2022 ರಲ್ಲಿ ಖರೀದಿಸಿದ ಕೆಂಪು ಟ್ರ್ಯಾಕ್ಟರ್ ಗಣೇಶ್ ಶಿಂಧೆಯವರ ಅತ್ಯಂತ ಅಮೂಲ್ಯ ಆಸ್ತಿ. ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಖಲಿ ಗ್ರಾಮದ ರೈತ ಶಿಂಧೆ ತನ್ನ ಎರಡು ಎಕರೆ ಭೂಮಿಯಲ್ಲಿ ಹತ್ತಿ ಬೆಳೆಯನ್ನು ಬೆಳೆಯುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹತ್ತಿ ಬೆಲೆಗಳಲ್ಲಿನ ತೀವ್ರ ಕುಸಿತವು ಶಿಂಧೆಯವರನ್ನು ಹೆಚ್ಚುವರಿ ಆದಾಯದ ಮೂಲಗಳನ್ನು ಹುಡುಕುವಂತೆ ಒತ್ತಾಯಿಸಿದೆ. ಈ ಕಾರಣಕ್ಕಾಗಿ, ಅವರು ಸಾರ್ವಜನಿಕ ವಲಯದ ಬ್ಯಾಂಕಿನಿಂದ ಸಾಲ ಪಡೆದು 8 ಲಕ್ಷ ರೂ.ಗೆ ಟ್ರ್ಯಾಕ್ಟರ್ ಖರೀದಿಸಿದರು.
"ನಾನು ನನ್ನ ಟ್ರಾಕ್ಟರನ್ನು ಮನೆಯಿಂದ 10 ಕಿಲೋಮೀಟರ್ ದೂರದಲ್ಲಿರುವ ಗಂಗಾಖೇಡ್ ಪಟ್ಟಣಕ್ಕೆ ತೆಗೆದುಕೊಂಡು ಜಂಕ್ಷನ್ನಿನಲ್ಲಿ ಕಾಯುತ್ತೇನೆ" ಎಂದು 44 ವರ್ಷದ ರೈತ ಹೇಳುತ್ತಾರೆ. “ಹತ್ತಿರದಲ್ಲಿ ಯಾವುದಾದರೂ ನಿರ್ಮಾಣ ಕಾರ್ಯ ನಡೆಯುತ್ತಿದ್ದರೆ ಮರಳಿನಂಹ ಕಚ್ಚಾ ವಸ್ತುಗಳನ್ನು ಸಾಗಿಸಲು ನನ್ನ ಟ್ರಾಕ್ಟರನ್ನು ಬಾಡಿಗೆಗೆ ಪಡೆಯುತ್ತಾರೆ. ಈ ಮೂಲಕ ನಾನು ದಿನಕ್ಕೆ 500-800 ರೂಪಾಯಿಗಳಷ್ಟು ಸಂಪಾದಿಸುತ್ತೇನೆ.” ಅವರು ಗಂಗಾಖೇಡ್ ಪಟ್ಟಣಕ್ಕೆ ಹೊರಡುವ ಮೊದಲು ಕೆಲವು ಗಂಟೆಗಳನ್ನು ಬೇಸಾಯದ ಕೆಲಸದಲ್ಲಿ ಕಳೆಯುತ್ತಾರೆ.
ಅವರು ಈ ಬಾರಿಯ ಕೇಂದ್ರದ ಬಜೆಟ್ಟನ್ನು ಬಹಳ ಗಮನವಿಟ್ಟು ಆಲಿಸಿದ್ದಾರೆ. ಇದರರ್ಥ ಅವರಿಗೆ ಬಜೆಟ್ಟಿನಿಂದ ಬಹಳ ನಿರೀಕ್ಷೆಯಿದೆ ಎಂದು ಅರ್ಥವಲ್ಲ. ಟ್ರ್ಯಾಕ್ಟರ್ ನಿಲ್ಲಿಸಿಕೊಂಡು ಬಾಡಿಗೆಗೆ ಕಾಯುವಾಗ ಹೊತ್ತು ಕಳೆಯಲು ತಾನು ಬಜೆಟ್ ನೋಡಿದ್ದಾಗಿ ಶಿಂಧೆ ಹೇಳುತ್ತಾರೆ. “ಮನರೇಗಾ ಕೆಲಸದ ದಿನಗಳನ್ನು ಹೆಚ್ಚಿಸಲಾಗಿಲ್ಲ” ಎಂದು ಅವರು ಹೇಳುತ್ತಾರೆ. ಖಲಿ ಗ್ರಾಮದ ಮಾಜಿ ಸರಂಪಚ್ ಆಗಿರುವ ಅವರು ಮನರೇಗಾ ಕೂಡಾ ಊರಿನಲ್ಲಿ ಅಂತಹ ವ್ಯತ್ಯಾಸವನ್ನು ತಂದಿಲ್ಲ ಎಂದು ಹೇಳುತ್ತಾರೆ. “ಹಣವನ್ನು ಉದ್ಯೋಗ ಸೃಷ್ಟಿಗೆ ಬಳಸುವುದಿಲ್ಲ. ಯೋಜನೆಗಳೆಲ್ಲ ಕೇವಲ ಕಾಗದದ ಮೇಲಿರುತ್ತವೆಯಷ್ಟೇ.”
![](/media/images/02-IMG20250203141745-PMN-How_do_you_expect.max-1400x1120.jpg)
ಗಂಗಾಖೇಡ್ ಪಟ್ಟಣದ ಜಂಕ್ಷನ್ ಬಳಿ ಸಿಂಧೆಯವರು ಗ್ರಾಹಕರಿಗಾಗಿ ಕಾಯುತ್ತಿದ್ದಾರೆ
ಹತ್ತಿಯ ಬೆಲೆ ನಿರಂತರವಾಗಿ ಕುಸಿಯುತ್ತಿರುವುದರಿಂದಾಗಿ ತನ್ನಂತಹ ರೈತರಿಗೆ ಬದುಕು ನಡೆಸುವುದು ಕಷ್ಟವಾಗಿದೆ ಎಂದು ಶಿಂಧೆ ಹೇಳುತ್ತಾರೆ. ಉದಾಹರಣೆಗೆ, 2022 ರಲ್ಲಿ, ಒಂದು ಕ್ವಿಂಟಾಲ್ ಹತ್ತಿಗೆ 12,000 ರೂ. ಇತ್ತು. 2024 ರಲ್ಲಿ, ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಇದು 4,000 ರೂಪಾಯಿಗಳಿಗೆ ಇಳಿದಿದೆ.
ಪ್ರಸಕ್ತ ಬಜೆಟ್ಟಿನಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂದಿನ ಐದು ವರ್ಷಗಳವರೆಗಿನ "ಹತ್ತಿ ಉತ್ಪಾದಕತೆ ಮಿಷನ್" ಕುರಿತು ಪ್ರಸ್ತಾಪಿಸಿದ್ದಾರೆ ಮತ್ತು 2025-26ರಲ್ಲಿ ಜವಳಿ ಸಚಿವಾಲಯಕ್ಕೆ 5,272 ಕೋಟಿ ರೂ. ನೀಡಲಾಗಿದೆ. "ಈ ಉಪಕ್ರಮವು ರೈತರ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ಗುಣಮಟ್ಟದ ಹತ್ತಿಯ ಪೂರೈಕೆಯನ್ನು ಹೆಚ್ಚಿಸುತ್ತದೆ" ಎಂದು ಅವರು ಹೇಳುತ್ತಾರೆ.
"ಸರ್ಕಾರ ಬಜೆಟ್ ಬಡವರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ ಎನ್ನುವಂತೆ ನಟಿಸುತ್ತದೆ, ಆದರೆ ಇದು ಶ್ರೀಮಂತರಿಗೆ ಪ್ರಯೋಜನವಾಗುವ ಬಜೆಟ್ ಮಾತ್ರ" ಎಂದು ಶಿಂಧೆ ಹೇಳುತ್ತಾರೆ. ಉದ್ದೇಶಿತ ಕಾರ್ಯಕ್ರಮದ ಬಗ್ಗೆ ಅವರಿಗೆ ಯಾವುದೇ ಭರವಸೆ ಇಲ್ಲ. "ನಮ್ಮ ಆದಾಯವು ಸ್ಥಗಿತಗೊಂಡಿದೆ, ಹಾಗೆ ನೋಡಿದರೆ, ಕುಸಿಯುತ್ತಿದೆ, ರೈತರು ತಮ್ಮ ಹೇಗೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ?" ಎಂದು ಅವರು ಹೇಳುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು