ನಮ್ಮ ಈ ಎಲ್ಲಾ ಕೆಲಸಗಳ ಹೃದಯಭಾಗದಲ್ಲಿರುವುದು ನಮ್ಮ ಸ್ವಯಂಸೇವಕರು. ನಮ್ಮಲ್ಲಿರುವ ಪ್ರತಿಯೊಂದು ವರದಿಯ ಸಾರಾಂಶವನ್ನು ‘ಫೋಕಸ್ ಮತ್ತು ಫ್ಯಾಕ್ಟೋಯ್ಡ್ಸ್’ (focus and factoids) ರೂಪದಲ್ಲಿ ಇವರು ಸಿದ್ಧಪಡಿಸುತ್ತಾರೆ. ನಮ್ಮೊಂದಿಗೆ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ನಿವೃತ್ತ ವೃತ್ತಿಪರರು ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದು, ಇವರು ಅತ್ಯಂತ ಕ್ಲಿಷ್ಟಕರ ಮತ್ತು ಸಂಕೀರ್ಣ ವರದಿಗಳನ್ನು ಸರಳವಾಗಿ ಓದುವಂತೆ ಮಾಡುತ್ತಾರೆ. ಇವರು ತಮ್ಮ ಅಮೂಲ್ಯ ಸಮಯ ಮತ್ತು ಕೌಶಲವನ್ನು ನಮಗೆ ನೀಡುವ ಮೂಲಕ, ನಮ್ಮ ಲೈಬ್ರರಿಯ ಸಂಪನ್ಮೂಲಗಳು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮತ್ತು ವಿದ್ವತ್ಪೂರ್ಣವಾಗಿ ವೈವಿಧ್ಯಮಯವಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ.
ಪ್ರಸ್ತುತ, ಪರಿ ಲೈಬ್ರರಿಯ ಆರಂಭದಿಂದ ಇದುವರೆಗೆ ನಮ್ಮೊಂದಿಗೆ ಸುಮಾರು 450 ಮಂದಿ ಸ್ವಯಂಸೇವಕರು ಕೈಜೋಡಿಸಿದ್ದಾರೆ.
2025ರ ವರ್ಷ ಅಂತ್ಯಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ನಮ್ಮೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿರುವ ಕೆಲವು ಸ್ವಯಂಸೇವಕರ ಅನುಭವಗಳು ಮತ್ತು ಅವರು ಗಳಿಸಿದ ಪ್ರಮುಖ ಒಳನೋಟಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ.
ಯಾಳಿನಿ ಸತ್ಯಮೂರ್ತಿ
ಮುಂಬೈ ಐಐಟಿಯಲ್ಲಿ ಪರಿಸರ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಎಂಟೆಕ್ ವ್ಯಾಸಂಗ ಮಾಡುತ್ತಿದ್ದಾರೆ.
ಪರಿ ಲೈಬ್ರರಿಯ ಸುಸಂಬದ್ಧ ರೀತಿಯಲ್ಲಿ ಸಂಯೋಜಿಸಿದ 'ಫೋಕಸ್ ಮತ್ತು ಫ್ಯಾಕ್ಟೋಯ್ಡ್ಸ್' ಬರೆಹಗಳು, ಅದು ಕೇವಲ ಒಂದು ಪುಟದ ಪೋಸ್ಟರ್ ಆಗಿರಲಿ ಅಥವಾ 500 ಪುಟಗಳ ಅಂಕಿಅಂಶಗಳ ವರದಿಯಾಗಿರಲಿ, ನಿಮ್ಮನ್ನು ಆ ವಿಷಯದ ಮೂಲ ತಿರುಳಿಗೆ ಕರೆದೊಯ್ಯುತ್ತದೆ. ದುರದೃಷ್ಟವಶಾತ್, ಇಂತಹ ಅನೇಕ ವರದಿಗಳು ಇನ್ನೂ ಮುಖ್ಯವಾಹಿನಿಯ ಚರ್ಚೆಗಳಲ್ಲಿ ಸ್ಥಾನ ಪಡೆದಿಲ್ಲ.
ಅಬಿಜಾರ್ ಶೇಖ್
ಸಂಪರ್ಕ ಮತ್ತು ಹಣಕಾಸು ಸೇವೆಗಳ ಕ್ಷೇತ್ರದಲ್ಲಿ 30 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿರುವ ತಜ್ಞ.
ನನ್ನ ಬಿಡುವಿನ ವೇಳೆಯಲ್ಲಿ ಏನಾದರೂ ಸಾರ್ಥಕ ಎನ್ನಿಸುವಂತಹದ್ದನ್ನು ಮಾಡಬೇಕೆಂಬ ಹಂಬಲ ನನಗಿತ್ತು. ಪರಿ ಲೈಬ್ರರಿಗೆ ಸ್ವಯಂಸೇವಕನಾಗಿ ಕೆಲಸ ಮಾಡುವುದು, ಈ ನಿಟ್ಟಿನಲ್ಲಿ ಸಿಕ್ಕ ಅತ್ಯುತ್ತಮ ಅವಕಾಶವಾಗಿತ್ತು. ಪರಿ ಮಾಡುತ್ತಿರುವ ಕೆಲಸಗಳು ನನ್ನ ವೈಯಕ್ತಿಕ ಆಸಕ್ತಿಯ ವಿಷಯಗಳೂ ಆಗಿದ್ದರಿಂದ, ಈ ಕೆಲಸ ನನಗೆ ಬಹಳ ಆಪ್ತವೆನ್ನಿಸಿತು.
ಒಬ್ಬ ಓದುಗನಾಗಿ ನಾನು ಬಯಸುವುದೆಂದರೆ ಇನ್ನಷ್ಟು ಉತ್ತಮವಾದ ವಿಷಯ ವರ್ಗೀಕರಣ ಮತ್ತು ವರದಿಗಳನ್ನು ಸುಲಭವಾಗಿ ಸಿಗುವಂತೆ ಮಾಡುವುದು.
ಜೆರ್ರಿ ಜೋಸ್
ಕೇರಳ, ಕೊಟ್ಟಾಯಂ ಮೂಲದ ಹವಾಮಾನ ವಿಜ್ಞಾನಿ
ನನಗೆ ಪರಿ ಪರಿಚಯವಾಗಿದ್ದು ವೆಬ್ಸೈಟ್ ಬಿಡುಗಡೆ ಸಂದರ್ಭದಲ್ಲಿ ಮಾಡಿದ ಭಾಷಣದ ಮೂಲಕ. "ಉಪಖಂಡದೊಳಗಿನ ಖಂಡವಾಗಿರುವ" ಭಾರತದ ಗ್ರಾಮೀಣ ಪ್ರದೇಶವನ್ನು ದಾಖಲಿಸುವ ಪರಿಯ ಪ್ರಯತ್ನ ಅತ್ಯಂತ ಸ್ಫೂರ್ತಿದಾಯಕ ಮತ್ತು ವಿಶಿಷ್ಟ. ನಿಂರಂತರ ವಿಸ್ತಾರವನ್ನು ಕಾಣುತ್ತಿರುವ ಪರಿ ಲೈಬ್ರರಿಗೆ ಸ್ವಯಸೇವಕನಾಗಿ ಕೆಲಸ ಮಾಡಲು ಸಾಧ್ಯವಾಗಿದ್ದು ನನಗೆ ಖುಷಿ ಕೊಡುವ ಸಂಗತಿ.
ಪರಿ ಲೈಬ್ರರಿ ಸುಲಭವಾಗಿ ಅರ್ಥವಾಗುವ 'ಫೋಕಸ್ ಮತ್ತು ಫ್ಯಾಕ್ಟೋಯ್ಡ್ಸ್' (focus and factoids) ಮೂಲಕ ಆಯ್ದ ವರದಿಗಳನ್ನು ಪ್ರಸ್ತುತಪಡಿಸುತ್ತಿರುವುದು ಅಭಿನಂದನೀಯ. ಈ ಲೈಬ್ರರಿಯ ವಿಸ್ತೃತ ವ್ಯಾಪ್ತಿ ಪರಿ ವರದಿಗಾರಿಕೆಗೆ ಪೂರಕವಾಗಿ ಎನ್ನುವುದು ನನ್ನ ಅಭಿಪ್ರಾಯ. ನನ್ನ ಪರಿಣತಿಯ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೂ ಕೆಲವೊಮ್ಮೆ ನನ್ನ ವ್ಯಾಪ್ತಿಯಾಚೆಗಿನ ವರದಿಗಳೊಂದಿಗೆ ಕೆಲಸ ಮಾಡುವುದು ನನಗೆ ಸಂತಸ ಕೊಟ್ಟಿದೆ. ಪರಿ ಲೈಬ್ರರಿಗಾಗಿ ನಡೆಸಿದ ಸಂಶೋಧನೆ ನನ್ನ ಪಾಲಿಗೆ ಒಂದು ಹೊಸ ಕಲಿಕೆಯ ಅನುಭವವಾಗಿತ್ತು.