ನಮ್ಮ ಜೀವನದ ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಟ್ಟಿಗೆ ಒಂದು ಅದ್ಭುತ, ಮನತಟ್ಟುವ ಕ್ಷಣವೊಂದು ಜೂನ್ 07 ರ ಬುಧವಾರದಂದು ನಡೆದುಹೋಯಿತು. ಇನ್ನು 'ಪರಿ'ಯ ಮೊದಲ ಹೆಜ್ಜೆಯಿಂದಲೇ ಇದು ಸಾಧ್ಯವಾಯಿತು ಎಂದು ಹೇಳಲು ನನಗಂತೂ ಹೆಮ್ಮೆ. 'ಕ್ಯಾಪ್ಟನ್ ದೊಡ್ಡಣ್ಣ ಮತ್ತು ಸುಂಟರಗಾಳಿಯ ಸೈನ್ಯ' ವರದಿಯು ನಿಮಗೆ ನೆನಪಿದೆಯಲ್ಲವೇ? ಆ ಕ್ಷಣವೂ ಕೂಡ ಕ್ಯಾಪ್ಟನ್ ದೊಡ್ಡಣ್ಣ ಮತ್ತು ಇತರ ಮರೆತ ಸಾಹಸಿಗಳನ್ನೊಳಗೊಂಡಿತ್ತು ಎಂಬುದು ವಿಶೇಷ.


ಕಾಲಚಕ್ರವು ಉರುಳುತ್ತಾ ಹೋದಂತೆ ವಿಷಾದವೂ ಮೆಲ್ಲನೆ ಆವರಿಸತೊಡಗುತ್ತದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಕೊನೆಯ ಹೋರಾಟಗಾರರು ಸಾಯುತ್ತಲೇ ಇದ್ದಾರೆ. ಭಾರತದ ಮುಂದಿನ ಪೀಳಿಗೆಯ ಮಕ್ಕಳಿಗೆ ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟವರನ್ನು ನೋಡುವ ಅಥವಾ ಅವರ ಮಾತುಗಳಿಗೆ ಕಿವಿಯಾಗುವ ಭಾಗ್ಯವಿಲ್ಲ. ಬಹುಷಃ ಈ ಲೇಖನವನ್ನು ಓದುತ್ತಿರುವ ಹಲವರೂ ಕೂಡ ಈ ಅನುಭವವನ್ನು ದಕ್ಕಿಸಿಕೊಂಡವರಲ್ಲ.


ಈ ಕಾರಣಕ್ಕಾಗಿಯೇ ಕಳೆದ ಹಲವು ವರ್ಷಗಳಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಿಳೆಯರ ಮತ್ತು ಪುರುಷರ ಮಾತುಗಳನ್ನು ಧ್ವನಿಮುದ್ರಿಸಿಕೊಂಡು ನಾನು ದಾಖಲೆಗಳನ್ನಾಗಿಸಿಕೊಂಡಿದ್ದೇನೆ. ಅವರ ಜೀವನವನ್ನು ಚಿತ್ರೀಕರಿಸಿದ್ದೇನೆ, ಅವರ ಬಗ್ಗೆ ಬರೆದಿದ್ದೇನೆ. ಅವರ ರಾತ್ರಿಗಳು ಅಷ್ಟೇನೂ ಸುಖಕರವಾಗಿ ಕಳೆಯುತ್ತಿಲ್ಲವೆಂಬ ಪಶ್ಚಾತ್ತಾಪವು ನನ್ನನ್ನು ಪ್ರತೀ ಬಾರಿಯೂ ಕಾಡಿದೆ. ಒಂದು ರೀತಿಯಲ್ಲಿ ಇವರೆಲ್ಲರದ್ದು ಪ್ರತಿಫಲಗಳಿಲ್ಲದ, ಗುರುತಿಸಲ್ಪಡದ ಜೀವನ.


ಹೀಗಾಗಿ ಸತಾರಾದ 'ಪ್ರತಿ ಸರ್ಕಾರ್' ಅಥವಾ 1943-46 ರ ತಾತ್ಕಾಲಿಕ ಭೂಗತ ಸರಕಾರದಲ್ಲಿದ್ದ ಹೋರಾಟಗಾರರಲ್ಲಿ ಬದುಕಿರುವವರನ್ನು ಮತ್ತೆ ಒಂದುಗೂಡಿಸಲು ಪುನರ್ಮಿಲನ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲು ನಾವು ನೆರವಾಗಿದ್ದೆವು. ಈ ಕಾರ್ಯಕ್ರಮದಲ್ಲಿ ಆಗಲೇ ಮುಪ್ಪಿಗೆ ಬಂದಾಗಿದ್ದ ತೂಫಾನ್ ಸೇನಾದ ಸೈನಿಕರನ್ನು ಮತ್ತು ಮಹಾರಾಷ್ಟ್ರದ ಸತಾರಾ, ಸಾಂಗ್ಲಿ ಜಿಲ್ಲೆಗಳ ಇತರ ಸ್ವಾತಂತ್ರ್ಯ ಹೋರಾಟಗಾರರನ್ನೂ ಕೂಡ ಜೂನ್ 07 ರಂದು ಸನ್ಮಾನಿಸಲಾಯಿತು. 1943 ರ ಇದೇ ದಿನದಂದು ಈ ಸೈನಿಕರು ಸತಾರಾದ ಶೆನೋಲಿ ಹಳ್ಳಿಯಲ್ಲಿ ಬ್ರಿಟಿಷ್ ರಾಜ್ ನ ಅಧಿಕಾರಿಗಳ ಸಂಬಳದ ಮೊತ್ತವನ್ನು ಕೊಂಡೊಯ್ಯುತ್ತಿದ್ದ ರೈಲಿನ ಮೇಲೆ ದಾಳಿ ಮಾಡಿದ್ದರು. ಹೀಗೆ ಎತ್ತಿಕೊಂಡ ಅಧಿಕಾರಿಗಳ ಸಂಬಳದ ಮೊತ್ತವನ್ನು ಈ ಸೈನಿಕರು ಊರಿನ ಬಡವರಿಗೆ ಹಂಚಿ, ಸ್ಥಾಪಿಸಿದ್ದ 'ಪ್ರತಿ ಸರ್ಕಾರ್' ಅನ್ನು ನಡೆಸಲು ಬೇಕಾಗಿರುವ ಖರ್ಚಿಗೆಂದು ವಿನಿಯೋಗಿಸಿದ್ದರು.


ನಿವೃತ್ತ ರಾಜತಾಂತ್ರಿಕರೂ, ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲರೂ, ಮಹಾತ್ಮಾ ಗಾಂಧಿಯವರ ಮೊಮ್ಮಗನೂ ಆಗಿರುವ ಗೋಪಾಲ್ ಗಾಂಧಿಯವರನ್ನು ದೆಹಲಿಯಿಂದ ಈ ಕಾರ್ಯಕ್ರಮಕ್ಕೆ ಬರಲು ನಾವು ಆಹ್ವಾನಿಸಿದ್ದೆವು. ಗೋಪಾಲ್ ಗಾಂಧಿಯವರು ಕಾರ್ಯಕ್ರಮಕ್ಕೆ ಆಗಮಿಸಿದರಲ್ಲದೆ ಅಲ್ಲಿ ಕಂಡ ದೃಶ್ಯಗಳು ಅವರ ಮನವನ್ನೂ ಕೂಡ ತಟ್ಟಿದ್ದು ಸತ್ಯ.


'ದ ತೂಫಾನ್ ಸೇನಾ' (ಸುಂಟರಗಾಳಿ ಸೇನೆ) ಆ ದಿನಗಳಲ್ಲಿ ಪ್ರತಿ ಸರ್ಕಾರ್ ನ ಸಶಸ್ತ್ರ ವಿಂಗ್ ಆಗಿ ಕಾರ್ಯನಿರ್ವಹಿಸುತ್ತಿತ್ತು. ಇದು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಒಂದು ವಿಶಿಷ್ಟ ಅಧ್ಯಾಯಗಳಲ್ಲೊಂದು ಎಂದರೆ ತಪ್ಪಾಗಲಿಕ್ಕಿಲ್ಲ. 1942 ರ ಕ್ವಿಟ್ ಇಂಡಿಯಾ ಚಳುವಳಿಯ ಒಂದು ಶಾಖೆಯಾಗಿ ಮೂಡಿಬಂದು ಕ್ರಾಂತಿಕಾರರಿಂದ ನಡೆಸಲ್ಪಡುತ್ತಿದ್ದ ಈ ಗುಂಪು ಸತಾರಾದಲ್ಲಿ ಹೊಸದೊಂದು ಸಮಾನಾಂತರ ಸರಕಾರವನ್ನೇ ಘೋಷಿಸಿತ್ತು. ಸಾಂಗ್ಲಿಯನ್ನೂ ಒಳಗೊಂಡಿದ್ದ ಸತಾರಾ ಆ ಕಾಲದ ದೊಡ್ಡ ಜಿಲ್ಲೆಯೂ ಹೌದು.

ಜೂನ್ 7, 1943 ರಂದು 'ತೂಫಾನ್ ಸೇನಾ' ತಮ್ಮ ರೈಲಿನ ಮೇಲೆ ನಡೆಸಿದ ದಾಳಿಯ ನೆನಪಿನಲ್ಲಿ ಸಂತಾಪಸೂಚಕವಾಗಿ ಬ್ರಿಟಿಷ್ ಇಂಡಿಯನ್ ರೈಲ್ವೆ ನಿರ್ಮಿಸಿರುವ ಪುಟ್ಟ ಸ್ಮಾರಕದ ಬಳಿಯಲ್ಲಿ ನಿಂತಿರುವ ಗೋಪಾಲ್ ಗಾಂಧಿ ಮತ್ತು ಇತರರು

ಶೆನೋಲಿಯಲ್ಲಿ, ಅದರಲ್ಲೂ ಆ ಐತಿಹಾಸಿಕ ಘಟನೆಯು ನಡೆದಿದ್ದ ರೈಲು ಹಳಿಯಲ್ಲೇ ಕೆಲ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸುವ ಒಂದು ಚಿಕ್ಕ ಸಮಾರಂಭವೊಂದನ್ನು ಆಯೋಜಿಸುವುದೆಂದು ನಾವು ಯೋಚಿಸಿದ್ದೆವು. ಆದರೆ ಆ ಬೇಸಿಗೆಯ ಮಧ್ಯಾಹ್ನದಲ್ಲೂ ಅಪರಾಹ್ನದ 3 ರ ಹೊತ್ತಿಗೆ ಸುಮಾರು 250 ಜನರು ಬಂದು ಸೇರಿಯಾಗಿತ್ತು. 80, 90 ರ ಪ್ರಾಯದ ಹಲವು ವೃದ್ಧರು ಆ ರೈಲ್ವೆ ಹಳಿಯಲ್ಲಿ ಮಕ್ಕಳು ಉದ್ಯಾನದಲ್ಲಿ ಸುಮ್ಮನೆ ಸುತ್ತಾಡುವಂತೆ ಅಡ್ಡಾಡುತ್ತಿದ್ದರು. ಆ ಜಾಗವು ಅವರಿಗೆ ಸ್ವಾತಂತ್ರ್ಯ ಹೋರಾಟದ ವಿವಿಧ ಹರಿವುಗಳು ಒಂದಾಗುತ್ತಿದ್ದ `ಸಂಗಮ'ವೇ ಆಗಿತ್ತು. ಇನ್ನು ಒಂದು ಕಾಲದಲ್ಲಿ ಮಹಾಕ್ರಾಂತಿಕಾರಿಗಳಾಗಿದ್ದ ಈ ವೃದ್ಧರು ಗೋಪಾಲ್ ಗಾಂಧಿಯವರಿಗೆ ಆಲಿಂಗನದ ಮೂಲಕವಾಗಿ ಆಪ್ತಸ್ವಾಗತವನ್ನು ನೀಡುತ್ತಾ ''ಮಹಾತ್ಮಾಗಾಂಧಿಯವರಿಗೆ ಜಯವಾಗಲಿ'' ಎಂದು ಜಯಘೋಷವನ್ನೂ ಕೂಗುತ್ತಿದ್ದರು. ಅದರಲ್ಲೂ ವಿಶೇಷವಾಗಿ 95 ರ ಪ್ರಾಯದ ಕ್ಯಾಪ್ಟನ್ ಭಾವು ರವರಿಗೆ ನಿಜಕ್ಕೂ ಅದೊಂದು ಹೆಮ್ಮೆಯ ಮತ್ತು ಭಾವುಕ ಕ್ಷಣ. ಆರೋಗ್ಯವು ಅಷ್ಟೇನೂ ಚೆನ್ನಾಗಿಲ್ಲದಿದ್ದರೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಉತ್ಸಾಹವನ್ನು ತೋರಿದ್ದರು ಕ್ಯಾಪ್ಟನ್ ಭಾವು. ಇನ್ನು ಹಳಿಗಳ ಮೇಲೆ ಚುರುಕಾದ ಮಗುವಿನ ಉತ್ಸಾಹದಿಂದ ಓಡಾಡುತ್ತಿದ್ದ 94 ರ ಪ್ರಾಯದ ಮಾಧವರಾವ್ ಮಾನೆಯವರನ್ನು ಕಂಡ ನಾನು ಎಲ್ಲಾದರೂ ಬಿದ್ದುಬಿಟ್ಟಾರು ಎಂಬ ಕಾಳಜಿಯಲ್ಲಿ ಅವರ ಹಿಂದೆ ಓಡುತ್ತಿದ್ದೆ. ಆದರೆ ಹಾಗೇನೂ ಆಗಲಿಲ್ಲ. ಅವರ ನಗುವೂ ಕೂಡ ಒಂದು ಕ್ಷಣಕ್ಕಾದರೂ ಬೀಳಲಿಲ್ಲ.


ಕೊನೆಗೂ ನಾವು ಹಳಿಗಳಲ್ಲಿ ಇಳಿಮುಖವಾಗಿ ನಡೆದುಕೊಂಡು ನಮ್ಮ ಮುಖ್ಯ ಸ್ಥಾನವನ್ನು ತಲುಪಿದ್ದೆವು. ಹೌದು, ಸೈನಿಕರು 74 ವರ್ಷಗಳ ಹಿಂದೆ ರೈಲನ್ನು ತಡೆದು ನಿಲ್ಲಿಸಿದ ಅದೇ ಮೂಲೆ. ಅಂದಹಾಗೆ ಅಲ್ಲೊಂದು ಪುಟ್ಟ ಸ್ಮಾರಕವೂ ಇದೆ. ಆದರೆ ಅದು ಕ್ರಾಂತಿಕಾರಿಗಳ ಸಾಹಸದ ನೆನಪಿಗಾಗಿ ನಿರ್ಮಿಸಿದ್ದಲ್ಲ. ಬದಲಾಗಿ ದಾಳಿಯ ನೆನಪಿಗೆಂದು ಸಂತಾಪಸೂಚಕವಾಗಿ ಬ್ರಿಟಿಷ್ ಇಂಡಿಯನ್ ರೈಲ್ವೆ ಕಟ್ಟಿಸಿದ ಸ್ಮಾರಕವದು. ಬಹುಷಃ ಅದರ ಪಕ್ಕದಲ್ಲೇ ಹೊಸದೊಂದು ಸ್ಮಾರಕವನ್ನು ಸ್ಥಾಪಿಸುವ ಸಮಯವು ಈಗ ಬಂದೊದಗಿತ್ತು. ಅದೂ ಕೂಡ ಆ ಐತಿಹಾಸಿಕ ದಿನದ ನೈಜ ಅರ್ಥವನ್ನು ತೋರಿಸುವಂತಹ ಒಂದು ಸ್ಮಾರಕ.
PHOTO • Namita Waikar ,  Samyukta Shastri

ಪ್ರತಿ ಸರ್ಕಾರ್ ಗುಂಪಿನ ಸಾಹಸಿಯಾಗಿದ್ದ ನಾನಾ ಪಾಟೀಲರ ಪುತ್ರಿಯಾದ ಹೌಂಸತಾಯಿ ಪಾಟೀಲರನ್ನು (ಎಡ) ಕುಂದಾಲ್ ನ ಕಾರ್ಯಕ್ರಮದಲ್ಲಿ ಗೋಪಾಲ ಗಾಂಧಿಯವರು ಸನ್ಮಾನಿಸುತ್ತಿದ್ದಾರೆ. ಗೋಪಾಲ ಗಾಂಧಿಯವರಿಂದ ಸನ್ಮಾನಿತರಾದ ಮಾಧವರಾವ್ ಮಾನೆ (ಬಲ).

ನಂತರ ನಾವು ದೊಡ್ಡ ಸಭಾಕಾರ್ಯಕ್ರಮಕ್ಕಾಗಿ ಕುಂದಾಲ್ ನತ್ತ ತೆರಳಿದೆವು. 1943 ರಲ್ಲಿ ಪ್ರತಿ ಸರ್ಕಾರ್ ನ ಮುಖ್ಯ ಕೇಂದ್ರವಾಗಿದ್ದ ಕುಂದಾಲ್ ಶೆನೋಲಿಯಿಂದ ಸುಮಾರು 20 ನಿಮಿಷಗಳ ದೂರದಲ್ಲಿದೆ. ಈ ಕಾರ್ಯಕ್ರಮವನ್ನು ಸ್ಥಳೀಯರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ವಂಶದವರು ಜೊತೆಯಾಗಿ ಸೇರಿ ಆಯೋಜಿಸಿದ್ದರು. ಇದು ಜಿ. ಡಿ. ಬಾಪು ಲಾಡ್, ನಾಗನಾಥ್ ನಾಯಕ್ ವಾಡಿ, ದಂತಕಥೆಯಾದ ನಾನಾ ಪಾಟೀಲ್ (ಪ್ರತಿ ಸರ್ಕಾರ್ ನ ಮುಖ್ಯಸ್ಥರಾಗಿದ್ದವರು) ಹೀಗೆ ಇವರ ಕುಟುಂಬದವರೆಲ್ಲಾ ಸೇರಿ ಆಯೋಜಿಸಿದ್ದ ಕಾರ್ಯಕ್ರಮವಾಗಿತ್ತು. 1943 ರ ಆ ಘಟಾನುಘಟಿ ನಾಲ್ವರಲ್ಲಿ ಸದ್ಯ ಬದುಕುಳಿದಿದ್ದವರೆಂದರೆ ಕ್ಯಾಪ್ಟನ್ ಭಾವು ಮಾತ್ರ. ಹೀಗಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲು ಸಾಧ್ಯವಿದ್ದವರೆಂದರೆ ಅವರೊಬ್ಬರೇ. ಇನ್ನು ಪ್ರತಿ ಸರ್ಕಾರ್ ನಲ್ಲಿ ಸ್ವತಃ ಸಕ್ರಿಯ ಸದಸ್ಯರಾಗಿದ್ದ ನಾನಾ ಪಾಟೀಲರ ಪುತ್ರಿಯಾದ ಹೌಂಸತಾಯಿ ಪಾಟೀಲ್ ಕೂಡ ಇದ್ದರು. ಗತ್ತಿನ ವೃದ್ಧರಾದ ಕ್ಯಾಪ್ಟನ್ ಭಾವು ಎರಡು ದಿನಗಳ ಹಿಂದಷ್ಟೇ ಬೀದಿಯ ಈ ಭಾಗದಲ್ಲಿ ಅಡ್ಡಾಡಿದ್ದರು. ಹೌದು, ಮಹಾರಾಷ್ಟ್ರದ ರೈತರ ಚಳುವಳಿಗೆ ಬೆಂಬಲವಾಗಿ ನಿಂತು ಕ್ಯಾಪ್ಟನ್ ಭಾವು ಅಲ್ಲಿಗೆ ಬಂದಿದ್ದರು. ಬಹಳಷ್ಟು ಸ್ವಾತಂತ್ರ್ಯ ಹೋರಾಟಗಾರರು ಸ್ವತಃ ಕೃಷಿಕರೋ, ಕೃಷಿ ಕಾರ್ಮಿಕರೋ ಆಗಿದ್ದರು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಈ ವಂಶದ ಹಲವರು ಇಂದಿಗೂ ಕೂಡ ಇದೇ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.


ಜೂನ್ 7 ರ ವಾರ್ಷಿಕೋತ್ಸವವನ್ನು ಮಹಾರಾಷ್ಟ್ರ ಸರಕಾರವು ನಮಗಿಂತ ವಿಭಿನ್ನ ದೃಷ್ಟಿಕೋನದಿಂದ ನೋಡಿತ್ತು. 1943 ರಲ್ಲಿ ಅಸ್ತಿತ್ವದಲ್ಲಿದ್ದ ಬ್ರಿಟಿಷ್ ರಾಜ್ ನೋಡಬಹುದಾಗಿದ್ದ ರೀತಿಯಲ್ಲೇ ನೋಡಿತು ಎಂದರೂ ತಪ್ಪಾಗಲಾರದು. ಈ ದಿನದಂದೇ ಸರಕಾರವು ರೈತರ ವಿರುದ್ಧ ಪೋಲೀಸರನ್ನು ಛೂಬಿಟ್ಟಿತ್ತು. ಇದು ಸ್ವಾತಂತ್ರ್ಯ ಹೋರಾಟಗಾರರ ಪುನರ್ಮಿಲನದ ನಮ್ಮ ಕಾರ್ಯಕ್ರಮದ ತಯಾರಿಗಳ ಮೇಲೆ ಪರಿಣಾಮ ಬೀರಿದ್ದಂತೂ ಸತ್ಯ. ಹಲವು ರೈತರನ್ನು ಮತ್ತು ಕೃಷಿಕಾರ್ಯಕರ್ತರನ್ನು ಸೆರೆಹಿಡಿದು ಲಾಕಪ್ ಗೆ ತಳ್ಳಲಾಯಿತು. ಕೊನೆಯಲ್ಲಿ ಯಾವುದೇ ದೋಷಾರೋಪಣೆಗಳನ್ನು ಮಾಡದ ಈ ಬಂಧನಗಳು ನಿಜಕ್ಕೂ ಅಕ್ರಮವಾಗಿ ನಡೆಸಲ್ಪಟ್ಟ ಬಂಧನಗಳಾಗಿದ್ದವು. ಶೆನೋಲಿ ಮತ್ತು ಕುಂದಾಲ್ ಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಮಾಲೋಚನೆಯನ್ನು ನಡೆಸುವ ಕಾರ್ಯದಲ್ಲಿ ಮುಖ್ಯ ಆಯೋಜಕರಾಗಿದ್ದವರು ಕಿಸಾನ್ ಸಭಾದ ಉಮೇಶ್ ದೇಶಮುಖ್. ವಿಪರ್ಯಾಸವೆಂದರೆ ಅವರೇ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿಲ್ಲ. ಮುಂಜಾನೆಯ 5:30 ಕ್ಕೆ ಅವರನ್ನು ಕರೆದೊಯ್ದ ಪೋಲೀಸರು ಉಳಿದ ಎಂಟು ಮಂದಿಯ ಸಮೇತ ತಸ್ಗಾಂವ್ ಪೋಲೀಸ್ ಠಾಣೆಯ ಲಾಕಪ್ ನಲ್ಲಿ ಅವರನ್ನು ಬಂಧಿಸಿಟ್ಟಿದ್ದರು. ವೃದ್ಧ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ತೆರಳಿ ಅವರನ್ನು ಆಹ್ವಾನಿಸಿದ್ದಲ್ಲದೆ ಕಾರ್ಯಕ್ರಮದ ತಯಾರಿಗಳನ್ನು ವ್ಯವಸ್ಥಿತವಾಗಿ ನಡೆಸಿದ್ದು ಮತ್ತು ಪುನರ್ಮಿಲನ ಸಮಾರಂಭಕ್ಕಾಗಿ ಎಲ್ಲವನ್ನೂ ಸಜ್ಜುಗೊಳಿಸಿದ್ದು... ಎಲ್ಲವೂ ದೇಶಮುಖ್ ರವರೇ.


ಆದರೂ ಎರಡೂ ಕಾರ್ಯಕ್ರಮಗಳು ಒಂದೇ ಒಂದು ಖಾಲಿ ಕುರ್ಚಿಗಳಿಲ್ಲದೆ ಸಾಂಗವಾಗಿ ನೆರವೇರಿದವು. ಕುಂದಾಲ್ ನಲ್ಲಂತೂ ಸುಮಾರು 20 ಸ್ವಾತಂತ್ರ್ಯ ಹೋರಾಟಗಾರರು ವೇದಿಕೆಯಲ್ಲಿ ನಿಂತುಕೊಂಡೇ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಯಿತು. ಇನ್ನು ಸ್ವಾತಂತ್ರ್ಯ ಹೋರಾಟ,  ಸ್ವಾತಂತ್ರ್ಯದ ಬಗ್ಗೆ ಮಹಾತ್ಮಾಗಾಂಧಿಯವರಿದ್ದ ಚಿಂತನಾವಿಧಾನ, ವೃದ್ಧ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತನಗಿರುವ ಆದರ, ಪ್ರಸ್ತುತ ಕಾಲಘಟ್ಟದ ಚಿಂತನೆಗಳು... ಹೀಗೆ ಗೋಪಾಲ ಗಾಂಧಿಯವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರೆ ಅತೀವ ಏಕಾಗ್ರತೆಯಿಂದ ಎಲ್ಲರೂ ಅವರ ಮಾತನ್ನು ಕೇಳುತ್ತಿದ್ದರು.

ಕುಂದಾಲ್ ಜನತೆಯಿಂದ ಅದ್ಭುತ ಅಭಿನಂದನೆಗಳನ್ನು ಸ್ವೀಕರಿಸುತ್ತಿರುವ ವೃದ್ಧ ಸ್ವಾತಂತ್ರ್ಯ ಹೋರಾಟಗಾರರು

ಗೋಪಾಲ್ ಗಾಂಧಿಯವರ ಮಾತುಗಳು ಮುಗಿದ ನಂತರ ಎದ್ದು ನಿಂತು ಚಪ್ಪಾಳೆಯ ಮೂಲಕ ವೃದ್ಧ ಸ್ವಾತಂತ್ರ್ಯ ಸೇನಾನಿಗಳಿಗೆ ಗೌರವ ಸಲ್ಲಿಸಿದ ಸಭಿಕರು ಯಾರೂ ಊಹಿಸಿರದಷ್ಟು ಹೊತ್ತಿನವರೆಗೆ ಅಭಿಮಾನದಿಂದ ಚಪ್ಪಾಳೆ ಬಡಿಯುತ್ತಲೇ ಇದ್ದರು. ಕುಂದಾಲ್ ತನ್ನ ನೆಲದ ನಾಯಕ-ನಾಯಕಿಯರಿಗೆ, ಸಾಹಸಿಗಳಿಗೆ ಗೌರವಪೂರ್ವಕ ವಂದನೆಯನ್ನು ಸಲ್ಲಿಸುತ್ತಿತ್ತು. ಬಹಳಷ್ಟು ಮಂದಿಯ ಕಣ್ಣಾಲಿಗಳು ತೇವಗೊಂಡಿದ್ದವು. ತನ್ನ ನೆಲದ ಜನತೆಯೇ ಇಷ್ಟು ಅಭಿಮಾನದಿಂದ ಕರತಾಡನವನ್ನು ಗೈಯುತ್ತಿದ್ದ ಕ್ಷಣವನ್ನು ಹೆಮ್ಮೆ, ಸಂತಸ ಮತ್ತು ಉಕ್ಕಿಬರುತ್ತಿದ್ದ ಭಾವುಕತೆಯ ತಲ್ಲಣಗಳಿಂದ ನೋಡುತ್ತಿದ್ದ 80, 90 ರ ವೃದ್ಧ ಸ್ವಾತಂತ್ರ್ಯ ಹೋರಾಟಗಾರರನ್ನು ನಿಂತು ಚಪ್ಪಾಳೆ ಬಡಿಯುತ್ತಾ ನೋಡುತ್ತಿದ್ದ ನನ್ನ ಕಣ್ಣುಗಳಲ್ಲೂ ಹನಿ. ಅಂದಹಾಗೆ ಇದು ಅವರ ಜೀವನದ ಕೊನೆಯ ವರ್ಷಗಳಲ್ಲಿ ಬಂದ ಕೊನೆಯ ಅದ್ಭುತ ಕ್ಷಣವಾಗಿತ್ತು. ಅವರ ಕೊನೆಯ 'ಹುರ್ರೇ' ಕ್ಷಣ.

PHOTO • Samyukta Shastri

ಸಭಿಕರು ಸ್ವಾತಂತ್ರ್ಯ ಹೋರಾಟಗಾರರನ್ನು ಅಭಿನಂದಿಸಲು ಅಭಿಮಾನದಿಂದ ಎದ್ದು ನಿಂತಾಗ; ಕುಂದಾಲ್ ನ ಸಭಾಕಾರ್ಯಕ್ರಮಕ್ಕೆ ಆಗಮಿಸಿದ್ದ 95 ರ ಪ್ರಾಯದ ವೀರ ಸ್ವಾತಂತ್ರ್ಯ ಸೇನಾನಿ ಕ್ಯಾಪ್ಟನ್ ಭಾವು.

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Other stories by P. Sainath
Translator : Prasad Naik

ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.

Other stories by Prasad Naik