“ನಂಗೆ ಅದೃಷ್ಟವಿತ್ತು,” ಎಂದು ರೋಶನ್ ಸದಾಶಿವ್ ಕುಳೆ ಪಾರಿಗೆ ಹೇಳಿದರು. ಜೀವ ಉಳಿಸಿಕೊಂಡು ವಾಪಾಸ್ ಮನೆಗೆ ಬಂದಿದ್ದೇ ಅವರ ದೊಡ್ಡ ಅದೃಷ್ಟ.
ಇದೆಲ್ಲಾ ಶುರುವಾಗಿದ್ದು ಐದು ವರ್ಷಗಳ ಹಿಂದೆ. ರೋಶನ್ ಅವರು ಮಿಂಥೂರ್ ಗ್ರಾಮದ 34 ವರ್ಷ ಪ್ರಾಯದ ಸಣ್ಣ ರೈತ. ಒಮ್ಮೆ ಅವರ 12 ಜರ್ಸಿ ದನಗಳಿಗೆ ಗಂಟು ಚರ್ಮರೋಗ ಬಂತು. 2021ರ ಮಾರ್ಚ್ ತಿಂಗಳು. ಒಂದು ಕಡೆ ದೇಶ ಕೋವಿಡ್-19 ಎರಡನೇ ಅಲೆಗೆ ತತ್ತರಿಸಿತ್ತು. ಇನ್ನೊಂದು ಕಡೆ ಮಹಾರಾಷ್ಟ್ರದಾದ್ಯಂತ ಹಸುಗಳು ಈ ರೋಗಕ್ಕೆ ಬಲಿಯಾಗುತ್ತಿದ್ದವು.
“ತುಂಬಾ ಖರ್ಚು ಮಾಡಿ ಅವುಗಳಿಗೆ ಚಿಕಿತ್ಸೆ ಕೊಡಿಸಿದೆ. ಆದರೆ ಏನೂ ಪ್ರಯೋಜನವಾಗಲಿಲ್ಲ,” ಎಂದು ರೋಷನ್ ನೆನಪಿಸಿಕೊಂಡರು.
ಆರು ದನಗಳು ಸತ್ತವು. ಹಾಲಿನ ಉತ್ಪಾದನೆಯೂ ಕುಸಿಯಿತು. ಹೈನುಗಾರಿಕೆಯಿಂದ ಆದಾಯ ಬರುವುದೇ ನಿಂತು ಹೋಯಿತು. ಸಮೃದ್ದ ಅರಣ್ಯ ಸಂಪತ್ತಿನಿಂದ ಕೂಡಿರುವ ಚಂದ್ರಪುರದ ನಾಗ್ಭೀಡ್ ತಾಲೂಕಿನ ಈ ಸಣ್ಣ ರೈತನ ಬಳಿ ಕೊನೆಗೆ ಉಳಿದದ್ದು 6 ಹಸುಗಳು ಮಾತ್ರ. ಅವುಗಳಿಗೂ ಔಷಧಿ ಮತ್ತು ಲಸಿಕೆ ಹಾಕಿಸಲು ಕೈಯಲ್ಲಿ ನಯಾ ಪೈಸೆ ಇರಲಿಲ್ಲ.
ಕೊರೋನದೊಂದಾಗಿ ಕೈಯಲ್ಲಿ ಹಣವಿಲ್ಲದೇ ಇದ್ದಾಗ ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳುವುದೂ ಕಷ್ಟವಾಗಿತ್ತು. ಬ್ಯಾಂಕ್ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ ಒಬ್ಬ ಗೆಳೆಯ ಒತ್ತಾಯ ಮಾಡಿದ ಎಂಬ ಕಾರಣಕ್ಕೆ ರೋಶನ್ ಅವರು ಹತ್ತಿರದ ಬ್ರಹ್ಮಪುರಿ ಟೌನ್ನಲ್ಲಿದ್ದ ಖಾಸಗಿ ಲೇವಾದೇವಿಗಾರರೊಬ್ಬರಿಂದ ಅನೌಪಚಾರಿಕವಾಗಿ 1 ಲಕ್ಷ ರುಪಾಯಿ ಸಾಲ ತೆಗೆದುಕೊಂಡರು.
ಈ ಸಮಸ್ಯೆಗಳೆಲ್ಲಾ ಬೇಗ ತೀರುತ್ತವೆ ಅಂದುಕೊಂಡಿದ್ದರು.
“ಆದರೆ ಅದು ಸಮಸ್ಯೆಗಳ ಆರಂಭವಾಗಿತ್ತು,” ಎಂದರು ಅವರು.
2021ರ ಮಾರ್ಚ್ನಲ್ಲಿ ಹಸುಗಳ ಚಿಕಿತ್ಸೆಗಾಗಿ ರೋಶನ್ ತೆಗೆದುಕೊಂಡಿದ್ದ ಒಂದು ಲಕ್ಷ ರುಪಾಯಿ ಸಾಲ 50 ಲಕ್ಷ ರುಪಾಯಿಗೆ ಏರಿತು. ಇದು ಅವರನ್ನು ಅಕ್ರಮ ಅಂಗಾಂಗ ಕಳ್ಳಸಾಗಣೆಯ ಜಾಲದೊಳಗೆ ಸಿಲುಕಿಸಿತು. ನೋಂದಣಿಯಾಗದ ಆ ಲೇವಾದೇವಿಗಾರನ ಸಾಲವನ್ನು ತೀರಿಸಲು ತಮ್ಮ ಒಂದು ಕಿಡ್ನಿಯನ್ನೇ ಕಳೆದುಕೊಂಡರು. ಇದರ ಜೊತೆಗೆ ಅಂತರರಾಷ್ಟ್ರೀಯ ಸೈಬರ್ ವಂಚನೆಯ ಜಾಲದೊಳಗೆ ಸಿಲುಕಿಕೊಂಡು, ಲಾವೋಸ್ನಲ್ಲಿ ಟ್ರ್ಯಾಪ್ ಆದರು.















