ಈ ಡಿಸೆಂಬರ್ 20ಕ್ಕೆ ʼಪರಿʼ ತನ್ನ ಏಳನೇ ವರ್ಷಕ್ಕೆ ಕಾಲಿಟ್ಟಿದೆ. ನಾವು ಈ ಕೋವಿಡ್ ಪಿಡುಗಿನಿಂದ ಪಾರಾಗಿ ಉಳಿದಿದ್ದಷ್ಟೇ ಅಲ್ಲದೆ ಆ ಸಮಯದಲ್ಲಿ ಸಮಾಜದ ನೆನಪಿನಲ್ಲುಳಿಯುವಂತಹ ಕೆಲಸಗಳನ್ನೂ ಮಾಡಿದೆವು.
ಕಳೆದ ವರ್ಷ ಲಾಕ್ಡೌನ್ ಘೋಷಣೆಯ ಮೊದಲ ದಿನದಂದು, ಭಾರತ ಸರ್ಕಾರವು ಮಾಧ್ಯಮವನ್ನು (ಮುದ್ರಣ ಮತ್ತು ಎಲೆಕ್ಟ್ರಾನಿಕ್ ಎರಡೂ) ಅತ್ಯಗತ್ಯ ಸೇವೆಯೆಂದು ಘೋಷಿಸಿತು. ಖಂಡಿತ ಇದು ಒಳ್ಳೆಯ ನಡೆ. ಈ ಸಮಯದಲ್ಲಿ ಜನರ ಬದುಕಿನ ಸಂಕಷ್ಟಗಳನ್ನು ಸಮಾಜದ ಮುಂದಿಡಲು ಮಾಧ್ಯಮಗಳ ಅಗತ್ಯ ಈ ಸಮಯದಲ್ಲಿ ಎಂದಿಗಿಂತಲೂ ಹೆಚ್ಚೇ ಇತ್ತು. ಮಾಧ್ಯಮ ಈ ಸಮಯದಲ್ಲಿ ಜನರ ಬದುಕು ಮತ್ತು ಜೀವನೋಪಾಯಗಳು ಸಂಕಷ್ಟದಲ್ಲಿರುವುದರ ಕುರಿತು ವರದಿ ಮಾಡಬೇಕಿತ್ತು. ಆದರೆ ಇದಕ್ಕೆ ಪ್ರತಿಯಾಗಿ ಈ ದೇಶದ ದೊಡ್ಡ ದೊಡ್ಡ ಮಾಧ್ಯಮ ಕಂಪನಿಗಳು ಏನು ಮಾಡಿದವು? ಅವು ಎರಡರಿಂದ ಎರಡೂವರೆ ಸಾವಿರ ಪತ್ರಕರ್ತರು ಮತ್ತು ಹತ್ತು ಸಾವಿರಕ್ಕೂ ಹೆಚ್ಚು ಮಾಧ್ಯಮ ಕೆಲಸಗಾರರನ್ನು ಕೆಲಸದಿಂದ ವಜಾ ಮಾಡಿದವು.
ಹಾಗಿದ್ದರೆ ಇಷ್ಟೆಲ್ಲ ಜನರನ್ನು ಮನೆಗೆ ಕಳುಹಿಸಿ ಇವರು ದೊಡ್ಡ ದೊಡ್ಡ ವರದಿಗಳನ್ನು ಹೇಗೆ ಮಾಡುತ್ತಾರೆ? ಅದರಲ್ಲೂ ಉಳಿದವರಿಗೂ 40ರಿಂದ 60 ಶೇಕಡಾದವರೆಗೆ ಸಂಬಳ ಕಡಿತಗೊಳಿಸಿರುವಾಗ. ಪತ್ರಕರ್ತರ ತಿರುಗಾಟಗಳನ್ನೂ ಕಡಿತಗೊಳಿಸಲಾಗಿದೆ. ಆದರೆ ಈ ಕಡಿತವನ್ನು ಜಾರಿಗೊಳಿಸಿದ್ದು ಪತ್ರಕರ್ತರ ಆರೋಗ್ಯದ ಮೇಲಿನ ಕಾಳಜಿಯಿಂದಲ್ಲ, ಆದರೆ ವೆಚ್ಚ ಕಡಿತಕ್ಕಾಗಿ. ವಿಶೇಷವಾಗಿ ಮಾರ್ಚ್ 25, 2020ರ ನಂತರ ಎರಡು ವಾರಗಳ ಕಾಲ ಅವರು ಮಾಡಿದ ದೊಡ್ಡ ದೊಡ್ಡ ವರದಿಗಳೆಲ್ಲವೂ ದೊಡ್ಡ ನಗರಗಳ ವ್ಯಾಪ್ತಿಗಳಲ್ಲಿದ್ದವು.
ಆದರೆ ʼಪರಿʼ ಕಳೆದ ಎಪ್ರಿಲ್ 2020ರ ಎಪ್ರಿಲ್ ತಿಂಗಳಿನಿಂದ 11 ಜನರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಯಾವುದೇ ರೀತಿಯ ವೇತನ ಕಡಿತವನ್ನು ಜಾರಿಗೊಳಿಸಿಲ್ಲ – ಮತ್ತು ಆಗಸ್ಟ್ 2020ರಲ್ಲಿ ಪರಿ ಬಹುತೇಕ ತನ್ನ ಉದ್ಯೋಗಿಗಳಿಗೆ ಬಡ್ತಿ ಮತ್ತು ಸಂಬಳ ಏರಿಕೆಯನ್ನು ಜಾರಿಗೊಳಿಸಿದೆ.
ನಮ್ಮ ಎಂದಿನ ಗುರುತಾದ ವರದಿಗಳ ಜೊತೆಗೆ, ʼಪರಿʼ ಈ ಮಹಾಮಾರಿ ಪ್ರಾರಂಭಗೊಂಡ ನಂತರದಿಂದ ಇದುವರೆಗೆ 270ಕ್ಕಿಂತಲೂ ಹೆಚ್ಚು (ಅವುಗಳಲ್ಲಿ ಹೆಚ್ಚಿನವು ಬಹುಮಾಧ್ಯಮ ರೂಪದಲ್ಲಿವೆ) ವರದಿಗಳು, ಡಾಕ್ಯೂಮೆಂಟ್ಗಳನ್ನು ಕೋವಿಡ್ ಕಾಲದಲ್ಲಿ ಜನರ ಜೀವನೋಪಾಯಗಳು ಎನ್ನುವ ಒಂದೇ ವಿಷಯದಡಿ ಜನರ ಮುಂದಿರಿಸಿದೆ. ಪ್ರಯಾಣವೇ ದುಸ್ಸಾಧ್ಯವಾಗಿದ್ದ ಲಾಕ್ಡೌನ್ ಸಮಯದಲ್ಲಿ ನಮ್ಮ ವರದಿಗಾರರು ತಮಗೆ ಲಭ್ಯವಿರುವ ಯಾವುದೇ ಪ್ರಯಾಣ ಸೌಲಭ್ಯಗಳನ್ನು ಬಳಸಿ ದೇಶದ ವಿವಿಧೆಡೆಯ ಹಳ್ಳಿಗಳಿಗೆ ಹೋಗಿ ಈ ವರದಿಗಳನ್ನು ತಂದರು. ಈ ವರದಿಗಳು ದೇಶದ 23 ರಾಜ್ಯಗಳ ಬಹುತೇಕ ಪ್ರದೇಶಗಳನ್ನು ಒಳಗೊಂಡಿವೆ. ಈ ಶೀರ್ಷಿಕೆಯಡಿ ನೀವು ಸುಮಾರು 65 ವಿವಿಧ ವರದಿಗಾರರ ಹೆಸರುಗಳನ್ನು ನೋಡಬಹುದು. ʼಪರಿʼ ಈ ಮಹಾಮಾರಿಗೆ ಮೊದಲೂ ವಲಸೆ ಕಾರ್ಮಿಕರ ಸುಖ-ದುಃಖಗಳ ಕುರಿತು ವರದಿ ಮಾಡುತ್ತಿತ್ತು. ನಾವು ಇತರ ಮಾಧ್ಯಮಗಳಂತೆ ಮಾರ್ಚಿ 25, 2020ರ ನಂತರ ಇದ್ದಕ್ಕಿದ್ದಂತೆ ವಲಸೆ ಕಾರ್ಮಿಕರ ಕುರಿತು ಜ್ಞಾನೋದಯ ಹೊಂದಿದವರಲ್ಲ.
ಇದೆಲ್ಲವೂ ನಮ್ಮ ಓದುಗರಿಗೆ ತಿಳಿದಿರುವ ವಿಷಯವೇ ಆಗಿದೆ; ಗೊತ್ತಿಲ್ಲದವರಿಗಾಗಿ ಇದನ್ನೆಲ್ಲ ವಿವರಿಸುತ್ತಿದ್ದೇವೆ. ʼಪರಿʼ ಕವರ್ ಸ್ಟೋರಿಗಳು, ವರದಿಗಳು, ಫೋಟೋಗಳು ಮತ್ತು ವೀಡಿಯೊಗಳೊಂದಿಗೆ ಪತ್ರಿಕೋದ್ಯಮ ಮತ್ತು ಜೀವನೋಪಾಯದ ಮೇಲೆ ಕೇಂದ್ರೀಕೃತಗೊಂಡಿರುವ ಗ್ರಾಮೀಣ ಭಾರತದ ಅತಿದೊಡ್ಡ ಆನ್ಲೈನ್ ಡೇಟಾಬೇಸ್ ಆಗಿದೆ. 83.3 ಕೋಟಿ ಗ್ರಾಮೀಣ ಜನರ ದನಿ ಮತ್ತು ಅನುಭವಗಳನ್ನು ಆಲಿಸುವ ಮೂಲಕ ಅವರ ದೈನಂದಿನ ಜೀವನ ಮತ್ತು ದೈನಂದಿನ ಅನುಭವಗಳನ್ನು ಸೆರೆಹಿಡಿಯುವುದು ʼಪರಿʼಯ ಮುಖ್ಯ ಉದ್ದೇಶವಾಗಿದೆ. ʼಪರಿʼ ಜಾನಪದ ಸಂಗೀತ, ಹಾಡುಗಳು, ಚಿತ್ರಗಳು, ಮತ್ತು ಫಿಲ್ಮ್ ಇವೆಲ್ಲವೂ ನಮ್ಮ ಸಂಗ್ರದಲ್ಲಿ ಸೇರಿವೆ.










