ಮುಂಬಯಿ ನಗರದ ಪ್ರತಿ ಮೂಲೆಗೂ ಮೆಟ್ರೋ ಹಾಗೂ ಎಕ್ಸ್‌ಪ್ರೆಸ್ ವೇ ಸಂಪರ್ಕವಿದೆ. ಆದರೆ ದಾಮು ನಗರದ ನಿವಾಸಿಗಳು ಸಣ್ಣ ಪ್ರಯಾಣಕ್ಕೂ ಬಹಳ ಕಷ್ಟಪಡುತ್ತಿದ್ದಾರೆ. ಅಂದರೆ ಇಲ್ಲಿನ ಜನರು ಈಗಲೂ ಮಲವಿಸರ್ಜನೆಗೆ ಬಯಲನ್ನೇ ಅವಲಂಬಿಸಿದ್ದಾರೆ. ಮತ್ತು ಆ ಬಯಲನ್ನು ತಲುಪಲು ಅವರು ಒಂದು ಅಡಿ ಎತ್ತರದ ಗೋಡೆಯ ಮೇಲೆ ನಡೆದುಕೊಂಡು ಸಾಗಬೇಕು. ಮಲದ ವಾಸನೆಯ ಗಾಳಿಯಿಂದ ಕೂಡಿದ ಕಸದ ರಾಶಿಯನ್ನೂ ದಾಟಬೇಕು ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ. ಈ ಮೈದಾನವು ಹುಲ್ಲುಗಾವಲಾಗಿದ್ದು, ಅಲ್ಲೊಂದು ಇಲ್ಲೊಂದು ಎಂಬಂತೆ ಇರುವ ಇಲ್ಲಿನ ಮರಗಳು ಅಲ್ಲಿಗೆ ಶೌಚಕ್ಕೆ ಬರುವ ಜನರಿಗೆ ಒಂದಷ್ಟು ಖಾಸಗಿತನವನ್ನು ನೀಡುತ್ತವೆ.
ಆದರೆ, “ಅಂತಹ ಖಾಸಗಿತನ ಎನ್ನುವುದು ಇಲ್ಲಿ ಇಲ್ಲವೇ ಇಲ್ಲ” ಎನ್ನುತ್ತಾರೆ ಮೀರಾ ಯೇಡೆ. 51 ವರ್ಷದ ಈ ಮಹಿಳೆ ಬಹಳ ಹಿಂದಿನಿಂದಲೂ ಇಲ್ಲಿ ವಾಸವಿದ್ದಾರೆ. “ನಾವು ಮಹಿಳೆಯರು ಹೆಜ್ಜೆ ಸದ್ದು ಕೇಳಿದ ತಕ್ಷಣ ಎದ್ದು ನಿಲ್ಲಬೇಕಾಗುತ್ತದೆ.” ಅನೇಕ ವರ್ಷಗಳಿಂದ ಈ ಮೈದಾನವನ್ನು ಮಹಿಳೆಯರು ಮತ್ತು ಪುರುಷರಿಗೆಂದು ವಿಭಜಿಸಲಾಗಿದ್ದು, ಎಡಭಾಗದಲ್ಲಿ ಮಹಿಳೆಯರು ಹೋದರೆ, ಬಲಭಾಗದಲ್ಲಿ ಪುರುಷರು ಮಲವಿಸರ್ಜನೆಗೆ ಕೂರುತ್ತಾರೆ. ಸಮಸ್ಯೆಯೆಂದರೆ, “ಇವೆರಡೂ ವಿಭಾಗಗಳು ಬಹಳ ಕಡಿಮೆ ಅಂತರದಲ್ಲಿವೆ. ಬಹುಶಃ ಕೆಲವೇ ಮೀಟರುಗಳು. ಅಷ್ಟಕ್ಕೂ ಆ ದೂರವನ್ನು ಯಾರು ಅಳೆಯುತ್ತಾರೆ?” ಜೊತೆಗೆ ಇವೆರಡರ ನಡುವೆ ಯಾವುದೇ ಮರೆ ಅಥವಾ ಗೋಡೆ ಹಾಕಲಾಗಿಲ್ಲ.
ದಾಮು ನಗರದ ಅನೇಕ ನಿವಾಸಿಗಳು ಮೊದಲ ಅಥವಾ ಎರಡನೇ ತಲೆಮಾರಿನ ಗ್ರಾಮೀಣ ವಲಸಿಗರು. ಮುಂಬೈ ಉತ್ತರ ಕ್ಷೇತ್ರದ ಈ ಭಾಗದ ಜನರಿಗೆ ಚುನಾವಣೆಯೆನ್ನುವುದು ಚುನಾವಣಾ ರಾಜಕೀಯವನ್ನು ಮೀರಿದ ವಿಷಯ. ಭಾರತವು ತನ್ನ 18ನೇ ಲೋಕಸಭೆಗೆ 543 ಸಂಸತ್ ಸದಸ್ಯರನ್ನು ಆಯ್ಕೆ ಮಾಡಲು ಹಂತಹಂತವಾಗಿ ಮತ ಚಲಾಯಿಸುತ್ತಿರುವಾಗಲೂ ಅವರನ್ನು ಇದು ಕಾಡುತ್ತಿದೆ. ಮೀರಾ ಅವರ ಮಗ ಪ್ರಕಾಶ್ ಯೇಡೆ ಹೇಳುವಂತೆ “ಇಂದು ದೇಶದಲ್ಲಿ ಎಲ್ಲವೂ ಚೆನ್ನಾಗಿದೆ ಎನ್ನುವ ನಿರೂಪಣೆಯೊಂದನ್ನು ಸೃಷ್ಟಿಸಲಾಗಿದೆ.” ಪ್ರಕಾಶ್ ನಮ್ಮೊಂದಿಗೆ ಅವರ ಮನೆ ಹೊಸ್ತಿಲಿನ ಬಳಿ ಮಾತನಾಡುತ್ತಿದ್ದರು. ಅವರ ಮನೆಗೆ ಟಿನ್ ಶೀಟ್ ಹೊದೆಸಲಾಗಿದ್ದು, ಬಹುಶಃ ಅದು ಒಳಗಿನ ತಾಪಮಾನವನ್ನು ಇನ್ನೂ ಕೆಲವು ಡಿಗ್ರಿಗಳಷ್ಟು ಹೆಚ್ಚಿಸುತ್ತದೆ.
"ದೇಶದ ಈ ಭಾಗಗಳಲ್ಲಿನ ನಿಜವಾದ ಸಮಸ್ಯೆಗಳ ಬಗ್ಗೆ ಮಾತನಾಡಲು ಯಾರೂ ಬಯಸುವುದಿಲ್ಲ" ಎಂದು 30 ವರ್ಷದ ಪ್ರಕಾಶ್ ಹೇಳುತ್ತಾರೆ. ದಾಮು ನಗರದ 11,000ಕ್ಕೂ ಹೆಚ್ಚು ನಿವಾಸಿಗಳು ಶೌಚಾಲಯ, ನೀರು, ವಿದ್ಯುತ್ ಲಭ್ಯವಿಲ್ಲದ ಕಾರಣ ಉಂಟಾಗುವ ಅಸ್ವಸ್ಥತೆ ಮತ್ತು ಅಪಾಯಗಳ ಕುರಿತು ಅವರು ವಿವರಿಸುತ್ತಿದ್ದಾರೆ. ಜನಗಣತಿಯಲ್ಲಿ ಭೀಮ್ ನಗರ ಎಂದೂ ಕರೆಯಲ್ಪಡುವ ದಾಮು ನಗರವು ಶಿಥಿಲ ಗೋಡೆಗಳು, ಟಾರ್ಪಾಲಿನ್ ಮತ್ತು ಟಿನ್ ಶೀಟ್‌ಗಳನ್ನು ಛಾವಣಿಯಾಗಿ ಹೊಂದಿರುವ 2300ಕ್ಕೂ ಹೆಚ್ಚು ಮನೆಗಳನ್ನು ಹೊಂದಿದೆ. ಇವು ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದೊಳಗಿನ ಗುಡ್ಡದ ಮೇಲೆ ನೆಲೆಗೊಂಡಿವೆ. ಇಕ್ಕಟ್ಟಿನ, ಅಸಮವಾದ ಕಲ್ಲಿನ ದಾರಿಯಲ್ಲಿ ನಡೆಯುತ್ತಾ, ಹರಿಯುವ ಒಳಚರಂಡಿ ನೀರಿಗೆ ಕಾಲಿಡದಿರಲು ಪ್ರಯತ್ನಿಸುತ್ತಾ ನೀವು ಇಲ್ಲಿನ ಮನೆಗಳಿಗೆ ತಲುಪಬೇಕು.





















