'ಆಹ್...!' ಎಂಬ ಅಸಮ್ಮತಿ ಮತ್ತು ನಿರಾಶೆಯ ಒಕ್ಕೊರಲ ಉದ್ಗಾರ, ಮತ್ತು ಅದರ ಬೆನ್ನಲ್ಲೇ ವೃತ್ತಾಕಾರದಲ್ಲಿ ಕುಳಿತಿದ್ದ ಆ ಐವರ ಕಿಸಕ್ ನಗು, ಆ ನಿಶಬ್ಧ ಬೀದಿಯ ಮೌನವನ್ನು ಮುರಿಯಿತು. ನಾವು ಮತ್ತೊಮ್ಮೆ ನಗೆಪಾಟಲಿಗೀಡಾಗುತ್ತಿದ್ದೇವೆ ಎನ್ನುವುದು ಸ್ಪಷ್ಟವಾಗಿತ್ತು. ನಾವು ಎಸೆದಿದ್ದ ಸೀಳಿದ ನಾಲ್ಕೂ ಹುಣಸೆ ಬೀಜಗಳು ಮಕಾಡೆ ಬಿದ್ದು, ನಾಲ್ಕೂ ದಿಕ್ಕಿಗೆ ಚೆಲ್ಲಾಪಿಲ್ಲಿಯಾಗಿದ್ದವು. ಲೂಡೋ ಆಟದಲ್ಲಿ ದಾಳಗಳನ್ನು ಎಸೆಯುವಂತೆ ಅವನ್ನು ಎಸೆಯಬಾರದಿತ್ತು. ತಕ್ಷಣವೇ ಹಾಲಮ್ಮಮಧ್ಯಪ್ರವೇಶಿಸಿ, ಸರಿಯಾದ ವಿಧಾನವನ್ನು ತೋರಿಸಿಕೊಟ್ಟರು. ಲೆಗ್ ಸ್ಪಿನ್ ಬೌಲರ್ ಗೂಗ್ಲಿ ಎಸೆಯುವಂತೆ ಬೀಜಗಳನ್ನು ಒಗ್ಗೂಡಿಸಿ, ತನ್ನ ಮಣಿಕಟ್ಟನ್ನು ಚುರುಕಾಗಿ ಹಾಗೂ ಮೃದುವಾಗಿ ತಿರುಗಿಸಿ ಚಿಮ್ಮಿದರು. ಈ ತಂತ್ರವನ್ನು ಗಮನವಿಟ್ಟು ನೋಡುವಂತೆ ನಮಗೆ ಹೇಳಿದರು.
ಈ ಬಾರಿ ಬೀಜಗಳು ಸರಿಯಾಗಿ ಬಿದ್ದವು. ಕೆಲವು ಬೀಜಗಳ ಅಡಿಭಾಗ ಮೇಲ್ಮುಖವಾಗಿ ಬಿದ್ದರೆ, ಇನ್ನೂ ಕೆಲವು ಬೋರಲು ಬಿದ್ದವು. ಬಿಳಿ ಭಾಗ ಕಾಣುತ್ತಿದ್ದ ಬೀಜಗಳ ಸಂಖ್ಯೆಗೆ ಅನುಗುಣವಾಗಿ ಹಾಲಮ್ಮತನ್ನ ಕಾಯಿಯನ್ನು (ಒಡೆದ ಗಾಢ ಹಸಿರು ಬಣ್ಣದ ಬಳೆಯ ಚೂರು) ನಡೆಸಿದರು. 'ಏಕ್ ಗಿರ್ತಾ ಹೈ ತೋ ಏಕ್, ದೋ ಗಿರ್ತಾ ಹೈ ತೋ ದೋ, ತೀನ್ ಗಿರ್ತಾ ಹೈ ತೋ ತೀನ್... [ಒಂದು ಬೀಜ ಬಿದ್ದರೆ ಒಂದು ಮನೆ, ಎರಡು ಬಿದ್ದರೆ ಎರಡು ಮನೆ, ಹೀಗೆ...],' ಎಂದು ಅವರು ವಿವರಿಸಿದರು. ಕನ್ನಡ ಅಷ್ಟಾಗಿ ಬಾರದ ಅಥವಾ ಏನೇನೂ ಗೊತ್ತಿಲ್ಲದ ಆ ಇಬ್ಬರು ಹೊರಗಿನ ಹೊಸಬರಿಗೆ (ನಮಗೆ) ಆಟವನ್ನು ಅರ್ಥಮಾಡಿಸುವ ಮತ್ತೊಂದು ಪ್ರಯತ್ನವಾಗಿ, ಅವರು ತನ್ನ ಹರುಕು - ಮುರುಕು ಹಿಂದಿಯಲ್ಲಿ ಮಾತನಾಡಲು ಶುರುಮಾಡಿದರು. ನೆಲದ ಮೇಲೆ ಬಿಡಿಸಿದ್ದ ಚೌಕಗಳ ಮನೆಯಲ್ಲಿ ಅವರು 'ನಮ್ಮ' ಕಾಯಿಯನ್ನು ಮುಂದೆ ಜರುಗಿಸಿ, ಮತ್ತೊಮ್ಮೆ ಜಾಣ್ಮೆಯಿಂದ ಹುಣಸೆ ಬೀಜಗಳನ್ನು ಎಸೆದರು. ಈಗ ಆಡುವುದು ಅವರ ಸರದಿಯಾಗಿತ್ತು.





