ಆಗಸ್ಟ್ 5ರಂದು ಜಪಾನಿನ ಒಲಿಂಪಿಕ್ಸ್ನಲ್ಲಿ ಕುಸ್ತಿಪಟು ರವಿ ದಹಿಯಾ ಬೆಳ್ಳಿ ಪದಕವನ್ನು ಸ್ವೀಕರಿಸಲು ವಿಜಯ ವೇದಿಕೆ ಮೇಲೆ ನಿಂತಾಗ ಹೃಷಿಕೇಶ್ ಘಾಡ್ಗೆ ಅತ್ಯಂತ ಭಾವುಕರಾಗಿದ್ದರು.
ಆ ನೈಜ ಸಂಭ್ರಮ ಆ ಕ್ಷಣಕ್ಕೆ ಮಾತ್ರವಾಗಿತ್ತು. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ 20ರ ಹರೆಯದ ಮಹಾತ್ವಾಕಾಂಕ್ಷೆಯ ಕುಸ್ತಿಪಟು 2020ರ ಮಾರ್ಚ್ನಲ್ಲಿ ಕೋವಿಡ್ 19 ಏಕಾಏಕಿ ಪ್ರಸರಣದ ಕಾರಣ ಕಳೆದ 18 ತಿಂಗಳಿಂದ ಹತಾಶೆಗೊಳಗಾಗಿದ್ದರು. ಮತ್ತೆ ನಿರೀಕ್ಷಿತ ಭವಿಷ್ಯವೂ ಯಾವುದೇ ರೀತಿಯ ಬದಲಾವಣೆಯನ್ನು ಕಾಣುವ ಸ್ಥಿತಿಯಲ್ಲಿಲ್ಲ. “ಇದು ಖಿನ್ನತೆಯನ್ನುಂಟು ಮಾಡುವಂಥದ್ದು,” ಎಂದು ಹೇಳಿದರವರು, “ನನಗಿನ್ನು ಕಾಲಾವಕಾಶ ಇಲ್ಲವೆಂದೆನಿಸುತ್ತಿದೆ,”
ಉತ್ಸುಕತೆಯಿಂದ ಕೂಡಿದ ನಗುವಿನೊಂದಿಗೆ ಅವರು ವ್ಯಥೆಯನ್ನುಂಟುಮಾಡುವ ಸಮಸ್ಯೆಯನ್ನು ಹೇಳಿದರು: “ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಕುಸ್ತಿಯನ್ನು ಅಭ್ಯಾಸ ಮಾಡುವುದು ನಿಮ್ಮಿಂದ ಹೇಗೆ ಸಾಧ್ಯ?”
ತನಗೆ ತಾನೇ ಖುಷಿಯಿಂದಿರಲು, ಹೃಷಿಕೇಶ್, ಒಸ್ಮಾನಾಬಾದ್ ನಗರದ ಹೊರವಲಯದಲ್ಲಿರುವ ಹತ್ಲಾಯ್ ಕುಸ್ತಿ ಸಂಕೀರ್ಣದಲ್ಲಿ ತನ್ನ ಗೆಳೆಯರೊಂದಿಗೆ ಟೋಕಿಯೋ 2020 ಒಲಿಂಪಿಕ್ಸ್ ಆಸಕ್ತಿಯಿಂದ ನೋಡಿದ. ಆಗಸ್ಟ್ 8ರಂದು ಕ್ರೀಡಾಕೂಟ ಕೊನೆಗೊಂಡಾಗ ಭಾರತ ಏಳು ಪದಕಗಳೊಂದಿಗೆ ಇದುವರೆಗೂ ಮಾಡಿರದ ಸಾಧನೆ ಮಾಡಿತ್ತು, -ಅದರಲ್ಲಿ ಎರಡು ಪದಕ ಕುಸ್ತಿಯಲ್ಲಿ ಗೆದ್ದಿತ್ತು.
ಪುರುಷರ ಫ್ರೀ ಸ್ಟೈಲ್ 57 ಕೆಜಿ ಮತ್ತು 65 ಕೆಜಿ ವಿಭಾಗದಲ್ಲಿ ಅನುಕ್ರಮವಾಗಿ ದಹಿಯಾ ಬೆಳ್ಳಿ ಪದಕ ಮತ್ತು ಬಜರಂಗ್ ಪೂನಿಯಾ ಕಂಚಿನ ಪದಕ ಗೆದ್ದಿರುವುದು ಸಾಮಾನ್ಯ ಕುಟುಂಬದಿಂದ ಬಂದ ಹೃಷಿಕೇಶ್ ಅವರಂಥ ಕುಸ್ತಿಪಟುಗಳಲ್ಲಿ ಸ್ಫೂರ್ತಿಯನ್ನುಂಟು ಮಾಡಿತ್ತು. ಹರಿಯಾಣದ ನಹ್ರಿ ಗ್ರಾಮದ ಗೇಣಿದಾರ ಬೇಸಾಯಗಾರರೊಬ್ಬರ ಮಗನಾದ 23 ವರ್ಷದ ದಹಿಯಾ, ಟೋಕಿಯೋದಲ್ಲಿ ಗೆದ್ದ ನಂತರ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ ಜತೆ ಮಾತನಾಡಿ, ತನ್ನ ಯಶಸ್ಸಿಗೆ ಕುಂಟುಂಬ ಬಹಳ ತ್ಯಾಗ ಮಾಡಿದೆ ಎಂದು ಹೇಳಿದರು. ಆದರೆ ಮೂವರು ಒಲಿಂಪಿಯನ್ನರನ್ನು ನೀಡಿದ ಅವರ ಊರಿನಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. “ಗ್ರಾಮಕ್ಕೆ ಎಲ್ಲದರ ಅಗತ್ಯ ಇದೆ, ಉತ್ತಮ ಶಾಲೆ ಜತೆಯಲ್ಲಿ ಕ್ರೀಡಾ ಸೌಲಭ್ಯದ ಅಗತ್ಯ,” ಎಂದು ಹೇಳಿದರು.












