ದ್ರೌಪದಿ ಸಬರ್ ಕಣ್ಣೀರನ್ನು ತಡೆಯಲಾಗದೆ ತನ್ನ ಸೆರಗಿನ ತುದಿಯಿಂದ ಕಣ್ಣುಗಳನ್ನು ಒರೆಸಿಕೊಳ್ಳುತ್ತಲೇ ಇದ್ದರ. ಅವರ ಮೊಮ್ಮಕ್ಕಳಾದ ಮೂರು ವರ್ಷದ ಗಿರೀಶ ಮತ್ತು ಒಂಬತ್ತು ತಿಂಗಳ ವಿರಾಜ್ ಒಡಿಶಾದ ಗುಡಭೆಲೀ ಗ್ರಾಮದಲ್ಲರುವ ಮನೆಯ ಹೊರಗೆ ಅಜ್ಜಿಯ ಬಳಿ ಸದ್ದಿಲ್ಲದೆ ಆಡುತ್ತಿದ್ದರು. ತನ್ನ ಮೊಮ್ಮಗಳು ತುಳಸಾಳ (25) ಸಾವಿಗಾಗಿ ಶೋಕಿಸುತ್ತಿರುವ 65 ವರ್ಷದ ಹಿರಿಯ ಮಹಿಳೆಯನ್ನು ಸಮಾಧಾನಪಡಿಸಲು ಅವರ ಕುಟುಂಬ ಸದಸ್ಯರು ಪ್ರಯತ್ನಿಸಿದರು.
“ಇನ್ನು ನಾವು ಯಾರನ್ನು ʼನಮ್ಮ ಮಗಳೆಂದುʼ ಕರೆಯುವುದು?” ಎಂದು ಅವರು ಶೂನ್ಯದತ್ತ ನೋಡುತ್ತಾ ಅಳುತ್ತಿದ್ದರು.
ನುವಾಪಾಡ ಜಿಲ್ಲೆಯ ಖಾರಿಯಾರ್ ಬ್ಲಾಕಿನಲ್ಲಿರುವ ತಮ್ಮ ಅರ್ಧ ಮುಗಿದ ಇಟ್ಟಿಗೆ ಮನೆಯ ಮುಂದೆ ಪ್ಲಾಸ್ಟಿಕ್ ಚಾಪೆಯ ಮೇಲೆ ಕುಳಿತಿದ್ದ ತುಳಸಾ ಅವರ ಕುಟುಂಬವು ಸಬರ್ ಆದಿವಾಸಿ ಸಮುದಾಯಕ್ಕೆ ಸೇರಿದೆ, ಆ ಕುಟುಂಬವೀಗ ಅವರ ಹಠಾತ್ ನಿರ್ಗಮನದ ದುಃಖವನ್ನು ನಿಭಾಯಿಸಲು ಪ್ರಯತ್ನಿಸುತ್ತಿದೆ. ಆಕೆಯ ಪೋಷಕರು - ತಾಯಿ ಪದ್ಮಿನಿ ಮತ್ತು ತಂದೆ ದೇಬಾನಂದ್ - ತಮ್ಮ ಮಗಳ ಮಕ್ಕಳ ಬಗ್ಗೆ ಚಿಂತಿತರಾಗಿದ್ದಾರೆ, ವಿಶೇಷವಾಗಿ ವಿರಾಜ್, ಅವನು ತಾಯಿ ಸತ್ತಾಗ ಇನ್ನೂ ಶುಶ್ರೂಷೆಯಲ್ಲಿದ್ದ. "ನಾನು ಮತ್ತು ನನ್ನ ಸೊಸೆ ಪದ್ಮಿನಿ ಈ ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇವೆ" ಎಂದು ದ್ರೌಪದಿ ಹೇಳಿದರು.
ಮಕ್ಕಳ ತಂದೆ, ತುಳಸಾರ ಪತಿ ಭೋಸಿಂಧೂ(27) ಊರಿನಲ್ಲಿಲ್ಲ. ಅವರು ಹಳ್ಳಿಯಿಂದ ದಕ್ಷಿಣಕ್ಕೆ ೫೦೦ ಕಿಲೋಮೀಟರ್ ದೂರದಲ್ಲಿರುವ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ರಂಗಾಪುರ ಎಂಬಲ್ಲಿ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಡಿಸೆಂಬರ್ 2021ರಲ್ಲಿ ತಮ್ಮ ತಾಯಿ ಮತ್ತು ತುಳಸಾರ ಕಿರಿಯ ಸಹೋದರಿ ದೀಪಾಂಜಲಿ ಅವರೊಂದಿಗೆ ಆರು ತಿಂಗಳ ಕಾಲ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡಲು ಅಲ್ಲಿಗೆ ಹೋಗಿದ್ದರು. ಅವರು ಅಲ್ಲಿ ದಿನಕ್ಕೆ ಸುಮಾರು 200 ರೂ. ಗಳಿಸುತ್ತಿದ್ದರು.
ಜನವರಿ 24, 2022ರ ರಾತ್ರಿ, ತುಳಸಾ ಸಬರ್ ಗುಡಭೆಲೀಯಲ್ಲಿರುವ ತನ್ನ ಹೆತ್ತವರ ಮನೆಯಿಂದ 20 ಕಿಲೋಮೀಟರ್ ದೂರದಲ್ಲಿರುವ ಚನಟಮಾಲ್ ಗ್ರಾಮದ ಮನೆಯಲ್ಲಿದ್ದರು. ಅಂದು ರಾತ್ರಿ 8 ಗಂಟೆ ಸುಮಾರಿಗೆ ತೀವ್ರ ಹೊಟ್ಟೆ ನೋವು ಎಂದು ಅವರು ದೂರಿದರು. "ನಾನು ಅವಳನ್ನು ಖರಿಯಾರ್ (ಪಟ್ಟಣ)ದ ಉಪ ವಿಭಾಗೀಯ ಆಸ್ಪತ್ರೆಗೆ ಕರೆದೊಯ್ದೆ" ಎಂದು ಆಕೆಯ ಮಾವ ದಸಮೂ ಸಬರ್(57) ಹೇಳುತ್ತಾರೆ. "ಅಲ್ಲಿನ ವೈದ್ಯರು ಪರಿಸ್ಥಿತಿ ಗಂಭೀರವಾಗಿದೆಯಾದ್ದರಿಂದ ನುವಾಪಾಡ ಜಿಲ್ಲಾ ಪ್ರಧಾನ ಆಸ್ಪತ್ರೆಗೆ ಹೋಗುವಂತೆ ಹೇಳಿದರು. ಆದರೆ ನಾವು ಅಲ್ಲಿಗೆ ತಲುಪುವ ಹೊತ್ತಿಗಾಗಲೇ ತುಳಸಾ ತೀರಿಕೊಂಡಿದ್ದಳು."








