್ಟು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡರು, ಎಷ್ಟು ಮಾನವರು ಶವಗಳಾಗಿ ಬದಲಾದರು, ಅವರ ವೈದ್ಯರ ಔಷಧೀಯ-ಸೈದ್ಧಾಂತಿಕ ಭ್ರಮೆಗಳಿಂದ ರಕ್ತಸ್ರಾವಕ್ಕೊಳಗಾಗಿ ಸಾವನ್ನಪ್ಪಿದರು ಎನ್ನುವ ಲೆಕ್ಕ ನಮಗೆ ಸಿಗುವುದಿಲ್ಲ. ಇಂಗ್ಲೆಂಡ್ನ ರಾಜ ಚಾರ್ಲ್ಸ್ II ಅವರು ಸಾಯುವ ಮುನ್ನ ಅವರ ದೇಹದಿಂದ 24 ಔನ್ಸ್ ರಕ್ತವನ್ನು ತೆಗೆಯಲಾಗಿತ್ತು ಎನ್ನುವುದು ನಮಗೆ ತಿಳಿದಿದೆ. ಜಾರ್ಜ್ ವಾಷಿಂಗ್ಟನ್ನ ಮೂವರು ವೈದ್ಯರು ಆತನ ಗಂಟಲಿನ ಸೋಂಕನ್ನು ಗುಣಪಡಿಸಲು ಸಾಕಷ್ಟು ಪ್ರಮಾಣದ ರಕ್ತವನ್ನು (ಅವರ ಸ್ವಂತ ಕೋರಿಕೆಯ ಮೇರೆಗೆ) ಹರಿಸಿದರು - ಇದರ ಪರಿಣಾಮವಾಗಿ ಆತ ಶೀಘ್ರದಲ್ಲೇ ನಿಧನ ಹೊಂದಿದನು.
ಕೋವಿಡ್ -19 ನಮ್ಮೆದುರು ನವ ಉದಾರೀಕರಣದ ಅದ್ಭುತವೆನ್ನಿಸುವ, ಸಂಪೂರ್ಣ ಶವಪರೀಕ್ಷೆಯ ವರದಿಯನ್ನು ನಮ್ಮೆದುರಿಗಿಟ್ಟಿತು, ಅದು ವಾಸ್ತವದಲ್ಲಿ ಹೇಳಿರುವುದು ಬಂಡವಾಳಶಾಹಿಯ ಬಗ್ಗೆ. ಈಗ ಬಂಡವಾಳಶಾಹಿಯ ದೇಹವು ಮೇಜಿನ ಮೇಲೆ, ಬೆರಗುಗೊಳಿಸುವ ಬೆಳಕಿನಡಿ ಮಲಗಿದೆ, ಅದರ ಪ್ರತಿಯೊಂದು ರಕ್ತನಾಳ, ಅಪಧಮನಿ, ಅಂಗ ಮತ್ತು ಮೂಳೆ ನಮ್ಮ ಮುಖವನ್ನು ದಿಟ್ಟಿಸುತ್ತಿದೆ. ಖಾಸಗೀಕರಣ, ಸಾಂಸ್ಥಿಕ ಜಾಗತಿಕತೆ, ಸಂಪತ್ತಿನ ಅತಿಯಾದ ಸಂಗ್ರಹಣೆ, ಇತ್ತೀಚಿನ ಸ್ಮರಣೆಯಲ್ಲಿ ಎಂದಿಗೂ ಕಾಣದ ಅಸಮಾನತೆಯ ಮಟ್ಟವನ್ನು ನೀವು ಅದರಲ್ಲಿ ನೋಡಬಹುದು. ಸಾಮಾಜಿಕ ಮತ್ತು ಆರ್ಥಿಕ ದುಷ್ಕೃತ್ಯಗಳಿಗೆ ರಕ್ತ ಬಸಿಯುವ ಸಿದ್ಧಾಂತ, ಸಮಾಜಗಳು ತಮ್ಮ ಸುಸಂಸ್ಕೃತ ಮತ್ತು ಘನತೆಯ ಮಾನವ ಅಸ್ತಿತ್ವವನ್ನು ದುಡಿಯುವ ಜನರಿಂದ ಕಸಿದುಕೊಳ್ಳುತ್ತಿರುವುದು ಈ ಶವಪರೀಕ್ಷೆಯಲ್ಲಿ ಎದ್ದು ಕಂಡಿದೆ.
3,000 ವರ್ಷಗಳಷ್ಟು ಹಳೆಯದಾದ ಈ ಚಿಕಿತ್ಸೆಯು ಯುರೋಪಿನಲ್ಲಿ 7ನೇ ಶತಮಾನದಲ್ಲಿ ಉತ್ತುಂಗಕ್ಕೇರಿತು. 7 ಮತ್ತು 8ನೇ ಶತಮಾನಗಳ ಕೊನೆಯಲ್ಲಿ ಇದರ ಬಳಕೆ ಕ್ಷೀಣಿಸಲು ಪ್ರಾರಂಭಿಸಿತು - ಆದರೆ ಇದರ ತತ್ವಗಳು ಮತ್ತು ಅಭ್ಯಾಸಗಳು ಈಗಲೂ ಅರ್ಥಶಾಸ್ತ್ರ, ತತ್ವಶಾಸ್ತ್ರ, ವ್ಯಾಪಾರ ಮತ್ತು ಸಮಾಜದಲ್ಲಿ ಪ್ರಾಬಲ್ಯ ಹೊಂದಿವೆ.


















