“ನಾವು ಸಾಮನ್ಯವಾಗಿ ಇಲ್ಲಿ ಕೆಲಸಕ್ಕೆ ಬಂದ ಸಮಯದಲ್ಲಿ ಗಬೀ ತಯಾರಿಸುತ್ತೇವೆ” ಎನ್ನುತ್ತಾರೆ ರೈತರಾದ ಅಸಿನೋ ಮ್ಹೀಸಿಸೀನೋ ಮೆಯಾಸೆ. ಕಡಿಮೆ ಮಸಾಲೆ ಪದಾರ್ಥಗಳನ್ನು ಬೇಡುವ ಈ ಅಡುಗೆಯ ಸಾಮಾಗ್ರಿಗಳು ನಾಗಾಲ್ಯಾಂಡಿನ ಖೋನೊಮಾ ಎನ್ನುವ ಈ ಊರಿನಲ್ಲೇ ಸಿಗುತ್ತವೆ. ಮತ್ತು ಅವರು ಕೆಲಸ ಮಾಡುವ ಗದ್ದೆಯ ಸುತ್ತಮುತ್ತವೇ ಕೈಗೆಟುಕುತ್ತವೆ.
“ಕೆಲವು ಸಲ ನಾವು ಗಾಲ್ಹೋ ಕೂಡಾ ಮಾಡ್ತೀವಿ” ಎಂದು ಅವರು ಮಾತು ಮುಂದುವರೆಸುತ್ತಾ ಹೇಳಿದರು. ಇದೊಂದು ಸ್ಥಳೀಯವಾಗಿ ನೆಚ್ಚಿನ ಅನ್ನದ ಖಾದ್ಯ. ಸಾಮಾನ್ಯವಾಗಿ ಇದನ್ನು ಅನ್ನದ ಜೊತೆ ಹಸಿ ಸೊಪ್ಪು ಮತ್ತು ಅಥವಾ ಕಾಡು ತರಕಾರಿ, ಮತ್ತು ಸ್ಥಳೀಯ ಮಸಾಲೆ ಪದಾರ್ಥಗಳನ್ನು ಅನ್ನದೊಂದಿಗೆ ಬೇಯಿಸಿ ತಯಾರಿಸಲಾಗುತ್ತದೆ. ಅಲ್ಲದೆ ಸುಟ್ಟ ಹಂದಿ ಮತ್ತು ದನದ ಮಾಂಸವನ್ನು ಬಳಸಿಯೂ ತಯಾರಿಸಲಾಗುತ್ತದೆ. “ಇದು ಅಂಗಾಮಿ ಸಮುದಾಯದ ವಿಶೇಷ ಅಡುಗೆ” ಎಂದು 36 ವರ್ಷದ ಅಸಿನೋ ಪಾರಿಗೆ ತಿಳಿಸಿದರು.
ಆ ಹಿತವಾದ ಚಳಿಯ ಬೆಳಗಿನಲ್ಲಿ ಅಸಿನೊ ತನ್ನ ಗೆಳತಿಯಾದ ಉತ್ಸೊನೊ ಮೆರು ಜೊತೆಗೂಡಿ ಖೊನೊಮಾದ ಝುಮ್ ಗದ್ದೆಗಳತ್ತ ಕರೆದೊಯ್ಯುವ ಕಿರಿದಾದದ ಹಾದಿಯಲ್ಲಿ ನಡೆಯುತ್ತಿದ್ದರು. ನಾಗಾಲ್ಯಾಂಡ್ ರಾಜ್ಯದ ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ಈ ಝುಮ್ ಕೃಷಿ ಬಹಳ ಸಾಮಾನ್ಯ. ದಾರಿಯುದ್ದಕ್ಕೂ ಹರಟುತ್ತಾ, ತಮಾಷೆ ಮಾಡುತ್ತಾ ಸಾಗುತ್ತಿದ್ದ ಅವರು ಅಲ್ಲಲ್ಲಿ ಸಿಗುತ್ತಿದ್ದ ಗಿಡಮೂಲಿಕೆ ಹಾಗೂ ಸೊಪ್ಪುಗಳನ್ನು ಕೊಯ್ದು ಒಟ್ಟುಗೂಡಿಸುತ್ತಿದ್ದರು. "ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್. ಒಟ್ಟಿಗಿದ್ದಾಗ ಸಿಗುವಷ್ಟು ಸಂತೋಷ ಬೇರೆಲ್ಲೂ ಸಿಗೋದಿಲ್ಲ" ಎಂದು ಅಸೊನೊ ನಸುನಗುತ್ತಾ ಹೇಳಿದರು. ಬಾಲ್ಯ ಸ್ನೇಹಿತರಾದ ಇವರಿಬ್ಬರು ಕೆಲಸದ ಸಮಯವನ್ನು ಹೊಂದಿಸಿಕೊಂಡು ಒಟ್ಟಿಗೆ ಝುಮ್ ಗದ್ದೆಗಳಿಗೆ ದುಡಿಯಲು ತೆರಳುತ್ತಾರೆ.
42 ವರ್ಷದ ಉತ್ಸೊನೊ, ತಮ್ಮ ಕೈಯಲ್ಲಿದ್ದ ತಾಜಾ ಗಿಡಮೂಲಿಕೆಗಳ ಕಟ್ಟನ್ನು ತೋರಿಸುತ್ತಾ ಅವುಗಳ ಹೆಸರನ್ನು ಟೈನಿಡೀ ಭಾಷೆಯಲ್ಲಿ ಪಟಪಟನೆ ಹೇಳಿದರು: ಗಾಥಾ (ಫಿಶ್ ಮಿಂಟ್), ಗಾಗೆಯಿ (ಹಿಮಾಲಯನ್ ನಾಟ್ವೀಡ್), ಖಮ್ಹು (ಜಂಗಲ್ ಪೆರಿಲ್ಲಾ) ಮತ್ತು ಗಾಕ್ರಾ (ಜಾವಾ ವಾಟರ್ ಡ್ರಾಪ್ವರ್ಟ್).
ನಾವು ಗಾಥಾ ಸೊಪ್ಪನ್ನು ಕಿಂಗ್ ಚಿಲ್ಲಿ (ಒಂದು ಜಾತಿಯ ಮೆಣಸು) ಸೇರಿಸಿ ಚಟ್ನಿ ಮಾಡಿ ಅದನ್ನು ಗಬೀ ಜೊತೆ ತಿನ್ನುತ್ತೇವೆ. ಉಳಿದ ಸೊಪ್ಪುಗಳನ್ನು ಗಬೀ ತಯಾರಿಯಲ್ಲಿ ಬಳಸುತ್ತೇವೆ. ಅಡುಗೆ ಮಾಡಿ ಉಳಿದ ಸೊಪ್ಪನ್ನು ಮನೆಗೆ ತೆಗೆದುಕೊಂಡು ಹೋಗುತ್ತೇವೆ" ಎಂದು ಅವರು ವಿವರಿಸಿದರು.






