"ಇಲ್ಲಿ ಏನು ನಡೆಯುತ್ತಿದೆಯೆಂದು ನನಗೆ ತಿಳಿದಿಲ್ಲ, ಇದು ಬಹುಶಃ ಮೋದಿಯ ಕುರಿತಾದ ಯಾವುದೋ ವಿಷಯಕ್ಕಿರಬಹುದು. ನಾನು ಆಹಾರಕ್ಕಾಗಿ ಇಲ್ಲಿಗೆ ಬರುತ್ತೇನೆ.ಇನ್ನು ಮುಂದೆ ನಾವು ಹಸಿದು ಮಲಗುವ ಕುರಿತು ಚಿಂತಿಸಬೇಕಿಲ್ಲ." ಎಂದು 16 ವರ್ಷದ ರೇಖಾ ಹೇಳುತ್ತಾರೆ. (ಈ ಲೇಖನದಲ್ಲಿ ಉಲ್ಲೇಖಿಸಿರುವ ಹೆಚ್ಚಿನ ಜನರಂತೆ, ಅವರು ತನ್ನ ಮೊದಲ ಹೆಸರನ್ನು ಮಾತ್ರ ಬಳಸಲು ಬಯಸುತ್ತಾರೆ). ಈಕೆತ್ಯಾಜ್ಯ ವಿಂಗಡಿಸುವ ಕೆಲಸ ಮಾಡುತ್ತಿದ್ದು ಕಸದಿಂದ ಮರುಬಳಸಬಹುದಾದ ವಸ್ತುಗಳನ್ನ ವಿಂಗಡಿಸುತ್ತಾರೆ, ಇವರು ಸಿಂಘುವಿನಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಉತ್ತರ ದೆಹಲಿಯ ಅಲಿಪುರದಲ್ಲಿ ವಾಸಿಸುತ್ತಾರೆ.
ಸೆಪ್ಟಂಬರ್ನಲ್ಲಿ ಜಾರಿಗೊಳಿಸಲಾದ ಮೂರು ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ನವೆಂಬರ್ 26ರಿಂದ ಕೇಂದ್ರದ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಹರಿಯಾಣ – ದೆಹಲಿ ಗಡಿಯಲ್ಲಿ ತಡೆಯಲಾಗಿದ್ದು ರೇಖಾ ನಮಗೆ ಅಲ್ಲಿಯೇ ಸಿಕ್ಕಿದರು. ಪ್ರತಿಭಟನೆಯು ಹತ್ತಾರು ಸಾವಿರ ಜನರನ್ನು ಆಕರ್ಷಿಸಿದ್ದು ಅವರೆಲ್ಲರಿಗಾಗಿ ರೈತರು ಮತ್ತು ಗುರುದ್ವಾರಗಳು ಲಂಗರ್ ಎಂದು ಕರೆಯಲಾಗುವ ಸಮುದಾಯ ಅಡುಗೆಮನೆಗಳನ್ನು ಸ್ಥಾಪಿಸಿದ್ದು ಇಲ್ಲಿ ರೈತರು, ಬೆಂಬಲಿಗರು, ಕೇವಲ ಕುತೂಹಲಕ್ಕಾಗಿ ಬಂದವರು, ಹಸಿವಿನಿಂದ ಬಂದವರು ಹೀಗೆ ಎಲ್ಲರಿಗೂ ಈ ಹೃದಯವಂತ ಜನರ ಸಮುದಾಯ ಅಡುಗೆಮನೆಗಳಲ್ಲಿ ಆಹಾರ ನೀಡಲಾಗುತ್ತದೆ.
ಇವರಲ್ಲಿ ಹತ್ತಿರದ ಪಾದಾಚಾರಿ ಮಾರ್ಗದಲ್ಲಿ ವಾಸಿಸುವ ಮತ್ತು ಕೊಳಗೇರಿಗಳಲ್ಲಿ ವಾಸಿಸುವ ಅನೇಕ ಕುಟುಂಬಗಳು ಮುಖ್ಯವಾಗಿ ಇಲ್ಲಿ ದಿನವಿಡೀ ಆಹಾರ ಬಡಿಸಲಾಗುವ ಲಂಗರ್ಗಳಲ್ಲಿ ಊಟಕ್ಕಾಗಿ ಬರುತ್ತಾರೆ. ಇಲ್ಲಿ ಬೆಳಿಗ್ಗೆ ಬೆಳಿಗ್ಗೆ 8ರಿಂದ ರಾತ್ರಿ 9ರವರೆಗೆ ಅನ್ನ, ದಾಲ್, ಪಕೋಡಾ, ಲಡ್ಡು, ಸಾಗ್, ಜೋಳದ ರೊಟ್ಟಿ, ನೀರು, ಜ್ಯೂಸ್ ಹೀಗೆ ಇಲ್ಲಿ ಎಲ್ಲವೂ ಲಭ್ಯವಿದೆ. ಸ್ವಯಂಸೇವಕರು ಉಚಿತವಾಗಿ, ಔಷಧಿಗಳು, ಕಂಬಳಿಗಳು, ಸಾಬೂನುಗಳು, ಚಪ್ಪಲಿಗಳು, ಬಟ್ಟೆಗಳು ಮತ್ತು ಇತ್ಯಾದಿ ಉಪಯುಕ್ತ ವಸ್ತುಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.
ಸ್ವಯಂಸೇವಕರಲ್ಲಿ ಒಬ್ಬರಾಗಿರುವ ಪಂಜಾಬ್ನ ಗುರುದಾಸ್ಪುರ ಜಿಲ್ಲೆಯ ಘುಮನ್ ಕಲಾನ್ ಗ್ರಾಮದ 23 ವರ್ಷದ ಹರ್ಪ್ರೀತ್ ಸಿಂಗ್ ಬಿಎಸ್ಸಿ ಪದವಿ ಓದುತ್ತಿದ್ದಾರೆ. " ಈ ಕಾನೂನುಗಳು ತಪ್ಪು ಎಂದು ನಾವು ನಂಬುತ್ತೇವೆ" ಎಂದು ಅವರು ಹೇಳುತ್ತಾರೆ. "ಈ ಭೂಮಿ ನಮ್ಮ ಪೂರ್ವಜರಿಂದ ನಮಗೆ ಬಂದಿದ್ದು, ಈಗ ಸರಕಾರ ನಮ್ಮನ್ನು ಇಲ್ಲಿಂದ ಹೊರಗೆ ತಳ್ಳಲು ಪ್ರಯತ್ನಿಸುತ್ತಿದೆ. ನಾವು ಈ ಕಾನೂನುಗಳನ್ನು ಬೆಂಬಲಿಸುವುದಿಲ್ಲ. ನಾವು ರೊಟ್ಟಿ ತಿನ್ನಲು ಬಯಸದಿದ್ದರೆ, ಅದನ್ನು ತಿನ್ನುವಂತೆ ಯಾರಾದರೂ ನಮ್ಮನ್ನು ಒತ್ತಾಯಿಸುವುದು ಎಷ್ಟು ಸರಿ? ಈ ಕಾನೂನುಗಳು ಹೋಗಬೇಕಾಗಿದೆ."
ಅನುವಾದ: ಶಂಕರ ಎನ್. ಕೆಂಚನೂರು