ಪೂರ್ವದ ಬಾನು ಕೆಂಪಾಗುವುದಕ್ಕೂ ಮೊದಲೇ ಕಾಟ್ಟುಪಲ್ಲಿಯ ಕಡಲ ಬದಿಯಲ್ಲಿ ಮಾನವ ಚಟುವಟಿಕೆಗಳು ಆರಂಭಗೊಂಡಿರುತ್ತವೆ. ಅಲ್ಲಿ ಇರುಳರ್ ಸಮುದಾಯದ ಜನರು ಮುಂಗಾಲು ಮಟ್ಟದ ನೀರಿನಲ್ಲಿ ನಿಂತು ಬರುವ ಅಲೆಗಾಗಿ ಕಾಯುತ್ತಿರುತ್ತಾರೆ. ಅಲೆ ಬರುತ್ತಿದ್ದ ಹಾಗೆ ವಿಶೇಷವಾಗಿ ತಯಾರಿಸಿದ ಬಲೆಯನ್ನು ಬೀಸಿ ಅದು ಹೊತ್ತು ಕಿಲಿಂಜಲ್ (ಕಪ್ಪೆಚಿಪ್ಪು/ಮಳಿ) ಯನ್ನು ಹಿಡಿಯುತ್ತಾರೆ.
“ಭರ್ತ ಇರುವಾಗ ಚಿಪ್ಪು ಒಟ್ಟು ಮಾಡಲು ಸಾಧ್ಯವಿಲ್ಲ. ಹೀಗಾಗಿ ನಾವು ಇಳಿತ ಬರುವುದನ್ನೇ ಕಾಯುತ್ತೇವೆ. ಭರ್ತದ ಸಮಯದಲ್ಲಿ ನಾವು ಒಂದೋ ಮನೆಗೆ ಹೋಗಿ ಊಟ ಮಾಡಿ ಬರುತ್ತೇವೆ ಅಥವಾ ಇಲ್ಲೇ ಕಡಲ ಕರೆಯಲ್ಲಿ ಕಾಯುತ್ತೇವೆ” ಎನ್ನುತ್ತಾರೆ ರಮೇಶ (ಇವರು ಉಪನಾಮವನ್ನು ಬಳಸುವುದಿಲ್ಲ). ಕಪ್ಪೆಚಿಪ್ಪು ಹೆಕ್ಕುವುದು ರಮೇಶ್ ಅವರಂತಹ ಇರುಳ ಜನಾಂಗದ ಸದಸ್ಯರಿಗೆ ಕೇವಲ ಹೊಟ್ಟೆಪಾಡಲ್ಲ. ಇದು ಪಾರಂಪರಿಕವಾಗಿ ಸಾಗಿ ಬಂದ, ಕಡಲಿನ ಲಯದೊಂದಿಗೆ ಹೆಣೆದುಕೊಂಡ ಉದ್ಯೋಗ. ಇವರು ನೆಲೆಸಿರುವುದು ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯಲ್ಲಿ.
ಸಂಗ್ರಹಿಸಿದ ಚಿಪ್ಪನ್ನು ಒಣಗಿಸಿ, ನಂತರ ಸುಣ್ಣದ ಕಲ್ಲು ತಯಾರಿಸುವಲ್ಲಿಗೆ ಎತ್ತಿನಗಾಡಿಯಲ್ಲಿ ಸಾಗಿಸಲಾಗುತ್ತದೆ. ಕೆಲಸಗಾರರಿಗೆ ಒಂದು ಎತ್ತಿನಗಾಡಿ ಲೋಡ್ ಚಿಪ್ಪಿಗೆ ಸುಮಾರು 500 ರೂಪಾಯಿ ಕೊಡಲಾಗುತ್ತದೆ. ಒಬ್ಬ ವ್ಯಕ್ತಿ ವಾರಕ್ಕೆ 7 ಲೋಡುಗಳಷ್ಟು ಚಿಪ್ಪನ್ನು ಸಂಗ್ರಹಿಸಬಲ್ಲ. ಈ ಚಿಪ್ಪನ್ನು ಬಳಸಿ ಸುಣ್ಣ (ಸುಣ್ಣಾಂಬು) ತಯಾರಿಸಲಾಗುತ್ತದೆ. ಈ ಸುಣ್ಣವನ್ನು ಕಟ್ಟಡ ಕಾಮಗಾರಿಗಳಲ್ಲಿ ಬಳಸಲಾಗುತ್ತದೆ.
























