ರಮೇಶ್ ಶರ್ಮಾ ಅವರಿಗೆ ಕೊನೆಯ ಬಾರಿಗೆ ಪೂರ್ಣ ವರ್ಷವನ್ನು ತಮ್ಮ ಮನೆಯಲ್ಲಿ ಕಳೆದಿದ್ದು ಯಾವಾಗಲೆನ್ನುವುದು ಮರೆತೇ ಹೋಗಿದೆ. "ನಾನು ಕಳೆದ 15-20 ವರ್ಷಗಳಿಂದ ಹೀಗೇ ಮಾಡುತ್ತಿದ್ದೇನೆ" ಎಂದು ಹರಿಯಾಣದ ಕರ್ನಾಲ್ ಜಿಲ್ಲೆಯ ಗಗಾಸಿನಾ ಗ್ರಾಮದಲ್ಲಿರುವ ಹೊಲವೊಂದರಲ್ಲಿ ಕಬ್ಬು ಕಟಾವು ಮಾಡುತ್ತಾ ಹೇಳುತ್ತಾರೆ.
ವರ್ಷದ ಆರು ತಿಂಗಳುಗಳು - ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ - 44 ವರ್ಷದ ರಮೇಶ್ ತನ್ನ ಗ್ರಾಮವಾದ ಬಿಹಾರದ ಅರೇರಿಯಾ ಜಿಲ್ಲೆಯ ಶೋಯಿರ್‌ಗಾಂವ್‌ನಿಂದ ಹರಿಯಾಣ ಮತ್ತು ಪಂಜಾಬ್‌ಗೆ ವಲಸೆ ಬಂದು ಅಲ್ಲಿ ಕೃಷಿ ಕಾರ್ಮಿಕನಾಗಿ ಕೆಲಸ ಮಾಡುತ್ತಾರೆ. "ನಾನು ಬಿಹಾರದಲ್ಲಿ ಬೇಸಾಯದಲ್ಲಿ ಸಂಪಾದಿಸುವುದಕ್ಕಿಂತ ಹರಿಯಾಣದಲ್ಲಿ ಕೃಷಿ ಕಾರ್ಮಿಕನಾಗಿ ಕೆಲಸ ಮಾಡುವ ಮೂಲಕವೇ ಹೆಚ್ಚು ಹಣವನ್ನು ಗಳಿಸುತ್ತೇನೆ" ಎಂದು ಅವರು ಹೇಳುತ್ತಾರೆ.
ರಮೇಶ್ ಅವರು ಶೋಯಿರ್‌ಗಾಂವ್‌ನಲ್ಲಿ ಮೂರು ಎಕರೆ ಭೂಮಿಯನ್ನು ಹೊಂದಿದ್ದು, ಅದರಲ್ಲಿ ಅವರು ವರ್ಷದ ಆರು ತಿಂಗಳು ಬೇಸಾಯ ಮಾಡುತ್ತಾರೆ. ಅವರು ಖಾರಿಫ್ ಋತುವಿನಲ್ಲಿ (ಜೂನ್ - ನವೆಂಬರ್) ಭತ್ತವನ್ನು ಬೆಳೆಯುತ್ತಾರೆ. ಕಟಾವು ಮಾಡುತ್ತಿದ್ದ ಕಬ್ಬಿನಿಂದ ಕಣ್ಣು ಕೀಲಿಸದೆ "ಬೆಳೆದಿದ್ದರಲ್ಲಿ ಹೆಚ್ಚಿನದು ಮನೆ ಬಳಕೆಗೇ ಬೇಕಾಗುತ್ತದೆ" ಎನ್ನುತ್ತಾರೆ ರಮೇಶ್.
ಶರ್ಮಾರ ವರ್ಷದ ಪ್ರಮುಖ ನಗದು ಬೆಳೆ ಮೆಕ್ಕೆಜೋಳ, ಅವರು ಇದನ್ನು ರಬಿ ಋತುವಿನಲ್ಲಿ (ಡಿಸೆಂಬರ್-ಮಾರ್ಚ್) ಬೆಳೆಯುತ್ತಾರೆ. ಆದರೆ ಅವರು ಈ ಬೆಳೆಯಿಂದ ಅವರಿಗೆ ಹೆಚ್ಚು ಹಣ ದೊರೆಯುವುದಿಲ್ಲ. "ಕಳೆದ ವರ್ಷ [2020] ಕ್ವಿಂಟಾಲ್ ಒಂದಕ್ಕೆ 900 ರೂಗಳಂತೆ ಮಾರಾಟ ಮಾಡಿದ್ದೇನೆ" ಎಂದು ಅವರು ಹೇಳಿದರು. 60 ಕ್ವಿಂಟಾಲ್ ಮೆಕ್ಕೆಜೋಳ ಕೊಯ್ಲು ಮಾಡಿದ ನಂತರ “ಕಮಿಷನ್ ಏಜೆಂಟ್ ಬಂದು ಅದನ್ನು ನಮ್ಮಿಂದ ಊರಿನಲ್ಲಿಯೇ ಖರೀದಿಸಿದರು. ಇದು ವರ್ಷಗಳಿಂದ ನಡೆಯುತ್ತಿದೆ."
ರಮೇಶ್ ತನ್ನ ಫಸಲಿಗೆ ಪಡೆದ ಬೆಲೆ 2019-20ರಲ್ಲಿ ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗಿಂತ ಸುಮಾರು 50 ಪ್ರತಿಶತ ಕಡಿಮೆಯಾಗಿದೆ - 2019-20ರಲ್ಲಿ ಪ್ರತಿ ಕ್ವಿಂಟಲ್‌ಗೆ 1,760 ರೂ ನಿಗದಿಪಡಿಸಲಾಗಿದೆ. ಬಿಹಾರದಲ್ಲಿ ಸರ್ಕಾರಿ ನಿಯಂತ್ರಿತ ಮಂಡಿಗಳಲ್ಲಿ ಎಂಎಸ್‌ಪಿಯಲ್ಲಿ ಮಾರಾಟ ಮಾಡುವ ಆಯ್ಕೆ ಅಲ್ಲಿನ ರೈತರಿಗಿಲ್ಲ, ಆದ್ದರಿಂದ ಶರ್ಮಾ ಅವರಂತಹ ಸಣ್ಣ ರೈತರು ನೇರವಾಗಿ ಕಮಿಷನ್ ಏಜೆಂಟರೊಂದಿಗೆ ವ್ಯವಹಾರ ನಡೆಸಬೇಕಾಗುತ್ತದೆ.
2006ರಲ್ಲಿ, ಬಿಹಾರದ ರಾಜ್ಯ ಸರ್ಕಾರವು ಬಿಹಾರ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ 1960 ಅನ್ನು ರದ್ದುಗೊಳಿಸಿತು. ಇದರೊಂದಿಗೆ ರಾಜ್ಯದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಂಡಿ ವ್ಯವಸ್ಥೆಯನ್ನೂ ರದ್ದುಪಡಿಸಲಾಯಿತು. ಈ ಕ್ರಮವು ರೈತರಿಗೆ ಖಾಸಗಿ ಒಡೆತನದ ವಾಣಿಜ್ಯ ವ್ಯವಹಾರ ಪ್ರದೇಶಗಳಿಗೆ ಪ್ರವೇಶ ನೀಡುವ ಮೂಲಕ ಕೃಷಿ ಕ್ಷೇತ್ರವನ್ನು ಉದಾರೀಕರಣಗೊಳಿಸುತ್ತದೆ ಎಂದು ಹೇಳಿಕೊಂಡಿತ್ತು. ಆದರೆ ಎಪಿಎಂಸಿಯನ್ನು ರದ್ದುಪಡಿಸಿದ್ದರಿಂದಾಗಿ ಮಧ್ಯವರ್ತಿಗಳು ಮತ್ತು ವ್ಯಾಪಾರಿಗಳು ನಿಗದಿಪಡಿಸಿದ ಬೆಲೆಗಳ ಮೇಲೆ ಹೆಚ್ಚು ಅವಲಂಬಿತರಾದ ಬಿಹಾರದ ರೈತರಿಗೆ ಅದರಿಂದ ಉತ್ತಮ ಲಾಭ ದೊರೆಯಲಿಲ್ಲ.








