ಚಾಂಗ್ಕಿ ಮಹಿಳೆಯರು ತಯಾರಿಸಿದ ಮಣ್ಣಿನ ಮಡಕೆಗಳು ಸ್ಥಳೀಯ ಯುದ್ಧಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದವು. ಈ ಮಡಕೆಗಳಷ್ಟೇ ಈ ಪ್ರದೇಶದಲ್ಲಿ ಅಡುಗೆ ಮಾಡಲು ಇದ್ದ ಸಾಧನವಾಗಿದ್ದ ಕಾರಣ ಬೇರೆ ಊರಿನವರು ಈ ಊರಿನ ಮೇಲೆ ದಾಳಿ ಮಾಡಿ ಇಲ್ಲಿನ ಮಡಕೆಗಳನ್ನು ಹಾಳು ಮಾಡುತ್ತಿರಲಿಲ್ಲ. ಬೇರೆ ಊರುಗಳಲ್ಲಿ ಬೆಂಕಿ ಅಥವಾ ಇತರ ವಿಪತ್ತುಗಳಿಂದ ಧಾನ್ಯಗಳು ನಾಶವಾದರೆ ಚಾಂಗ್ಕಿಯಲ್ಲಿ ಮಡಕೆಗಳಲ್ಲಿ ಸಂಗ್ರಹಿಸಿಟ್ಟಿದ್ದ ಧಾನ್ಯಗಳನ್ನು ಆ ಊರಿನವರಿಗೆ ಕೊಡಲಾಗುತ್ತಿತ್ತು. ಚಾಂಗ್ಕಿ ಮಡಕೆಗಳ ಬಾಳಿಕೆಯೇ ಅಂತಹದ್ದು ಎಂದು ಇಲ್ಲಿನ ಆವೊ ಬುಡಕಟ್ಟಿನ ಮಹಿಳೆಯರು ಹೆಮ್ಮೆಯಿಂದ ಹೇಳುತ್ತಾರೆ.
ಶತಮಾನಗಳ ನಂತರವೂ ಈ ಊರಿನಲ್ಲಿ ಈ ಮಡಕೆಗಳನ್ನು ಕೈಯಿಂದಲೇ ತಯಾರಿಸಲಾಗುತ್ತಿದೆ. “ನಾವು ಇಲ್ಲಿ ಕುಂಬಾರಿಕೆ ಚಕ್ರ ಅಥವಾ ಇತರ ಯಾವುದೇ ಯಂತ್ರಗಳನ್ನು ಬಳಸುವುದಿಲ್ಲ. ಇದನ್ನು ಆರಂಭದಿಂದ ಅಂತ್ಯದ ತನಕ ಕೇವಲ ಕರಕುಶಲ ಮಾದರಿಯಲ್ಲೇ ತಯಾರಿಸಲಾಗುತ್ತದೆ” ಎಂದು ತಿಯಾಮೊಂಗ್ಲಾ ಲಾಂಗ್ಚಾರಿ ಹೇಳುತ್ತಾರೆ. ಈ ಮಡಕೆಯ ತಯಾರಿಗೆ ಬೇಕಾಗುವ ಮಣ್ಣನ್ನು ಇಲ್ಲಿನ ಎತ್ತರದ ಪ್ರದೇಶಗಳು ಮತ್ತು ಗದ್ದೆ, ಕಾಡು ಮತ್ತು ನದಿ ದಡದಿಂದ ತರಲಾಗುತ್ತದೆ. ಈ ಪ್ರದೇಶದ ಮಿಶ್ರ ಜೇಡಿಮಣ್ಣೇ ಈ ಮಡಕೆಗಳ ಗುಣಮಟ್ಟಕ್ಕೆ ಕಾರಣ ಎನ್ನಬಹುದು.
ಈ ಕುಂಬಾರಿಕೆಯಲ್ಲಿ ಈಗಲೂ ಹಿಂದಿನ ಪರಂಪರೆಯನ್ನೇ ಮುಂದುವರೆಸಿಕೊಂಡು ಬರಲಾಗಿದೆ, “ನಮ್ಮ ಅಜ್ಜಿ ಹಾಗೂ ಮತ್ತು ಮುತ್ತಜ್ಜಿಯರು ತಯಾರಿಸುತ್ತಿದ್ದ ರೀತಿಯನ್ನೇ ಮುಂದುವರೆಸಿಕೊಂಡು ಬಂದಿದ್ದೇವೆ” ಎನ್ನುತ್ತಾರೆ 55 ವರ್ಷದ ತಿಯಾಮೊಂಗ್ಲಾ. ನಾಗಾಲ್ಯಾಂಡ್ನ ಚಾಂಗ್ಕಿ ಗ್ರಾಮದ ಕೆಲವೇ ಮಡಕೆ ತಯಾರಕರಲ್ಲಿ ಒಬ್ಬರಾದ ಅವರು, ತಮ್ಮ ಇಳಿ ವಯಸ್ಸಿನ ತಾಯಿಯೊಂದಿಗೆ ವಾಸಿಸುತ್ತಿದ್ದು, ಅದೇ ಮನೆಯಲ್ಲಿ ಮಡಕೆಯನ್ನು ತಯಾರಿಸುತ್ತಾರೆ. ಹಿಂದೆಲ್ಲ ತಮ್ಮ ಮನೆ ಬಳಕೆಗಾಗಿ ಹಾಗೂ ಮಾರಾಟಕ್ಕಾಗಿ ಪ್ರತಿ ಮನೆಯ ಮಹಿಳೆಯರೂ ಮಡಕೆ ತಯಾರಿಸುತ್ತಿದ್ದರು. ಆದರೆ ಪ್ರಸ್ತುತ ನಾಗಾಲ್ಯಾಂಡ್ನ ಚಾಂಗ್ಕಿ ಗ್ರಾಮದಲ್ಲಿ ಕೇವಲ 15 ಮಹಿಳೆಯರಷ್ಟೇ ತಮ್ಮ ಮನೆಗಳನ್ನು ಮಡಕೆ ತಯಾರಿಸುವುದನ್ನು ಮುಂದುವರೆಸಿದ್ದಾರೆ.
ಈ ವರದಿಯನ್ನು ಚಿತ್ರೀಕರಿಸುವಾಗ ಪರಿಯನ್ನು ಭೇಟಿಯಾದ ಮಹಿಳೆಯರು, ತಮ್ಮ ಬುಡಕಟ್ಟಿನ ಮಹಿಳೆಯರಿಗೆ ಸೇರಿದ ಈ ಪುರಾತನ ಕಲೆಯನ್ನು ಒಟ್ಟಿಗೆ ಸೇರಿ ಅಭ್ಯಾಸ ಮಾಡುವುದು ಮತ್ತು ಅದನ್ನು ಮುಂದಿನ ಪೀಳಿಗೆಗೆ ದಾಟಿಸುವುದು ನಮಗೆ ಸಂತೋಷ ನೀಡುತ್ತದೆ ಎಂದು ಹೇಳಿದರು. ಜೊತೆಗೆ ಈ ಕೆಲಸದಿಂದ ಸಿಗುವ ಹೆಚ್ಚುವರಿ ಆದಾಯವು ಅವರ ಮಕ್ಕಳ ಶಿಕ್ಷಣ ಹಾಗೂ ಇತರ ಅಗತ್ಯಗಳಿಗೆ ಒತ್ತಾಸೆಯಾಗಿ ನಿಲ್ಲುತ್ತದೆ.








