ರಮೇಶ್ ಕುಮಾರ್ ಸಿಂಘುವಿಗೆ ಸೈಕಲ್ ಮೂಲಕ ಬಂದಿದ್ದಾರೆ. ಹೋಶಿಯಾರ್‌ಪುರದಿಂದ ಹರಿಯಾಣ - ದೆಹಲಿ ಗಡಿಯಲ್ಲಿರುವ ಪ್ರತಿಭಟನಾ ಸ್ಥಳವನ್ನು ತಲುಪಲು ಅವರಿಗೆ 22 ಗಂಟೆಗಳ ಕಾಲ ಬೇಕಾಯಿತು. ಇದಕ್ಕಾಗಿ ಅವರು ಒಟ್ಟು 400 ಕಿಲೋ ಮೀಟರ್ ಸೈಕಲ್ ತುಳಿದಿದ್ದರು. 61 ವರ್ಷದ ನಿವೃತ್ತ ಪೋಲಿಸ್ ಅಧಿಕಾರಿಯಾಗಿರುವ ರಮೇಶ್ ಅವರು ಸೈಕಲ್ ತುಳಿದು ಬರುತ್ತಿದ್ದರೆ ಅವರ ಸಹೋದರಿ ಮತ್ತು ಸೊಸೆ, ಅವರನ್ನು ಕಾರಿನಲ್ಲಿ ಹಿಂಬಾಲಿಸುತ್ತಿದ್ದರು.
“ನಾನು ಈ ರೈತ ಹೋರಾಟದಲ್ಲಿ ಭಾಗವಹಿಸಬೇಕೆಂದು ಬಹಳ ದಿನಗಳಿಂದ ಎಂದುಕೊಳ್ಳುತ್ತಿದ್ದೆ,” ಎಂದು ಅವರು ಹೇಳುತ್ತಾರೆ. ಹೀಗಾಗಿ ಅವರು ನಾಳೆ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸುವ ಸಲುವಾಗಿ ಬಂದು ಸೇರಿದ್ದಾರೆ
"ಕಾನೂನುಗಳನ್ನು ರದ್ದುಗೊಳಿಸಿದರೆ ಅದು ಜನರಿಂದ ಅಗೌರವಕ್ಕೆ ಒಳಗಾಗುತ್ತದೆ ಎಂದು ಸರ್ಕಾರದ ಅನಿಸಿಕೆಯಿರಬಹುದು" ಎಂದು ಅವರು ಹೇಳುತ್ತಾರೆ. "ಆದರದು ನಿಜವಲ್ಲ, ಬದಲಿಗೆ ಸರ್ಕಾರವು ಜನರ ಗೌರವವನ್ನು ಗಳಿಸುತ್ತದೆ."
ರೈತರು ವಿರೋಧಿಸುತ್ತಿರುವ ಆ ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.
ಈ ನಡುವೆ, ಸಿಂಘು ಗಡಿಯಲ್ಲಿರುವ ಟ್ರಾಕ್ಟರುಗಳನ್ನು ನಾಳೆ ಮೆರವಣಿಗೆಗೆ ಸಿದ್ಧಪಡಿಸಲು ಹೂಮಾಲೆ, ಧ್ವಜಗಳು ಮತ್ತು ವರ್ಣರಂಜಿತ ಕಾಗದಗಳಿಂದ ಅಲಂಕರಿಸಲಾಗಿದೆ. ಅಲಂಕೃತ ಟ್ರಾಕ್ಟರುಗಳನ್ನು ಒಂದು ಸಾಲಿನಲ್ಲಿ ನಿಲ್ಲಿಸಲಾಗಿದೆ, ಇದರಿಂದ ಮೆರವಣಿಗೆ ನಡೆಯುತ್ತಿರುವಾಗ ಚಲಿಸಲು ಸುಲಭವಾಗುತ್ತದೆ.ಅನುವಾದ: ಶಂಕರ ಎನ್. ಕೆಂಚನೂರು