ಸಾಯುವ ದಿನದವರೆಗೂ, 22 ವರ್ಷದ ಗುರುಪ್ರೀತ್ ಸಿಂಗ್ ಅವರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ತಮ್ಮ ಹಳ್ಳಿಯಲ್ಲಿ ರೈತರನ್ನು ಒಟ್ಟುಗೂಡಿಸುತ್ತಿದ್ದರು. ಅವರ ತಂದೆ, ಜಗ್ತಾರ್ ಸಿಂಗ್ ಕಟಾರಿಯಾ, ವಾಯುವ್ಯ ಪಂಜಾಬ್ನ ತಮ್ಮ ಹಳ್ಳಿಯಲ್ಲಿ ಐದು ಎಕರೆ ಜಮೀನು ಹೊಂದಿರುವ ರೈತರಾಗಿದ್ದಾರೆ, ಅವರು ಮಗನ ಕೊನೆಯ ಭಾಷಣವನ್ನು ಸ್ಮರಿಸಿಕೊಳ್ಳುತ್ತಾರೆ. ದೆಹಲಿಯ ಗಡಿಯಲ್ಲಿ ಇತಿಹಾಸ ನಿರ್ಮಿಸಲಾಗುತ್ತಿದೆ ಮತ್ತು ಅದಕ್ಕೆ ಕೊಡುಗೆ ನೀಡಲು ಅವರು ಅಲ್ಲಿಗೆ ಹೋಗಬೇಕು ಎಂದು ಹೇಳಿದಾಗ ಸುಮಾರು 15 ಪ್ರೇಕ್ಷಕರು ಅವರ ಮಾತನ್ನು ಗಮನವಿಟ್ಟು ಕೇಳುತ್ತಿದ್ದರು. 2020ರ ಡಿಸೆಂಬರ್ನಲ್ಲಿ ಬೆಳಿಗ್ಗೆ ನಡೆದ ರೋಮಾಂಚನಕಾರಿ ಭಾಷಣದ ಅಂತ್ಯದ ವೇಳೆಗೆ, ಆಗಲೇ ತಮ್ಮ ತೋಳುಗಳನ್ನು ಏರಿಸಿಕೊಂಡು, ಯುವಕರ ತಂಡವೊಂದು ರಾಷ್ಟ್ರದ ರಾಜಧಾನಿ ದೆಹಲಿಗೆ ಮೆರವಣಿಗೆ ಹೊರಡಲು ಸಿದ್ಧವಾಗಿತ್ತು.
ಅವರು ಕಳೆದ ವರ್ಷ ಡಿಸೆಂಬರ್ 14ರಂದು ಪಂಜಾಬ್ನ ಶಾಹಿದ್ ಭಗತ್ ಸಿಂಗ್ ನಗರ ಜಿಲ್ಲೆಯ ಬಾಲಾಚೌರ್ ತೆಹಸಿಲ್ನಲ್ಲಿರುವ ತಮ್ಮ ಗ್ರಾಮವಾದ ಮಕೋವಾಲ್ನಿಂದ ಹೊರಟಿದ್ದರು. ಆದರೆ ಸುಮಾರು 300 ಕಿಲೋಮೀಟರ್ ಪ್ರಯಾಣದಲ್ಲಿ, ಹರಿಯಾಣದ ಅಂಬಾಲಾ ಜಿಲ್ಲೆಯ ಮೊಹ್ರಾ ಬಳಿ ಭಾರೀ ವಾಹನವೊಂದು ಅವರ ಟ್ರ್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆಯಿತು. "ಆಗ ಭಾರೀ ಘರ್ಷಣೆ ಸಂಭವಿಸಿದ್ದರಿಂದಾಗಿ ಗುರ್ಪ್ರೀತ್ ಮೃತಪಟ್ಟಿದ್ದರು. ಅವನ ಜೀವನವು ಚಳುವಳಿಗೆ ನೀಡಿದ ಕೊಡುಗೆ” ಎಂದು ಪಟಿಯಾಲಾದ ಮೋದಿ ಕಾಲೇಜಿನಲ್ಲಿ ಬಿಎ ವಿದ್ಯಾರ್ಥಿಯಾಗಿದ್ದ ತಮ್ಮ ಮಗನ ಬಗ್ಗೆ ಜಗತಾರ್ ಸಿಂಗ್ ಅವರು ಹೇಳುತ್ತಿದ್ದರು.
ಸೆಪ್ಟೆಂಬರ್ 2020ರಲ್ಲಿ ಭಾರತ ಸರ್ಕಾರವು ಅಂಗೀಕರಿಸಿದ ಮೂರು ಕೃಷಿ ಕಾನೂನುಗಳ ವಿರುದ್ಧದ ಚಳವಳಿಯಲ್ಲಿ ಭಾಗವಹಿಸಿ ಪ್ರಾಣ ಕಳೆದುಕೊಂಡ 700ಕ್ಕೂ ಹೆಚ್ಚು ಹೋರಾಟಗಾರರಲ್ಲಿ ಗುರುಪ್ರೀತ್ ಕೂಡಾ ಒಬ್ಬರು. ಈ ಕಾನೂನುಗಳ ವಿರುದ್ಧ ದೇಶದಾದ್ಯಂತ ರೈತರು ಪ್ರತಿಭಟನೆಗಳನ್ನು ದಾಖಲಿಸಿ, ಈ ಕಾನೂನುಗಳು ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಪ್ರಕ್ರಿಯೆಯನ್ನು ನಾಶಪಡಿಸುತ್ತವೆ, ಖಾಸಗಿ ವ್ಯಾಪಾರಿಗಳು ಮತ್ತು ದೊಡ್ಡ ಕಂಪನಿಗಳಿಗೆ ಬೆಳೆಗಳ ಬೆಲೆಗಳನ್ನು ನಿಗದಿಪಡಿಸಲು ಮತ್ತು ನಿಯಂತ್ರಿಸಲು ಮುಕ್ತ ಅವಕಾಶವನ್ನು ನೀಡುತ್ತವೆ ಮತ್ತು ಆ ಮೂಲಕ ಅವರನ್ನು ಹೆಚ್ಚು ಸಮೃದ್ಧಗೊಳಿಸುತ್ತದೆ ಎಂದು ಅವರು ಹೇಳುತ್ತಿದ್ದರು. ಪ್ರತಿಭಟನೆಗಳು ಮುಖ್ಯವಾಗಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರನ್ನು ಒಳಗೊಂಡಿತ್ತು ಮತ್ತು ನವೆಂಬರ್ 26, 2020ರಿಂದ ರೈತರು ದೆಹಲಿಯ ಹೊಸ್ತಿಲಲ್ಲಿ ಜಮಾಯಿಸಿದ್ದರು. ದೆಹಲಿ-ಹರಿಯಾಣ ಗಡಿಯಲ್ಲಿರುವ ಸಿಂಘು ಮತ್ತು ಟಿಕ್ರಿ ಮತ್ತು ದೆಹಲಿ-ಉತ್ತರಪ್ರದೇಶದ ಗಡಿಯಲ್ಲಿರುವ ಗಾಜಿಪುರದ ರಸ್ತೆಗಳಲ್ಲಿ ಅವರು ತಮ್ಮ ಪ್ರತಿಭಟನಾ ಶಿಬಿರಗಳನ್ನು ಸ್ಥಾಪಿಸಿದ್ದರು.
ಪ್ರತಿಭಟನೆಗಳು ಪ್ರಾರಂಭವಾದ ಒಂದು ವರ್ಷದ ನಂತರ, ಪ್ರಧಾನಿ ಮೋದಿಯವರು ನವೆಂಬರ್ 19, 2021ರಂದು ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದರು. ಕೃಷಿ ಕಾನೂನುಗಳ ರದ್ದತಿ ಮಸೂದೆ 2021 ಅನ್ನು ನವೆಂಬರ್ 29ರಂದು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು, ಆದರೆ ಚಳುವಳಿಯು ಡಿಸೆಂಬರ್ 11, 2021ರಂದು ಕೊನೆಗೊಂಡಿತು. ಈಗ ರೈತ ಸಂಘಗಳು ಸಲ್ಲಿಸಿದ ಬಹುತೇಕ ಬೇಡಿಕೆಗಳನ್ನು ಸರ್ಕಾರವು ಒಪ್ಪಿಕೊಂಡಿದೆ.
ಈ ಸುದೀರ್ಘ ಚಳುವಳಿ ವೇಳೆ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕೆಲವು ಕುಟುಂಬಗಳೊಂದಿಗೆ ನಾನು ವೈಯಕ್ತಿಕವಾಗಿ ಮತ್ತು ಫೋನ್ ಮೂಲಕ ಮಾತನಾಡಿದ್ದೇನೆ. ಅವರು ಆಘಾತ ಮತ್ತು ದುಃಖದ ಜೊತೆಗೆ ಆಕ್ರೋಶವನ್ನು ವ್ಯಕ್ತಪಡಿಸುತ್ತಾ, ಒಂದು ಮಹತ್ವದ ಉದ್ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಜಿಸಿದ ಹುತಾತ್ಮರ ನಡುವೆ ತಮ್ಮವರನ್ನೂ ಸ್ಮರಿಸಿಕೊಳ್ಳುತ್ತಿದ್ದರು.
"ನಾವು ರೈತರ ಗೆಲುವನ್ನು ಆಚರಿಸುತ್ತೇವೆ, ಆದರೆ ಕಾನೂನನ್ನು ಹಿಂತೆಗೆದುಕೊಳ್ಳುವ ಬಗ್ಗೆ ಪ್ರಧಾನಿ ಮೋದಿಯವರ ಘೋಷಣೆ ನಮಗೆ ಸಂತಸ ತಂದಿಲ್ಲ." ಎಂದು ಜಗತಾರ್ ಸಿಂಗ್ ಕಟಾರಿಯಾ ಹೇಳುತ್ತಿದ್ದರು. “ರೈತರಿಗೆ ಸರಕಾರ ಯಾವುದೇ ಒಳಿತನ್ನು ಮಾಡಿಲ್ಲ. ಇದು ರೈತರು ಮತ್ತು ಹುತಾತ್ಮರಾದವರನ್ನು ಅವಮಾನಿಸಿದೆ.” ಎಂದು ಆಕ್ರೋಶ ವ್ಯಕ್ತಪಡಿಸಿದರು.

















