"ನಾನು ಒಂದಿಷ್ಟು ತರಕಾರಿಗಳನ್ನು ಮಾರುತ್ತೇನೆ, ಆದರೆ ಅದರಿಂದ ಹೆಚ್ಚಿನ ಲಾಭವಿಲ್ಲ, ಈಗ ನಾವೆಲ್ಲರೂ ಹೆಚ್ಚಾಗಿ ಮನೆಯಲ್ಲಿ ಖಾಲಿ ಕುಳಿತಿರುತ್ತೇವೆ. ಸ್ಥಳೀಯ ಸಿಮೆಂಟ್ ಕಾರ್ಖಾನೆ ನಡೆಯುತ್ತಿದೆಯಾದರೂ ನಾವು ಕೆಲಸಕ್ಕೆ ಹೋಗುತ್ತಿಲ್ಲ' ಎಂದು ಕಛ್ ಜಿಲ್ಲೆಯ ಲಖಪತ್ ತಾಲ್ಲೂಕಿನಲ್ಲಿರುವ ಮೋರಿ ಗ್ರಾಮದಿಂದ ಕರೀಂ ನನಗೆ ಪೋನ್ ಕರೆಯ ಮೂಲಕ ವಿವರಿಸುತ್ತಿದ್ದರು. ಕರೀಂ ಜಾಟ್ ಫಕಿರಾನಿ ಜಾಟ್ ಸಮುದಾಯದಲ್ಲಿನ ಮಾಲ್ಧಾರಿ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಕಛಿ ಭಾಷೆಯಲ್ಲಿ 'ಮಾಲ್' ಎನ್ನುವುದು ಪ್ರಾಣಿಗಳನ್ನು ಸೂಚಿಸುತ್ತದೆ, ಮತ್ತು 'ಧಾರಿ' ಎಂದರೆ ರಕ್ಷಕ ಅಥವಾ ಮಾಲೀಕ ಎಂದರ್ಥವಾಗುತ್ತದೆ. ಕಛ್ ನಾದ್ಯಂತ ಮಾಲ್ಧಾರಿಗಳು ಹಸುಗಳು, ಎಮ್ಮೆಗಳು, ಒಂಟೆಗಳು, ಕುದುರೆಗಳು, ಕುರಿ ಮತ್ತು ಮೇಕೆಗಳನ್ನು ಸಾಕುತ್ತಾರೆ.
ತರಕಾರಿಗಳನ್ನು ತಾವು ಹತ್ತಿರದ ಮಾರುಕಟ್ಟೆ ಮತ್ತು ಹಳ್ಳಿಗಳಿಂದ ತಂದಿರುವುದಾಗಿ ಕರೀಂ ಜಾಟ್ ಹೇಳುತ್ತಾರೆ- ಆದರೆ, ಅವುಗಳಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ ಎಂದು ದೂರುತ್ತಾರೆ. ಸಿಮೆಂಟ್ ಕಾರ್ಖಾನೆ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಟೌನ್‌ಶಿಪ್‌ನಲ್ಲಿದ್ದರೂ ಸಹಿತ, ಕರೀಮ್ ಮತ್ತು ಅವರ ಸಹವರ್ತಿ ಫಕಿರಾನಿ ಜಾಟ್‌ಗಳಿಗೆ ಲಾಕ್‌ಡೌನ್ ನಿಂದಾಗಿ ಹೊರ ಹೋಗುವುದೇ ಕಷ್ಟಕರವಾಗುತ್ತಿದೆ. ಇದಲ್ಲದೆ, ಕಾರ್ಖಾನೆಯಲ್ಲಿ ಈಗಾಗಲೇ ಪಶ್ಚಿಮ ಬಂಗಾಳ ಮತ್ತು ಇತರ ಪ್ರದೇಶಗಳಿಂದ ವಲಸೆ ಬಂದಿರುವ ಅನೇಕ ಕಾರ್ಮಿಕರಿದ್ದಾರೆ, ಅವರಲ್ಲಿ ಹಲವರು ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗದೆ ಇಲ್ಲಿಯೇ ಉಳಿದಿದ್ದಾರೆ. ಇಲ್ಲಿನ ವಲಸಿಗರು ಮತ್ತು ಸ್ಥಳೀಯರ ನಡುವಿನ ಸಂಬಂಧವು ಕೂಡ ಎಂದಿಗೂ ಅನ್ಯೋನ್ಯತೆಯಿಂದ ಕೂಡಿಲ್ಲ.
ಲಾಕ್‌ಡೌನ್ ನಿಂದಾಗಿ, ಭಾರತ-ಪಾಕಿಸ್ತಾನ ಗಡಿಯ ಬಳಿಯಿರುವ ಸಾವ್ಲಾ ಪೀರ್ ದರ್ಗಾದ ಜಾತ್ರೆಗೆ ಹೋಗುವುದನ್ನು ತಪ್ಪಿಸಿಕೊಂಡಿರುವುದಾಗಿ ಕರೀಮ್ ಜಾಟ್ ಹೇಳುತ್ತಾರೆ."ಪವಿತ್ರ ರಂಜಾನ್ ತಿಂಗಳು ಈಗಾಗಲೇ ಪ್ರಾರಂಭವಾಗಿದೆ.ಮತ್ತು ಈದ್ ಗೆ ಒಂದು ತಿಂಗಳಿಗೂ ಕಡಿಮೆ ಸಮಯವಿದೆ, ಈ ಸಮಯದಲ್ಲಿ ಈದ್ ಎಂದಿನಂತಿರುವುದಿಲ್ಲ." ಎನ್ನುವ ಆತಂಕ ಅವರದ್ದಾಗಿದೆ.
ಕಛ್ ನಲ್ಲಿ ವರದಿಯಾದ ಮೊದಲ ಕೊರೊನಾ ಪ್ರಕರಣವು ಲಖಪತ್ ತಾಲ್ಲೂಕಿನ ಮಹಿಳೆ ಎಂದು ತಿಳಿದುಬಂದಿದೆ, ಅವರು ವಿದೇಶ ಪ್ರವಾಸದಿಂದ ಹಿಂದಿರುಗಿದ್ದರು. ಮಾರ್ಚ್ ನಲ್ಲಿ ಅವರನ್ನು ಭುಜ್ ಗೆ ಕರೆದೊಯ್ದು ಪರೀಕ್ಷೆಗೆ ಒಳಪಡಿಸಿದಾಗ, ಅವರಿಗೆ ಕೊರೊನಾ ಇರುವುದು ಧೃಢಪಟ್ಟಿತು. ಈ ಲಖಪತ್ ಪ್ರದೇಶವು ಬಹುತೇಕ ಒಂಟೆ ಸಾಕಾಣಿಕೆದಾರರ ನೆಲೆಬೀಡಾಗಿದೆ.
ಮಾರ್ಚ್ 24ರಂದು ಕಛ್ ನಲ್ಲಿ ಲಾಕ್‌ಡೌನ್ ಘೋಷಣೆಯಾದ ನಂತರ, ಬಹುತೇಕ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡವು. ಅದರಲ್ಲೂ ವಿಶೇಷವಾಗಿ ಒಂಟೆ ಸಾಕಾಣಿಕೆದಾರರು ತಮ್ಮ ಮನೆಗಳಿಂದ ದೂರದಲ್ಲಿರುವ ಸ್ಥಳಗಳಲ್ಲಿದ್ದು ತಮ್ಮ ಪ್ರಾಣಿಗಳನ್ನು ಮೇಯಿಸುವವರು. ಇದರಿಂದಾಗಿ ಅವರು ಕಠಿಣ ಸವಾಲುಗಳನ್ನು ಎದುರಿಸಬೇಕಾಯಿತು.ಅಲ್ಲದೆ, ಅವರು ವಾಸಿಸುವ ಪ್ರದೇಶಗಳು ಗಡಿಗೆ ಬಹಳ ಹತ್ತಿರದಲ್ಲಿರುವುದರಿಂದ ಅವುಗಳನ್ನು ಹೆಚ್ಚು ಸೂಕ್ಷ್ಮ ವಲಯಗಳಾಗಿ ಗುರುತಿಸಲಾಗಿದೆ, ಈ ಪ್ರದೇಶಗಳನ್ನು ಅತಿ ಕಠಿಣವಾಗಿರುವ ಭದ್ರತಾ ಪ್ರೋಟೋಕಾಲ್‌ಗಳು ನಿಯಂತ್ರಿಸುತ್ತವೆ.ಈಗ ದಿಢೀರ್ ವಿಧಿಸಿರುವ ಲಾಕ್ ಡೌನ್ ನಿಂದಾಗಿ ಬಹುತೇಕ ಮಾಲ್ಧಾರಿಗಳಿಗೆ ತಮ್ಮ ಹಳ್ಳಿಗಳಿಗೆ ಮರಳಲು ಅಥವಾ ಅಲ್ಲಿ ವಾಸಿಸುವ ತಮ್ಮ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವ್ಯವಸ್ಥೆ ಮಾಡಲು ಸಾಕಷ್ಟು ಸಮಯವಿಲ್ಲ.
ಅವರ ಜಾನುವಾರಗಳು ಬಯಲಿನಲ್ಲಿ ಸಿಲುಕಿಕೊಂಡು ಸಂಕಷ್ಟದಲ್ಲಿ ಸಿಲುಕಿದ್ದವು, ಈಗ ಅವು ಪರವಾಗಿಲ್ಲ ಎಂದು ಹೇಳುತ್ತಾರೆ. ಆದರೆ, ಈಗ ಲಾಕ್‌ಡೌನ್ ನ್ನು ಮತ್ತಷ್ಟು ವಿಸ್ತರಿಸಿದರೆ ಜಾನುವಾರಗಳ ಆಹಾರಕ್ಕೆ ಸಮಸ್ಯೆಯಾಗುತ್ತದೆ.ಇನ್ನೊಂಡೆಗೆ ಆಗ ಬೇಸಿಗೆಯು ಸಹ ತೀವ್ರಗೊಳ್ಳುತ್ತದೆ ಎನ್ನುತ್ತಾರೆ.
ನಖತ್ರನಾ ಬ್ಲಾಕ್‌ನಲ್ಲಿರುವ ಪೊಲೀಸರು ಬಯಲು ಮೈದಾನ ಪ್ರದೇಶದಲ್ಲಿರುವ ಕೆಲವು ಒಂಟೆ ಸಾಕಾಣಿಕೆದಾರರನ್ನು ಭೇಟಿ ಮಾಡಿ ಅವರಿಗೆ ತಿರುಗಾಡದಂತೆ ಸೂಚನೆ ನೀಡಿದ್ದಾರೆ ಎಂದು ಸ್ಥಳೀಯರು ನನಗೆ ಪೋನ್ ನಲ್ಲಿ ಹೇಳುತ್ತಿದ್ದರು. ಆದ್ದರಿಂದ ಈಗ ಅಲೆಮಾರಿ ಸಾಕಾಣಿಕೆದಾರರು ಎಲ್ಲಿಗೆಯಾದರೂ ಹೋಗಲು ಪ್ರಯತ್ನಿಸಿದರೆ, ಅದು ಆಯಾ ಹಳ್ಳಿಗಳಿಗೆ ರೇಷನ್ ಅಥವಾ ಇನ್ನಾವುದೇ ಕೆಲಸಕ್ಕಾಗಿ ಮಾತ್ರ, ಆದರೆ ಈಗ ಅದು ಕೂಡ ಕಷ್ಟಕರವಾಗಿದೆ.










