ರೋಷನ್ ಸದಾಶಿವ್ ಕುಳೆ ತನ್ನ ಬಳಿಯಿದ್ದ ಸಾಧಾರಣ ಮಟ್ಟದ ಸ್ಮಾರ್ಟ್ ಫೋನನನ್ನು ಹೊರತೆಗೆದರು. ಅದರಲ್ಲಿ ತನ್ನ ಫೇಸ್ಬುಕ್ ಅಕೌಂಟನ್ನು ಓಪನ್ ಮಾಡಿದ ಅವರು ಹಳೆಯ ನೋಟಿಫಿಕೇಷನ್ಗಳನ್ನು ಸ್ಕ್ರಾಲ್ ಮಾಡತೊಡಗಿದರು. ಒಂದಷ್ಟು ಹೊತ್ತು ಸ್ಕ್ರಾಲ್ ಮಾಡಿದ ನಂತರ ರೋಷನ್ ಬದುಕನ್ನು ಬದಲಾಯಿಸಿದ ನೋಟಿಫಿಕೇಷನ್ ಒಂಡು ಕಂಡ ತಕ್ಷಣ ಒಂದು ಕ್ಷಣ ತಡೆದರು. ಅವರು ತನ್ನ ಅಗ್ನಿಪರೀಕ್ಷೆಯ ಎರಡನೇ ಹಂತವನ್ನು ಪಾರಿಗೆ ವಿವರಿಸುತ್ತಿದ್ದರು.
ಮಿಂಥೂರ್ ಗ್ರಾಮದ ಅವರ ಮನೆಯಲ್ಲಿ ನಾವು ಅವರೊಂದಿಗೆ ಮಾತನಾಡುತ್ತಿದ್ದೆವು. ಅವರ ಸುತ್ತ ಮನೆಯವರು ಕಂಗಾಲಾಗಿ ಕುಳಿತು ರೋಶನ್ ಹೇಳುತ್ತಿದ್ದ ಮಾತುಗಳನ್ನು ಕೇಳುತ್ತಿದ್ದರು. ಅವರ್ಯಾರೂ ಇನ್ನೂ ಆ ಆಘಾತದಿಂದ ಹೊರಬಂದಿರಲಿಲ್ಲ.
2023ರ ಅಕ್ಟೋಬರ್ ತಿಂಗಳ ಒಂದು ಬೆಳಗಿನ ಜಾವದ 5 ಗಂಟೆಯ ಹೊತ್ತಿಗೆ ಮೂವರ ಸಾಲದಾತರು ಕಾರಿನಲ್ಲಿ ಬಂದಿಳಿದರು ಎನ್ನುತ್ತಾ ರೋಶನ್ ಮಾತನ್ನು ಮುಂದುವರೆಸಿದರು. ಕೈಯಲ್ಲಿ ದೊಣ್ಣೆಗಳನ್ನು ಹಿಡಿದಿದ್ದ ಅವರು ಬಾಗಿಲು ತಟ್ಟುವ ಹೊತ್ತಿಗೆ ಮನೆಯವರೆಲ್ಲ ಬೆಳ್ಳಿ ಮೂಡುವ ಹೊತ್ತಿನ ಗಾಢ ನಿದ್ದೆಯಲ್ಲಿದ್ದರು. ಬಾಗಿಲು ತೆರೆಯುತ್ತಿದ್ದಂತೆ ಈ ಸಾಲದಾತರು ಅತ್ಯಂತ ಕೆಟ್ಟ ಪದಗಳನ್ನು ಉಪಯೋಗಿಸಿ ಬಯ್ಯುತ್ತಾ, ರೋಶನ್ ದೊಡ್ಡ ಮೊತ್ತದ ಹಣ ಬಾಕಿ ಇಟ್ಟುಕೊಂಡಿದ್ದನೆಂದೂ, ಅದನ್ನು ಕೂಡಲೇ ವಾಪಸ್ ಮಾಡಬೇಕೆಂದೂ ಗದರತೊಡಗಿದರು.
ಪದೇ ಪದೇ ಮನೆಗೆ ಬರತೊಡಗಿದ ಅವರು ರೋಶನ್ ಒಟ್ಟು 16 ಲಕ್ಷ ರೂಪಾಯಿ ಬಾಕಿ ಇಟ್ಟುಕೊಂಡಿರುವುದಾಗಿ ಹೇಳಿದ್ದರು.
ಆದರೆ ರೋಶನ್ ಸಾಲಕ್ಕೆಂದು ಹೋಗಿ ನಿಲ್ಲಬಹುದಾಗಿದ್ದ ಬಾಗಿಲುಗಳನ್ನೆಲ್ಲ ಈಗಾಗಲೇ ಬಳಸಿಕೊಂಡಾಗಿತ್ತು. ಅಲ್ಲದೆ ಕುಟುಂಬದ ಇದ್ದಬದ್ದ ಸಂಪನ್ಮೂಲಗಳನ್ನು ಅಷ್ಟು ಹೊತ್ತಿಗೆ ಅಡಮಾನ ಇಡಲಾಗಿತ್ತು ಅಥವಾ ಮಾರಲಾಗಿತ್ತು. ಒಂದು ಒಳ್ಳೆಯ ಕೆಲಸವನ್ನು ಹುಡುಕಿಕೊಳ್ಳುವ ಅವರ ಪ್ರಯತ್ನವೂ ವ್ಯರ್ಥವಾಗಿತ್ತು.
“ನಿನ್ನ ಕಿಡ್ನಿ ಮಾರಿ ನಮ್ಮ ದುಡ್ಡು ಕೊಡು” ಎಂದು ಬಂದಿದ್ದ ಆರು ಸಾಲದಾತರಲ್ಲಿ ಒಬ್ಬ ಹೇಳಿದ್ದನ್ನು ರೋಶನ್ ನೆನಪಿಸಿಕೊಂಡರು. “ಇಲ್ಲದೆ ಹೋದರೆ ನಾವು ನಿನ್ನ ಕುಟುಂಬದ ಸುದ್ದಿಗೆ ಬರಬೇಕಾಗುತ್ತದೆ.”
ಸಾಲದಾತನೊಬ್ಬ ಫೇಸ್ಬುಕ್ಕಿನಲ್ಲಿರುವ ಕಿಡ್ನಿ ದಾನಿಗಳ ಗ್ರೂಪ್ ಕುರಿತು ತಿಳಿಸಿದ್ದಲ್ಲದೆ ಅದಕ್ಕೆ ಸೇರಿಕೊಳ್ಳುವಂತೆಯೂ ಹೇಳಿದ.
“ಆರಂಭದಲ್ಲಿ [ಕಿಡ್ನಿ ಮಾರಲು] ಹಿಂಜರಿದಿದ್ದೆ” ಎನ್ನುತ್ತಾರೆ ಅವರು. ಆದರೆ ಅವರು ಆಯುಧಗಳು ಮತ್ತು ದೊಣ್ಣೆಗಳೊಂದಿಗೆ ವಸೂಲಿಗೆಂದು ಪದೇ ಪದೇ ಮನೆಗೆ ಬರತೊಡಗಿದರು. ನಾವೆಲ್ಲ ಹೆದರಿದ್ದೆವು. ಕೊನೆಗೆ ನಾನು ಈ ಆಯ್ಕೆಯನ್ನು ಪರಿಗಣಿಸುವ ಕುರಿತು ಯೋಚಿಸತೊಡಗಿದೆ.”
2023ರ ನವೆಂಬರ್ ತಿಂಗಳ ಒಂದು ದಿನ ರೋಶನ್ (ಫೇಸ್ಬುಕ್ನ ಕಿಡ್ನಿ ಡೋನರ್ ಕಮ್ಯುನಿಟಿ ಗ್ರೂಪ್ನ) 'ಜಾಯಿನ್' ಬಟನ್ ಒತ್ತಿದರು. ಅದಾಗಿ ಒಂದು ದಿನಕ್ಕೆ ವಾಟ್ಸಾಪ್ ಗ್ರೂಪ್ವೊಂದಕ್ಕೆ ಸೇರುವಂತೆ ಸಂದೇಶ ಬಂತು. "ನನಗೆ ಅನುಮಾನಗಳಿದ್ದವು, ಜೊತೆಗೆ ಭಯವೂ ಇತ್ತು. ಆದರೂ ಕೊನೆಗೆ ಮುಂದುವರೆದೆ" ಎಂದು ಅವರು ಪಾರಿಗೆ ಹೇಳಿದರು.
ಫೇಸ್ಬುಕ್ ಗ್ರೂಪ್ ಆಗಿನಿಂದ ಡಿಲೀಟ್ ಮಾಡಲ್ಪಟ್ಟಿದೆ.










