ಯಾರನ್ನು ಬೇಕಿದ್ದರೂ ಕಾಯಿಸಬಹುದು, ಆದರೆ ಕಾಡಿನ ರಾಜನನ್ನು ಕಾಯಿಸುವಂತಿಲ್ಲ.

ಸಿಂಹಗಳು ಗುಜರಾತಿನಿಂದ ಬರಲಿದ್ದವು. ಮತ್ತು ಉಳಿದ ಎಲ್ಲರೂ ಸಿಂಹಗಳಿಗೆ ಅನುಕೂಲ ಮಾಡಿಕೊಡಬೇಕಿತ್ತು. ಅವುಗಳ ಬರವಿಗೆ ತೊಂದರೆಯಾಗದಂತೆ.

ಮಧ್ಯಪ್ರದೇಶದ ಕುನೋ ನ್ಯಾಷನಲ್‌ ಪಾರ್ಕಿನ ಒಳಗಿನ ಹಳ್ಳಿಗಳ ಕತೆಯೇನು ಎನ್ನುವ ಪ್ರಶ್ನೆಯ ನಡುವೆಯೂ, ಇದೆಲ್ಲವೂ ಒಳ್ಳೆಯ ಉದ್ದೇಶದಂತೆಯೇ ಕಾಣುತ್ತಿತ್ತು.

“ಸಿಂಹಗಳು ಬಂದ ನಂತರ ಈ ಪ್ರದೇಶವು ಹೆಸರುವಾಸಿಯಾಗುತ್ತದೆ. ನಾವು ಗೈಡ್‌ಗಳಾಗಿ ಉದ್ಯೋಗ ಪಡೆಯಲಿದ್ದೇವೆ. ಅಂಗಡಿ, ಹೋಟೆಲ್ಲುಗಳನ್ನು ಕೂಡಾ ನಡೆಸಬಹುದು. ಈ ಮೂಲಕ ನಮ್ಮ ಕುಟುಂಬಗಳು ಅಭಿವೃದ್ಧಿ ಹೊಂದಲಿವೆ.” ಇದು ಈಗ 70ರ ಪ್ರಾಯದವರಾಗಿರುವ ರಘುಲಾಲ್‌ ಜಾಟವ್ ಅವರ ಮಾತು. ಅವರು ಕುನೋ ನ್ಯಾಷನಲ್‌ ಪಾರ್ಕಿನ ಅಗರ ಎನ್ನುವ ಊರಿನಲ್ಲಿ ನಮ್ಮೊಡನೆ ಮಾತನಾಡುತ್ತಿದ್ದರು.

"ನಾವು ಉತ್ತಮ ಗುಣಮಟ್ಟದ ನೀರಾವರಿ ಭೂಮಿ, ಸರ್ವರುತು ರಸ್ತೆಗಳು, ಇಡೀ ಗ್ರಾಮಕ್ಕೆ ವಿದ್ಯುತ್ ಮತ್ತು ಎಲ್ಲಾ ನಾಗರಿಕ ಸೌಲಭ್ಯಗಳನ್ನು ಪಡೆಯುತ್ತೇವೆ" ಎಂದು ರಘುಲಾಲ್ ಹೇಳುತ್ತಾರೆ.

"ಸರ್ಕಾರ್ (ಸರ್ಕಾರ) ನಮಗೆ ಈ ರೀತಿಯಾಗಿ ಭರವಸೆ ನೀಡಿತ್ತು" ಎಂದು ಅವರು ಹೇಳುತ್ತಾರೆ.

ಮತ್ತು ಈ ಹಿನ್ನೆಲೆಯಲ್ಲಿ, ಪೈರಾ ಮತ್ತು 24 ಹಳ್ಳಿಗಳ ಸುಮಾರು 1,600 ಕುಟುಂಬಗಳು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿದ್ದ ತಮ್ಮ ಮನೆಗಳನ್ನು ಖಾಲಿ ಮಾಡಿದವು. ಅವರು ಮುಖ್ಯವಾಗಿ ಸಹರಿಯಾ ಆದಿವಾಸಿಗಳು ಮತ್ತು ದಲಿತರು ಮತ್ತು ಬಡ ಒಬಿಸಿ ಸಮುದಾಯಗಳಿಗೆ ಸೇರಿದವರು. ಅವರ ಸ್ಥಳಾಂತರದ ಪ್ರಯಾಣವು ಆತುರದಿಂದ ಕೂಡಿತ್ತು.

ಟ್ರಾಕ್ಟರುಗಳನ್ನು ತರಲಾಯಿತು, ಮತ್ತು ಅರಣ್ಯವಾಸಿಗಳು ತಾವು ವಾಸವಿದ್ದ ಮನೆಗಳನ್ನು ತರಾತುರಿಯಲ್ಲಿ ಬಿಟ್ಟುಹೋಗಲು ಅನೇಕ ತಲೆಮಾರುಗಳ ಆಸ್ತಿಪಾಸ್ತಿಗಳನ್ನು ಒಂದೆಡೆ ರಾಶಿ ಹಾಕಿದರು. ಪ್ರಾಥಮಿಕ ಶಾಲೆಗಳು, ಕೈಪಂಪುಗಳು, ಬಾವಿಗಳು ಮತ್ತು ತಲೆಮಾರುಗಳಿಂದ ಉಳುಮೆ ಮಾಡಿದ ಭೂಮಿಯನ್ನು ಸಹ ತೊರೆದರು. ದನಕರುಗಳನ್ನು ಸಹ ಬಿಟ್ಟುಹೋಗಬೇಕಾಯಿತು. ಏಕೆಂದರೆ ಕಾಡಿನ ಸಾಕಷ್ಟು ಮೇವಿನ ಸಂಪನ್ಮೂಲಗಳಿಲ್ಲದೆ ಅವು ಆಹಾರಕ್ಕೆ ಹೊರೆಯಾಗುತ್ತವೆ.

ಇದೆಲ್ಲ ಆಗಿ ಇಪ್ಪತ್ತಮೂರು ವರ್ಷಗಳು ಕಳೆದಿವೆ. ಅವರು ಈಗಲೂ ಸಿಂಹಗಳ ಬರವಿಗಾಗಿ ಕಾಯುತ್ತಿದ್ದಾರೆ.

Raghulal Jatav was among those displaced from Paira village in Kuno National Park in 1999.
PHOTO • Priti David
Raghulal (seated on the charpoy), with his son Sultan, and neighbours, in the new hamlet of Paira Jatav set up on the outskirts of Agara village
PHOTO • Priti David

ಎಡ : 1999 ರಲ್ಲಿ ಕುನೋ ರಾಷ್ಟ್ರೀಯ ಉದ್ಯಾನವನದ ಪೈರಾ ಗ್ರಾಮದಿಂದ ಸ್ಥಳಾಂತರಗೊಂಡವರಲ್ಲಿ ರಘುಲಾಲ್ ಜಾ ವ್ ಕೂಡ ಒಬ್ಬರು . ಬಲ : ರಘುಲಾಲ್ ( ಚಾರ್ಪಾಯ್ ಮೇಲೆ ಕುಳಿತವ ರು ), ತನ್ನ ಮಗ ಸುಲ್ತಾನ ಮತ್ತು ನೆರೆಹೊರೆಯವರೊಂದಿಗೆ ಅಗರ ಎನ್ನುವ ಹಳ್ಳಿಯ ಹೊರವಲಯದಲ್ಲಿ ಸ್ಥಾಪಿಸಲಾದ ಹೊಸ ಕುಗ್ರಾಮವಾದ ಪೀರಾ ಜಾ ಟವ್ ನಲ್ಲಿ

"ಸರ್ಕಾರ ನಮಗೆ ಸುಳ್ಳು ಹೇಳಿತು" ಎಂದು ರಘುಲಾಲ್ ತನ್ನ ಮಗನ ಮನೆಯ ಹೊರಗೆ ಚಾರ್ಪಾಯ್ ಮೇಲೆ ಕುಳಿತು ನಮ್ಮೊಡನೆ ಮಾತನಾಡುತ್ತಾ ಹೇಳಿದರು. ಅವರಿಗೆ ಈಗ ಸಿಟ್ಟೂ ಬರುವುದಿಲ್ಲ. ಸರ್ಕಾರವು ತಾನು ಇತ್ತ ಭರವಸೆಯನ್ನು ಈಡೇರಿಸಬಹುದೆಂದು ಕಾದು ದಣಿದಿದ್ದಾರೆ ಅವರು. ರಘುಲಾಲ್ ಅವರಂತಹ ಸಾವಿರಾರು ಬಡವರು, ಸಮಾಜದ ಅಂಚಿನಲ್ಲಿರುವ ಜನರು - ಸ್ವತಃ ದಲಿತರಾಗಿದ್ದರು - ತಮ್ಮ ಭೂಮಿ, ಮನೆಗಳು ಮತ್ತು ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ.

ಆದರೆ ರಘುಲಾಲರ ನಷ್ಟವು ಕುನೋ ರಾಷ್ಟ್ರೀಯ ಉದ್ಯಾನದ ಲಾಭವಾಗಿರಲಿಲ್ಲ. ಇಲ್ಲಿ ಸಿಂಹಪಾಲು ಯಾರಿಗೂ ಸಿಕ್ಕಿಲ್ಲ. ಸಿಂಹಗಳಿಗೂ ಸಿಗಲಿಲ್ಲ. ಯಾಕೆಂದರೆ ಅವು ಅಲ್ಲಿಗೆ ಬರಲೇ ಇಲ್ಲ.

*****

ಸಿಂಹಗಳು ಒಂದು ಕಾಲದಲ್ಲಿ ಮಧ್ಯ, ಉತ್ತರ ಮತ್ತು ಪಶ್ಚಿಮ ಭಾರತದ ಕಾಡುಗಳಲ್ಲಿ ಅಲೆದಾಡುತ್ತಿದ್ದವು. ಆದಾಗ್ಯೂ, ಇಂದು, ಏಷ್ಯಾದ ಸಿಂಹವನ್ನು ( ಪ್ಯಾಂಥೆರಾ ಲಿಯೋ ಲಿಯೋ ) ಗಿರ್ ಪ್ರದೇಶದ ಕಾಡುಗಳಲ್ಲಿ ಮಾತ್ರ ಕಾಣಬಹುದು. ಮತ್ತು ಸೌರಾಷ್ಟ್ರ ಪರ್ಯಾಯದ್ವೀಪದಲ್ಲಿ 30,000 ಚದರ ಕಿಲೋಮೀಟರ್ ವ್ಯಾಪ್ತಿಯ ಸುತ್ತಲಿನ ಪ್ರದೇಶಗಳಲ್ಲಿ. ಆ ಪ್ರದೇಶದ ಆರು ಪ್ರತಿಶತಕ್ಕಿಂತ ಕಡಿಮೆ - 1,883 ಚದರ ಕಿ.ಮೀ. ಅವುಗಳ ಕೊನೆಯ ಸಂರಕ್ಷಿತ ಮನೆಯಾಗಿದೆ. ಇದು ವನ್ಯಜೀವಿ ಜೀವಶಾಸ್ತ್ರಜ್ಞರು ಮತ್ತು ಸಂರಕ್ಷಕರನ್ನು ತಣ್ಣನೆಯ ವಾತಾವರಣದಲ್ಲೂ ಬೆವರುವಂತೆ ಮಾಡುವ ಒಂದು ಸತ್ಯ.

ಸೌರಾಷ್ಟ್ರ ಪರ್ಯಾಯ ದ್ವೀಪದಲ್ಲಿ ೬೭೪ ಏಷ್ಯಾಟಿಕ್ ಸಿಂಹಗಳು ದಾಖಲಾಗಿವೆ. ಮತ್ತು ವಿಶ್ವದ ಪ್ರಮುಖ ಸಂರಕ್ಷಣಾ ಸಂಸ್ಥೆ ಐಯುಸಿಎನ್, ಅವುಗಳನ್ನು ಅಳಿವಿನಂಚಿನಲ್ಲಿರುವ ಪ್ರಭೇದ ಎಂದು ಪಟ್ಟಿ ಮಾಡಿದೆ. ವನ್ಯಜೀವಿ ಸಂಶೋಧಕ ಡಾ. ಫಯಾಜ್ ಎ. ಖುದ್ಸರ್ ಅವರು ದಶಕಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ, ಅವರು ಸ್ಪಷ್ಟವಾದ ಮತ್ತು ಪ್ರಸ್ತುತ ಅಪಾಯದ ಕುರಿತು ಬೊಟ್ಟು ಮಾಡುತ್ತಾರೆ. "ಸಂರಕ್ಷಣಾ ಜೀವಶಾಸ್ತ್ರವು ಒಂದು ಸಣ್ಣ ಜೀವಿ ಗುಂಪನ್ನು ಒಂದೇ ಸ್ಥಳಕ್ಕೆ ಸೀಮಿತಗೊಳಿಸಿದರೆ, ಅದು ವಿವಿಧ ಅಳಿವಿನ ಬೆದರಿಕೆಗಳನ್ನು ಎದುರಿಸುತ್ತದೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ" ಎಂದು ಅವರು ಹೇಳುತ್ತಾರೆ.

ಡಾ. ಖುದ್ಸರ್ ಅವರು ಈ ದೈತ್ಯ ಬೆಕ್ಕುಗಳು ಎದುರಿಸುತ್ತಿರುವ ಅನೇಕ ಬೆದರಿಕೆಗಳನ್ನು ಉಲ್ಲೇಖಿಸುತ್ತಿದ್ದಾರೆ. ಇವುಗಳಲ್ಲಿ ಕ್ಯಾನಿನ್ ಡಿಸ್ಟೆಂಪರ್ ವೈರಸ್, ಕಾಡ್ಗಿಚ್ಚು, ಹವಾಮಾನ ಬದಲಾವಣೆ, ಸ್ಥಳೀಯ ದಂಗೆ ಮತ್ತು ಹೆಚ್ಚಿನವು ಸೇರಿವೆ. ಈರೀತಿಯ ಅಪಾಯಗಳು ಈ ದುರ್ಬಲ ಪ್ರಾಣಿಸಂಖ್ಯೆಯನ್ನು ಕ್ಷಿಪ್ರಗತಿಯಲ್ಲಿ ನಿರ್ನಾಮ ಮಾಡಬಲ್ಲವು ಎಂದು ಅವರು ಹೇಳುತ್ತಾರೆ. ಸಿಂಹದ ಚಿತ್ರಗಳು ನಮ್ಮ ಅಧಿಕೃತ ಸರಕಾರದ ಲಾಂಛನಗಳು ಮತ್ತು ಮುದ್ರೆಗಳಲ್ಲಿ ಪ್ರಾಬಲ್ಯ ಸಾಧಿಸಿರುವ ಇವರುಗಳು ನಮ್ಮ ನೆಲದಿಂದ ಇಲ್ಲವಾಗುತ್ತಿರುವುದು ಈ ಕಾಲದ ದುರಂತ.

ಸಿಂಹಗಳಿಗೆ ಹೆಚ್ಚುವರಿ ನೆಲೆಯಾಗಿ ಕುನೋ ಕಾಡಿಗೆ ಯಾವುದೇ ಪರ್ಯಾಯವಿಲ್ಲ ಎಂದು ಖುದ್ಸರ್ ಒತ್ತಿ ಹೇಳುತ್ತಾರೆ. ಅವರು ಹೇಳುವಂತೆ: "ಆನುವಂಶಿಕ ಶಕ್ತಿಯನ್ನು ಉತ್ತೇಜಿಸಲು ತಮ್ಮ ಐತಿಹಾಸಿಕ ಭೌಗೋಳಿಕ ಶ್ರೇಣಿಗಳಾದ್ಯಂತ ಕೆಲವು ಗುಂಪುಗಳನ್ನು [ಸಿಂಹಗಳ] ಪುನಃ ಪರಿಚಯಿಸುವುದು ಅತ್ಯಗತ್ಯ."

A police outpost at Kuno has images of lions although no lions exist here.
PHOTO • Priti David
Map of Kuno at the forest office, marked with resettlement sites for the displaced
PHOTO • Priti David

ಎಡ : ಕು ನೋ ದಲ್ಲಿರುವ ಪೊಲೀಸ್ ಹೊರಠಾಣೆಯು ಸಿಂಹಗಳ ಚಿತ್ರಗಳನ್ನು ಹೊಂದಿದೆ , ಆದರೆ ಇಲ್ಲಿ ಯಾವುದೇ ಸಿಂಹಗಳಿಲ್ಲ . ಬಲ : ಸ್ಥಳಾಂತರಗೊಂಡವರಿಗೆ ಪುನರ್ವಸತಿ ಸ್ಥಳಗಳೊಂದಿಗೆ ಗುರುತಿಸಲಾದ ಅರಣ್ಯ ಕಚೇರಿಯಲ್ಲಿ ಕು ನೋ ನಕ್ಷೆ

ಈ ಯೋಚನೆಯು ಬಹಳ ಹಿಂದೆಯೇ ಬಂದಿಎ, 1993-95ರ ಸುಮಾರಿಗೆ ಒಂದು ಸ್ಥಳಾಂತರ ಯೋಜನೆಯನ್ನು ರೂಪಿಸಲಾಯಿತು. ಆ ಯೋಜನೆಯ ಅಡಿಯಲ್ಲಿ, ಕೆಲವು ಸಿಂಹಗಳನ್ನು ಗಿರ್ ಕಾಡಿನಿಂದ 1,000 ಕಿ.ಮೀ ದೂರದ ಕುನೋಗೆ ಸ್ಥಳಾಂತರಿಸಬೇಕಿತ್ತು. ವೈಲ್ಡ್ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (ಡಬ್ಲ್ಯುಐಐ) ಡೀನ್ ಡಾ. ಯಾದವೇಂದ್ರ ಝಾಲಾ ಹೇಳುವಂತೆ, ಒಂಬತ್ತು ಸಂಭಾವ್ಯ ಸ್ಥಳಗಳ ಪಟ್ಟಿಯಲ್ಲಿ, ಕುನೋ ಈ ಯೋಜನೆಗೆ ಹೆಚ್ಚು ಸೂಕ್ತವಾಗಿದೆ ಎಂದು ಕಂಡುಬಂದಿದೆ.

ಡಬ್ಲ್ಯುಐಐ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (ಎಂಒಇಎಫ್‌ಸಿಸಿ) ಮತ್ತು ರಾಜ್ಯ ವನ್ಯಜೀವಿ ಇಲಾಖೆಗಳ ತಾಂತ್ರಿಕ ಅಂಗವಾಗಿದೆ. ಸರಿಸ್ಕಾ, ಪನ್ನಾ, ಬಾಂಧವಗಡದ ಗೌರ್ ಮತ್ತು ಸತ್ಪುರದ ಬಾರಾಸಿಂಘಾಗಳಲ್ಲಿ ಹುಲಿಗಳನ್ನು ಪುನಃ ಪರಿಚಯಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ.

"ಕುನೋ ಅರಣ್ಯದ ಒಟ್ಟಾರೆ ಗಾತ್ರ [ಸುಮಾರು 6,800 ಚದರ ಕಿ.ಮೀ.ನಷ್ಟು ಅಂದಾಜು ಆವಾಸಸ್ಥಾನ], ತುಲನಾತ್ಮಕವಾಗಿ ಕಡಿಮೆ ಮಟ್ಟದ ಮಾನವ ತೊಂದರೆ, ಅದರ ಮೂಲಕ ಹಾದುಹೋಗುವ ಯಾವುದೇ ಹೆದ್ದಾರಿಗಳು ಇಲ್ಲದಿರುವುದು, ಇವೆಲ್ಲವೂ ಅದನ್ನು ಉತ್ತಮ ಸ್ಥಳವನ್ನಾಗಿ ಮಾಡಿದವು" ಎಂದು ಸಂರಕ್ಷಣಾ ವಿಜ್ಞಾನಿ ಡಾ. ರವಿ ಚೆಲ್ಲಂ ಹೇಳುತ್ತಾರೆ. ಅವರು ನಾಲ್ಕು ದಶಕಗಳಿಂದ ಈ ಪ್ರಬಲ ಸಸ್ತನಿಗಳ ಚಲನವಲನದ ಪಟ್ಟಿ ಮಾಡುತ್ತಿದ್ದಾರೆ.

ಇತರ ಸಕಾರಾತ್ಮಕ ಅಂಶಗಳು: "ಹುಲ್ಲುಗಾವಲುಗಳು, ಬಿದಿರು, ತೇವಾಂಶದಿಂದ ಕೂಡಿದ ತೇಪೆಗಳು - ಉತ್ತಮ ಗುಣಮಟ್ಟ ಮತ್ತು ಆವಾಸಸ್ಥಾನಗಳ ವೈವಿಧ್ಯತೆ. ತದನಂತರ ಚಂಬಲ್‌ಗೆ ಸರ್ವರುತು ಬೃಹತ್ ಉಪನದಿಗಳಿವೆ ಮತ್ತು ವಿವಿಧ ಜಾತಿಯ ಬೇಟೆಗಳು ಲಭ್ಯವಿವೆ. ಇವೆಲ್ಲವೂ ಈ ಅಭಯಾರಣ್ಯವನ್ನು ಸಿಂಹಗಳಿಗೆ ಆತಿಥ್ಯ ವಹಿಸಲು ಸಿದ್ಧಗೊಳಿಸಿದವು" ಎಂದು ಅವರು ಹೇಳುತ್ತಾರೆ.

ಆದಾಗ್ಯೂ, ಸಾವಿರಾರು ಜನರನ್ನು ಮೊದಲು ಕುನೋ ಅಭಯಾರಣ್ಯದಿಂದ ಸ್ಥಳಾಂತರಿಸಬೇಕಾಗುತ್ತದೆ. ಅವರು ಅವಲಂಬಿಸಿದ್ದ ಕಾಡುಗಳಿಂದ ಅವರನ್ನು ಸ್ಥಳಾಂತರಿಸುವುದು ಮತ್ತು ಮೈಲಿಗಳಷ್ಟು ದೂರಕ್ಕೆ ಸ್ಥಳಾಂತರಿಸುವುದು ಕೆಲವೇ ವರ್ಷಗಳಲ್ಲಿ ಮಾಡಲಾಯಿತು.

ಇದೆಲ್ಲವೂ ಆಗಿ ಇಪ್ಪತ್ತಮೂರು ವರ್ಷಗಳ ನಂತರವೂ ಸಿಂಹಗಳು ಇಲ್ಲಿ ಕಾಣಿಸಿಕೊಂಡಿಲ್ಲ.

*****

An abandoned temple in the old Paira village at Kuno National Park
PHOTO • Priti David
Sultan Jatav's old school in Paira, deserted 23 years ago
PHOTO • Priti David

ಎಡ : ಕು ನೋ ರಾಷ್ಟ್ರೀಯ ಉದ್ಯಾನವನದ ಹಳೆಯ ಪೈರಾ ಗ್ರಾಮದಲ್ಲಿ ಒಂದು ಪಾಳುಬಿದ್ದ ದೇವಾಲಯ . ಬಲ : 23 ವರ್ಷಗಳ ಹಿಂ ದಿನ ಪೈರಾದಲ್ಲಿರುವ ಸುಲ್ತಾನ್ ಜಾ ವ್ ಅವರ ಹಳೆಯ ಶಾಲೆ

ಕುನೋ ಅರಣ್ಯದೊಳಗಿನ 24 ಹಳ್ಳಿಗಳ ನಿವಾಸಿಗಳಿಗೆ, ಸಂಭಾವ್ಯ ಸ್ಥಳಾಂತರದ ಮೊದಲ ಸುಳಿವು 1998ರಲ್ಲಿ ಬಂದಿತು. ಈ ಅಭಯಾರಣ್ಯವು ಶೂನ್ಯ ಮಾನವ ಉಪಸ್ಥಿತಿಯೊಂದಿಗೆ ರಾಷ್ಟ್ರೀಯ ಉದ್ಯಾನವನವಾಗಿ ಬದಲಾಗುವ ಬಗ್ಗೆ ಇಲ್ಲಿ ಸುತ್ತಮುತ್ತಲಿನ ಅರಣ್ಯ ರೇಂಜರ್‌ಗಳು ಮಾತನಾಡಲು ಪ್ರಾರಂಭಿಸಿದಾಗ ಅದು ಜನರ ಕಿವಿಗಳಿಗೂ ಬೀಳತೊಡಗಿತು.

"ನಾವು ಈ ಹಿಂದೆ ಸಿಂಹಗಳೊಂದಿಗೆ ಬದುಕಿದ್ದೇವೆ ಎಂದು ಹೇಳಿದ್ದೆವು. ಹುಲಿಗಳು ಮತ್ತು ಇತರ ಪ್ರಾಣಿಗಳೊಂದಿಗೆ ಸಹ ಬದುಕಿದ್ದೇವೆ, ನಾವು ಏಕೆ ಇಲ್ಲಿಂದ ಹೋಗಬೇಕು?" ಎಂದು ಮಂಗು ಆದಿವಾಸಿ ಪ್ರಶ್ನಿಸುತ್ತಾರೆ. ಅವರು ಪ್ರಸ್ತುತ ತಮ್ಮ 40ರ ದಶಕದಲ್ಲಿದ್ದಾರೆ. ಸಹರಿಯಾ ಸಮುದಾಯಕ್ಕೆ ಸೇರಿದವರು, ಮತ್ತು ಸ್ಥಳಾಂತರಗೊಂಡವರಲ್ಲಿ ಒಬ್ಬರು.

1999ರ ಆರಂಭದಲ್ಲಿ, ಗ್ರಾಮಸ್ಥರಿಗೆ ಮನವರಿಕೆಯಾಗುವವರೆಗೆ ಕಾಯದೆ, ಅರಣ್ಯ ಇಲಾಖೆ ಕುನೋ ಗಡಿಯ ಹೊರಗಿನ ದೊಡ್ಡ ಭೂಪ್ರದೇಶಗಳನ್ನು ತೆರವುಗೊಳಿಸಲು ಪ್ರಾರಂಭಿಸಿತು. ಮರಗಳನ್ನು ಕಡಿಯಲಾಯಿತು ಮತ್ತು ಭೂಮಿಯನ್ನು ಜೆ.ಸಿ. ಬಾಮ್ ಫೋರ್ಡ್ ಎಕ್ಸ್‌ಕೆವೇಟರ್ (ಜೆಸಿಬಿಗಳು)‌ ಬಳಸಿ ಸಮತಟ್ಟುಗೊಳಿಸಲಾಯಿತು.

"ಸ್ಥಳಾಂತರವು ಸ್ವಯಂಪ್ರೇರಿತವಾಗಿತ್ತು, ನಾನು ವೈಯಕ್ತಿಕವಾಗಿ ಅದರ ಮೇಲ್ವಿಚಾರಣೆ ಮಾಡಿದ್ದೇನೆ" ಎಂದು ಜೆ.ಎಸ್. ಚೌಹಾಣ್ ಹೇಳುತ್ತಾರೆ. 1999ರಲ್ಲಿ, ಅವರು ಕುನೋಗೆ ಜಿಲ್ಲಾ ಅರಣ್ಯ ಅಧಿಕಾರಿಯಾಗಿದ್ದರು. ಅವರು ಪ್ರಸ್ತುತ ಮಧ್ಯಪ್ರದೇಶದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಮತ್ತು ವನ್ಯಜೀವಿ ವಾರ್ಡನ್ ಆಗಿದ್ದಾರೆ.

ಸ್ಥಳಾಂತರದ ಗುಳಿಗೆಯನ್ನು ಸಿಹಿಗೊಳಿಸಲು, ಪ್ರತಿ ಕುಟುಂಬಕ್ಕೆ ತಮ್ಮ ಘಟಕವು ಎರಡು ಹೆಕ್ಟೇರ್ ಉಳುಮೆ ಮತ್ತು ನೀರಾವರಿ ಭೂಮಿಯನ್ನು ಪಡೆಯುತ್ತದೆ ಎಂದು ತಿಳಿಸಲಾಯಿತು. 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಗಂಡು ಮಕ್ಕಳು ಸಹ ಇದಕ್ಕೆ ಅರ್ಹರಾಗಿರುತ್ತಾರೆ. ಅವರು ಹೊಸ ಮನೆಯನ್ನು ನಿರ್ಮಿಸಲು 38,000 ರೂ.ಗಳನ್ನು ಮತ್ತು ತಮ್ಮ ವಸ್ತುಗಳನ್ನು ಸಾಗಿಸಲು 2,000 ರೂ.ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಅವರ ಹೊಸ ಗ್ರಾಮಗಳು ಎಲ್ಲಾ ನಾಗರಿಕ ಸೌಲಭ್ಯಗಳನ್ನು ಹೊಂದಿರುತ್ತವೆ ಎಂದು ಅವರಿಗೆ ಭರವಸೆ ನೀಡಲಾಯಿತು.

ನಂತರ ಪಾಲ್ಪುರ್ ಪೊಲೀಸ್ ಠಾಣೆಯನ್ನು ನಿಷ್ಕ್ರಿಯಗೊಳಿಸಲಾಯಿತು. "ಈ ಪ್ರದೇಶದಲ್ಲಿ ಡಕಾಯಿತರ ಭಯವಿರುವುದರಿಂದ ಇದು ಎಚ್ಚರಿಕೆಯ ಗಂಟೆಗಳನ್ನು ಬಾರಿಸಿತು" ಎಂದು 43 ವರ್ಷದ ಸೈಯದ್ ಮೆರಾಜುದ್ದೀನ್ ಹೇಳುತ್ತಾರೆ. ಅವರು ಆ ಸಮಯದಲ್ಲಿ ಆ ಪ್ರದೇಶದಲ್ಲಿ ಯುವ ಸಾಮಾಜಿಕ ಕಾರ್ಯಕರ್ತರಾಗಿದ್ದರು.

ಈ ಅತಿಥೇಯ ಹಳ್ಳಿಗಳನ್ನು ಒಳಹರಿವಿಗಾಗಿ ಸಜ್ಜುಗೊಳಿಸಿರಲಿಲ್ಲ ಅಥವಾ ಪರಿಹಾರವನ್ನೂ ನೀಡಲಿಲ್ಲ. ಈಗ ಸಮತಟ್ಟುಗೊಳಿಸಲಾದ ಕಾಡುಗಳಿಗೆ ಪ್ರವೇಶದ ನಷ್ಟಕ್ಕಾಗಿಯೂ ಪರಿಹಾರ ಸಿಗಲಿಲ್ಲ

ವೀಡಿಯೊ ವೀಕ್ಷಿಸಿ : ಕುನೊದ ಜನರು : ಬಾರದ ಸಿಂಹಗಳಿಗಾಗಿ ಸ್ಥಳಾಂತರಗೊಂಡ ಕುನೋ ನಿವಾಸಿಗಳು

ಹೀಗೆ 1999ರ ಬೇಸಿಗೆ ಬಂದಿತು. ಜನರು ತಮ್ಮ ಮುಂದಿನ ಬೇಸಾಯಕ್ಕೆ ಸಿದ್ಧರಾಗುತ್ತಿರುವಂತೆಯೇ, ಕುನೋದ ನಿವಾಸಿಗಳು ಅದಕ್ಕೆ ಬದಲಾಗಿ ಸ್ಥಳಾಂತರಗೊಳ್ಳಲು ಪ್ರಾರಂಭಿಸಿದರು. ಅವರು ಅಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಬಂದರು ಮತ್ತು ನೀಲಿ ಪಾಲಿಥಿನ್ ಬಳಸಿ ಗುಡಿಸಲು ಮನೆಗಳನ್ನು ಸ್ಥಾಪಿಸಿದರು. ಇಲ್ಲಿ, ಅವರು ಮುಂದಿನ 2-3 ವರ್ಷಗಳವರೆಗೆ ಬದುಕುತ್ತಾರೆ.

"ಕಂದಾಯ ಇಲಾಖೆ ಆರಂಭದಲ್ಲಿ ಭೂಮಿಯ ಹೊಸ ಮಾಲೀಕರನ್ನು ಗುರುತಿಸದ ಕಾರಣ ದಾಖಲೆಗಳನ್ನು ನೀಡಲಿಲ್ಲ. ಆರೋಗ್ಯ, ಶಿಕ್ಷಣ ಮತ್ತು ನೀರಾವರಿಯಂತಹ ಇತರ ಇಲಾಖೆಗಳು ಚಲಿಸಲು 7-8 ವರ್ಷಗಳು ಬೇಕಾಯಿತು" ಎಂದು ಮೆರಾಜುದ್ದೀನ್ ಹೇಳುತ್ತಾರೆ. ಅವರು ಆಧಾರ್‌ಶಿಲಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಯಾದರು. ಇದು ಅತಿಥೇಯ ಗ್ರಾಮ ಅಗರದಲ್ಲಿ ಸ್ಥಳಾಂತರಗೊಂಡ ಸಮುದಾಯಕ್ಕಾಗಿ ಒಂದು ಶಾಲೆಯನ್ನು ನಡೆಸುವ ಮತ್ತು ಅವರೊಂದಿಗೆ ಕೆಲಸ ಮಾಡುವ ಲಾಭರಹಿತವಾಗಿದೆ.

ಇಪ್ಪತ್ಮೂರು ವರ್ಷಗಳ ನಂತರ, ಪಿಸಿಸಿಎಫ್ ಚೌಹಾಣ್ ಅವರು "ಗ್ರಾಮ ಸ್ಥಳಾಂತರವು ಅರಣ್ಯ ಇಲಾಖೆಯ ಕೆಲಸವಲ್ಲ. ಸರ್ಕಾರವು ಸ್ಥಳಾಂತರವನ್ನು ಹೊಂದಿರಬೇಕು, ಆಗ ಮಾತ್ರ ಸ್ಥಳಾಂತರಗೊಂಡ ವ್ಯಕ್ತಿಗೆ ಸಂಪೂರ್ಣ ಪ್ಯಾಕೇಜ್ ಸಿಗುತ್ತದೆ. ಎಲ್ಲಾ ಇಲಾಖೆಗಳು ಜನರನ್ನು ತಲುಪಬೇಕು. ಈಡೇರದ ಭರವಸೆಗಳ ಬಗ್ಗೆ ಪ್ರತಿಕ್ರಿಯಿಸಲು ಕೇಳಿದಾಗ, ಇದು ನಮ್ಮ ಕರ್ತವ್ಯ" ಎಂದು ಅವರು ಹೇಳುತ್ತಾರೆ.

ಶಿಯೋಪುರ ಜಿಲ್ಲೆಯ ವಿಜಯಪುರ ತಹಸಿ ಲ್ಲಿನ ಉಮ್ರಿ, ಅಗರ, ಅರೋಡ್, ಚೆಂಟಿಖೇಡಾ ಮತ್ತು ದಿಯೋರಿ ಗ್ರಾಮಗಳು ಸ್ಥಳಾಂತರಗೊಂಡ 24 ಹಳ್ಳಿಗಳಿಂದ ಸಾವಿರಾರು ಜನರ ಒಳಹರಿವಿಗೆ ಸಾಕ್ಷಿಯಾದವು. ಈ ಅತಿಥೇಯ ಹಳ್ಳಿಗಳನ್ನು ಒಳಹರಿವಿಗಾಗಿ ಸಜ್ಜುಗೊಳಿಸಿರಲಿಲ್ಲ ಅಥವಾ ಪರಿಹಾರವನ್ನೂ ನೀಡಲಿಲ್ಲ. ಈಗ ಸಮತಟ್ಟುಗೊಳಿಸಲಾದ ಕಾಡುಗಳಿಗೆ ಪ್ರವೇಶದ ನಷ್ಟಕ್ಕಾಗಿಯೂ ಪರಿಹಾರ ಸಿಗಲಿಲ್ಲ.

ರಾಮ್ ದಯಾಳ್ ಜಾಟವ್ ಮತ್ತು ಅವರ ಕುಟುಂಬವು ಜೂನ್ 1999ರಲ್ಲಿ ಅಗರ ಹೊರಗಿನ ಪೈರಾ ಜಾಟವ್ ಕುಗ್ರಾಮಕ್ಕೆ ಸ್ಥಳಾಂತರಗೊಂಡಿತು. ಈಗ ತನ್ನ 50ರ ಹರೆಯದಲ್ಲಿರುವ ಕುನೋ ಪಾರ್ಕಿನ ಮೂಲ ಪೈರಾ ನಿವಾಸಿಯು ಈಗಲೂ ತಮ್ಮ ನಿರ್ಧಾರಕ್ಕಾಗಿ ಪಶ್ಚಾತ್ತಾಪ ಪಡುತ್ತಾರೆ. "ಪುನರ್ವಸತಿ ನಮಗೆ ಒಳ್ಳೆಯದಲ್ಲ. ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇವೆ ಮತ್ತು ಈಗಲೂ ಎದುರಿಸುತ್ತಿದ್ದೇವೆ. ಇಂದಿಗೂ ನಮ್ಮ ಬಾವಿಗಳಲ್ಲಿ ನೀರಿಲ್ಲ, ನಮ್ಮ ಹೊಲಗಳಿಗೆ ಬೇಲಿಯಿಲ್ಲ. ವೈದ್ಯಕೀಯ ತುರ್ತು ಪರಿಸ್ಥಿತಿಗಳ ವೆಚ್ಚವನ್ನು ನಾವು ಭರಿಸಬೇಕಾಗಿದೆ ಮತ್ತು ಉದ್ಯೋಗವನ್ನು ಪಡೆಯುವುದು ಕಷ್ಟ. ಇದಲ್ಲದೆ, ಇನ್ನೂ ಅನೇಕ ಸಮಸ್ಯೆಗಳಿವೆ" ಎಂದು ಅವರು ಹೇಳುತ್ತಾರೆ. "ಅವರು ಕೇವಲ ಪ್ರಾಣಿಗಳಿಗೆ ಮಾತ್ರ ಒಳ್ಳೆಯದನ್ನು ಮಾಡಿದರು, ಆದರೆ ನಮಗಾಗಿ ಏನೂ ಒಳ್ಳೆಯದನ್ನು ಮಾಡಲಿಲ್ಲ" ಎಂದು ಹೇಳುವಾಗ ಅವರ ದನಿ ನಡುಗುತ್ತಿತ್ತು.

Ram Dayal Jatav regrets leaving his village and taking the resettlement package.
PHOTO • Priti David
The Paira Jatav hamlet where exiled Dalit families now live
PHOTO • Priti David

ಎಡ : ರಾಮ್ ದಯಾಳ್ ಜಾ ವ್ ತನ್ನ ಗ್ರಾಮವನ್ನು ತೊರೆದು ಪುನರ್ವಸತಿ ಪ್ಯಾಕೇಜ್ ತೆಗೆದುಕೊಂಡಿದ್ದಕ್ಕಾಗಿ ಪಶ್ಚಾತ್ತಾಪ ಪಡು ತ್ತಿದ್ದಾರೆ . ಬಲ : ಸ್ಥಳಾಂತರಿತ ದಲಿತ ಕುಟುಂಬಗಳು ಈಗ ವಾಸಿಸುತ್ತಿರುವ ಪೇರಾ ಜಾತವ್ ಕುಗ್ರಾಮ

ರಘುಲಾಲ್ ಜಾಟವ್ ಹೇಳುವಂತೆ, ವರ ಗುರುತಿನ ನಷ್ಟವು ಅತ್ಯಂತ ದೊಡ್ಡ ನಷ್ಟವಾಗಿದೆ: "23 ವರ್ಷಗಳು ಕಳೆದಿವೆ ಮತ್ತು ನಮಗೆ ಭರವಸೆ ನೀಡಿದ್ದನ್ನು ಪಡೆಯದಿರುವುದರದಲ್ಲದೆ, ನಮ್ಮ ಸ್ವತಂತ್ರ ಗ್ರಾಮ ಸಭೆಗಳನ್ನು ಸಹ ಇಲ್ಲಿ ಅಸ್ತಿತ್ವದಲ್ಲಿರುವ ಗ್ರಾಮಸಭೆಗಳಲ್ಲಿ ವಿಲೀನಗೊಳಿಸಲಾಯಿತು."

ಅವರು ತಮ್ಮ ಸ್ವಂತ ಪೈರಾ ಸೇರಿದಂತೆ ೨೪ ಹಳ್ಳಿಗಳ ವರ್ಗೀಕರಣದ ವಿರುದ್ಧ ಹೋರಾಡುತ್ತಿದ್ದಾರೆ. ರಘುಲಾಲ್ ಅವರ ಪ್ರಕಾರ, 2008ರಲ್ಲಿ ಹೊಸ ಗ್ರಾಮ ಪಂಚಾಯತ್ ರಚನೆಯಾದಾಗ, ಪೈರಾವನ್ನು ಕಂದಾಯ ಗ್ರಾಮ ಎಂಬ ಶೀರ್ಷಿಕೆಯಡಿಯಿಂದ ತೆಗೆದುಹಾಕಲಾಯಿತು. ನಂತರ ಅದರ ನಿವಾಸಿಗಳನ್ನು ನಾಲ್ಕು ಕುಗ್ರಾಮಗಳಲ್ಲಿ ಅಸ್ತಿತ್ವದಲ್ಲಿರುವ ಪಂಚಾಯಿತಿಗಳಿಗೆ ಸೇರಿಸಲಾಯಿತು. "ಈ ರೀತಿಯಾಗಿ ನಾವು ನಮ್ಮ ಪಂಚಾಯತ್ ಅನ್ನು ಕಳೆದುಕೊಂಡಿದ್ದೇವೆ."

ಪಿಸಿಸಿಎಫ್ ಚೌಹಾಣ್ ಅವರು ಸರಿಪಡಿಸಲು ಪ್ರಯತ್ನಿಸಿದ್ದಾಗಿ ಹೇಳುತ್ತಾರೆ. "ನಾನು ಸರ್ಕಾರದಲ್ಲಿನ ಅನೇಕ ಜನರನ್ನು ಸಂಪರ್ಕಿಸಿ ಅವರಿಗೆ ತಮ್ಮದೇ ಆದ ಪಂಚಾಯಿತಿಯನ್ನು ಹಿಂತಿರುಗಿಸಲು ಸಹಾಯ ಮಾಡಿದ್ದೇನೆ. ನಾನು ಅವರಿಗೆ (ರಾಜ್ಯ ಇಲಾಖೆಗಳು) ಹೇಳುತ್ತೇನೆ, 'ನೀವು ಇದನ್ನು ಮಾಡಬಾರದಿತ್ತು'. ಈ ವರ್ಷವೂ ನಾನು ಪ್ರಯತ್ನಿಸಿದೆ" ಎಂದು ಅವರು ಹೇಳುತ್ತಾರೆ.

ತಮ್ಮ ಸ್ವಂತ ಪಂಚಾಯತ್ ಇಲ್ಲದೆ, ಸ್ಥಳಾಂತರಗೊಂಡ ಜನರು ತಮ್ಮ ಧ್ವನಿಗಳನ್ನು ತಲುಪಿಸಲು ಸಂಕೀರ್ಣವಾದ ಕಾನೂನು ಮತ್ತು ರಾಜಕೀಯ ಹೋರಾಟವನ್ನು ಎದುರಿಸುತ್ತಾರೆ.

*****

ಸ್ಥಳಾಂತರದ ನಂತರ "ಅರಣ್ಯವು ನಮ್ಮ ಪಾಲಿಗೆ ಮುಚ್ಚಲ್ಪಟ್ಟಿತು" ಎಂದು ಮಂಗು ಆದಿವಾಸಿ ಹೇಳುತ್ತಾರೆ. ನಾವು ಹುಲ್ಲನ್ನು ಮೇವಾಗಿ ಮಾರಾಟ ಮಾಡುತ್ತಿದ್ದೆವು, ಆದರೆ ಈಗ ನಮಗೆ ಒಂದು ಹಸುವನ್ನು ಸಹ ಸಾಕಲು ಸಾಕಾಗುವುದಿಲ್ಲ." ಹುಲ್ಲುಗಾವಲು, ಉರುವಲು, ಮರಮುಟ್ಟುಗಳಿಲ್ಲದ ಅರಣ್ಯ ಉತ್ಪನ್ನಗಳು ಮತ್ತು ಹೆಚ್ಚಿನವುಗಳ ನಷ್ಟವೂ ಜೊತೆಗೆ ಸೇರಿಕೊಂಡಿದೆ.

ಸಾಮಾಜಿಕ ವಿಜ್ಞಾನಿ ಪ್ರೊ. ಅಸ್ಮಿತಾ ಕಬ್ರಾ ಈ ವಿಪರ್ಯಾಸವನ್ನು ಎತ್ತಿ ತೋರಿಸುತ್ತಾರೆ: "ಜಾನುವಾರುಗಳಿಗೆ [ಬರಬಹುದೆಂದು ಭಾವಿಸಲಾದ ಸಿಂಹಗಳಿಂದ] ಸಂಭವನೀಯ ನಷ್ಟದ ಬಗ್ಗೆ ಅರಣ್ಯ ಇಲಾಖೆಯು ಚಿಂತಿತವಾಗಿದ್ದರಿಂದ ಜನರು ಅವರ ಮನೆಗಳನ್ನು ತೊರೆಯುವಂತೆ ಮಾಡಲಾಯಿತು. ಆದರೆ ಅಂತಿಮವಾಗಿ, ಜಾನುವಾರುಗಳಿಗೆ ಹೊರಗೆ ಮೇಯಲು ತಾವು ಇಲ್ಲದ ಕಾರಣ ಅವುಗಳನ್ನು ಅನಾಥವಾಗಿ ಬಿಡಲಾಯಿತು."

Mangu Adivasi lives in the Paira Adivasi hamlet now.
PHOTO • Priti David
Gita Jatav (in the pink saree) and Harjaniya Jatav travel far to secure firewood for their homes
PHOTO • Priti David

ಎಡ : ಮಂಗು ಆದಿವಾಸಿ ಈಗ ಪೈರಾ ಆದಿವಾಸಿ ಕುಗ್ರಾಮದಲ್ಲಿ ವಾಸಿಸುತ್ತಿದ್ದಾರೆ . ಬಲ : ಗೀತಾ ಜಾ ವ್ ( ಗುಲಾಬಿ ಸೀರೆಯಲ್ಲಿ ) ಮತ್ತು ಹರ್ಜಾನಿಯಾ ಜಾ ವ್ ತಮ್ಮ ಮನೆಗಳಿಗೆ ಉರುವಲನ್ನು ತರಲು ಬಹಳ ದೂರ ಪ್ರಯಾಣಿಸುತ್ತಾರೆ

ವ್ಯವಸಾಯಕ್ಕಾಗಿ ಭೂಮಿಯನ್ನು ತೆರವುಗೊಳಿಸುತ್ತಿದ್ದಂತೆ ಮರಗಳ ಸಾಲು ಮತ್ತಷ್ಟು ದೂರ ಸರಿಯಿತು. "ಈಗ ಉರುವಲು ತರಲು ನಾವು 30-40 ಕಿಲೋಮೀಟರ್ ಪ್ರಯಾಣಿಸಬೇಕಾಗಿದೆ. ನಾವು ಆಹಾರವನ್ನು ಹೊಂದಿರಬಹುದು, ಆದರೆ ಅದನ್ನು ಬೇಯಿಸಲು ಉರುವಲು ಇಲ್ಲ," ಎಂದು 23 ವರ್ಷದ ಶಿಕ್ಷಕ ಸಹರಿಯಾ ಜನಗಳು ಸ್ಥಳಾಂತರಗೊಂಡ ಹಳ್ಳಿಗಳಲ್ಲಿ ಒಂದಾದ ಅಹರ್ವಾನಿಯ ನಿವಾಸಿ ಕೇದಾರ್ ಆದಿವಾಸಿ ಹೇಳುತ್ತಾರೆ.

50ರ ಹರೆಯದ ಗೀತಾ ಮತ್ತು 60ರ ಹರೆಯದ ಹರ್ಜಾನಿಯಾ ಅವರು ಶಿಯೋಪುರದ ಕರಾಹಾಲ್ ತಹಸಿಲ್ನಲ್ಲಿ ಮದುವೆಯಾಗಿ ತಮ್ಮ ಮನೆಗಳನ್ನು ತೊರೆದು ಅಭಯಾರಣ್ಯದಲ್ಲಿ ವಾಸಿಸುವಾಗ ತುಂಬಾ ಚಿಕ್ಕವರಾಗಿದ್ದರು. "[ಈಗ] ಸೌದೆ ತರಲು ನಾವು ಬೆಟ್ಟಗಳನ್ನು ಏರಬೇಕಾಗಿದೆ. ಇದಕ್ಕೆ ನಮಗೆ ಇಡೀ ದಿನ ಹಿಡಿಯುತ್ತದೆ ಮತ್ತು ನಾವು ಆಗಾಗ್ಗೆ ಅರಣ್ಯ ಇಲಾಖೆಯಿಂದ ತಡೆಯಲ್ಪಡುತ್ತೇವೆ. ಆದ್ದರಿಂದ ನಾವು ಬೇರೆಬೇರೆಯಾಗಿರಬೇಕಾಗುತ್ತದೆ" ಎಂದು ಗೀತಾ ಹೇಳುತ್ತಾರೆ.

ವಿಷಯಗಳನ್ನು ಇತ್ಯರ್ಥಪಡಿಸುವ ಅವಸರದಲ್ಲಿ, ಅರಣ್ಯ ಇಲಾಖೆ ಬೆಲೆಬಾಳುವ ಮರಗಳು ಮತ್ತು ಕುರುಚಲು ಮರಗಳನ್ನು ನೆಲಸಮಗೊಳಿಸಿತು ಎಂದು ಕಾಬ್ರಾ ನೆನಪಿಸಿಕೊಳ್ಳುತ್ತಾರೆ. "ಜೀವವೈವಿಧ್ಯತೆಯ ನಷ್ಟವನ್ನು ಎಂದಿಗೂ ಲೆಕ್ಕಹಾಕಲಾಗಿಲ್ಲ" ಎಂದು ಕುನೋ ಮತ್ತು ಸುತ್ತಮುತ್ತಲಿನ ಸ್ಥಳಾಂತರ, ಬಡತನ ಮತ್ತು ಜೀವನೋಪಾಯದ ಭದ್ರತೆಯ ಬಗ್ಗೆ ಪಿಎಚ್.ಡಿ ಮಾಡಿದ ಸಾಮಾಜಿಕ ವಿಜ್ಞಾನಿ ಹೇಳುತ್ತಾರೆ. ಅವರನ್ನು ಈ ಪ್ರದೇಶದ ಅಗ್ರಗಣ್ಯ ಸಂರಕ್ಷಣಾ ಸ್ಥಳಾಂತರ ತಜ್ಞೆ ಎಂದು ಪರಿಗಣಿಸಲಾಗಿದೆ.

ಚಿರ್ ಮತ್ತು ಇತರ ಮರಗಳ ಅಂಟು ಮತ್ತು ರಾಳವನ್ನು ಸಂಗ್ರಹಿಸಲು ಕಾಡಿಗೆ ಹೋಗದಂತೆ ತಡೆದಿದ್ದು ದೊಡ್ಡ ನಷ್ಟವಾಗಿದೆ. ಚಿರ್ ಗೊಂಡ್ ಸ್ಥಳೀಯ ಮಾರುಕಟ್ಟೆಯಲ್ಲಿ ರೂ. 200 ಕ್ಕೆ ಮಾರಾಟವಾಗುತ್ತದೆ, ಮತ್ತು ಹೆಚ್ಚಿನ ಕುಟುಂಬಗಳು ಸುಮಾರು 4-5 ಕಿಲೋ ರಾಳವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತವೆ. " ಟೆಂಡು ಎಲೆಗಳಂತೆ (ಇವುಗಳಿಂದ ಬೀಡಿಗಳನ್ನು ತಯಾರಿಸಲಾಗು ತ್ತದೆ ) ಅನೇಕ ರೀತಿಯ ಗೊಂಡ್ ರಾಳಗಳು ಹೇರಳವಾಗಿದ್ದವು. ಹಾಗೆಯೇ, ಬೇಲ್ , ಆಚಾರ್ , ಮಹುವಾ , ಜೇನುತುಪ್ಪ ಮತ್ತು ಬೇರುಗಳು. ಇದೆಲ್ಲವೂ ನಮಗೆ ಅನ್ನ ಮತ್ತು ಬಟ್ಟೆಯನ್ನು ನೀಡುತ್ತಿದ್ದವು. ಒಂದು ಕಿಲೋ ಗೊಂಡ್ ಅನ್ನು ನಾವು ಐದು ಕಿಲೋ ಅಕ್ಕಿಗೆ ವಿನಿಮಯ ಮಾಡಿಕೊಳ್ಳಬಹುದು" ಎಂದು ಕೇದಾರ್ ಹೇಳುತ್ತಾರೆ.

ಈಗ ಅಹರ್ವಾನಿಯಲ್ಲಿ ಕೆಲವೇ ಮಳೆಯಾಶ್ರಿತ ಬಿಘಾ ಭೂಮಿಯನ್ನು ಹೊಂದಿರುವ ಕೇದಾರ್ ಅವರ ತಾಯಿ, ಕುಂಗೈ ಆದಿವಾಸಿಯಂತಹ ಅನೇಕರು ಕೆಲಸಕ್ಕಾಗಿ ಮೋರೆನಾ ಮತ್ತು ಆಗ್ರಾ ನಗರಗಳಿಗೆ ವಾರ್ಷಿಕವಾಗಿ ವಲಸೆ ಹೋಗಬೇಕಾಗುತ್ತದೆ. ಅವರು ಪ್ರತಿ ವರ್ಷ ಕೆಲವು ತಿಂಗಳುಗಳ ಕಾಲ ಅಲ್ಲಿ ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುತ್ತಾರೆ. "ನಮ್ಮಲ್ಲಿ ಹತ್ತು ಅಥವಾ ಇಪ್ಪತ್ತು ಜನರು ಇಲ್ಲಿ ಯಾವುದೇ ಕೃಷಿ ಕೆಲಸಗಳು ಲಭ್ಯವಿಲ್ಲದ ಸಮಯದಲ್ಲಿ ಒಟ್ಟಿಗೆ ಹೋಗುತ್ತೇವೆ" ಎಂದು 50ರ ಹರೆಯದ ಕುಂಗೈ ಹೇಳುತ್ತಾರೆ.

Kedar Adivasi and his mother, Kungai Adivasi, outside their home in Aharwani, where displaced Sahariyas settled.
PHOTO • Priti David
Large tracts of forests were cleared to compensate the relocated people. The loss of biodiversity, fruit bearing trees and firewood is felt by both new residents and host villages
PHOTO • Priti David

ಎಡಕ್ಕೆ : ಕೇದಾರ್ ಆದಿವಾಸಿ ಮತ್ತು ಅವರ ತಾಯಿ ಕುಂಗೈ ಆದಿವಾಸಿ , ಸ್ಥಳಾಂತರಗೊಂಡ ಸಹರಿಯಾ ಜನರ ನೆಲೆಯಾಗಿರುವ ಅಹರ್ವಾನಿಯಲ್ಲಿ ತಮ್ಮ ಮನೆಯ ಹೊರಗೆ . ಬಲ : ಸ್ಥಳಾಂತರಗೊಂಡ ಜನರಿಗೆ ಪರಿಹಾರ ನೀಡಲು ಅರಣ್ಯಗಳ ದೊಡ್ಡ ಪ್ರದೇಶಗಳನ್ನು ತೆರವುಗೊಳಿಸಲಾಯಿತು . ಜೀವವೈವಿಧ್ಯತೆ , ಹಣ್ಣು ಬಿಡುವ ಮರಗಳು ಮತ್ತು ಉರುವಲುಗಳ ನಷ್ಟವನ್ನು ಹೊಸ ನಿವಾಸಿಗಳು ಮತ್ತು ಆತಿಥೇಯ ಗ್ರಾಮಗಳೆರಡೂ ಅನುಭವಿಸು ತ್ತಿ ವೆ

*****

ಆಗಸ್ಟ್ 15, 2021ರಂದು, ಪ್ರಧಾನಿ ಮೋದಿ ಅವರು ಕೆಂಪು ಕೋಟೆಯಿಂದ ಮಾಡಿದ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ' ಪ್ರಾಜೆಕ್ಟ್ ಲಯನ್ ' ಅನ್ನು ಘೋಷಿಸಿದರು. ಇದು ದೇಶದಲ್ಲಿ ಏಷ್ಯಾಟಿಕ್ ಸಿಂಹಗಳ ಭವಿಷ್ಯವನ್ನು ಭದ್ರಪಡಿಸುತ್ತದೆ ಎಂದು ಅವರು ಹೇಳಿದ್ದರು.

2013ರಲ್ಲಿ ಸುಪ್ರೀಂ ಕೋರ್ಟ್ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (ಎಂಒಇಎಫ್‌ಸಿಸಿ) ಸಿಂಹಗಳನ್ನು ಸ್ಥಳಾಂತರಿಸಲು ಆದೇಶಿಸಿದಾಗ ಪ್ರಧಾನಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಇಂದಿನಿಂದ 6 ತಿಂಗಳ ಅವಧಿಯಲ್ಲಿ ಅದು ಆಗಬೇಕು ಎಂದು ನ್ಯಾಯಾಲಯ ಹೇಳಿತ್ತು.  ಮತ್ತು ಅದೇ ಕಾರಣವನ್ನು ಕೆಂಪು ಕೋಟೆಯಿಂದ ಮಾಡಿದ ಭಾಷಣದಲ್ಲಿ ಉಲ್ಲೇಖಿಸಲಾಗಿದೆ. ಅಂದರೆ, ದೇಶದಲ್ಲಿನ ಏಷ್ಯಾದ ಸಿಂಹಗಳ ಭವಿಷ್ಯವನ್ನು ಭದ್ರಪಡಿಸುವುದು. ಆಗ ಮತ್ತು ಈಗ, ಗುಜರಾತ್ ಸರ್ಕಾರವು ಆದೇಶವನ್ನು ಪಾಲಿಸಲು ಮತ್ತು ಕೆಲವು ಸಿಂಹಗಳನ್ನು ಕುನೋಗೆ ಕಳುಹಿಸುವಲ್ಲಿ ವಿಫಲವಾಗಿರುವುದಕ್ಕೆ ಯಾವುದೇ ವಿವರಣೆ ಇಲ್ಲ.

ಗುಜರಾತ್ ಅರಣ್ಯ ಇಲಾಖೆಯ ವೆಬ್ಸೈಟ್ ಕೂಡ ಯಾವುದೇ ಸ್ಥಳಾಂತರದ ಬಗ್ಗೆ ಮೌನವಾಗಿದೆ. ಮತ್ತು 2019ರಲ್ಲಿ ಎಂಓಇಎಫ್‌ಸಿಸಿ ಪತ್ರಿಕಾ ಪ್ರಕಟಣೆಯು 'ಏಷಿಯಾಟಿಕ್ ಲಯನ್ ಕನ್ಸರ್ವೇಶನ್ ಪ್ರಾಜೆಕ್ಟ್' ಗಾಗಿ 97.85 ಕೋಟಿ ರೂ.ಗಳ ನಿಧಿಯನ್ನು ಘೋಷಿಸಿತು. ಆದರೆ ಅದು ಗುಜರಾತ್ ರಾಜ್ಯವನ್ನು ಮಾತ್ರ ಉಲ್ಲೇಖಿಸುತ್ತದೆ.

ಏಷ್ಯಾದ ಸಿಂಹಗಳಲ್ಲಿ ಕೆಲವನ್ನು ಕುನೋ ಅರಣ್ಯದೊಡನೆ ಹಂಚಿಕೊಳ್ಳಲು ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಪಿಐಎಲ್ ಕೋರಿ ದೆಹಲಿ ಮೂಲದ ಸಂಸ್ಥೆಯೊಂದು 2006ರಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆಯಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ ಏಪ್ರಿಲ್ 15, 2022ಕ್ಕೆ 9 ವರ್ಷವಾಗಿದೆ.

"ಸುಪ್ರೀಂ ಕೋರ್ಟಿನ 2013ರ ತೀರ್ಪಿನ ನಂತರ, ಕುನೋದಲ್ಲಿ ಸಿಂಹಗಳ ಮರುಪ್ರವೇಶದ ಮೇಲ್ವಿಚಾರಣೆಗಾಗಿ ತಜ್ಞರ ಸಮಿತಿಯನ್ನು ರಚಿಸಲಾಯಿತು. ಆದಾಗ್ಯೂ, ತಜ್ಞರ ಸಮಿತಿಯು ಕಳೆದ ಎರಡೂವರೆ ವರ್ಷಗಳಿಂದ ಸಭೆ ಸೇರಿಲ್ಲ. ಮತ್ತು ಗುಜರಾತ್ ಕ್ರಿಯಾ ಯೋಜನೆಯನ್ನು ಒಪ್ಪಿಕೊಂಡಿಲ್ಲ" ಎಂದು ಡಬ್ಲ್ಯುಐಐನ ಝಾಲಾ ಹೇಳಿದರು.

In January 2022, the government announced that African cheetahs would be brought to Kuno as there were no Asiatic cheetahs left in India.
PHOTO • Priti David
A poster of 'Chintu Cheetah' announcing that cheetahs (African) are expected in the national park
PHOTO • Priti David

ಎಡ : 2022 ಜನವರಿಯಲ್ಲಿ , ಭಾರತದಲ್ಲಿ ಏಷ್ಯಾಟಿಕ್ ಚೀತಾಗಳು ಇಲ್ಲದಿರುವ ಕಾರಣ ಆಫ್ರಿಕನ್ ಚೀತಾಗಳನ್ನು ಕು ನೋ ಗೆ ತರಲಾಗುವುದು ಎಂದು ಸರ್ಕಾರ ಘೋಷಿಸಿತು . ಬಲ : ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳನ್ನು ( ಆಫ್ರಿಕನ್ ) ನಿರೀಕ್ಷಿಸಲಾಗಿದೆ ಎಂದು ಘೋಷಿಸುವ ' ಚಿಂಟು ಚೀತಾ ' ಪೋಸ್ಟರ್

ಬದಲಾಗಿ, ಈ ವರ್ಷ ಆಫ್ರಿಕನ್ ಚೀತಾಗಳ ಆಗಮನದ ಸ್ಥಳವಾಗಿ ಕುನೋವನ್ನು ಹೆಸರಿಸಲಾಗಿದೆ. ಅದೇ ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ, "ಆಫ್ರಿಕಾದ ಚೀತಾಗಳನ್ನು ಕುನೋ ಅರಣ್ಯಕ್ಕೆ ಪರಿಚಯಿಸುವ ಎಂಒಇಎಫ್‌ಸಿಸಿಯ ಆದೇಶವು ಕಾನೂನಿನ ದೃಷ್ಟಿಯಲ್ಲಿ ನಿಲ್ಲುವುದಿಲ್ಲ ಮತ್ತು ಅದನ್ನು ರದ್ದುಪಡಿಸಲಾಗುತ್ತದೆ."

ಪ್ರಾಜೆಕ್ಟ್ ಲಯನ್ ಕುರಿತ 2020ರ ವರದಿಯು ಸೂಚಿಸುವಂತೆ ಸಂರಕ್ಷಣಾವಾದಿಗಳ ಭೀಕರ ಎಚ್ಚರಿಕೆಗಳು ಈಗಾಗಲೇ ನಿಜವಾಗುತ್ತಿವೆ. ಡಬ್ಲ್ಯುಐಐ ಮತ್ತು ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸರ್ಕಾರಗಳ ವರದಿಯು ಪರಿಸ್ಥಿತಿಯ ಬಗ್ಗೆ ಸಾಕಷ್ಟು ಚಿಂತಿತವಾಗಿದೆ. "ಗಿರ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಬೇಬೆಸಿಯೋಸಿಸ್ ಮತ್ತು ಸಿಡಿವಿ [ಕ್ಯಾನೈನ್ ಡಿಸ್ಟೆಂಪರ್ ವೈರಸ್] ಸ್ಫೋಟವು ಕಳೆದ ಎರಡು ವರ್ಷಗಳಲ್ಲಿ ಕನಿಷ್ಠ 60ಕ್ಕೂ ಹೆಚ್ಚು ಸಿಂಹಗಳ ಸಾವಿಗೆ ಕಾರಣವಾಗಿದೆ" ಎಂದು ಅದು ಹೇಳಿದೆ.

ವನ್ಯಜೀವಿ ಜೀವಶಾಸ್ತ್ರಜ್ಞ ರವಿ ಚೆಲ್ಲಂ ಹೇಳುವಂತೆ, "ಮಾನವ ಅಹಂಕಾರ ಮಾತ್ರವೇ ವರ್ಗಾವಣೆಯನ್ನು ನಿಲ್ಲಿಸುತ್ತಿದೆ. ವರ್ಗಾವಣೆಯನ್ನು ನಿರ್ಧರಿಸುವಲ್ಲಿ ಅವರು ಸರ್ವೋಚ್ಚ ನ್ಯಾಯಾಲಯದ ಅರಣ್ಯ ಪೀಠಕ್ಕೆ ತಜ್ಞ ವೈಜ್ಞಾನಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಸಂರಕ್ಷಣಾ ವಿಜ್ಞಾನಿ ಮತ್ತು ಮೆಟಾಸ್ಟ್ರಿಂಗ್ ಫೌಂಡೇಶನ್ನಿನ ಸಿಇಒ ಆಗಿರುವ ಚೆಲ್ಲಮ್, ಸಿಂಹಗಳನ್ನು ಸ್ಥಳಾಂತರಿಸುವುದನ್ನು ಕಾಯುತ್ತಿದ್ದಾರೆ.

"ಸಿಂಹಗಳು ಹೆಚ್ಚಿನ ಅಪಾಯದ ಸಮಯವನ್ನು ಎದುರಿಸುತ್ತಿವೆ, ಮತ್ತು ಈಗ ಅವುಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಸಂರಕ್ಷಣೆಯಲ್ಲಿ, ದುರದೃಷ್ಟವಶಾತ್, ನೀವು ಎಂದಿಗೂ ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ. ವಿಶೇಷವಾಗಿ ಅಳಿವಿನಂಚಿನಲ್ಲಿರುವ ಪ್ರಭೇದಗಳ ವಿಷಯದಲ್ಲಿ - ಏಕೆಂದರೆ ಬೆದರಿಕೆಗಳು ಯಾವಾಗಲೂ ಇರುತ್ತವೆ. ಇದು ಶಾಶ್ವತ ಜಾಗರೂಕತೆಯ ವಿಜ್ಞಾನವಾಗಿದೆ" ಎಂದು ಜೀವವೈವಿಧ್ಯ ಸಹಕಾರಿಯ ಸದಸ್ಯರೂ ಆಗಿರುವ ಚೆಲ್ಲಮ್ ಹೇಳುತ್ತಾರೆ.

PHOTO • Priti David
PHOTO • Priti David

ಎಡ : ರಾಷ್ಟ್ರೀಯ ಉದ್ಯಾನದ ಹಳೆಯ ಪೈರಾ ಗ್ರಾಮದ ಸೂಚನಾ ಫಲಕ . ಬಲಕ್ಕೆ : ಖಾಲಿಯಾದ ಹಳ್ಳಿಯ ಹೆಚ್ಚಿನ ಮನೆಗಳು ಕುಸಿದಿವೆ , ಆದರೆ ಬಣ್ಣ ಬಳಿದ ದ್ವಾರವು ಇನ್ನೂ ನಿಂತಿದೆ

" ಮನು ಷ್ಯ ಕೋ ಭಗಾ ದಿಯಾ ರ್ ಶೇರ್ ನಹೀ ಯಾ ! [ಮನುಷ್ಯರನ್ನು ಓಡಿಸಿದರು, ಆದರೆ ಯಾವ ಸಿಂಹಗಳೂ ಬರಲಿಲ್ಲ]."

ಮಂಗು ಆದಿವಾಸಿ ಕುನೊದಲ್ಲಿ ತನ್ನ ಮನೆಯನ್ನು ಕಳೆದುಕೊಂಡ ಬಗ್ಗೆ ತಮಾಷೆ ಮಾಡುತ್ತಾರೆ, ಆದರೆ ಅವರ ಧ್ವನಿಯಲ್ಲಿ ನಗುವಿಲ್ಲ. ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸಬೇಕು ಅಥವಾ ಅಲ್ಲಿಗೆ ಹಿಂತಿರುಗಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಅವರು ತಲೆಗೆ ಕೆಲವು ಏಟುಗಳನ್ನು ಸಹ ತಿಂದಿದ್ದಾರೆ. "ನಾವು ಮರಳಿ ಅಲ್ಲಿಗೆ ಹೋಗುತ್ತೇವೆಂದು ಅನೇಕ ಬಾರಿ ಭಾವಿಸಿದ್ದೆವು."

ಆಗಸ್ಟ್ 15, 2008ರಂದು ನಡೆದ ಪ್ರತಿಭಟನೆಯು, ಸರಿಯಾದ ಪರಿಹಾರವೆಂಬ ಬಲೂನಿನ ಮೇಲೆ ಸೂಜಿಯನ್ನು ಚುಚ್ಚುವ ಅಂತಿಮ ಪ್ರಯತ್ನವಾಗಿತ್ತು. "[ನಂತರ] ನಾವು ನಮಗೆ ನೀಡಿದ ಭೂಮಿಯನ್ನು ಬಿಡಲು ನಿರ್ಧರಿಸಿದೆವು, ಮತ್ತು ನಮ್ಮ ಹಳೆಯ ಭೂಮಿಯನ್ನು ಹಿಂತಿರುಗಿಸಬೇಕೆಂದು ನಾವು ಬಯಸಿದ್ದೆವು. ಸ್ಥಳಾಂತರವಾದ 10 ವರ್ಷಗಳ ಒಳಗೆ ಹಿಂತಿರುಗಲು ನಮಗೆ ಅವಕಾಶ ನೀಡುವ ಕಾನೂನು ಇದೆ ಎಂದು ನಮಗೆ ತಿಳಿದಿತ್ತು" ಎಂದು ರಘುಲಾಲ್ ಹೇಳುತ್ತಾರೆ.

ಆ ಅವಕಾಶವನ್ನು ಕಳೆದುಕೊಂಡ ನಂತರ, ರಘುಲಾಲ್ ಹೋರಾಟವನ್ನು ಬಿಟ್ಟುಕೊಡಲಿಲ್ಲ ಮತ್ತು ಪರಿಸ್ಥಿತಿಯನ್ನು ಸರಿಪಡಿಸಲು ತನ್ನ ಸ್ವಂತ ಹಣ ಮತ್ತು ಸಮಯವನ್ನು ಖರ್ಚು ಮಾಡಿದ್ದಾರೆ. ಅವರು ಅನೇಕ ಬಾರಿ ಜಿಲ್ಲಾ ಮತ್ತು ತಹಸಿಲ್ ಕಚೇರಿಗಳಿಗೆ ಅಲೆದಿದ್ದಾರೆ. ಅವರು ತಮ್ಮ ಪಂಚಾಯತ್ ಪ್ರಕರಣವನ್ನು ವಾದಿಸಲು ಭೋಪಾಲ್ ನ ಚುನಾವಣಾ ಆಯೋಗದ ಬಳಿ ಹೋಗಿದ್ದಾರೆ. ಆದರೆ ಅದರಿಂದ ಏನೂ ಪ್ರಯೋಜನವಾಗಿಲ್ಲ.

ರಾಜಕೀಯ ಧ್ವನಿಯನ್ನು ಹೊಂದಿಲ್ಲದಿರುವುದು ಸ್ಥಳಾಂತರಗೊಂಡವರನ್ನು ನಿರ್ಲಕ್ಷಿಸಲು ಮತ್ತು ಮೌನಗೊಳಿಸುವುದನ್ನು ಸುಲಭಗೊಳಿಸಿದೆ. "ನಾವು ಹೇಗಿದ್ದೇವೆ, ನಮಗೆ ಏನಾದರೂ ಸಮಸ್ಯೆಗಳಿವೆಯೇ ಅಥವಾ ಏನಾದರೂ ಅಗತ್ಯವಿದೆಯೇ ಎಂದು ಯಾರೂ ನಮ್ಮನ್ನು ಕೇಳಿಲ್ಲ. ಯಾರೂ ಇಲ್ಲಿಗೆ ಬರುವುದಿಲ್ಲ. ನಾವು ಅರಣ್ಯ ಕಚೇರಿಗೆ ಹೋದರೆ, ಅಲ್ಲಿ ಯಾವುದೇ ಅಧಿಕಾರಿಗಳು ಸಿಗುವುದಿಲ್ಲ" ಎಂದು ರಾಮ್ ದಯಾಳ್ ಹೇಳುತ್ತಾರೆ. "ನಾವು ಅವರನ್ನು ಭೇಟಿಯಾದಾಗ, ಅವರು ತಕ್ಷಣವೇ ನಮ್ಮ ಕೆಲಸವನ್ನು ಮಾಡುವುದಾಗಿ ನಮಗೆ ಭರವಸೆ ನೀಡುತ್ತಾರೆ. ಆದರೆ 23 ವರ್ಷಗಳಿಂದ ಏನೂ ಮಾಡಲಾಗಿಲ್ಲ.

ಕವರ್ ಫೋಟೊ : ತನ್ನ ಕುಟುಂಬದ ಹಳೆಯ ಮನೆಯ ಗುರುತೂ ಇಲ್ಲವಾಗಿರುವ ಸ್ಥಳದಲ್ಲಿ ಕುಳಿತಿರುವ ಸುಲ್ತಾನ್ ಜಾಟವ್

ಲೇಖನ ಸಂಶೋಧ ನೆಯಲ್ಲಿ ಮತ್ತು ಅನುವಾದಗ ಅಮೂಲ್ಯ ಸಹಾಯ ಮಾಡಿದಕ್ಕಾಗಿ ವರದಿಗಾರ ರು ಸೌರಭ್ ಚೌಧರಿ ವರಿಗೆ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತಾರೆ .

ಅನುವಾದ: ಶಂಕರ. ಎನ್. ಕೆಂಚನೂರು

Priti David

ପ୍ରୀତି ଡେଭିଡ୍‌ ପରୀର କାର୍ଯ୍ୟନିର୍ବାହୀ ସମ୍ପାଦିକା। ସେ ଜଣେ ସାମ୍ବାଦିକା ଓ ଶିକ୍ଷୟିତ୍ରୀ, ସେ ପରୀର ଶିକ୍ଷା ବିଭାଗର ମୁଖ୍ୟ ଅଛନ୍ତି ଏବଂ ଗ୍ରାମୀଣ ପ୍ରସଙ୍ଗଗୁଡ଼ିକୁ ପାଠ୍ୟକ୍ରମ ଓ ଶ୍ରେଣୀଗୃହକୁ ଆଣିବା ଲାଗି ସ୍କୁଲ ଓ କଲେଜ ସହିତ କାର୍ଯ୍ୟ କରିଥାନ୍ତି ତଥା ଆମ ସମୟର ପ୍ରସଙ୍ଗଗୁଡ଼ିକର ଦସ୍ତାବିଜ ପ୍ରସ୍ତୁତ କରିବା ଲାଗି ଯୁବପିଢ଼ିଙ୍କ ସହ ମିଶି କାମ କରୁଛନ୍ତି।

ଏହାଙ୍କ ଲିଖିତ ଅନ୍ୟ ବିଷୟଗୁଡିକ Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru