01-Bhamabai_DSC01558-NW-Fixing Straps and Mending Soles.jpg

ಹರಿದ ಚಪ್ಪಲಿ ಹೊಲೆಯುವ ಕಾರ್ಯದಲ್ಲಿ ಭಾಮಾಬಾಯಿ


ಭಾಮಾಬಾಯಿ ತನ್ನ ಗೂಡಂಗಡಿಯಲ್ಲಿ ಕೂತು ಕಿತ್ತು ಹೋಗಿರುವ ಚಪ್ಪಲಿಯೊಂದನ್ನು ಹೊಲೆಯುತ್ತಿದ್ದಾರೆ.  ಹೊಲಿಗೆ ಹಾಕುವ ದಪ್ಪ ಸೂಜಿ ಅಲ್ಲೇ ಅವರ ಮುಂದೆ ಇದೆ.  ಚಚ್ಚೌಕವಾಗಿರುವ ಮರದ ತುಂಡೊಂದನ್ನು ಒತ್ತಿಗೆ ಇಟ್ಟುಕೊಂಡು ಹರಿದ ಚಪ್ಪಲಿಯ ಒಂದು ಕೊನೆಯನ್ನು ಕಾಲ ಹೆಬ್ಬೆರಳಿನಲ್ಲಿ ಒತ್ತಿ ಹಿಡಿದಿದ್ದಾರೆ.  ಸೂಜಿಯನ್ನು ಚಪ್ಪಲಿಗೆ ಚುಚ್ಚಿ, ಕುಣಿಕೆ ಹಾಕಿ, ಅದರೊಳಗಿನಿಂದ ಸೂಜಿ ತೂರಿಸಿ ಎಳೆಯುತ್ತಾ ಗಂಟು ಹಾಕುತ್ತಿದ್ದಾರೆ. ಆರು ಹೊಲಿಗೆಗಳನ್ನು ಹಾಕುವಷ್ಟರಲ್ಲಿ ಕಿತ್ತುಹೋಗಿರುವ ಚಪ್ಪಲಿ ರಿಪೇರಿ ಆಗುತ್ತದೆ, ಅವರಿಗೆ ಐದು ರೂಪಾಯಿ ಸಂಪಾದನೆ ಆಗುತ್ತದೆ.


03-Bhamabai_Stitching_DSC01555-NW-Fixing Straps and Mending Soles.jpg

ಹರಿದ ಚಪ್ಪಲಿಗೆ ಹೊಲಿಗೆ ಹಾಕುತ್ತಿರುವ ಭಾಮಾಬಾಯಿ


ಈಕೆ ಭಾಮಾಬಾಯಿ ಮಸ್ತೂದ್, ಚಪ್ಪಲಿ ರಿಪೇರಿ ಮಾಡುತ್ತಾರೆ, ಕಡು ಬಡತನದಲ್ಲಿ ಬದುಕುತ್ತಿದ್ದಾರೆ.  ದಶಕಗಳಿಗೂ ಮೊದಲು ಆಕೆ ಮತ್ತು ಆಕೆಯ ಗಂಡ ಮರಾಠಾವಾಡಾದ ಒಸ್ಮಾನಾಬಾದ್ ನಲ್ಲಿ ಭೂರಹಿತ ಕೂಲಿಕಾರ್ಮಿಕರು.  ೧೯೭೨ರಲ್ಲಿ ಮಹಾರಾಷ್ಟ್ರ ರಾಜ್ಯವನ್ನು ಕಂಗೆಡಿಸಿದ ಭೀಕರ ಬರಗಾಲ ಕೃಷಿಕೆಲಸಕ್ಕೆ ಮಣ್ಣು ಹಾಕಿ, ಅವರ ಜೀವನೋಪಾಯಕ್ಕೆ ಕಲ್ಲು ಹಾಕಿದಾಗ ಅವರಿಬ್ಬರೂ ಪುಣೆಗೆ ವಲಸೆ ಬರುತ್ತಾರೆ.

ಬದುಕು ಸಾಗಿಸಲು ಕೈಗೆ ಸಿಕ್ಕಿದ ಎಲ್ಲಾ ಕೆಲಸಗಳನ್ನೂ ಮಾಡುತ್ತಾರೆ.  ಕೂಲಿಕೆಲಸ, ಕಟ್ಟಡದ ಕೆಲಸ ಯಾವುದು ಸಿಕ್ಕಿದರೆ ಅದು.  ದಿನವಿಡೀ ದುಡಿದರೆ ಆ ಕಾಲಕ್ಕೆ ಪುಣೆಯಲ್ಲಿ ಎರಡರಿಂದ ಐದು ರೂಪಾಯಿ ಸಂಪಾದನೆ.  ’ನಾನು ದುಡಿದದ್ದೆಲ್ಲಾ ನನ್ನ ಗಂಡನ ಕೈಗೆ ಹಾಕುತ್ತಿದ್ದೆ, ಆ ಹಣದಲ್ಲಿ ಚೆನ್ನಾಗಿ ಕುಡಿದು ಅವನು ನನ್ನನ್ನೇ ಬಡಿಯುತ್ತಿದ್ದ’ ಈಗ ಎಪ್ಪತ್ತರ ಅಂಚಿನಲ್ಲಿರುವ ಭಾಮಾಬಾಯಿ ನೆನಪಿಸಿಕೊಳ್ಳುತ್ತಾರೆ.  ಒಂದು ದಿನ ಗಂಡ ಈಕೆಯನ್ನು ಬಿಟ್ಟು ಇನ್ನೊಂದು ಹೆಣ್ಣಿನ ಜೊತೆ ಹೋಗುತ್ತಾನೆ.  ಈಗಲೂ ಆತ ಆ ಹೆಂಡತಿ ಮತ್ತು ಮಕ್ಕಳ ಜೊತೆ ಪುಣೆಯ ಹತ್ತಿರವೇ ಎಲ್ಲೋ ಇದ್ದಾನೆ.  ’ಅವನು ನನ್ನನ್ನು ಬಿಟ್ಟುಹೋಗಿ ೩೫ ವರ್ಷಗಳಾಯಿತು.  ಈಗಂತೂ ಅವನು ನನ್ನ ಪಾಲಿಗೆ ಇದ್ದೂ ಸತ್ತಂತೆಯೇ.  ನನಗೆ ಯಾರೂ ಇಲ್ಲ, ಸಹಾಯ ಮಾಡುವವರೂ ಯಾರೂ ಇಲ್ಲ’, ಆಕೆ ನಿಟ್ಟುಸಿರಿಡುತ್ತಾರೆ.  ಆಕೆಯ ಇಬ್ಬರು ಮಕ್ಕಳೂ ಪಾಪ ಹೆರಿಗೆ ಸಮಯದಲ್ಲೇ ತೀರಿಕೊಂಡರಂತೆ.

ಗಂಡ ತನ್ನನ್ನು ಬಿಟ್ಟು ಹೋದಮೇಲೆ ಆಕೆ ಒಂದು ಗೂಡಂಗಡಿ ಇಟ್ಟುಕೊಂಡು ಚಪ್ಪಲಿ ರಿಪೇರಿ ಶುರು ಮಾಡುತ್ತಾರೆ, ಅದು ಆಕೆ ತಂದೆಯಿಂದ ಕಲಿತ ವಿದ್ಯೆ.  ಪುಣೆಯ ಕಾರ್ವೆ ರಸ್ತೆಯ ಹತ್ತಿರದ ಒಂದು ಕಾಲನಿಯ ಹತ್ತಿರದ ಗಲ್ಲಿಯಲ್ಲಿ ಅವರ ಅಂಗಡಿ. ’ಒಂದು ದಿನ ಮುನಿಸಿಪಾಲಿಟಿಯವರು ಅದನ್ನು ಕೆಡವಿ ಹಾಕಿದರು, ನಾನು ಮತ್ತೆ ಅದನ್ನು ಕಟ್ಟಿಕೊಂಡೆ, ಅವರು ಅದನ್ನು ಮತ್ತೆ ಕೆಡವಿ ಹಾಕಿದರು’ ಆಕೆ ಹೇಳುತ್ತಾ ಹೋಗುತ್ತಾರೆ.  ಕಂಗೆಟ್ಟ ಭಾಮಾಬಾಯಿ ಆ ಕಾಲನಿಯವರ ಸಹಾಯ ಕೇಳುತ್ತಾರೆ. ತನಗೆ ಯಾರೂ ಇಲ್ಲವೆಂದೂ, ಬೇರೆ ಕೆಲಸ ಸಹ ಇಲ್ಲವೆಂದೂ ಕಷ್ಟ ಹೇಳಿಕೊಳ್ಳುತ್ತಾರೆ.  ಆ ಕಾಲನಿಯವರು ಮುನಿಸಿಪಾಲಿಟಿಯವರ ಹತ್ತಿರ ಮಾತನಾಡಿ ಆಕೆಯ ಅಂಗಡಿ ಉಳಿಸಿಕೊಡುತ್ತಾರೆ.  ಅಂದಿನಿಂದಲೂ ಆಕೆಯ ಕೆಲಸ ಅಲ್ಲಿಯೇ.


02-Bhamabai_Shop2_DSCN1501-NW-Fixing Straps and Mending Soles.jpg

ರಸ್ತೆಬದಿಯ ಅಂಗಡಿಯಲ್ಲಿ ಭಾಮಾಬಾಯಿ

ಬದುಕು ತುಂಬಾ ಕಷ್ಟ ಎಂದು ಆಕೆ ಮಾತು ಮುಂದುವರಿಸುತ್ತಾರೆ. ’ಗಿರಾಕಿಗಳು ಸಿಕ್ಕರೆ ಐದೋ, ಹತ್ತೋ ಸಿಗುತ್ತದೆ.  ಯಾರೂ ಬರದಿದ್ದರೆ ಸಂಜೆಯವರೆಗೂ ಸುಮ್ಮನೆ ಇಲ್ಲೇ ಕೂತಿದ್ದು ಮನೆಗೆ ಹೋಗುತ್ತೇನೆ.  ಈಗ ನನ್ನ ಬದುಕು ಇಷ್ಟೇ.  ಒಮ್ಮೊಮ್ಮೆ ಮೂವತ್ತು ರೂಪಾಯಿ ದುಡಿಯುತ್ತೇನೆ, ಒಮ್ಮೊಮ್ಮೆ ಐವತ್ತು ದುಡಿದರೆ ಅದೇ ಹಬ್ಬ.  ಆದರೆ ಖಾಲಿ ಕೂತ ದಿನಗಳೇ ಹೆಚ್ಚು’.  ಆಕೆಗೆ ಹೊಸ ಚಪ್ಪಲಿ ತಯಾರಿಸುವುದು ಗೊತ್ತೆ ಎಂದು ನಾನು ಕೇಳುತ್ತೇನೆ.  ’ಇಲ್ಲ, ಇಲ್ಲ, ನನಗೆ ಅದು ಗೊತ್ತಿಲ್ಲ. ನನಗೆ ಹರಿದ ಚಪ್ಪಲಿಗಳಿಗೆ ಹೊಲಿಗೆ ಹಾಕುವುದು ಮಾತ್ರ ಗೊತ್ತು.  ಬೇಕಾದರೆ ಶೂ ಪಾಲೀಶ್ ಮಾಡುತ್ತೇನೆ, ಚಪ್ಪಲಿ ತೂತು ಬಿದ್ದಿದ್ದರೆ ಅಟ್ಟೆ ಕಟ್ಟಿಕೊಡುತ್ತೇನೆ ಅಷ್ಟೆ.’

ಅಲ್ಲೇ ಹತ್ತಿರದಲ್ಲೇ ಇಬ್ಬರು ಗಂಡಸರು ಚಪ್ಪಲಿ ಅಂಗಡಿ ಇಟ್ಟುಕೊಂಡಿದ್ದಾರೆ.  ಅವರ ಬಳಿ ಬೆಲೆ ಹೆಚ್ಚು.  ಅವರು ಪ್ರತಿದಿನ ೨೦೦ ರಿಂದ ೪೦೦ ರೂವರೆಗೂ ದುಡಿಯುತ್ತಾರೆ, ಒಮ್ಮೊಮ್ಮೆ ಅದಕ್ಕೂ ಹೆಚ್ಚು.

ಭಾಮಾಬಾಯಿ ಪಕ್ಕದಲ್ಲೇ ಇರುವ ಕಂದುಬಣ್ಣದ ಪೆಟ್ಟಿಗೆ ತೆಗೆಯುತ್ತಾರೆ.  ಅದರಲ್ಲೇ ಅವರ ಕೆಲಸದ ಸಾಮಾನುಗಳಿವೆ.  ಪೆಟ್ಟಿಗೆಯ ಮುಚ್ಚಳದ ಒಳಭಾಗದಲ್ಲಿ ದೇವರುಗಳ ಫೋಟೋ ಅಂಟಿಸಿದ್ದಾರೆ.  ಪೆಟ್ಟಿಗೆಯ ಒಳಭಾಗದಲ್ಲಿ ಮೇಲಿನ ಅರೆಯಲ್ಲಿ ನಾಲ್ಕು ಭಾಗಗಳಿದ್ದು ಅಲ್ಲಿ ಸೂಜಿ ಮತ್ತು ದಾರಗಳಿವೆ.  ಕೆಳಗಿನ ಅರೆಯಲ್ಲಿ ಚಪ್ಪಲಿ ರಿಪೇರಿಗೆ ಬೇಕಾದ ಹತಾರಗಳು.  ಆಕೆ ಅವುಗಳನ್ನು ಒಂದೊಂದಾಗಿ ಹೊರಗೆ ತೆಗೆಯುತ್ತಾರೆ.


04-Bhamabai_Tools2_DSCN1493-NW-Fixing Straps and Mending Soles.jpg

ಚಪ್ಪಲಿ ಹೊಲೆಯುವ ಮತ್ತು ಬೂಟ್ ಪಾಲಿಶ್ ಮಾಡುವ ಸಲಕರಣೆಗಳು

’ನನ್ನ ಹತಾರುಗಳ ಫೋಟೋ ತೆಗೆದುಕೊಂಡಿರಿ, ನನ್ನ ದೇವರುಗಳ ಫೋಟೋ ತೆಗೆದುಕೊಳ್ಳಲೇ ಇಲ್ಲವಲ್ಲ ನೀವು?’ ಆಕೆ ನೆನಪಿಸುತ್ತಾರೆ.  ಆಕೆಗೆ ತನ್ನವರು ಎಂದು ಇರುವುದು ಆ ದೇವರು ಮಾತ್ರವಂತೆ.  ದಿನದ ಕೆಲಸ ಮುಗಿದ ಮೇಲೆ ಎಲ್ಲವನ್ನೂ ನೀಟಾಗಿ ಪೆಟ್ಟಿಗೆಯೊಳಗೆ ಜೋಡಿಸುತ್ತಾರೆ.


05-Bhamabai_Toolbox_DSC01561-NW-Fixing Straps and Mending Soles.jpg

ಭಾಮಾಬಾಯಿ ಅವರ ಸಲಕರಣೆ ಮತ್ತು ದೇವರ ಪೆಟ್ಟಿಗೆ


ಅದೇ ಪೆಟ್ಟಿಗೆಯೊಳಗೆ ಆಕೆ ನೀರು ಕುಡಿಯಲೆಂದು ಇಟ್ಟುಕೊಂಡಿರುವ ಸ್ಟೀಲ್ ಲೋಟಾ ಸಹ ಹೋಗುತ್ತದೆ.  ಮಿಕ್ಕ ಸಾಮಾನುಗಳು, ಆ ಮರದ ತುಂಡು, ಚಿಪ್ಸ್ ನ ಪಾಕೆಟ್ಟು, ಬಿಗಿಯಾದ ಗಂಟಿನಲ್ಲಿ ಕಟ್ಟಿದ ಒಂದಿಷ್ಟು ದುಡ್ಡು ಎಲ್ಲವೂ ಪಕ್ಕದಲ್ಲೇ ಇರುವ ಚೀಲ ಸೇರುತ್ತದೆ. ರಾತ್ರಿ ಆ ಪೆಟ್ಟಿಗೆ ಮತ್ತು ಚೀಲವನ್ನು ರಸ್ತೆಯ ಆಚೆಗಿರುವ ಒಂದು ಹೋಟೆಲಿನಲ್ಲಿ ಬೀಗ ಹಾಕಿದ ಒಂದು ಕಪಾಟಿನಲ್ಲಿ ಇಡುತ್ತಾರೆ.  ’ದೇವರದಯೆ ನನ್ನ ಮೇಲಿದೆ, ಪಾಪ ಅವರು ನನ್ನ ಈ ಸಾಮಾನುಗಳನ್ನು ರಾತ್ರಿ ಹೊತ್ತು ಅಲ್ಲಿ ಇಟ್ಟುಕೊಳ್ಳಲು ಬಿಡುತ್ತಾರೆ’ ಕೃತಜ್ಞತೆಯ ದನಿಯಲ್ಲಿ ಆಕೆ ಹೇಳುತ್ತಾರೆ.ಭಾಮಾಬಾಯಿ ಇರುವುದು ಅವರ ಆ ಪುಟ್ಟ ಅಂಗಡಿಯಿಂದ ಐದು ಕಿಲೋಮೀಟರ್ ಆಚೆ ಇರುವ ಶಾಸ್ತ್ರಿನಗರದಲ್ಲಿ. ’ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ದಿನಾ ನಡೆದುಕೊಂಡೆ ಹೋಗುತ್ತೇನೆ.  ಬೆಳಗ್ಗೆ ಒಂದು ಗಂಟೆ, ರಾತ್ರಿ ಒಂದು ಗಂಟೆ.  ಸುಸ್ತಾಗುತ್ತದೆ, ಅಲ್ಲಲ್ಲಿ ಕೂತು, ಸುಧಾರಿಸಿಕೊಂಡು, ಕಾಲೂ, ಬೆನ್ನು ನೀವಿಕೊಂಡು ಮತ್ತೆ ಎದ್ದು ನಡೆಯುತ್ತೇನೆ.  ಅವತ್ತೊಂದಿನ ಆಟೋ ಹಿಡಿದಿದ್ದೆ, ನಲವತ್ತು ರೂಪಾಯಿ ತೆಗೆದುಕೊಂಡರು!  ನನ್ನ ಒಂದು ದಿನದ ಸಂಪಾದನೆ ಆಟೋಗೇ ಹೋಯಿತು’.  ಕೆಲವೊಮ್ಮೆ ಎದುರಿನ ಹೋಟೆಲಿನಿಂದ ಯಾರಾದರೂ ಡೆಲಿವರಿ ಹುಡುಗರು ಸ್ವಲ್ಪ ದೂರ ಅವಳನ್ನು ತಮ್ಮ ಗಾಡಿಗಳಲ್ಲಿ ಕರೆದುಕೊಂಡು ಹೋಗಿ ಬಿಟ್ಟಿದ್ದೂ ಇದೆಯಂತೆ.  ಅಂದು ಈಕೆಗೆ ಪಾಪ ಸ್ವಲ್ಪ ಆರಾಮ.

ಆಕೆಯ ಮನೆಯಾದರೂ ಏನು, ಈ ಅಂಗಡಿಗಿಂತ ಸ್ವಲ್ಪ ದೊಡ್ಡದು ಅಷ್ಟೆ.  ಎಂಟು ಅಡಿ ಉದ್ದ, ಎಂಟು ಅಡಿ ಅಗಲ.  ಸಂಜೆ ಏಳೂ ಕಾಲಿಗೇ ಒಳಗೆ ಗವ್ ಎನ್ನುವ ಕತ್ತಲು.  ಒಂದು ಸಣ್ಣ ಬುಡ್ದಿದೀಪ ಮಿಣಮಿಣ ಎನ್ನುತ್ತದೆ. ನಮ್ಮ ಹಳ್ಳಿ ಕನಗಾರದಲ್ಲೂ ಇಂಥದ್ದೇ ದೀಪ ಇರುತ್ತಿತ್ತು, ಆಕೆಯ ಕಣ್ಣುಗಳು ಮಿನುಗುತ್ತವೆ.  ಅವಳ ಮನೆಗೆ ವಿದ್ಯುತ್ ದೀಪ ಇಲ್ಲ, ಆಕೆಗೆ ವಿದ್ಯುತ್ ಬಿಲ್ ಕಟ್ಟಲಾಗದ್ದಕ್ಕೆ ಅವರು ಸಂಪರ್ಕ ಕಡಿತಗೊಳಿಸಿದ್ದಾರೆ.

ಅಲ್ಲೇ ಒಂದು ಕಬ್ಬಿಣದ ಮಂಚ ಇದೆ, ಮೇಲೆ ಹಾಸಿಗೆ ಇಲ್ಲ. ಅದು ಬಿಟ್ಟರೆ ಮನೆಯಲ್ಲಿ ಇನ್ನೊಂದು ಖುರ್ಚಿ ಸಹ ಇಲ್ಲ.  ತೊಳೆದ ಪಾತ್ರಗಳನ್ನು ಅದೇ ಮಂಚದ ಮೇಲೆ ಒಣಗಲು ಇಟ್ಟಿದ್ದಾರೆ.  ಅಲ್ಲೇ ಗೋಡೆಗೆ ಒಂದು ಮೊರ ನೇತುಹಾಕಿದ್ದಾರೆ.  ಅಡಿಗೆ ಕಟ್ಟೆಯ ಮೇಲೆ ಕೆಲವು ಪಾತ್ರೆಗಳೂ, ಡಬ್ಬಗಳೂ ಇವೆ.  ನನ್ನ ಹತ್ತಿರ ಒಂದು ಸೀಮೆಣ್ಣೆ ಸ್ಟೌವ್ ಇದೆ. ಒಂದು ಲೀಟರ್ ಸೀಮೆಣ್ಣೆ ಖಾಲಿ ಆಗುವವರೆಗೂ ಅದನ್ನು ಉಪಯೋಗಿಸಬಹುದು.  ಅದು ಮುಗಿದ ಮೇಲೆ ನನ್ನ ರೇಶನ್ ಕಾರ್ಡಿನಲ್ಲಿ ಇನ್ನೊಂದು ಲೀಟರ್ ಸೀಮೆಣ್ಣೆ ತೆಗೆದುಕೊಳ್ಳಲು ನಾನು ಮುಂದಿನ ತಿಂಗಳಿನವರೆಗೂ ಕಾಯಬೇಕು’.

ಭಾಮಾಬಾಯಿಯ ತೋಳಿನ ಮೇಲೆ ಹಚ್ಚೆಯ ಅಲಂಕಾರ ಇದೆ.  ದೇವರ ಚಿತ್ರದ ಜೊತೆಗೆ ಅಲ್ಲಿ ಚಿಕ್ಕದಾಗಿ ಆಕೆಯ ಗಂಡ, ತಂದೆ, ತಾಯಿ, ಸೋದರ, ಸೋದರಿಯ ಹೆಸರುಗಳ ಜೊತೆಜೊತೆಗೆ ಆಕೆಯ ಮನೆತನದ ಹೆಸರೂ ಇದೆ.


07-Bhamabai_Tattoo2_DSC01565-NW-Fixing Straps and Mending Soles.jpg

ಇಲ್ಲದ ಕುಟುಂಬ ಸದಸ್ಯರ ಹೆಸರನ್ನು ಹಚ್ಚೆ ಹಾಕಿಸಿಕೊಂಡಿರುವ ಭಾಮಾಬಾಯಿ

ವರ್ಷಗಳ ಕಷ್ಟದಿಂದ ಹಣ್ಣಾಗಿದ್ದರೂ ಆಕೆ ಲೌಕಿಕ ತಿಳಿದವರು, ಸ್ವತಂತ್ರ ಜೀವಿ.  ಇಲ್ಲೇ ಪುಣೆಯಲ್ಲಿ ಅವರ ಇಬ್ಬರು ಸೋದರರಿದ್ದಾರೆ, ಒಬ್ಬ ಸೋದರಿ ಹಳ್ಳಿಯಲ್ಲಿ, ಇನ್ನೊಬ್ಬರು ಮುಂಬೈನಲ್ಲಿ ಇದ್ದಾರೆ.  ಅವರೆಲ್ಲರಿಗೂ ಅವರದೇ ಆದ ಸಂಸಾರ ಇದೆ.  ಹಳ್ಳಿಯಿಂದ ಯಾರಾದರೂ ನೆಂಟರು ಬಂದರೆ ಆಕೆಯ ಅಂಗಡಿಗೆ ಬಂದು ಅಲ್ಲೇ ಮಾತನಾಡಿಸಿಕೊಂಡು ಹೋಗುತ್ತಾರೆ.

’ಆದರೆ ನಾನು ಮಾತ್ರ ಯಾವತ್ತೂ ಅವರ ಮನೆಗೆ ಹೋಗುವುದಿಲ್ಲ.  ನನ್ನ ಕಷ್ಟಗಳನ್ನು ಯಾರ ಹತ್ತಿರಾನೂ ಹೇಳಿಕೊಳ್ಳೋದಿಲ್ಲ.  ಏನೋ ನೀವಾಗಿ ನೀವೇ ಕೇಳಿದಿರಿ ಅಂತ ಇದೆಲ್ಲಾ ನಿಮ್ಮ ಹತ್ತಿರ ಹೇಳುತ್ತಿದ್ದೇನೆ. ಈ ಪ್ರಪಂಚದಲ್ಲಿ ಎಲ್ಲರೂ ಅವರ ಭಾರ ಅವರೇ ಹೊರಬೇಕು’ ನಿರ್ಭಾವುಕ ದನಿಯಲ್ಲಿ ಆಕೆ ಹೇಳುತ್ತಾರೆ.

ನಾನು ಆಕೆಯ ಅಂಗಡಿಯಲ್ಲಿ ಕೂತು ಮಾತನಾಡುತ್ತಿರುವಾಗ ಒಬ್ಬಾಕೆ ಬಂದು ಒಂದು ಸಣ್ಣ ಪ್ಲಾಸ್ಟಿಕ್ ಬ್ಯಾಗ್ ಅವರ ಕೈಗಿಡುತ್ತಾರೆ.  ’ನನಗೆ ಸ್ವಲ್ಪ ಜನ ಮನೆಗೆಲಸದ ಹೆಂಗಸರು ಸ್ನೇಹಿತರಿದ್ದಾರೆ.  ಒಮ್ಮೊಮ್ಮೆ ಅವರಿಗೆ ಆ ಮನೆಗಳಲ್ಲಿ ಕೊಟ್ಟ ಮಿಕ್ಕ ಊಟ ತಿಂಡಿಯಲ್ಲಿ ಸ್ವಲ್ಪ ನನಗೂ ಕೊಡುತ್ತಾರೆ’ ಭಾಮಾಬಾಯಿ ಮುಗುಳ್ನಗುತ್ತಾರೆ.

08-Bhamabai_BlackShoe1_DSCN1471(Crop)-NW-Fixing Straps and Mending Soles.jpg

ಕಪ್ಪುಬಣ್ಣದ ಬೂಟಿಗೆ ಅಟ್ಟೆ ಕಟ್ಟುತ್ತಿರುವ ಭಾಮಾಬಾಯಿ

ಅಷ್ಟರಲ್ಲಿ ಯಾರೋ ಗಿರಾಕಿ ಬಂದು ಆತನ ಕಪ್ಪು ಲೆದರ್ ಶೂ ಮತ್ತು ಬ್ರಾಂಡೆಡ್ ಸ್ಪೋರ್ಟ್ ಶೂ ರಿಪೇರಿಗೆ ಕೊಡುತ್ತಾನೆ.  ಒಂದೊಂದಾಗಿ ಆಕೆ ಎಲ್ಲದಕ್ಕೂ ಹೊಲಿಗೆ ಹಾಕಿ, ಆ ಕಪ್ಪು ಶೂಗಳು ಹೊಳೆಯುವ ಹಾಗೆ ಪಾಲೀಶ್ ಮಾಡುತ್ತಾರೆ.  ಒಂದು ಜೊತೆಗೆ ಕೇವಲ ಹದಿನಾರು ರೂಪಾಯಿಗಳಿಗೆ ಅವರು ಆ ಸವೆದ ಚಪ್ಪಲಿ, ಶೂಗಳಿಗೆ ಹೊಸ ಜೀವ  ಕೊಡುತ್ತಾರೆ.  ಅವುಗಳನ್ನು ರಿಪೇರಿ ಮಾಡುವುದರ ಮೂಲಕ ಅವುಗಳ ಒಡೆಯನಿಗೆ ಹೊಸ ಚಪ್ಪಲಿ, ಶೂಗಳ ಸಾವಿರಾರು ರೂ ಹಣ ಉಳಿಸಿದ್ದಾರೆ.  ಅದು ಗೊತ್ತಿದ್ದರೂ ಆಕೆ ಅದರ ಬಗ್ಗೆ ಏನೂ ಮಾತನಾಡುವುದಿಲ್ಲ.  ಆಕೆಯ ಕಾಯಕ ಹರಿದದ್ದನ್ನು ಹೊಲೆದು ನೇರ್ಪು ಮಾಡುವುದು, ಆಕೆ ಸದ್ದಿಲ್ಲದೆ ತನ್ನ ಪಾಡಿಗೆ ತಾನು ಕಾಯಕ ಮಾಡುತ್ತಿರುತ್ತಾರೆ.


ಬರಹಗಾರ್ತಿಯೂ, ಅನುವಾದಕರೂ ಆದ ನಮಿತ ವಾಯ್ಕರ್ ‘ಪರಿ’ಯ ಕಾರ್ಯನಿರ್ವಾಹಕ ಸಂಪಾದಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ದ ಲಾಂಗ್ ಮಾರ್ಚ್’ ಎಂಬ ಇವರ ಕಾದಂಬರಿಯು 2018 ರಲ್ಲಿ ಪ್ರಕಟಗೊಂಡಿದೆ.

Other stories by Namita Waikar
Translator : N. Sandhyarani

ಅನುವಾದ: ಎನ್ ಸಂಧ್ಯಾರಾಣಿ ಅವರು ಕನ್ನಡದ ಲೇಖಕ/ವಿಮರ್ಶಕರು. 'ಅವಧಿ' ಅಂತರ್ಜಾಲ ಪತ್ರಿಕೆಯ ಉಪ ಸಂಪಾದಕಿ. 'ಯಾಕೆ ಕಾಡುತಿದೆ ಸುಮ್ಮನೆ ನನ್ನನು..' ಇವರ ಕೃತಿ . This translation was coordinated by Crazy Frog Media Features, a congregation of like-minded journalists and a Bangalore-based online media hub that offers news, creative content, business solutions and consultancy services.

Other stories by N. Sandhyarani