ದಾದರ್ ನ ಜನನಿಬಿಡ ಬ್ಯುಸಿನೆಸ್ ಸ್ಟ್ರೀಟ್ ನಲ್ಲಿ ಪ್ರತೀ ಮುಂಜಾನೆಯೂ ಬಂದು ಕೆಂಪಗಿನ ಕಾರ್ಪೆಟ್ ಒಂದನ್ನು ಹಾಸುತ್ತಾನೆ ಶಿವಮ್ ಸಿಂಗ್. ಹಾಗೆಯೇ ಐದು ಪ್ಲಾಸ್ಟಿಕ್ ಸ್ಟೂಲ್ ಗಳನ್ನು ಈ ನಾಲ್ಕಡಿ ಉದ್ದ-ಐದಡಿ ಅಗಲದ ಕಾರ್ಪೆಟ್ಟಿನ ಮೇಲೆ ಆತ ಮಟ್ಟಸವಾಗಿ ಇಡುತ್ತಾನೆ. ನಂತರ ಲಕ್ಷ್ಮೀದೇವಿಯ ಫ್ರೇಮ್ ಹಾಕಿದ ಚಿತ್ರವನ್ನು ಸ್ಟೂಲ್ ಒಂದರ ಕೆಳಗಿರಿಸಿ ಧೂಪದ ಕಡ್ಡಿಯೊಂದನ್ನು ಹಚ್ಚುತ್ತಾನೆ.
ಈತ ತನ್ನ ಪುಟ್ಟ ಅಂಗಡಿಯನ್ನು ಆಲದ ಮರವೊಂದರ ಕೆಳಗೆ ಸಜ್ಜುಗೊಳಿಸಿದ್ದಾನೆ. ಈ ಮರದ ಕೊಂಬೆಯೊಂದರಿಂದ ಕೆಳಗೆ ಜೋತಾಡುತ್ತಿರುವ ಬ್ಯಾನರ್ ನಲ್ಲಿ `ಶಿವಮ್ ಮೆಹಂದಿ ಆರ್ಟಿಸ್ಟ್' ಎಂದು ಬರೆದಿದೆ. ಈ ಬ್ಯಾನರ್ ಮತ್ತು ಸ್ಟೂಲಿನ ಮೇಲೆ ಇರಿಸಲಾಗಿರುವ ಫೋಟೋ ಆಲ್ಬಮ್ ಗಳಲ್ಲಿ ಮೆಹಂದಿಯಿಂದ ಅಲಂಕೃತವಾದ ಸುಂದರ ಕೈ ಮತ್ತು ಕಾಲುಗಳ ಚಿತ್ರಗಳಿವೆ. ಹೀಗೆ ಶಿವಮ್ ದಿನದ ತನ್ನ ಮೊದಲ ಗ್ರಾಹಕನಿಗಾಗಿ ಕಾಯುತ್ತಿದ್ದಾನೆ. ಅವರ ಆಯ್ಕೆಗಾಗಿ ಹೂವು, ಪೈಸ್ಲೇ, ಸುರುಳಿ... ಹೀಗೆ ಹಲವು ವಿನ್ಯಾಸಗಳು ತಯಾರಾಗಿವೆ. ಕೆಲವೊಮ್ಮೆ ಗ್ರಾಹಕನ ಕೈಗಳನ್ನು ಕಂಡು ಸ್ಫೂರ್ತಿಗೊಂಡು ತನ್ನದೇ ಹೊಸ ವಿನ್ಯಾಸಗಳನ್ನು ಅವರಿಗಾಗಿ ಮಾಡಿಕೊಡುತ್ತಾನೆ ಶಿವಮ್. ``ಯಾರಾದರೂ ಬಂದೇ ಬರುತ್ತಾರೆ...'', ತನ್ನ ದಿನವು ಚೆನ್ನಾಗಿಯೇ ಆರಂಭವಾಗಲಿದೆಯೆಂಬ ಆಶಾಭಾವದೊಂದಿಗೆ ಹೇಳುತ್ತಿದ್ದಾನೆ ಶಿವಮ್.
ಸೆಂಟ್ರಲ್ ಮುಂಬೈಯಲ್ಲಿ ದಾದರ್ ಸಬ್ ಅರ್ಬನ್ ರೈಲು ನಿಲ್ದಾಣದಿಂದ ಕೊಂಚವೇ ದೂರ, ಅಂದರೆ ಸುಮಾರು 200 ಮೀಟರ್ ದೂರದಲ್ಲಿರುವ ರಾನಡೆ ರಸ್ತೆಯಲ್ಲಿ ಶಿವ ನಾಯ್ಕ್ ಕೂಡ ತನ್ನ ಪುಟ್ಟ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾನೆ. ಅವನೂ ಕೂಡ ತನ್ನಲ್ಲಿರುವ ಕೆಲ ಪ್ಲಾಸ್ಟಿಕ್ ಲೋಟಗಳಲ್ಲಿ ಹೆನ್ನಾ ಪೇಸ್ಟ್ ಅನ್ನು ತುಂಬಿ ತನ್ನ ದಿನದ ಆರಂಭಕ್ಕಾಗಿ ಸಜ್ಜಾಗುತ್ತಿದ್ದಾನೆ. ಇವರಿಬ್ಬರೂ ತಮ್ಮ ತಮ್ಮ ಅಂಗಡಿಗಳನ್ನು ಹಾಕಿಕೊಂಡಿರುವ ರಸ್ತೆಯಲ್ಲಂತೂ ಜನದಟ್ಟಣೆ, ಚಟುವಟಿಕೆಗಳು ಹೆಚ್ಚಾಗತೊಡಗಿವೆ. ಇವರಿಬ್ಬರಲ್ಲದೆ ಸೋಲಾಪುರದ ಹೂವಿನ ವ್ಯಾಪಾರಿ, ಚಿನ್ನದ ಕೆಲಸ ಮಾಡುವ ಲಕ್ನೋದವನು, ಕಲ್ಕತ್ತಾದಿಂದ ಬಂದಿರುವ ಚಪ್ಪಲಿ ಹೊಲಿಯುವವನು, ಐಸ್ ಕ್ರೀಂ ಮಾರುತ್ತಿರುವ ರಾಜಸ್ಥಾನದವನು... ಹೀಗೆ ಎಲ್ಲೆಲ್ಲಿಂದಲೋ ವಲಸೆ ಬಂದಿರುವ ಬಹಳಷ್ಟು ಜನರೂ ಕೂಡ ಈ ಬೀದಿಯಲ್ಲಿ ವಿವಿಧ ವಸ್ತುಗಳನ್ನು ಮತ್ತು ಸೇವೆಗಳನ್ನು ಮಾರಾಟ ಮಾಡುತ್ತಾ ಬದುಕುತ್ತಿದ್ದಾರೆ.





