ಅದೊಂದು ಶ್ರೀಮಂತ ಇತಿಹಾಸವಿರುವ ಪುಟ್ಟ ಪಟ್ಟಣ. ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿರುವ ಈ ಪುಟ್ಟ ಪಟ್ಟಣದ ಹೆಸರು ``ನಿರ್ಮಲ್''. ಈ ಪಟ್ಟಣಕ್ಕೆ ನಿರ್ಮಲ್ ಎಂಬ ಹೆಸರು ಬಂದಿದ್ದು ಹದಿನೇಳನೇ ಶತಮಾನದಲ್ಲಿ ಆಳುತ್ತಿದ್ದ ಕಲಾರಾಧಕ ಸಾಮ್ರಾಟ ನಿಮ್ಮಲ್ ನಾಯ್ಡುವಿನಿಂದ. ಕಲೆ ಮತ್ತು ಅದರಲ್ಲೂ ವಿಶೇಷವಾಗಿ ಗೊಂಬೆ ತಯಾರಿಕೆಯ ಕಸುಬುದಾರಿಕೆಯ ಕಲೆಯಲ್ಲಿ ಈತನಿಗೆ ವಿಶೇಷವಾದ ಒಲವಿತ್ತು ಎಂಬ ಮಾತಿದೆ. ಆ ಕಾಲದಲ್ಲೇ ಬರೋಬ್ಬರಿ ಎಂಭತ್ತು ಗೊಂಬೆ ತಯಾರಿಕೆಯ ಕಲಾವಿದರನ್ನು ಒಂದೆಡೆ ಸೇರಿಸಿ, ಪುಟ್ಟ ಕಲಾವಿದರ ಗುಂಪೊಂದನ್ನು ಮಾಡಿ, ಕಲೆಗೆ ವಾಣಿಜ್ಯದ ಬಣ್ಣವನ್ನು ಕೊಟ್ಟಿದ್ದಲ್ಲದೆ, ಸಾಂಸ್ಕೃತಿಕವಾಗಿಯೂ ಬೆಳೆಯುವಲ್ಲಿ ಕೊಡುಗೆಯನ್ನು ನೀಡಿದ್ದನು ಎಂದು ಇತಿಹಾಸ ಹೇಳುತ್ತದೆ.
ಭವ್ಯ ಇತಿಹಾಸವನ್ನು ಕ್ಷಣಕಾಲ ಬದಿಗಿಟ್ಟು ಪ್ರಸ್ತುತಕ್ಕೆ ಬರೋಣ. ಆದಿಲಾಬಾದ್ ಪಟ್ಟಣ ಅಥವಾ ಕುಂಟಲ ಜಲಪಾತವನ್ನು ನೋಡಲು ಹೋಗುವ ಪ್ರವಾಸಿಗರಿಗೆ ನಿರ್ಮಲ್ ಪಕ್ಕದಲ್ಲೇ ಇರುವ ಒಂದು ಪ್ರವಾಸಿ ತಾಣವಾಗಿ ಕಾಣಬರುವ ಸ್ಥಳವಷ್ಟೇ. ಆದರೆ ಸುಮಾರು ಒಂದು ಲಕ್ಷಕ್ಕಿಂತ ಕೊಂಚ ಕಮ್ಮಿ ಜನಸಂದಣಿಯನ್ನು ಹೊಂದಿರುವ ನಿರ್ಮಲ್ ಬಗ್ಗೆ ಪ್ರವಾಸಿಗರಿಗೆ ತಿಳಿಯದಿರುವ ವಿಷಯಗಳೂ ಸಾಕಷ್ಟಿವೆ. ಹಲವು ವರ್ಷಗಳ ಇತಿಹಾಸವಿರುವ ಇಲ್ಲಿಯ ಗೊಂಬೆ ತಯಾರಿಕೆಯ ಕಸುಬನ್ನು ಇಂದಿಗೂ ಸುಮಾರು ನಲವತ್ತರಷ್ಟು ಕುಟುಂಬಗಳು ಪರಂಪರೆಯಂತೆ ಮುಂದುವರಿಸುತ್ತಲೇ ಕಲೆಯನ್ನು ಜೀವಂತವಾಗಿಟ್ಟಿವೆಯೆಂಬುದು ಅವುಗಳಲ್ಲೊಂದು.
ನಿರ್ಮಲ್ ಪಟ್ಟಣದ ಗೊಂಬೆ ತಯಾರಿಕೆಯ ವಿಶಿಷ್ಟತೆಯೆಂದರೆ ಕಲಾವಿದನ ಕೈಚಳಕದಿಂದ ಮೂಡಿಬಂದ ಈ ಗೊಂಬೆಗಳ ಶೈಲಿಗಳು `ಫ್ಲೋರಾ-ಫಾನಾ' ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಸಸ್ಯ ಮತ್ತು ಪ್ರಾಣಿಗಳ ಜಗತ್ತಿನಿಂದ ಪ್ರೇರಿತವಾಗಿದ್ದು. ಗೊಂಬೆಗಳು ಪ್ರಾಣಿ-ಪಕ್ಷಿಗಳದ್ದಾಗಿರಲಿ ಅಥವಾ ಹಣ್ಣಿನದ್ದಾಗಿರಲಿ, ಪ್ರತಿಯೊಂದರ ಆಕಾರವನ್ನೂ, ಓರೆಕೋರೆಗಳನ್ನೂ ಸೂಕ್ಷ್ಮವಾಗಿ ಅಭ್ಯಸಿಸಿ ನೈಜತೆಯ ಪ್ರತಿರೂಪದಂತೆ ಕಾಣುವ ಮರದ ಗೊಂಬೆಗಳನ್ನು ಮಾಡುವ ಕಲೆಯು ಈ ಕಲಾವಿದರಿಗೆ ಸಿದ್ಧಿಸಿದೆ.
ಕಾಲೊನಿಯ ಮುಂಭಾಗದಲ್ಲಿರುವ, ಗೊಂಬೆಗಳು ತಯಾರಾಗುವ ಪುಟ್ಟ ವರ್ಕ್ ಶಾಪ್
ಈ ಮರದ ಗೊಂಬೆಗಳನ್ನು ತಯಾರಿಸುವ ಎಲ್ಲಾ ಕಲಾವಿದರು ``ಕಲಾನಗರ್'' ಎಂಬ ಕಾಲೊನಿಯೊಂದರಲ್ಲಿ ಜೊತೆಯಾಗಿ ನೆಲೆಸುತ್ತಿದ್ದಾರೆ. ಕಲಾನಗರ್ ಎಂಬ ಹೆಸರಿನಲ್ಲೇ ಕಲೆಯಿದೆ ನೋಡಿ. ಈ ಪ್ರದೇಶವು ಗೊಂಬೆಗಳನ್ನು ತಯಾರಿಸಲು ಕಲಾವಿದರು ಉಪಯೋಗಿಸುವ ಪುಟ್ಟ ವರ್ಕ್ ಶಾಪ್ ಹಿಂಭಾಗದಲ್ಲಿದೆ. ಹೀಗೆ ಇಲ್ಲಿರುವ ಹಲವು ಪ್ರತಿಭಾವಂತ ಕಲಾವಿದರಲ್ಲಿ ನಂಪಲ್ಲಿ ಲಿಂಬಿಯಾ ಕೂಡ ಒಬ್ಬರು. ತಮ್ಮ ತಂದೆಯಿಂದ ತಮಗೆ ಅನುವಂಶಿಕವಾಗಿ ಬಂದ ಈ ಕಲೆಯ ಬಗ್ಗೆ ಹೇಳುತ್ತಾ ಗೊಂಬೆ ತಯಾರಿಕೆಯ ಬಗ್ಗೆ ಮನೋಜ್ಞವಾಗಿ ಮಾತನಾಡುವುದರಲ್ಲಿ ಅವರಿಗೆ ಹೆಮ್ಮೆಯಿದೆ. ``ಬಾಲ್ಯದಿಂದಲೂ ಈ ಕಲೆಯನ್ನು ನಾನು ನೋಡಿದ್ದೇನೆ, ಇದನ್ನು ಕಲಿತಿದ್ದೇನೆ ಮತ್ತು ಇದರೊಂದಿಗೆ ಜೀವಿಸಿದ್ದೇನೆ. ಹೀಗಾಗಿ ಈ ಕಲೆಯಲ್ಲಿ ನನಗೆ ಅದ್ಭುತವಾದ ಪರಿಣತಿಯಿದೆ. ಆದರೆ ಈಗ ಹೊಸದಾಗಿ ಕಲಿಯಬೇಕೆಂದರೆ ಅಷ್ಟು ಸುಲಭವಾದ ವಿದ್ಯೆಯಲ್ಲ ಇದು. ಉದಾಹರಣೆಗೆ ನೀವು ಬಂದು ಏಕಾಏಕಿ ಈ ಕಲೆಯನ್ನು ಕಲಿಯುತ್ತೇನೆ ಎಂದರೆ ಅದು ಸಾಧ್ಯವಿಲ್ಲ. ಎಲ್ಲಾ ಕಲೆಯಂತೆಯೇ ಇದರೊಂದಿಗೆಯೂ ಜೀವಿಸಬೇಕಾಗುತ್ತದೆ, ಕಲೆಯನ್ನೇ ಉಸಿರಾಡಬೇಕಾಗುತ್ತದೆ'', ಎನ್ನುತ್ತಾರೆ ಲಿಂಬಿಯಾ.
ನಂಪಲ್ಲಿ ಲಿಂಬಿಯಾರ ದನಿಯಲ್ಲಿ ಕೊಂಚ ಹತಾಶೆಯ ನೆರಳಿದ್ದರೂ ಅವರ ಕೈಗಳು ಬಿಡುವಿಲ್ಲದೆ ಗೊಂಬೆಗಳನ್ನು ನುಣುಪಾಗಿಸುತ್ತಿವೆ. ಈ ಗೊಂಬೆಗಳನ್ನು `ಪೊನಿಕಿ ಚೆಕ್ಕ' ಎಂದು ಕರೆಯಲಾಗುವ ವಿಶೇಷವಾದ ಪ್ರಭೇದದ ಮರಗಳಿಂದ ತಯಾರಿಸಲಾಗುತ್ತದೆ. ಲಿಂಬಿಯಾರು ಹೇಳುವ ಪ್ರಕಾರ ಈ ಗೊಂಬೆಗಳು ಒಡೆಯುವ ಅಥವಾ ಮುರಿಯುವಂಥಾ ಗೊಂಬೆಗಳಲ್ಲವಂತೆ. ನಂತರ ಗೋಂದಿನಂತೆ ಕಾಣುವ ``ಲಪ್ಪಂ'' ಎಂಬ ಹೆಸರಿನ ಅಂಟಿನ ಪದಾರ್ಥವೊಂದನ್ನು ತೆಗೆದು ತೋರಿಸುತ್ತಾ ಈ ಅಂಟಿನಂತೆ ಕಾಣುವ ಲಪ್ಪಂ ಅನ್ನು ಗೊಂಬೆಗಳನ್ನು ನುಣುಪಾಗಿಸಲು ಮತ್ತು ಅವುಗಳನ್ನು ದೃಢವಾಗಿಸಲು ಬಳಸಲಾಗುತ್ತದೆ ಎನ್ನುತ್ತಾರೆ. ಹುಣಸೇ ಬೀಜಗಳನ್ನು ಚೆನ್ನಾಗಿ ಅರೆದು ತಯಾರಿಸಿದ ಪೇಸ್ಟ್ ಅನ್ನೇ ಲಪ್ಪಂ ಆಗಿ ಬಳಸುತ್ತಾರಂತೆ.
ರಾಜ್ಯ ಸರ್ಕಾರದಿಂದ ಕೊಡಲ್ಪಟ್ಟ ಭೂಮಿಯಲ್ಲಿ ಹಲವು ದಶಕಗಳ ಹಿಂದೆ ಕಲಾವಿದರೆಲ್ಲಾ ಒಟ್ಟಾಗಿ ಪುಟ್ಟ ವರ್ಕ್ ಶಾಪ್ ಒಂದನ್ನು ಸ್ಥಾಪಿಸಿ, ತಮ್ಮದೇ ಆದ ಒಂದು ಪುಟ್ಟ ಕಲಾವಿದರ ಸಮಾಜವನ್ನು ಹುಟ್ಟುಹಾಕಿದರು. ಈ ವರ್ಕ್ ಶಾಪ್ ನಲ್ಲಿ ಇತರ ಕಲಾವಿದರಂತೆಯೇ ಗೊಂಬೆಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಲಿಂಬಿಯಾರವರು ಮಾರಾಟವಾಗುವ ಗೊಂಬೆಗಳ ಸಂಖ್ಯೆ ಮತ್ತು ವಿಧಗಳಿಗನುಗುಣವಾಗಿ ತಿಂಗಳಿಗೆ ಆರು ಸಾವಿರದಿಂದ ಏಳು ಸಾವಿರ ರೂಪಾಯಿಗಳಷ್ಟು ಆದಾಯವನ್ನು ಗಳಿಸುತ್ತಾರಂತೆ.
``ಲಪ್ಪಂ'' ಅನ್ನು ಬಳಸಿ ಗೊಂಬೆಯನ್ನು ನುಣುಪಾಗಿಸುತ್ತಿರುವ ಕಲಾವಿದ ನಂಪಲ್ಲಿ ಲಿಂಬಿಯಾ
ಕೆಳಗಿನ ಚಿತ್ರ: ಕೆಲಸದ ನಡುವಿನ ಬಿಡುವಿನ ವೇಳೆಯಲ್ಲಿ
ಬಲ ಚಿತ್ರ:ಕಲಾವಿದೆ ಬೂಸಾನಿ ಲಕ್ಷ್ಮಿ ತನ್ನ ಮನೆಯಲ್ಲಿ
ಜಿಂಕೆಯ ಒಂದು ಗೊಂಬೆಯೊಂದನ್ನು ತಯಾರಿಸುತ್ತಲೇ ನಮ್ಮೊಂದಿಗೆ ಮಾತನಾಡುತ್ತಿದ್ದ ಲಿಂಬಿಯಾ ಗೊಂಬೆಯನ್ನು ಪಕ್ಕಕ್ಕಿಟ್ಟು ನಿಟ್ಟುಸಿರಿಟ್ಟರು. ``ದಿನಕಳೆದಂತೆ ಈ ಕೆಲಸವು ಅವನತಿಯ ಹಾದಿಯಲ್ಲಿ ಹೋಗುತ್ತಿರುವಂತೆ ಕಾಣುತ್ತಿದೆ. ಗೊಂಬೆಗಳ ತಯಾರಿಕೆಗಾಗಿ ಬೇಕಾದ ಮರಗಳು ಸಿಗುವುದೇ ಕಷ್ಟವಾಗಿದೆ. ಸಾಮಾನ್ಯವಾಗಿ ದಟ್ಟ ಕಾಡಿನೊಳಕ್ಕೆ ಹೋಗಿ ಈ ವಿಶಿಷ್ಟವಾದ ಮರಗಳನ್ನು ತರಬೇಕಾಗುತ್ತದೆ. ಈ ವಿಚಾರವನ್ನು ಪರಿಗಣಿಸಿ ಗೊಂಬೆಗಳ ಬೆಲೆಯನ್ನು ಹೆಚ್ಚಿಸಿದರೆ ಕೊಳ್ಳುವವರಿಲ್ಲದಂತಾಗಿದೆ. ಹಿರಿಯರಿಂದ ಸಂಸ್ಕೃತಿಯ, ಪರಂಪರೆಯ ಭಾಗವಾಗಿ ಬಂದ ಕಲೆಯಂತೆ ಇದನ್ನು ನನ್ನ ಮಕ್ಕಳಿಗೆ ಕಲಿಸುತ್ತೇನೆಯೇ ಹೊರತು ಗೊಂಬೆ ತಯಾರಿಕೆಯನ್ನೇ ನನ್ನ ಮಕ್ಕಳು ವೃತ್ತಿಯನ್ನಾಗಿ ಅವಲಂಬಿಸುವುದು ನನಗೆ ಇಷ್ಟವಿಲ್ಲ. ಅವರ ಭವಿಷ್ಯದ್ದೇ ದೊಡ್ಡ ಚಿಂತೆ ನನಗೆ. ಅವರಾದರೂ ಚೆನ್ನಾಗಿ ಓದಿ, ಕಲಿತು, ಒಂದು ಉದ್ಯೋಗದೊಂದಿಗೆ ಪಟ್ಟಣಗಳಲ್ಲಿ ನೆಲೆಗೊಳ್ಳಲಿ ಎಂಬುದೇ ನನ್ನ ಆಸೆ'', ಎನ್ನುತ್ತಾರೆ ಲಿಂಬಿಯಾ.
ಕಲಾವಿದನ ಕುಂಚದ ಬಣ್ಣಕ್ಕಾಗಿ ಕಾಯುತ್ತಿರುವ, ವರ್ಕ್ ಶಾಪ್ ನ ಮೂಲೆಯಲ್ಲಿಟ್ಟ ಜಿಂಕೆಯ ಗೊಂಬೆಗಳು
ಪೊನಿಕಿ ಎಂಬ ಹೆಸರಿನ ಈ ಸಾಫ್ಟ್-ವುಡ್ ಕೆಟಗರಿಯ ಮರಗಳನ್ನು ನಿರ್ಮಲ್ ಪಟ್ಟಣದ ಆಸುಪಾಸಿನ ಕೆಲವು ಪ್ರದೇಶಗಳಲ್ಲಿ ಕಾಣಬಹುದು. ಹಿಂದೆಲ್ಲಾ ಈ ಪ್ರಭೇದದ ಮರಗಳು ಸಾಕಷ್ಟು ಸಂಖ್ಯೆಯಲ್ಲಿದ್ದುದರಿಂದ ಈ ಮರಗಳನ್ನು ವಿಶೇಷವಾಗಿ ಬೆಳೆಯಬೇಕಾದ ಪರಿಸ್ಥಿತಿಯೂ, ಯೋಚನೆಯೂ ಯಾರಿಗೂ ಬಂದಿರಲಿಲ್ಲ. ಆದರೆ ಕ್ರಮೇಣ ಈ ಮರಗಳ ಪ್ರಮಾಣವು ಕಮ್ಮಿಯಾಗುತ್ತಾ, ಕಾಡಿನಿಂದ ಇವುಗಳನ್ನು ಕಡಿದು ತರಲು ನಿರ್ಬಂಧಗಳು ಹೆಚ್ಚಾಗುತ್ತಿದ್ದಂತೆಯೇ ಈ ವೃತ್ತಿಯ ಕರಾಳ ಭವಿಷ್ಯವನ್ನು ಮನಗಂಡ ಕಲಾವಿದರು ತಮ್ಮ ಪರಂಪರಾಗತ ವೃತ್ತಿಯನ್ನೇ ಬಿಟ್ಟು ಉದ್ಯೋಗಗಳ ಬೇಟೆಗಾಗಿ ನಗರಗಳ ಕಡೆಗೆ ವಲಸೆ ಹೋದರು.
ವರ್ಕ್ ಶಾಪ್ ನ ಇನ್ನೋರ್ವ ಕಲಾವಿದ ಹೇಳುವ ಪ್ರಕಾರ ಈ ಬೆಳವಣಿಗೆಗಳಿಂದ ಅತ್ಯಂತ ಹೆಚ್ಚು ಹಾನಿಗೊಳಗಾದ ವರ್ಗವೆಂದರೆ ಜೀವನೋಪಾಯಕ್ಕಾಗಿ ಈ ವೃತ್ತಿಯನ್ನಷ್ಟೇ ಅವಲಂಬಿಸಿಕೊಂಡಿರುವ ಹಲವು ವೃದ್ಧ ಮಹಿಳೆಯರು. ಅಸಲಿಗೆ ಪುರುಷರು ಕಾಡಿಗೆ ತೆರಳಿ ಕಡಿದ ಮರದ ತುಂಡುಗಳನ್ನು ತಂದು ಹಾಕಿದರೆ ಈ ಮಹಿಳೆಯರು ಈ ತುಂಡುಗಳಿಗೊಂದು ಆಕಾರವನ್ನು ನೀಡುತ್ತಾರೆ. ಇದೇ ಕಾಲೊನಿಯಲ್ಲಿ ನೆಲೆಸಿರುವ ಬೂಸಾನಿ ಲಕ್ಷ್ಮಿ ಎಂಬ ಮಹಿಳೆ ಇಂಥವರಲ್ಲೊಬ್ಬಳು. ಕಳೆದ ಕೆಲವು ವರ್ಷಗಳಿಂದ ಈ ವೃತ್ತಿಯನ್ನು ತನ್ನ ಜೀವನೋಪಾಯಕ್ಕೆಂದು ಅವಲಂಬಿಸಿದ್ದಾಳೆ. ಈಕೆಯ ಗಂಡ ಸತ್ತು ವರ್ಷಗಳು ಕಳೆದಿವೆ. ತಾಯಿಯಾಗುವ ಭಾಗ್ಯವನ್ನು ಈಕೆ ಪಡೆದುಕೊಂಡು ಬಂದಿಲ್ಲ. ವಿವಾಹದ ನಂತರದ ವರ್ಷಗಳಲ್ಲಿ ಈ ಕಸುಬುದಾರಿಕೆಯಲ್ಲೇ ತನ್ನ ಗಂಡನ ಜೊತೆ ಕೈಜೋಡಿಸಿದಾಕೆ ಈ ಲಕ್ಷ್ಮಿ. ಹೀಗಾಗಿ ಈ ವೃತ್ತಿಯೊಂದನ್ನು ಬಿಟ್ಟರೆ ಇನ್ನೇನೂ ಆಕೆಗೆ ತಿಳಿದಿಲ್ಲ. ಈ ಕಾರಣದಿಂದ ಸಹಜವಾಗಿಯೇ ಹೊಟ್ಟೆಪಾಡಿಗಾಗಿ ಇತರ ಆಯ್ಕೆಗಳು ಈಕೆಗಿಲ್ಲ.
``ಹಲವು ಸಂದರ್ಭಗಳಲ್ಲಿ ನಮ್ಮ ಈ ಕಲೆ ಮತ್ತುಜೀವನದ ಸ್ಥಿತಿಯು ಡೋಲಾಯಮಾನವಾಗಿದೆ. ಗೊಂಬೆಗಳ ತಯಾರಿಕೆಗೆ ಬೇಕಾದ ಮರಗಳು ಸಿಗುತ್ತಿಲ್ಲ. ವರ್ಕ್ ಶಾಪ್ ನ ಅಗತ್ಯಗಳು ಪೂರ್ಣಗೊಂಡ ಬಳಿಕವಷ್ಟೇ ಗೊಂಬೆ ತಯಾರಿ, ಸಂಪಾದನೆಗಳೆಲ್ಲಾ. ಒಂದು ಗೊಂಬೆಗೆ ಇಪ್ಪತ್ತುರೂಪಾಯಿಯಆದಾಯವಷ್ಟೇ ನನ್ನಂಥವರಿಗೆ ಸಿಗುತ್ತಿದೆ. ಇದರಲ್ಲೇ ದಿನನಿತ್ಯದ ಖರ್ಚುಗಳನ್ನು ತೂಗಿಸಬೇಕಿದೆ'', ಅನ್ನುತ್ತಾರೆ ಲಕ್ಷ್ಮಿ. ಈಗಷ್ಟೇ ಅವಳ ಕೈಗಳಲ್ಲಿ ತಯಾರಾದ ಸೀತಾಫಲದ ಆಕಾರದ ಗೊಂಬೆಗಳು ಅಂಗಳದಲ್ಲಿ ಒಣಗುತ್ತಿವೆ. ವಾರಕ್ಕೆ ಸುಮಾರುಐವತ್ತು ಗೊಂಬೆಗಳು ಲಕ್ಷ್ಮಿಯ ನುರಿತ ಕೈಗಳಲ್ಲಿ ತಯಾರಾಗುತ್ತವೆ ಮತ್ತು ತಿಂಗಳಿಗೆ ಸುಮಾರು ನಾಲ್ಕು ಸಾವಿರ ರೂಪಾಯಿಗಳಷ್ಟರ ಆದಾಯವು ಅವಳ ಕೈಸೇರುತ್ತದೆ.
ಸೀತಾಫಲದ ಆಕಾರದ ಗೊಂಬೆಗಳನ್ನು ಅಂಗಳದಲ್ಲಿ ಒಣಗಿಸಿಟ್ಟು ಕಾಯುತ್ತಿರುವ ಕಲಾವಿದೆ ಬೂಸಾನಿ ಲಕ್ಷ್ಮಿ
ಲಕ್ಷ್ಮಿಗೆ ಸದ್ಯಕ್ಕೆ ಬೇಕಿರುವುದು ಪೊನಿಕಿ ಮರಗಳಷ್ಟೇ. ಮರಗಳಿದ್ದಷ್ಟು ದಿನ ಅವಳ ಜೀವನವು ಹೇಗೋ ಸಾಗಲಿದೆ. ``ಮರಗಳ ಪೂರೈಕೆ ನಿಂತುಹೋದರೆ ನನ್ನಜೀವನವೂ ನಿಂತುಹೋಗುತ್ತದೆ'', ಎಂದು ಭಾರವಾದ ನಿಟ್ಟುಸಿರಿಡುತ್ತಾ ಲಕ್ಷ್ಮಿಯು ಕ್ಷೀಣವಾದ ನಗೆಯನ್ನು ಬೀರುತ್ತಾಳೆ.`
ಅನುವಾದ: 'ಕ್ರೇಜಿ ಫ್ರಾಗ್ ಮೀಡಿಯಾ ಫೀಚರ್ಸ್' ಈ ಅನುವಾದದ ರೂವಾರಿ. ಪ್ರಸ್ತುತ ರಿಪಬ್ಲಿಕ್ ಆಫ್ ಅಂಗೋಲಾದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು ಮತ್ತು ಅಂಕಣಕಾರರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಬರೆದಿರುವ ಲೇಖನಗಳು ಜನಪ್ರಿಯ.
ಭವಾನಿ ಮುರಳಿ ಹೈದ್ರಾಬಾದ್ ನ ಲೊಯೊಲಾ ಅಕಾಡೆಮಿಯಲ್ಲಿ ಸಮೂಹ ಸಂವಹನದಲ್ಲಿ ಪದವೀಧರರು. ಈಕೆಗೆ ಅಭಿವೃದ್ಧಿ ಅಧ್ಯಯನ ಹಾಗೂ ಗ್ರಾಮೀಣ ಪತ್ರಿಕೋದ್ಯಮದಲ್ಲಿ ಆಸಕ್ತಿ . ಈ ಲೇಖನವನ್ನು ೨೦೧೬ ರ ಜನವರಿಯಲ್ಲಿ ಪರಿ ಯ ಇಂಟರ್ನ್ಶಿಪ್ ಅವಧಿಯಲ್ಲಿ ಬರೆಯಲಾಗಿದೆ .
(Translation: Prasad Naik)
This translation is co ordinated by Crazy Frog Media Features.
Prasad Naik is an engineer, and a freelance writer and columnist. He works in the Republic of Angola.