2025ರ ಫೆಬ್ರವರಿ ಮಾಸದ ಒಂದು ದಿನ ರೋಶನ್ ಸದಾಶಿವ್ ಕುಳೆ ಅವರಿಗೆ ಸ್ನೇಹಿತನೊಬ್ಬನಿಂದ ಕರೆ ಬಂದಿತು. ಆತ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಲು ಲಾವೋಸ್ಗೆ ಬರುತ್ತೀಯಾ ಎಂದು ಕೇಳಿದ. ತಿಂಗಳಿಗೆ 90,000 ದಿಂದ 1 ಲಕ್ಷ ರೂಪಾಯಿಯವರೆಗೆ ಉತ್ತಮ ಸಂಬಳವಿದ್ದು, ಪ್ರಯಾಣ ಮತ್ತು ವಸತಿ ಸೇರಿದಂತೆ ಎಲ್ಲಾ ಖರ್ಚು-ವೆಚ್ಚಗಳನ್ನು ಕಂಪನಿಯೇ ಭರಿಸಲಿದೆ ಎಂದು ಆತ ಹೇಳಿದ್ದ.
ಜಮ್ಮು ಮತ್ತು ಕಾಶ್ಮೀರದವನಾದ ಈ ಸ್ನೇಹಿತ ವರ್ಷದ ವರ್ಷದ ಕೆಳಗೆ ರೋಶನ್ ಅವರೊಂದಿಗೆ ಕಾಂಬೋಡಿಯಾದಲ್ಲಿ ಕಿಡ್ನಿಯನ್ನು ಮಾರಿಕೊಂಡಿದ್ದ. ಆತನೀಗ ಈ ಪ್ರಸ್ತಾವಿತ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ.
ಪದವಿ ಮುಗಿದ ನಂತರ ರೋಶನ್ ಕಂಪ್ಯೂಟರ್ ಪ್ರೋಗ್ರಾಮಿಂಗ್ ಕೋರ್ಸ್ ಒಂದನ್ನು ಮಾಡಿದ್ದರು, ಹಾಗಾಗಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಆಲೋಚನೆ ಅವರಿಗೆ ಆಕರ್ಷಕವಾಗಿ ಕಂಡಿತು. "ಇದು ಹೆಚ್ಚು ದೈಹಿಕ ಶ್ರಮ ಬೇಡುವ ಕೆಲಸವಲ್ಲ ಎಂದು ಆ ಸ್ನೇಹಿತ ನನಗೆ ಹೇಳಿದ್ದ, ಹಾಗಾಗಿ ನಾನು ಆ ಕೆಲಸಕ್ಕೆ ಹೋಗುವ ಬಗ್ಗೆ ಯೋಚಿಸಲು ಶುರುಮಾಡಿದೆ" ಎಂದು ಅವರು ಹೇಳಿದರು.
ಸಾಲ ತೀರಿಸಲೆಂದು ಕಿಡ್ನಿ ಮಾರಾಟ ಮಾಡಿದ್ದ ರೋಶನ್ ಆಗಷ್ಟೇ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದರು. ಆದರೆ ಬ್ರಹ್ಮಪುರಿಯ ಆ ಆರು ಮಂದಿ ಆರೋಪಿ ಲೇವಾದೇವಿದಾರರು ನಿರಂತರವಾಗಿ ಕಿರುಕುಳ ನೀಡುತ್ತಲೇ ಇದ್ದರು.
ಈ ನಡುವೆ ಕುಟುಂಬದ ಮನೆಯನ್ನು ನಾಲ್ಕು ಬೇರೆ ಬೇರೆ ಹಣಕಾಸು ಸಂಸ್ಥೆಗಳಿಗೆ ಅಡಮಾನ ಇಡಲಾಗಿತ್ತು, ತಂದೆಯ ಜೀವಮಾನದ ಉಳಿತಾಯದಿಂದ ಖರೀದಿಸಿದ್ದ ಜಮೀನನ್ನು ಆ ಆರು ಮಂದಿ ಲೇವಾದೇವಿದಾರರಲ್ಲಿ ಒಬ್ಬ ವಶಪಡಿಸಿಕೊಂಡಿದ್ದ. ಜೊತೆಗೆ ಇತರ ಆಸ್ತಿಗಳನ್ನೂ ಮಾರಾಟ ಮಾಡಲಾಗಿತ್ತು. ಇಷ್ಟೆಲ್ಲಾ ಆದರೂ ಸಾಲದ ಮೊತ್ತ 10 ಲಕ್ಷ ರೂಪಾಯಿಗಿಂತ ಹೆಚ್ಚೇ ಉಳಿದುಕೊಂಡಿತ್ತು.
ಅಪ್ಪನ ಪೆನ್ಷನ್, ಹೆಂಡತಿಯ ಅಂಗನವಾಡಿ ಸಂಬಳ ಮತ್ತು ಕೂಲಿ ಅಥವಾ ಕೃಷಿ ಕೆಲಸದಿಂದ ಬರುತ್ತಿದ್ದ ಅಣ್ಣನ ಸಂಪಾದನೆ ಹೀಗೆ ಎಲ್ಲವನ್ನೂ ಸೇರಿಸಿದರೂ ಮನೆ ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ. ಕೊರೋನಾ ಪಿಡುಗಿನ ಸಮಯಕ್ಕೂ ಸ್ವಲ್ಪ ಮೊದಲು ರೋಶನ್ ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಆಗಿ ಕೆಲಸಕ್ಕೆ ಸೇರಿದ್ದರು. ಆದರೆ ಆ ಕೆಲಸ ಈ ಪಿಡುಗಿನ ಅವಧಿಯಲ್ಲಿ ಕೈಬಿಟ್ಟು ಹೋಯಿತು. ಅದರ ನಂತರ ಅವರಿಗೆ ಯಾವುದೇ ಕೆಲಸ ಸಿಕ್ಕಿರಲಿಲ್ಲ.
ರೋಶನ್ ಕೆಲಸಕ್ಕೆ ಸೇರಲು ನಿರ್ಧರಿಸಿದರು.














