ಪ್ಯಾನೆಲ್ 'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದ ಭಾಗವಾಗಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ಕಾರ್ಯಗಳನ್ನು ಚಿತ್ರರೂಪದಲ್ಲಿ ದಾಖಲಿಸಲಾಗಿದೆ. ಎಲ್ಲಾ ಚಿತ್ರಗಳನ್ನು ಪಿ. ಸಾಯಿನಾಥ್ ಅವರು 1993 ರಿಂದ 2002 ನಡುವೆ ತಮ್ಮ 10 ರಾಜ್ಯಗಳಲ್ಲಿನ ಓಡಾಟದಲ್ಲಿ ತೆಗೆದಿದ್ದಾರೆ. ಇಲ್ಲಿ, ಪರಿ ಛಾಯಾಚಿತ್ರ ಪ್ರದರ್ಶನದ ಡಿಜಿಟಲ್ ಪ್ರಾತಿನಿಧ್ಯವನ್ನು ಸೃಜನಾತ್ಮಕವಾಗಿ ರಚಿಸಿದೆ, ಇದನ್ನು ಹಲವು ವರ್ಷಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಪ್ರದರ್ಶಿಸಲಾಗಿದೆ.

ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು

ಆ ಮಹಿಳೆ ಕಡಿದಾದ ಇಳಿಜಾರಿನ ಕಡೆಯಿಂದ ಮೇಲೆ ಏರುತ್ತಿದ್ದರು, ತಲೆಯ ಮೇಲೆ ಭಾರವಾದ ಹೊರೆಯು ಆಕೆಯ ಮುಖವನ್ನು ಮುಚ್ಚಿತ್ತು. ಆಕೆಯ ಕೆಲಸ ಕಾಣುತ್ತಿತ್ತು, ಆದರೆ ಆ ಮಹಿಳೆ ಕಾಣುತ್ತಿರಲಿಲ್ಲ. ಅಂದರೆ, ತಾವು ಮಾಡುವ ರಾಶಿ, ರಾಶಿ ಕೆಲಸಗಳ ನಡುವೆಯೂ ಈ ಮಹಿಳೆಯರು ಅಜ್ಞಾತರು. ಒಡಿಶಾದ ಮಲ್ಕಾನ್‌ಗಿರಿಯ ಈ ಭೂರಹಿತ ಮಹಿಳೆಗೆ ಇದು ಅಂದಿನ ಸಾಮಾನ್ಯ ಕೆಲಸದ ಭಾಗವಾಗಿತ್ತು. ನೀರು ತುಂಬುವುದು, ಉರುವಲು ಮತ್ತು ಮೇವು ಸಂಗ್ರಹಿಸುವುದು ಇವೆಲ್ಲವುಗಳ ಹಾಗೆ. ಈ ಮಹಿಳೆಯರ ಜೀವನದ ಮೂರನೇ ಒಂದು ಭಾಗವು ಈ ಮೂರು ಕೆಲಸಗಳಲ್ಲಿ ಕಳೆದುಹೋಗುತ್ತದೆ. ದೇಶದ ಕೆಲವು ಭಾಗಗಳಲ್ಲಿ, ಮಹಿಳೆಯರು ತಮ್ಮ ಕುಟುಂಬಗಳಿಗೆ ನೀರು ಮತ್ತು ಉರುವಲನ್ನು ಸಂಗ್ರಹಿಸಲು ದಿನಕ್ಕೆ ಏಳು ಗಂಟೆಗಳ ಕಾಲ ಶ್ರಮ ಪಡುತ್ತಾರೆ. ಜಾನುವಾರುಗಳಿಗೆ ಮೇವು ಸಂಗ್ರಹಿಸಲು ದಿನದ ಕೆಲವು ಸಮಯ ಬೇಕಾಗುತ್ತದೆ. ಗ್ರಾಮೀಣ ಭಾರತದ ಹಲವಾರು ಮಹಿಳೆಯರು ಈ ವಸ್ತುಗಳನ್ನು ಸಂಗ್ರಹಿಸಲು ಪ್ರತಿದಿನ ಅನೇಕ ಕಿಲೋಮೀಟರ್‌ಗಳಷ್ಟು ನಡೆಯುತ್ತಾರೆ.

ತಲೆಯ ಮೇಲಿನ ಹೊರೆ ಬಹಳ ಭಾರವಿರುತ್ತದೆ. ಮಲ್ಕಾನ್‌ನಗಿರಿಯಲ್ಲಿ ಬೆಟ್ಟದ ಇಳಿಜಾರು ಹತ್ತುತ್ತಿರುವ ಈ ಬುಡಕಟ್ಟು ಮಹಿಳೆ ಸುಮಾರು 30 ಕೆಜಿ ತೂಕದ ಉರುವಲು ಸೌದೆಯನ್ನು ತಲೆಯ ಮೇಲೆ ಹೊತ್ತುಕೊಂಡಿದ್ದಾರೆ. ಮತ್ತು ಅವರು ಇನ್ನೂ ಮೂರು ಕಿಲೋಮೀಟರ್ ನಡೆಯಬೇಕಿದೆ. ಅನೇಕ ಮಹಿಳೆಯರು ತಮ್ಮ ಮನೆಗಳಿಗೆ ನೀರು ತರಲು ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ದೂರವನ್ನು ಪ್ರಯಾಣಿಸುತ್ತಾರೆ.

ವೀಡಿಯೊ ನೋಡಿ: ʼಆಕೆ ತನ್ನ ತಲೆಯ ಮೇಲೆ ಹೊತ್ತಿರುವ ಹೊರೆ ಆಕೆಯ ದೇಹಕ್ಕಿಂತ ದೊಡ್ಡಪ್ರಮಾಣದಲ್ಲಿದೆ'

ಮಧ್ಯಪ್ರದೇಶದ ಝಬುವಾದಲ್ಲಿನ ಈ ಮಹಿಳೆ ಮರದ ದಿಮ್ಮಿಗಳ ಮೇಲೆ ನಿಂತು ಆವರಣವಿಲ್ಲದ ಬಾವಿಯಿಂದ ನೀರು ಸೇದುತ್ತಿದ್ದಾರೆ. ಬಾವಿಗೆ ಅಡ್ಡಲಾಗಿ ಮರದ ದಿಮ್ಮಿಗಳನ್ನು ಹಾಕಲಾಗಿರುತ್ತದೆ, ಇದು ಮಣ್ಣು ಮತ್ತು ಧೂಳು ಅದರೊಳಗೆ ಹೋಗದಂತೆ ತಡೆಯುತ್ತದೆ. ಆದರೆ ಆ ದಿಮ್ಮಿಗಳನ್ನು ಒಟ್ಟಿಗೆ ಕಟ್ಟಿರುವುದಿಲ್ಲ. ಅವರು ನೀರೆತ್ತುವಾಗ ಸಮತೋಲನ ತಪ್ಪಿದರೆ ಇಪ್ಪತ್ತು ಅಡಿ ಆಳದ ಈ ಬಾವಿಗೆ ಬೀಳುತ್ತಾರೆ. ಜಾರಿ ಬದಿಗೆ ಬಿದ್ದರೆ, ಕಾಲುಗಳು ಈ ಮರದ ದಿಮ್ಮಿಗಳ ನಡುವೆ ಸಿಲುಕಿ ನುಜ್ಜುಗುಜ್ಜಾಗಬಹುದು.

ಅರಣ್ಯನಾಶಗೊಂಡ ಅಥವಾ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ, ಈ ದುಡಿಮೆಯು ಇನ್ನಷ್ಟು ಕಷ್ಟಕರವಾಗಿರುತ್ತದೆ. ದೂರಗಳು ಇನ್ನಷ್ಟು ಹೆಚ್ಚಿರುತ್ತವೆ. ಆದ್ದರಿಂದ ಇಂತಹ ಪ್ರದೇಶಗಳಲ್ಲಿ ಮಹಿಳೆ ಒಂದೇ ಬಾರಿಗೆ ದೊಡ್ಡ ಹೊರೆಗಳನ್ನು ಸಾಗಿಸಲು ಪ್ರಯತ್ನಿಸುತ್ತಾಳೆ.

ಒ‍ಳ್ಳೆಯ ಸಮಯದಲ್ಲೂ ಇವುಗಳು ತುಂಬಾ ಕಷ್ಟಕರವಾದ ಕೆಲಸಗಳಾಗಿವೆ. ಗ್ರಾಮದ ಸಾಮಾನ್ಯ ಜಮೀನು ಕೋಟ್ಯಂತರ ಜನರ ಕೈಗೆಟುಕದಂತೆ ಹೆಚ್ಚು ಹೆಚ್ಚು ಸಮಸ್ಯೆಗಳು ಜಟಿಲವಾಗುತ್ತಿವೆ. ದೇಶದ ಬಹುತೇಕ ರಾಜ್ಯಗಳಲ್ಲಿ ಗ್ರಾಮಗಳ ಸಾರ್ವಜನಿಕ ಸ್ಥಳಗಳನ್ನು ತ್ವರಿತವಾಗಿ ಖಾಸಗೀಕರಣಗೊಳಿಸಲಾಗುತ್ತಿದೆ. ಇದರಿಂದ ಬಡವರು ಅದರಲ್ಲೂ ಕೃಷಿ ಕೂಲಿಕಾರರು ತೊಂದರೆ ಅನುಭವಿಸುತ್ತಿದ್ದಾರೆ. ಶತಮಾನಗಳಿಂದ, ಅವರು ಈ ಸ್ಥಳಗಳಿಂದ ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಅಗತ್ಯ ಬಳಕೆಯ ವಸ್ತುಗಳನ್ನು ಪಡೆಯುತ್ತಿದ್ದಾರೆ. ಈಗ ಈ ಸ್ಥಳಗಳ ನಷ್ಟವು ಇತರ ವಿಷಯಗಳ ಜೊತೆಗೆ, ಕೊಳಗಳು ಮತ್ತು ದಾರಿಗಳು, ಹುಲ್ಲುಗಾವಲುಗಳು, ಉರುವಲು ಮರಗಳು, ಜಾನುವಾರುಗಳಿಗೆ ಮೇವು ಮತ್ತು ನೀರಿನ ಮೂಲಗಳ ನಷ್ಟವಾಗಿದೆ. ಮರಗಳು ಮತ್ತು ಸಸ್ಯಗಳ ಪ್ರದೇಶ ಅವರು ಹಣ್ಣುಗಳನ್ನು ಪಡೆಯುವ ಪ್ರದೇಶವನ್ನು ಕಳೆದುಕೊಳ್ಳುತ್ತಾರೆ.

PHOTO • P. Sainath
PHOTO • P. Sainath
PHOTO • P. Sainath

ಸಾರ್ವಜನಿಕ ಭೂಮಿಗಳ ಖಾಸಗೀಕರಣ ಮತ್ತು ವಾಣಿಜ್ಯೀಕರಣವು ಬಡ ಪುರುಷರು ಮತ್ತು ಮಹಿಳೆಯರ ಮೇಲೆ ಸಮಾನವಾಗಿ ಪರಿಣಾಮ ಬೀರುತ್ತಿದೆ. ಆದರೆ ಈ ಸ್ಥಳಗಳಿಂದ ಅಗತ್ಯ ವಸ್ತುಗಳನ್ನು ಸಂಗ್ರಹಿಸುವ ಮಹಿಳೆಯರ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ದಲಿತರು ಮತ್ತು ಇತರೆ ಹಿಂದುಳಿದ ವರ್ಗಗಳ ಭೂರಹಿತ ಕಾರ್ಮಿಕರು ಹೆಚ್ಚು ತೊಂದರೆಗೊಳಗಾಗುತ್ತಿದ್ದಾರೆ. ಹರಿಯಾಣದಂತಹ ರಾಜ್ಯಗಳಲ್ಲಿ, ಮೇಲ್ಜಾತಿಗಳ ನೇತೃತ್ವದ ಪಂಚಾಯತ್‌ಗಳು ಅಂತಹ ಸಾರ್ವಜನಿಕ ಭೂಮಿಯನ್ನು ಕಾರ್ಖಾನೆಗಳು, ಹೋಟೆಲ್‌ಗಳು, ಬ್ರೂವರೀಸ್, ಐಷಾರಾಮಿ ತೋಟದ ಮನೆಗಳು ಮತ್ತು ವಸತಿ ಕಾಲೋನಿಗಳಿಗೆ ಗುತ್ತಿಗೆ ನೀಡಿವೆ.

ಟ್ರ್ಯಾಕ್ಟರ್‌ಗಳ ಜೊತೆಗೆ, ಯಂತ್ರಗಳನ್ನು ಸಹ ಈಗ ಕೃಷಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತಿದೆ, ಇದರಿಂದಾಗಿ ಭೂ ಮಾಲೀಕರಿಗೆ ಕಾರ್ಮಿಕರ ಅಗತ್ಯ ಕಡಿಮೆಯಾಗಿದೆ. ಆದುದರಿಂದಲೇ ಒಂದು ಕಾಲದಲ್ಲಿ ಬಡ ಕೂಲಿಕಾರ್ಮಿಕರು ಹಳ್ಳಿಯೊಳಗೆ ಬದುಕಲು ಬಳಸುತ್ತಿದ್ದ ಸಾಮಾನ್ಯ ಭೂಮಿಯನ್ನು ಈಗ ಮಾರಾಟ ಮಾಡಬಹುದು ಎಂದು ಅವರು ಭಾವಿಸುತ್ತಾರೆ. ಈ ಸಾಮಾನ್ಯ ಜಮೀನುಗಳ ಮಾರಾಟವನ್ನು ಬಡವರು ವಿರೋಧಿಸಿದಾಗ, ಹಳ್ಳಿಯ ಜಮೀನ್ದಾರರು ಜಾತಿ ಮತ್ತು ಆರ್ಥಿಕ ಆಧಾರದ ಮೇಲೆ ಬಹಿಷ್ಕರಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಸಾಮಾನ್ಯ ಭೂಮಿಯನ್ನು ಕಳೆದುಕೊಂಡು ನಂತರ ಬಹಿಷ್ಕಾರದ ಪರಿಣಾಮ ಹಲವೆಡೆ ಮಹಿಳೆಯರಿಗೆ ಶೌಚಾಲಯದ ಸ್ಥಳವಿಲ್ಲದಂತಾಗಿದೆ. ಇದು ಈಗ ಅನೇಕ ಮಹಿಳೆಯರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಲಕ್ಷಾಂತರ ಮನೆಗಳು ಉರುವಲು, ಮೇವು ಮತ್ತು ನೀರನ್ನು ದೂರದಿಂದ ಸಂಗ್ರಹಿಸುವ ಮೂಲಕ ನಡೆಯುತ್ತವೆ. ಈ ಕೆಲಸಗಳನ್ನು ಮಾಡುವ ಮಹಿಳೆಯರು ಅದಕ್ಕೆ ಭಾರೀ ಬೆಲೆ ತೆರುತ್ತಿದ್ದಾರೆ.

PHOTO • P. Sainath

ಅನುವಾದ: ಶಂಕರ. ಎನ್. ಕೆಂಚನೂರು

P. Sainath

ପି. ସାଇନାଥ, ପିପୁଲ୍ସ ଆର୍କାଇଭ୍ ଅଫ୍ ରୁରାଲ ଇଣ୍ଡିଆର ପ୍ରତିଷ୍ଠାତା ସମ୍ପାଦକ । ସେ ବହୁ ଦଶନ୍ଧି ଧରି ଗ୍ରାମୀଣ ରିପୋର୍ଟର ଭାବେ କାର୍ଯ୍ୟ କରିଛନ୍ତି ଏବଂ ସେ ‘ଏଭ୍ରିବଡି ଲଭସ୍ ଏ ଗୁଡ୍ ଡ୍ରଟ୍’ ଏବଂ ‘ଦ ଲାଷ୍ଟ ହିରୋଜ୍: ଫୁଟ୍ ସୋଲଜର୍ସ ଅଫ୍ ଇଣ୍ଡିଆନ୍ ଫ୍ରିଡମ୍’ ପୁସ୍ତକର ଲେଖକ।

ଏହାଙ୍କ ଲିଖିତ ଅନ୍ୟ ବିଷୟଗୁଡିକ ପି.ସାଇନାଥ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru