ಪರೈ (ತಮಟೆ) ಸದ್ದಿನೊಂದಿಗೆ ಮೆರವಣಿಗೆ ಆರಂಭಗೊಂಡಿತು.
ಸುಮಾರು 60 ಜನರ ಗುಂಪು "ಜೈ ಭೀಮ್, ಜೈ ಅಂಬೇಡ್ಕರ್ ಜೈ ಭೀಮ್" ಎಂದು ಕೂಗತೊಡಗಿರುತು. ಇದು ಡಾ.ಬಿ.ಆರ್.ಅಂಬೇಡ್ಕರ್ ಅವರ ಪುಣ್ಯತಿಥಿಯಂದು ಪ್ರತಿ ವರ್ಷ ಡಿಸೆಂಬರ್ 6 ರಂದು ಮುಂಬೈನ ಧಾರಾವಿಯಲ್ಲಿ ನಡೆಯುವ ಮಹಾಪರಿನಿರ್ವಾಣ ಮೆರವಣಿಗೆಯ ಚಿತ್ರ.
ಧಾರಾವಿಯ ಪೆರಿಯಾರ್ ಚೌಕದಲ್ಲಿ ಒಬ್ಬೊಬ್ಬರಾಗಿ ಬಂದು ಜನರು ಮೇಣದಬತ್ತಿಗಳನ್ನು ಬೆಳಗಿಸುತ್ತಾರೆ. ಇದ್ದಕ್ಕಿದ್ದಂತೆ ಮುಂಬೈ ನಗರದಲ್ಲಿರುವ ಏಷ್ಯಾದ ಅತಿದೊಡ್ಡ ಕೊಳೆಗೇರಿ ಸಂಭ್ರಮದಿಂದ ಪುಟಿದೇಳುತ್ತದೆ. ಜೈ ಭೀಮ್ ಫೌಂಡೇಶನ್ ವತಿಯಿಂದ ಮಹಾಪರಿನಿರ್ವಾಣ ದಿವಸ್ (ಅಂಬೇಡ್ಕರ್ ನಿಧನ ಹೊಂದಿದ ದಿನ) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಇ. ವಿ. ರಾಮಸ್ವಾಮಿ (ಪೆರಿಯಾರ್) ಚೌಕದಿಂದ ಆರಂಭವಾಗಿ ಸುಮಾರು 1.5 ಕಿಲೋಮೀಟರ್ ವರೆಗೆ ನಡೆದು ಗಣೇಶನ್ ಕೋವಿಲ್‌ನಲ್ಲಿಇರುವ ಅಂಬೇಡ್ಕರ್ ಪ್ರತಿಮೆಯ ಬಳಿ ಕೊನೆಗೊಳ್ಳುವ ರ್ಯಾಲಿಯು ಸರಿಸುಮಾರು ಎರಡು ಗಂಟೆಗಳ ಕಾಲ ನಡೆಯುತ್ತದೆ.
“ಇಂದು ನಮಗೆ ಹಬ್ಬದ ಸಂಭ್ರಮ. ಇಡೀ ಮುಂಬೈ ನಗರ ಏಪ್ರಿಲ್ 14 (ಅಂಬೇಡ್ಕರ್ ಅವರ ಜನ್ಮದಿನ) ಮತ್ತು ಡಿಸೆಂಬರ್ 6 ರಂದು ಮಹಾನ್ ನಾಯಕನನ್ನು ಮತ್ತು ಜಾತಿ ತಾರತಮ್ಯಕ್ಕೊಳಗಾದ ಜನರಿಗೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸುತ್ತದೆ,” ಎಂದು ಪ್ರತಿಷ್ಠಾನದ ಪ್ರಮುಖ ಸದಸ್ಯರಲ್ಲಿ ಒಬ್ಬರಾದ ವೆನ್ನಿಲಾ ಸುರೇಶ್ ಕುಮಾರ್ ಮತ್ತು ಅವರ ಪತಿ ಸುರೇಶ್ ಕುಮಾರ್ ರಾಜು ಹೇಳುತ್ತಾರೆ.. "ನಾವು ದಾರಿಯನ್ನು ನೀಲಿ ಧ್ವಜಗಳಿಂದ ಅಲಂಕರಿಸಿದ್ದೇವೆ. ಮನೆ ಮನೆಗೆ ಹೋಗಿ ನಮ್ಮೊಂದಿಗೆ ಕಾರ್ಯಕ್ರಮದಲ್ಲಿ ಸೇರಲು ಜನರನ್ನು ಆಹ್ವಾನಿಸುತ್ತೇವೆ."
ನಂತರ ಅವರು ಧಾರಾವಿಯಲ್ಲಿರುವ ಏಕೈಕ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತಮ್ಮ ನಾಯಕನ ಕೊಡುಗೆಗಳಿಗೆ ಸಮರ್ಪಿತವಾದ ತಮಿಳು ಹಾಡುಗಳನ್ನು ಹಾಡುವ ಗುಂಪಿನೊಡನೆ ಸೇರುತ್ತಾರೆ.
ಸುರೇಶ್ ಉತ್ತರ ಮುಂಬೈನಲ್ಲಿ ಸಂಸ್ಥೆಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. 45 ವರ್ಷ ವಯಸ್ಸಿನ ಇವರು 14 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡಿ ತಿಂಗಳಿಗೆ ಸುಮಾರ 25,000 ರುಪಾಯಿ ಸಂಪಾದಿಸುತ್ತಾರೆ. 41 ವರ್ಷ ಪ್ರಾಯದ ವೆನ್ನಿಲಾ ಧಾರಾವಿ ಬಳಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಪ್ರತಿದಿನ ಆರು ಗಂಟೆಗಳ ಕಾಲ ಅಡುಗೆ ಕೆಲಸ ಮಾಡಿ ಮನೆ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾರೆ. ಅವರು ಈ ಕೆಲಸಗಳನ್ನು ಮಾಡಿ ತಿಂಗಳಿಗೆ 15,000 ರುಪಾಯಿ ಸಂಪಾದಿಸುತ್ತಾರೆ.
ಈ ದಂಪತಿಗಳ ಇಬ್ಬರು ಗಂಡು ಮಕ್ಕಳಾದ 17 ವರ್ಷದ ಕಾರ್ತಿಕ್ ಮತ್ತು 12 ವರ್ಷದ ಅರನ್ ನಗರದ ಖಾಸಗಿ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ. “ನಾವು ದಾದರ್‌ನ ಚೈತ್ಯಭೂಮಿ ಸೇರಿದಂತೆ ನಗರದ ಇತರ ಭಾಗಗಳಲ್ಲಿ ನಡೆಯುವ ಆಚರಣೆಗಳಲ್ಲಿ ಕೂಡ ಭಾಗವಹಿಸುತ್ತೇವೆ. ಧಾರಾವಿಯಲ್ಲಿನಡೆಯುವ ಈ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಅಂಬೇಡ್ಕರ್ ಅವರ ಅನುಯಾಯಿಗಳಾದ ಪರಯರ್ ಸಮುದಾಯದವರು ಭಾಗವಹಿಸುತ್ತಾರೆ,” ಎಂದು ವೆನ್ನಿಲಾ ಹೇಳುತ್ತಾರೆ.
ತಮಿಳುನಾಡು ಮೂಲದ ವೆನ್ನಿಲಾ ಮತ್ತು ಸುರೇಶ್ ಪರಯರ್ ಸಮುದಾಯಕ್ಕೆ ಸೇರಿದವರು, ಅವರ ತವರು ರಾಜ್ಯದಲ್ಲಿ ಪರಯರ್ ಸಮುದಾಯ ಪರಿಶಿಷ್ಟ ಜಾತಿಗೆ ಸೇರುತ್ತದೆ. "ನನ್ನ ತಂದೆ 1965 ರಲ್ಲಿ ತಿರುನಲ್ವೇಲಿಯಿಂದ ಧಾರಾವಿಗೆ ಕೆಲಸ ಹುಡುಕಿಕೊಂಡು ಬಂದರು" ಎಂದು ಅವರು ಹೇಳುತ್ತಾರೆ. ನೀರಾವರಿ ಹಾಗೂ ಇತರೆ ಸಮಸ್ಯೆಗಳಿಂದಾಗಿ ಕೃಷಿಯಿಂದ ಸಾಕಷ್ಟು ಆದಾಯ ಸಿಗದೇ ಈ ಕುಟುಂಬ ಧಾರಾವಿಗೆ ವಲಸೆ ಬಂದಿದೆ.
ಧಾರಾವಿಯಲ್ಲಿ ಅವರು ವಾಸಿಸುವ ಸ್ಥಳದಲ್ಲಿ ಮತ್ತು ಸುತ್ತಮುತ್ತಲಿನ ಅಂಬೇಡ್ಕರ್ ವಾದಿಗಳನ್ನು ಸಂಘಟಿಸುವಲ್ಲಿ ದಂಪತಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. 2012ರಲ್ಲಿ, ಅವರು ರಾಜಾ ಕುಟ್ಟಿ ರಾಜು, ನಿತ್ಯಾನಂದ ಪಳನಿ, ಅನಿಲ್ ಶಾಂತಿನಿ ಮತ್ತು ಇತರ ಸದಸ್ಯರೊಂದಿಗೆ "ಅಂಬೇಡ್ಕರ್ ಮತ್ತು ಅವರ ಕೊಡುಗೆಗಳ ಬಗ್ಗೆ ಜಾಗೃತಿ ಮತ್ತು ಜ್ಞಾನವನ್ನು ಹರಡಲು ಏಪ್ರಿಲ್ 14 ಮತ್ತು ಡಿಸೆಂಬರ್ 6 ರಂದು ಧಾರಾವಿಯಲ್ಲಿ ಸಾಮೂಹಿಕ ಆಚರಣೆಗಳನ್ನು ಆಯೋಜಿಸಲು ಪ್ರಾರಂಭಿಸಿದರು" ಎಂದು ಸುರೇಶ್ ಹೇಳುತ್ತಾರೆ.
ಸುರೇಶ್ ಅವರು ಡ್ರೈವಿಂಗ್ ಕೆಲಸ ಇಲ್ಲದೇ ಇರುವ ಸಮಯದಲ್ಲಿ ಜೈ ಭೀಮ್ ಫೌಂಡೇಶನ್‌ಗೆ ಸ್ವಯಂಸೇವಕರಾಗಿ ಕೆಲಸ ಮಾಡುತ್ತಾರೆ. 2012ರಲ್ಲಿ 20 ಸದಸ್ಯರಿದ್ದ ಈ ಸಂಸ್ಥೆಯಲ್ಲಿ ಈಗ 150 ಸದಸ್ಯರಿದ್ದಾರೆ ಎಂದು ಅವರು ಹೇಳುತ್ತಾರೆ. “ನಮ್ಮ ಬಹುಪಾಲು ಸದಸ್ಯರು ವಲಸಿಗರು. ಅವರು ಡ್ರೈವರ್‌ಗಳಾಗಿ ಮತ್ತು ರೈಲ್ವೆಯಲ್ಲಿ ಕೆಲಸ ಮಾಡುತ್ತಾರೆ. ಆದರೆ ತಪ್ಪದೆ ರ್ಯಾಲಿಗಳಲ್ಲಿ ನಮ್ಮೊಂದಿಗೆ ಬಂದು ಸೇರುತ್ತಾರೆ,” ಎಂದು ಅವರು ಹೇಳುತ್ತಾರೆ.
ವೆನ್ನಿಲಾ ಅವರು 9 ನೇ ತರಗತಿಯವರೆಗೆ ಮಾತ್ರ ಓದಿ ಕೆಲಸ ಮಾಡಲು ಆರಂಭಿಸಿದರು. ಅಡುಗೆ ಕೆಲಸ ಮಾಡುವಾಗ ಮತ್ತು ಕಚೇರಿಯೊಂದರಲ್ಲಿ ಕೆಲಸ ಮಾಡುವಾಗ ಇಂಗ್ಲಿಷ್ ಮಾತನಾಡಲು ಕಲಿತಿರುವುದಾಗಿ ಅವರು ಹೇಳುತ್ತಾರೆ. 2016 ರಲ್ಲಿ ವೆನಿಲ್ಲಾ ಅವರು ಮಗಿಳ್ಚಿ ಮಗಳಿರ್ ಪೆರವೈ ಎಂಬ ಹೆಸರಿನ ಸ್ವ-ಸಹಾಯ ಗುಂಪನ್ನು (ಎಸ್.ಎಚ್.ಜಿ) ಸ್ಥಾಪಿಸಿದರು. "ನಮ್ಮನ್ನು ನಾವು ತೊಡಗಿಸಿಕೊಳ್ಳಲು ಹೆಚ್ಚಿನ ಚಟುವಟಿಕೆಗಳು ಇಲ್ಲದೇ ಇರುವುದರಿಂದ ಈ ಮಹಿಳಾ ಸಂಘದ ಮೂಲಕ ಬೇರೆ ಬೇರೆ ಕಾರ್ಯಕ್ರಮಗಳನ್ನು ನಡೆಸುತ್ತೇವೆ ಮತ್ತು ಒಟ್ಟಿಗೆ ಸಿನೇಮಾ ನೋಡಲು ಹೋಗುತ್ತೇವೆ," ಎನ್ನುತ್ತಾರೆ. ಲಾಕ್‌ಡೌನ್ ಸಮಯದಲ್ಲಿ ವೆನ್ನಿಲಾ ಅವರ ಜೊತೆಗೂಡಿ ಎಸ್.ಎಚ್.ಜಿ ಸದಸ್ಯರು ಧಾರಾವಿಯ ಜನರಿಗೆ ಆಹಾರ, ದಿನಸಿ ಮತ್ತು ಸಣ್ಣ ಪ್ರಮಾಣದ ಆರ್ಥಿಕ ಸಹಾಯವನ್ನು ನೀಡಿದ್ದರು.
ತಮಿಳಿನಲ್ಲಿ ‘ಮಗಿಳ್ಚಿ’ ಎಂದರೆ ಸಂತೋಷ ಎಂದು ಅರ್ಥ ಎಂದು ವೆನ್ನಿಲಾ ನಗುತ್ತಾ ಹೇಳುತ್ತಾರೆ. “ಯಾವಾಗಲೂ ತುಳಿತಕ್ಕೊಳಗಾಗುವ ಮಹಿಳೆಯರು ಮನೆಯೊಳಗೆ ಖಿನ್ನತೆಯನ್ನು ಅನುಭವಿಸುತ್ತಾರೆ. ನಾವೆಲ್ಲರೂ ಪರಸ್ಪರ ಸಂತೋಷದಿಂದ ಮಾತನಾಡಲು ಇರುವ ಜಾಗ ಇದು,” ಎನ್ನುತ್ತಾರೆ.
ಅನುವಾದ: ಚರಣ್ ಐವರ್ನಾಡು