‘ಕಾಲೆ ಕನೂನ್ ಕೊ ವಾಪಸ್ ಲೋ, ವಾಪಸ್ ಲೋ, ವಾಪಸ್ ಲೋ’ [‘ಕರಾಳ ಕಾನೂನುಗಳನ್ನು ಹಿಂತೆಗೆದುಕೊಳ್ಳಿ, ಹಿಂದಕ್ಕೆ ತೆಗೆದುಕೊಳ್ಳಿ,  ಹಿಂದಕ್ಕೆ ತೆಗೆದುಕೊಳ್ಳಿ!’]. ಗಣರಾಜ್ಯೋತ್ಸವದ ಹಿಂದಿನ ಸಂಜೆ ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಈ ಘೋಷಣೆಗಳು ಮೊಳಗುತ್ತಿದ್ದವು.

ಮೈದಾನದಲ್ಲಿ ಸಂಯುಕ್ತಾ ಶೆಟ್ಕರಿ ಕಾಮಗಾರ್ ಮೋರ್ಚಾ ಆಯೋಜಿಸಿದ್ದ ಧರಣಿಯಲ್ಲಿ ಹತ್ತಾರು ಸಾವಿರ ಪ್ರತಿಭಟನಾಕಾರರಿದ್ದರು. ಅವರು ಮಹಾರಾಷ್ಟ್ರದ 21 ಜಿಲ್ಲೆಗಳಿಂದ ದೆಹಲಿಯ ಗಡಿಯಲ್ಲಿ ಹೋರಾಟ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಲು ನಾಸಿಕ್‌ನಿಂದ ಎರಡು ದಿನಗಳ ಕಾಲ ಸುಮಾರು 180 ಕಿಲೋಮೀಟರ್ ಮೆರವಣಿಗೆ ನಡೆಸಿದ ನಂತರ ಇಲ್ಲಿ ಸೇರಿದ್ದಾರೆ.

ಸಿಂಘು ಮತ್ತು ದೆಹಲಿಯ ಸುತ್ತಮುತ್ತಲಿನ ಇತರ ಪ್ರತಿಭಟನಾ ಸ್ಥಳಗಳಲ್ಲಿ ಕಳೆದೆರಡು ತಿಂಗಳುಗಳಿಂದ ಲಕ್ಷಾಂತರ ಕೃಷಿಕರು ವಿರೋಧ ವ್ಯಕ್ತಪಡಿಸುತ್ತಿರುವ ಈ ಕಾನೂನುಗಳನ್ನು ಕೇಂದ್ರ ಸರ್ಕಾರವು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಿ, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಿ ಅದೇ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿ ಆತುರದಿಂದ ಜಾರಿಗೆ ತಂದಿದೆ.

ರೈತರು ವಿರೋಧಿಸುತ್ತಿರುವ ಆ ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದಲೂ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.

ಜನವರಿ 24 ಮತ್ತು 25 ರಂದು ಆಜಾದ್ ಮೈದಾನದಲ್ಲಿ ನಡೆದ ಎರಡು ದಿನಗಳ ಪ್ರತಿಭಟನಾ ಸಭೆಯ ಚಿತ್ರಗಳು ಇವು:

PHOTO • Riya Behl

ರೈತರ ಒಂದು ಗುಂಪು ಜನವರಿ 24ರ ಬೆಳಿಗ್ಗೆ ಪ್ರದರ್ಶನ ಮೆರವಣಿಗೆ ನಡೆಸುತ್ತಿರುವಾಗ, ಈಗಾಗಲೇ ಆಗಮಿಸಿದ ಇತರರು ದಣಿವಿನ ಪ್ರಯಾಣದ ನಂತರ ವಿಶ್ರಾಂತಿ ಪಡೆಯುತ್ತಿರುವುದು

PHOTO • Riya Behl

ಅರುಣಬಾಯಿ ಸೊನವಣೆ (ಎಡ) ಮತ್ತು ಶಶಿಕಲಾ ಗಾಯಕ್‌ವಾಡ್ ಔರಂಗಾಬಾದ್ ಜಿಲ್ಲೆಯ ಕನ್ನಡ ತಾಲ್ಲೂಕಿನ ಚಿಮನ್‌ಪುರದವರು. ಇಬ್ಬರೂ ಭಿಲ್ ಬುಡಕಟ್ಟು ಜನಾಂಗದವರಾಗಿದ್ದು ಅರಣ್ಯ ಹಕ್ಕುಗಳ ಕಾಯ್ದೆ 2006ರ ಅಡಿಯಲ್ಲಿ ತಮ್ಮ ಜಮೀನಿನ ಮಾಲೀಕತ್ವವನ್ನು ಬಯಸುತ್ತಿದ್ದಾರೆ ಮತ್ತು ಮೂರು ಹೊಸ ಕಾನೂನುಗಳನ್ನು ವಿರೋಧಿಸುತ್ತಿದ್ದಾರೆ. "ನಾವು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಒತ್ತಡ ಹೆಚ್ಚಾಗುತ್ತದೆ" ಎಂದು ಅರುಣಬಾಯಿ ಹೇಳುತ್ತಾರೆ. "ಅದಕ್ಕಾಗಿಯೇ ನಾವು ಇಲ್ಲಿದ್ದೇವೆ."

PHOTO • Riya Behl

'ಕಾಲೆ ಕಾನೂನ್ ಕೋ ವಾಪಾಸ್ ಲೋ, ವಾಪಾಸ್ ಲೋ, ವಾಪಾಸ್ ಲೋ  [ಕರಾಳ ಕಾನೂನನ್ನು ಹಿಂದಕ್ಕೆ ತೆಗೆದುಕೊಳ್ಳಿ, ಹಿಂದಕ್ಕೆ ತೆಗೆದುಕೊಳ್ಳಿ]' ಎನ್ನುವ ಘೋಷಣೆ ಮೈದಾನವನ್ನು ತುಂಬಿತ್ತು.

PHOTO • Riya Behl

ನಾಸಿಕ್‌ನಿಂದ ಅವರ ವಾಹನಗಳಲ್ಲಿ ಬಂದ ನಾಂದೇಡ್, ನಂದೂರ್ಬಾರ್, ನಾಸಿಕ್ ಮತ್ತು ಪಾಲ್ಘರ್‌ನ ರೈತರು ಜನವರಿ 24ರ ರಾತ್ರಿ ಮೆರವಣಿಗೆ ಮೂಲಕ ಆಜಾದ್ ಮೈದಾನಕ್ಕೆ ಬಂದರು.

PHOTO • Riya Behl

ಚಳಿಗಾಲದ ಸಂಜೆ ಮುಂಬೈಯಲ್ಲಿ ತಾಪಮಾನ ಕಡಿಮೆಯಾಗುತ್ತಿದ್ದಂತೆ, ನಾಸಿಕ್ ಜಿಲ್ಲೆಯ ಚಂದ್ವಾಡ್ ತಹಸಿಲ್‌ನ ಧೋಡಾಂಬೆ ಗ್ರಾಮದ ಮಥುರಾಬಾಯಿ ಸಂಪತ್‌ಗೋಡೆ (ಎಡ), 70, ಮತ್ತು ದಂಗುಬಾಯಿ ಶಂಕರ್ ಅಂಬೇಕರ್ (65) ರಾತ್ರಿ ಚಳಿಯಿಂದ ತಪ್ಪಿಸಿಕೊಳ್ಳಲು ಬಟ್ಟೆಗಳನ್ನು ಸುತ್ತಿಕೊಂಡಿರುವುದು.

PHOTO • Riya Behl

ಹತ್ತು ವರ್ಷದ ಅನುಷ್ಕಾ ಹ್ಯಾಡ್ಕೆ (ನೀಲಿ ಶಾಲು ಬಣ್ಣದಲ್ಲಿ), ಶೀತ ಅನುಭವಿಸುತ್ತಿದ್ದಾಳೆ. ಅವಳು ಪಾಲ್ಘರ್ ಜಿಲ್ಲೆಯ ಖರಿವಾಲಿ ಟಾರ್ಫ್ ಕೊಹೊಜ್ ಗ್ರಾಮದಿಂದ ತನ್ನ ಅಜ್ಜಿ ಮನೀಶಾ ಧನ್ವಾ (ಕಿತ್ತಳೆ ಶಾಲು ಬಣ್ಣದಲ್ಲಿ) ಜೊತೆ ಬಂದಿದ್ದಾಳೆ, ಅವರು 40ರ ದಶಕದ ಕೊನೆಯಲ್ಲಿದ್ದಾರೆ. ಅನುಷ್ಕಾಳ ಒಂಟಿ ತಾಯಿ (single mother) ಅಸ್ಮಿತಾ (ಹಳದಿ ಸೀರೆಯಲ್ಲಿ) ಕೃಷಿ ಕಾರ್ಮಿಕರು. “ನಮಗೆ ಯಾವುದೇ ಭೂಮಿ ಇಲ್ಲ. ನಾವು ದಿನವಿಡೀ ದುಡಿಯುತ್ತೇವೆ,” ಎಂದು ಮನೀಷಾ ಹೇಳುತ್ತಾರೆ.

PHOTO • Riya Behl

ಪಾಲ್ಘರ್ ಜಿಲ್ಲೆಯ ರೈತರು ಅಕ್ಕಿ ಹಿಟ್ಟಿನಿಂದ ಮಾಡಿದ ಭಕ್ರಿಯನ್ನು ತಮ್ಮೊಂದಿಗೆ ತಂದಿದ್ದರು

PHOTO • Riya Behl

ಜನವರಿ 24 ರಂದು ದೀರ್ಘ ದಿನದ ನಂತರ, ಕೆಲವರು ನಿದ್ರಿಸುತ್ತಿದ್ದರೆ, ಅನೇಕರು ತಡರಾತ್ರಿಯವರೆಗೆ ಘೋಷಣೆಗಳನ್ನು ಕೂಗುತ್ತಿದ್ದರು

PHOTO • Riya Behl

ನಾಸಿಕ್ ಜಿಲ್ಲೆಯ ದಿಂಡೋರಿ ತಾಲ್ಲೂಕಿನ ಸಂಗಮ್ನರ್ ಗ್ರಾಮದ ರೈತರ ಗುಂಪು ವೇದಿಕೆಯಲ್ಲಿನ ಪ್ರದರ್ಶನಗಳನ್ನು ಸೂಕ್ಷ್ಮವಾಗಿ ಆಲಿಸುತ್ತಿರುವುದು

PHOTO • Riya Behl

ಲಕ್ಷ್ಮಣ್ ಫುಲಾ ಪಾಸಡೆ, ವಯಸ್ಸು 65 ನಾಸಿಕ್‌ನ ಗಂಗಾ ಮಹಲುಂಗಿ. ಅಲ್ಲಿನ ನರ್ತಕಕರೊಂದಿಗೆ ತಾವೂ ನರ್ತಿಸಲು ಪ್ರಾರಂಭಿಸಿದರು

PHOTO • Riya Behl

ದಕ್ಷಿಣ ಮುಂಬೈನ ರಾಜ್ಯಪಾಲರ ನಿವಾಸವಾದ ರಾಜ ಭವನಕ್ಕೆ ಪ್ರಸ್ತಾವಿತ ಮೆರವಣಿಗೆ ತೆರಳುವ ಮೊದಲು ಜನವರಿ 25ರ ಮಧ್ಯಾಹ್ನ ರೈತರು ಭಾಷಣಗಳನ್ನು ಕೇಳುತ್ತಿದ್ದಾರೆ.

PHOTO • Riya Behl

ಜನವರಿ 25ರ ಮಧ್ಯಾಹ್ನ ಮುಂಬೈನ ರಾಜ್ಯಪಾಲರ ನಿವಾಸವಾದ ರಾಜ ಭವನದತ್ತ ಮೆರವಣಿಗೆ ಪ್ರಾರಂಭಗೊಂಡಿರುವುದು. (ನಗರದ ಅಧಿಕಾರಿಗಳು ಅನುಮತಿ ನೀಡದ ಕಾರಣ ಮೆರವಣಿಗೆಯನ್ನು ನಂತರ ರದ್ದುಪಡಿಸಲಾಯಿತು)

PHOTO • Riya Behl

ಜನವರಿ 25ರ ಮಧ್ಯಾಹ್ನ ಮುಂಬೈನ ರಾಜ್ಯಪಾಲರ ನಿವಾಸವಾದ ರಾಜ ಭವನದತ್ತ ಮೆರವಣಿಗೆ ಪ್ರಾರಂಭಗೊಂಡಿರುವುದು. (ನಗರದ ಅಧಿಕಾರಿಗಳು ಅನುಮತಿ ನೀಡದ ಕಾರಣ ಮೆರವಣಿಗೆಯನ್ನು ನಂತರ ರದ್ದುಪಡಿಸಲಾಯಿತು)

PHOTO • Riya Behl

ಜನವರಿ 25ರಂದು, ಸಂಜೆ 4 ಗಂಟೆ ಸುಮಾರಿಗೆ, ರೈತರು ದಕ್ಷಿಣ ಮುಂಬಯಿಯಲ್ಲಿರುವ ರಾಜ್ಯಪಾಲರ ನಿವಾಸವಾದ ರಾಜ ಭವನದ ಕಡೆಗೆ ಪ್ರದರ್ಶನ ಮೆರವಣಿಗೆ ನಡೆಸಲು ತಯಾರಾಗಿ ನಿಂತಿರುವುದು. ಆದರೆ ಅನುಮತಿ ನಿರಾಕರಿಸಲಾಗಿತ್ತು, ಹೀಗಾಗಿ ಅವರು ಸುಮಾರು 500 ಮೀಟರ್ ನಡೆದು ಮೈದಾನಕ್ಕೆ ಹಿಂತಿರುಗಿದರು.

ಅನುವಾದ - ಶಂಕರ ಎನ್. ಕೆಂಚನೂರು

Riya Behl

ರಿಯಾ ಬೆಹ್ಲ್‌ ಅವರು ಲಿಂಗತ್ವ ಮತ್ತು ಶಿಕ್ಷಣದ ಕುರಿತಾಗಿ ಬರೆಯುವ ಮಲ್ಟಿಮೀಡಿಯಾ ಪತ್ರಕರ್ತರು. ಈ ಹಿಂದೆ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ (ಪರಿ) ಹಿರಿಯ ಸಹಾಯಕ ಸಂಪಾದಕರಾಗಿದ್ದ ರಿಯಾ, ಪರಿಯ ಕೆಲಸಗಳನ್ನು ತರಗತಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು.

Other stories by Riya Behl
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru