ಅಡುಗೆ ಮನೆಯ ಒಲೆ ಉರಿಯುತ್ತಿದೆ. ತಿಯಾಮೊಂಗ್ಲಾ ಅವರೀಗ ಸಮಯ ವ್ಯರ್ಥ ಮಾಡುವಂತಿಲ್ಲ. ಅವರು ಅತ್ಯಂತ ಚುರುಕಿನಿಂದ ಓಡಾಡುತ್ತಾ, ಇಂದು ಬೆಳಿಗ್ಗೆಯಷ್ಟೇ ತಮ್ಮ ತೋಟದಿಂದ ಕೊಯ್ದು ತಂದಿದ್ದ ಮಿಪಾಂಗ್ (ಗೆಣಸಿನ ಜಾತಿಯ ಗಿಡ) ಎಲೆಗಳು, ಬೆಳ್ಳುಳ್ಳಿಯ ಘಮವಿರುವ ಗಿಡದ ದಂಟು, ಇಂದು ಕಾಡಿನಿಂದ ಆಯ್ದು ತಂದ ಥೋಟೊ ಗಿಡದ ಎಲೆಗಳು, ಏಡಿಯ ಚಟ್ನಿ ಮತ್ತು ಇತರ ಪದಾರ್ಥಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.
ಚಾಂಗ್ಕಿ ಗ್ರಾಮದ 55 ವರ್ಷದ ರೈತ ಮಹಿಳೆಯಾದ ತಿಯಾಮೊಂಗ್ಲಾ ಈಗ ಮಿಪಾಂಗ್ಮಿಂಗ್ ಸಿದ್ಧಪಡಿಸುತ್ತಿದ್ದಾರೆ – ಇದು ಅಯೋ ನಾಗಾ ಪಂಗಡದ ವಿಶೇಷ ತಿನಿಸಾಗಿದ್ದು, ಅತಿಥಿಗಳು ಬಂದಾಗ ಅಥವಾ ವಿಶೇಷ ಸಂದರ್ಭಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ. "ಇದು ನಮ್ಮ ಪಂಗಡದಲ್ಲಿ ಸಾಮಾನ್ಯವಾಗಿ ತಯಾರಿಸುವ ಜನಪ್ರಿಯ ಮಿಶ್ರ ತರಕಾರಿ ತಿನಿಸಾದ ರೋಸುಪ್ ರೀತಿಯದ್ದಲ್ಲ" ಎಂದು ತಿಯಾಮೊಂಗ್ಲಾ ಲಾಂಗ್ಚಾರಿ ಚಾಂಗ್ಕಿ ಭಾಷೆಯಲ್ಲಿ ವಿವರಿಸಿದರು. ಅವರು ಈ ಮಿಪಾಂಗ್ಮಿಂಗ್ ಅನ್ನು ತಮ್ಮ ಗದ್ದೆಯಲ್ಲಿ ಬೆಳೆದ ಸ್ಥಳೀಯ ಭತ್ತದಿಂದ ತಯಾರಿಸಿದ ಅನ್ನ ಮತ್ತು ಸ್ಥಳೀಯ ನಾಟಿ ಕೋಳಿ ಫ್ರೈ ಜೊತೆ ಬಡಿಸುತ್ತಾರೆ.
ಉಪ್ಪು, ಹಸಿಮೆಣಸಿನಕಾಯಿ, ಟೊಮೆಟೊ, ಮಿಚಿಗನ್ (ಸಿಚುವಾನ್ ಪೆಪ್ಪರ್ - ಸುವಾಸನೆಯುಕ್ತ ಕಾಳುಮೆಣಸು) ಎಲೆಗಳು, ತೇಜಾಂಗ್ ಲೆಹ್ಸುನ್ (ಸ್ಥಳೀಯ ಬೆಳ್ಳುಳ್ಳಿ ದಂಟು ಅಥವಾ ಚೈವ್ಸ್), ಶುಂಠಿ ಎಲೆಗಳು ಮತ್ತು ಜಾಂಗ್ಪಾಂಗ್ನಾತ್ಸು (ಹುದುಗಿಸಿದ ಏಡಿ ಚಟ್ನಿ) ಇವು 'ಮಿಪಾಂಗ್ಮಿಂಗ್' ತಿನಿಸಿಗೆ ವಿಶಿಷ್ಟ ರುಚಿ ನೀಡುವ ಇತರ ಪ್ರಮುಖ ಪದಾರ್ಥಗಳು. ಇದರೊಂದಿಗೆ ಅವರು ಆಯಾ ಕಾಲಕ್ಕೆ ದೊರೆಯುವ ತಾಜಾ ತರಕಾರಿಗಳನ್ನು ಸಹ ಬಳಸುತ್ತಾರೆ.
ಚಾಂಗ್ಕಿ ಗ್ರಾಮವು 2,486 ಜನಸಂಖ್ಯೆಯನ್ನು ಹೊಂದಿದೆ (2011ರ ಜನಗಣತಿಯಂತೆ), ಮತ್ತು ಇಲ್ಲಿನ ಬಹುಪಾಲು ಜನರು ಅಯೋ ನಾಗಾ ಸಮುದಾಯಕ್ಕೆ ಸೇರಿದವರು (ಇವರನ್ನು ಪರಿಶಿಷ್ಟ ಪಂಗಡಗಳಡಿ ಪಟ್ಟಿ ಮಾಡಲಾಗಿದೆ). ಚಾಂಗ್ಕಿ ಭಾಷೆಯು ಅಯೋ ನಾಗಾ ಭಾಷಾ ಸಮೂಹದ ಒಂದು 'ಅಳಿವಿನಂಚಿನಲ್ಲಿರುವ' ಪ್ರಭೇದ. ಅಂದಹಾಗೆ, ಯುನೆಸ್ಕೋ ಸಂಸ್ಥೆಯು ಅಯೋ ನಾಗಾ ಭಾಷೆಯನ್ನೇ ಅಳಿವಿನಂಚಿನಲ್ಲಿರುವ ಭಾಷೆಗಳಡಿ ವರ್ಗೀಕರಿಸಿದೆ.
ಚಾಂಗ್ಕಿ ಗ್ರಾಮದ ಇತರ ಮಹಿಳೆಯರಂತೆ, ತಿಯಾಮೊಂಗ್ಲಾ ತಮ್ಮ ಸ್ಥಳೀಯ ವಿಶಿಷ್ಟ ಖಾದ್ಯಗಳನ್ನು ತಯಾರಿಸಲು ಬೇಕಾದ ಮಿಪಾಂಗ್, ಥೋಟೊ ಮತ್ತು ಇತರ ಪದಾರ್ಥಗಳನ್ನು ಹುಡುಕುತ್ತಾ ಗದ್ದೆ, ಅರಣ್ಯದ ಹಾದಿ ಮತ್ತು ಜಲಮೂಲಗಳ ಸುತ್ತ ಸುಮಾರು ಎರಡು ಗಂಟೆಗಳ ಕಾಲ ಕಾಲ್ನಡಿಗೆಯಲ್ಲಿ ಕ್ರಮಿಸುತ್ತಾರೆ.
“ಹಿಂದಿನ ದಿನಗಳಲ್ಲಿ ಹೊರಗಿನಿಂದ ಪದಾರ್ಥಗಳನ್ನು ತರುವುದು ಅಷ್ಟು ಸುಲಭವಾಗಿರಲಿಲ್ಲ, ಹಾಗಾಗಿ ಕಾಡಿನಿಂದ ಪದಾರ್ಥಗಳನ್ನು ಆಯ್ದು ತರುವುದು ಬಹಳ ಮುಖ್ಯವಾಗಿತ್ತು” ಎಂದು ಅವರು ಪಾರಿಗೆ ತಿಳಿಸಿದರು. ಸ್ಥಳೀಯ ಪದಾರ್ಥಗಳನ್ನು ಬಳಸುವುದು ಅವರ ತಲೆಮಾರಿನ ಮಹಿಳೆಯರಿಗೆ ಸಹಜವಾಗಿಯೇ ಬಂದ ಅಭ್ಯಾಸ. “ನಮ್ಮ ಜುಮ್ ಕೃಷಿ ಭೂಮಿ, ಭತ್ತದ ಗದ್ದೆ ಮತ್ತು ಕೈತೋಟಗಳಲ್ಲಿ ನಾವು ಬೆಳೆದದ್ದನ್ನು ಮಾತ್ರ ತಿನ್ನುತ್ತಿದ್ದೆವು. ಆದರೆ ಇಂದಿನ ಪರಿಸ್ಥಿತಿ ಹಾಗಲ್ಲ, ಈಗ ನಾವು ಹತ್ತಿರದ ಮಾರುಕಟ್ಟೆಗಳಿಂದಲೂ ತರಕಾರಿಗಳನ್ನು ಖರೀದಿಸುತ್ತೇವೆ” ಎಂದು ಅವರು ವಿವರಿಸಿದರು.
ಕಾಡಿನಿಂದ ಅಡುಗೆಗೆ ಬೇಕಾದ ಪದಾರ್ಥಗಳನ್ನು ಆಯ್ದು ತರುವ ಕೆಲಸವನ್ನು ಮುಖ್ಯವಾಗಿ ಮಹಿಳೆಯರೇ ಮಾಡುತ್ತಾರೆ. ಆದರೂ ಗಂಡಸರು ಕಾಡಿಗೆ ಅಥವಾ ಹೊಲಕ್ಕೆ ಹೋದಾಗ ಸಿಗುವ ಹಣ್ಣು-ಹಂಪಲು ಅಥವಾ ತರಕಾರಿಗಳನ್ನು ಮನೆಗೆ ತರುತ್ತಾರೆ. "ಯಾವ ಪದಾರ್ಥಗಳು ತಿನ್ನಲು ಯೋಗ್ಯ ಮತ್ತು ಯಾವುವು ವಿಷಕಾರಿ ಎಂಬ ಜ್ಞಾನ ಹಾಗೂ ಕಾಡಿನಿಂದ ಪದಾರ್ಥಗಳನ್ನು ಸಂಗ್ರಹಿಸುವ ಕೌಶಲವನ್ನು ನಾವು ನಮ್ಮ ಪೋಷಕರು ಅಥವಾ ಅನುಭವಿಗಳಿಂದ ಕಲಿತೆವು. ಆದರೆ ಇಂದಿನ ಯುವ ಪೀಳಿಗೆ ಕೃಷಿ ಅಥವಾ ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸುವ ಬದಲು ಹಣ ಸಂಪಾದನೆಗಾಗಿ ಬೇರೆ ಉದ್ಯೋಗಗಳತ್ತ ಮುಖ ಮಾಡುತ್ತಿದ್ದಾರೆ" ಎಂದು ಅವರು ಹೇಳುತ್ತಾರೆ. ಹೀಗೆ ಹೇಳುತ್ತಲೇ ಅವರು ತಮ್ಮ ನೆರೆಯವರು ಡಿಮಾಪುರ ಮಾರುಕಟ್ಟೆಯಿಂದ ತಂದುಕೊಟ್ಟ ಸಿಂಪಿ ಅಣಬೆ ಮತ್ತು ಅಮೂಲ್ಯವಾದ ಥೋಟೊ ಎಲೆಗಳನ್ನು ಅಡುಗೆಗೆ ಸಿದ್ಧಪಡಿಸತೊಡಗಿದರು. "ಥೋಟೊ ಮತ್ತು ಮಿಪಾಂಗ್ ಅತ್ಯುತ್ತಮ ಜೋಡಿ, ಇವೆರಡನ್ನೂ ಸೇರಿಸಿದರೆ ಅಡುಗೆ ರುಚಿಯಾಗಿರುತ್ತದೆ."
ಅಯೋ ನಾಗಾ ಸಮುದಾಯದ ಅಡುಗೆ ಪದ್ಧತಿಯಲ್ಲಿ ಏಡಿಯ ಚಟ್ನಿ ಬಹಳ ಮುಖ್ಯ ಪದಾರ್ಥ. "ಚಾಂಗ್ಕಿ ಗ್ರಾಮದಲ್ಲಿ ತಯಾರಾಗುವ ಏಡಿಯ ಚಟ್ನಿ ಅತ್ಯಂತ ಶ್ರೇಷ್ಠವಾದುದು ಎಂದು ಪರಿಗಣಿಸಲಾಗಿದೆ ಮತ್ತು ಇದಕ್ಕೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ" ಎಂದು ತಿಯಾಮೊಂಗ್ಲಾ ಹೆಮ್ಮೆಯಿಂದ ಹೇಳುತ್ತಾರೆ.
ಅವರು ಆ ಭರಣಿಯನ್ನು ತೆರೆಯುತ್ತಿದ್ದಂತೆ, ಹುದುಗಿಸಿದ ಪದಾರ್ಥದ ಮೀನಿನ ಘಮಲು ಇಡೀ ಕೋಣೆಯಲ್ಲಿ ಆವರಿಸಿತು. 'ಜಾಂಗ್ಪಾಂಗ್ನಾತ್ಸು' ಎಂಬುದು ಅಯೋ ನಾಗಾ ಸಮುದಾಯದ ಒಂದು ವಿಶೇಷ ಖಾದ್ಯವಾಗಿದ್ದು, ಇದನ್ನು ಸಾಮಾನ್ಯವಾಗಿ ಭತ್ತದ ಗದ್ದೆಗಳ ಸಮೀಪವಿರುವ ಆಳವಿಲ್ಲದ ಜಲಮೂಲಗಳಲ್ಲಿ ಸಿಗುವ ಗದ್ದೆ ಏಡಿಗಳಿಂದ ತಯಾರಿಸಲಾಗುತ್ತದೆ. ಏಡಿಗಳನ್ನು ಹುರಿದು, ಅವುಗಳ ಮೇಲಿನ ಕವಚವನ್ನು ತೆಗೆದ ನಂತರ, ಕಪ್ಪು ಎಳ್ಳಿನೊಂದಿಗೆ ಸೇರಿಸಿ ಚೆನ್ನಾಗಿ ಕುಟ್ಟಲಾಗುತ್ತದೆ. ಬಳಿಕ ಈ ಮಿಶ್ರಣವನ್ನು ಬಾಳೆ ಎಲೆಯಲ್ಲಿ ಸುತ್ತಿ, ಒಲೆಯ ಸಮೀಪ ಕೆಲವು ದಿನಗಳ ಕಾಲ ಹುದುಗಲು ಬಿಡಲಾಗುತ್ತದೆ. ಅಯೋ ನಾಗಾ ಅಡುಗೆಯ ವಿವಿಧ ರೀತಿಯ ಚಟ್ನಿ, ಸಾರು ಮತ್ತು ಪಲ್ಯಗಳಿಗೆ ವಿಶಿಷ್ಟ ರುಚಿ ನೀಡಲು ಇದು ಅತ್ಯಗತ್ಯವಾದ ಪದಾರ್ಥ.
ಬಹುಮುಖ ಪ್ರತಿಭೆಯ ತಿಯಾಮೊಂಗ್ಲಾ ಅವರು ಕೇವಲ ಅಡುಗೆಯಲ್ಲಷ್ಟೇ ಅಲ್ಲದೆ, ಕುಂಬಾರಿಕೆಯಲ್ಲೂ ನಿಪುಣರು ಮತ್ತು ಪೂರ್ಣ ಪ್ರಮಾಣದ ರೈತ ಮಹಿಳೆಯೂ ಹೌದು. ಓದಿ: ಚಾಂಗ್ಕಿ ಗ್ರಾಮದ ಕುಂಬಾರ ಮಹಿಳೆಯರು
ಈ ವರ್ಷ (2025) ಹವಾಗುಣ ಅನಿರೀಕ್ಷಿತವಾಗಿದೆ ಮತ್ತು ಸಂಭವಿಸಿದ ಹಲವಾರು ಭೂಕುಸಿತಗಳು ಭತ್ತದ ಗದ್ದೆಗಳನ್ನು ನಾಶಪಡಿಸಿವೆ ಎಂದು ಅವರು ಹೇಳಿದರು. "ಒಂದು ಭೂಕುಸಿತದಲ್ಲಿ ಸಸಿಮಡಿ ಸೇರಿದಂತೆ ನನ್ನ ಗದ್ದೆಯ ಕೆಲವು ಭಾಗಗಳು ನಾಶವಾದವು; ಹಾಗಾಗಿ ನನ್ನ ಜುಮ್ ಕೃಷಿ ಭೂಮಿಯಲ್ಲಿ ನಾನು ಹೆಚ್ಚಾಗಿ ಶುಂಠಿ ಬೆಳೆಯುತ್ತಿದ್ದೇನೆ, ಏಕೆಂದರೆ ಇದನ್ನು ಮಾರಾಟ ಮಾಡಿದರೆ ಹೆಚ್ಚು ಬೆಲೆ ಸಿಗುತ್ತದೆ" ಎನ್ನುತ್ತಾರೆ ತಿಯಾಮೊಂಗ್ಲಾ.
ಅಡುಗೆ ಮಾಡಲು ಅವರು ತಾವೇ ತಯಾರಿಸಿದ ಚಾಂಗ್ಕಿ ಮಣ್ಣಿನ ಮಡಕೆಯನ್ನೇ ಬಳಸುತ್ತಾರೆ; ಏಕೆಂದರೆ ಇಂತಹ ಸ್ಥಳೀಯ ಮಡಕೆಗಳಲ್ಲಿ ಅಡುಗೆ ಮಾಡಿದರೆ ರುಚಿ ಅತಿ ಹೆಚ್ಚು ಎನ್ನುವುದು ಅವರ ನಂಬಿಕೆ. ಅಡುಗೆ ಮನೆಯಲ್ಲಿ ಸಾಸಿವೆ ಎಣ್ಣೆಯ ಒಗ್ಗರಣೆಯ ಘಾಟು ಮತ್ತು ಹುದುಗಿಸಿದ ಏಡಿಯ ಪಕ್ವವಾದ ಸುವಾಸನೆ ಒಂದಕ್ಕೊಂದು ಬೆರೆತು ಆವರಿಸಿಕೊಳ್ಳುತ್ತಿತ್ತು. ಆ ರುಚಿಕರ ಅಡುಗೆಯನ್ನು ಸವಿಯಲು ಕಾಯವುದು ನಮಗೆ ಕಷ್ಟವಾಗುತ್ತಿತ್ತು.


