ಚೆನ್ನೈಯ ಹೊಸ ಮುನ್ಸಿಪಲ್ ಶಾಲೆಯಲ್ಲಿ ಎಂಟು ವರ್ಷದ ರಘುವಿನ ಮೊದಲ ದಿನ - ಕಪ್ಪು ಹಲಗೆಯ ಮೇಲೆ ಮತ್ತು ಪಠ್ಯಪುಸ್ತಕದಲ್ಲಿ ತಮಿಳಿನಲ್ಲಿ ಬರೆದ ಪದಗಳು ಅವನಿಗೆ ಸಂಪೂರ್ಣವಾಗಿ ಹೊಸತು. ಉತ್ತರ ಪ್ರದೇಶದ ತನ್ನ ತವರು ಗ್ರಾಮವಾದ ನವೋಲಿಯ ಶಾಲೆಯಲ್ಲಿ ಹಿಂದಿ ಅಥವಾ ಭೋಜ್‌ಪುರಿ ಓದುವುದು, ಬರೆಯುವುದು ಮತ್ತು ಮಾತನಾಡುವುದು ಮಾಡುತ್ತಿದ್ದ.
ಈಗವನು ಪುಸ್ತಕದಲ್ಲಿರುವ ಚಿತ್ರಗಳನ್ನು ನೋಡಿಯೇ ಊಹಿಸುತ್ತಿದ್ದಾನೆ. “ಪುಸ್ತಕವು ಪ್ಲಸ್-ಮೈನಸ್ ಚಿಹ್ನೆಯನ್ನು ಹೊಂದಿದ್ದರೆ, ಅದು ಗಣಿತ ಪುಸ್ತಕ; ಎರಡನೆಯ ಪುಸ್ತಕ ವಿಜ್ಞಾನ ಇರಬೇಕು; ಇನ್ನೊಂದು ಪುಸ್ತಕದಲ್ಲಿ ಹೆಂಗಸರು, ಮಕ್ಕಳು, ಮನೆಗಳು ಮತ್ತು ಪರ್ವತಗಳಿವೆ, ” ಎಂದು ಅವನು ಹೇಳುತ್ತಾನೆ.
4ನೇ ತರಗತಿಯಲ್ಲಿ ಎರಡನೇ ಸಾಲಿನ ಬೆಂಚಿನ ಮೇಲೆ ಮೌನವಾಗಿ ಕುಳಿತಿದ್ದಾಗ, ಅವನ ಪಕ್ಕದಲ್ಲಿ ಕುಳಿತಿದ್ದ ಹುಡುಗ ರಘುವಿಗೆ ಒಂದು ಪ್ರಶ್ನೆಯನ್ನು ಕೇಳಿದನು. "ನಂತರ ಎಲ್ಲರೂ ನನ್ನನ್ನು ಸುತ್ತುವರಿದು ತಮಿಳಿನಲ್ಲಿ ಏನೇನೋ ಕೇಳಿದರು. ಅವರು ಏನು ಹೇಳುತ್ತಿದ್ದಾರೆಂದು ನನಗೆ ಅರ್ಥವಾಗಲಿಲ್ಲ. ಕೊನೆಗೆ ನಾನು 'ಮೇರಾ ನಾಮ್ ರಘು ಹೈ' ಎಂದು ಹೇಳಿದೆ. ಅವರು ನಗಲು ಪ್ರಾರಂಭಿಸಿದರು. ನನಗೆ ಭಯವಾಯಿತು."
ರಘುವಿನ ಪೋಷಕರು 2015ರಲ್ಲಿ ಜಲೌನ್ ಜಿಲ್ಲೆಯ ನಾಡಿಗಾಂವ್ ತಾಲೂಕಿನ ತಮ್ಮ ಗ್ರಾಮವನ್ನು ತೊರೆಯಲು ನಿರ್ಧರಿಸಿದಾಗ, ಅವನು ಚೆನ್ನೈಗೆ ರೈಲಿನಲ್ಲಿ ಹೋಗುವ ದಿನ ನೆಲದ ಮೇಲೆ ಬಿದ್ದು ಅಳುತ್ತಿದ್ದ. ಐದು ವರ್ಷದ ತಮ್ಮ ತಂದೆಯ ಕೈ ಹಿಡಿದು ನಿಂತಿದ್ದ. "ಅವನಿಗೆ ಹೋಗಲು ಇಷ್ಟವಿರಲಿಲ್ಲ. ಅವನು ಹಾಗೆ ಅಳುವುದನ್ನು ನೋಡಿ ನನ್ನ ಹೃದಯ ಒಡೆಯಿತು,” ಎಂದು ಅವರ ತಾಯಿ ಗಾಯತ್ರಿ ಪಾಲ್ ಹೇಳುತ್ತಾರೆ.
ಆದರೆ ರಘುವಿನ ತಂದೆ ತಾಯಿಗೆ ಉದ್ಯೋಗಕ್ಕಾಗಿ ಊರು ಬಿಡುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ. ‘‘ಕೃಷಿಯಿಂದ ಆದಾಯವಿಲ್ಲದಿದ್ದರೆ ಊರು ಬಿಡಬೇಕಾಗುತ್ತದೆ. ಆ ವರ್ಷ ಕೇವಲ ಎರಡು ಕ್ವಿಂಟಾಲ್ ಭಜ್ರಾ ಫಸಲು ಬಂದಿತ್ತು. ಬೆಳೆಗಳಿಗೆ ನೀರಿಲ್ಲ, ಗ್ರಾಮದಲ್ಲಿ ಬೇರೆ ಕೆಲಸವಿಲ್ಲ. ಹಳ್ಳಿಯ ಅರ್ಧದಷ್ಟು ಜನರು ರಾಜ್ಯ ಬಿಟ್ಟು ಹೊರಗೆ ಹೋಗಿದ್ದಾರೆ. ಕೆಲಸ ಸಿಕ್ಕಿದ್ದಲ್ಲೆಲ್ಲಾ ಜನರು ಹೊರಟು ಹೋಗಿದ್ದಾರೆ” ಎಂದು 35 ವರ್ಷದ ಗಾಯತ್ರಿ ಹೇಳುತ್ತಾರೆ. ಅವರು ಮತ್ತು ಅವರ ಪತಿ, 45 ವರ್ಷದ ಮನೀಶ್, ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡಲು ಚೆನ್ನೈಗೆ ತೆರಳಿದರು, ಅಲ್ಲಿ ಅವರ ಗ್ರಾಮದ ಕೆಲವರು ಈಗಾಗಲೇ ಕೆಲಸ ಮಾಡುತ್ತಿದ್ದರು.












