ಸೂರಜ್‌ ಜಟ್ಟಿ ಹದಿಹರೆಯಕ್ಕೆ ಕಾಲಿಡುವ ಮೊದಲೇ ತಾನು ಸೈನ್ಯಕ್ಕೆ ಸೇರಲು ಬಯಸುವುದಾಗಿ ತನ್ನ ತಂದೆಯ ಬಳಿ ಹೇಳಿದ್ದರು. ಸ್ವತಃ ನಿವೃತ್ತ ಸೈನಿಕರಾದ ಅವರ ತಂದೆ ತನ್ನ ಮಗನಿಗೆ ತಾನೇ ಸ್ಫೂರ್ತಿಯಾಗಿದ್ದನ್ನು ಕಂಡು ಹೆಮ್ಮೆಯಿಂದ ಬೀಗಿದ್ದರು.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪಲುಸ್ ನಗರದ ಅಕಾಡೆಮಿಯಲ್ಲಿ ತರಬೇತಿ ಅವಧಿಯ ನಡುವೆ 19 ವರ್ಷದ ಸೂರಜ್, "ನನ್ನ ಮನೆಯ ವಾತಾವರಣವೇ ನನಗೆ ಇದನ್ನು ಸ್ಪಷ್ಟ ಆಯ್ಕೆಯಾಗಿ ಕಾಣಿಸಿತ್ತು" ಎಂದು ಹೇಳುತ್ತಾರೆ. "ನನಗೆ ನೆನಪಿರುವಾಗಿನಿಂದ, ನಾನು ಇದನ್ನು ಹೊರತುಪಡಿಸಿ ಬೇರೆ ಯಾವುದರ ಬಗ್ಗೆಯೂ ಯೋಚಿಸಿಲ್ಲ."  ಮಗನ ನಿರ್ಧಾರದಿಂದ ಶಂಕರ್ ಕೂಡಾ ಸಂತೋಷಪಟ್ಟಿದ್ದರು. ಯಾವ ತಂದೆಯೂ ಒಪ್ಪಿಗೆ ನೀಡಬಹುದಾದ ಬೇಡಿಕೆಯಾಗಿತ್ತದು.

ಇದಾಗಿ ಇನ್ನೂ ಒಂದು ದಶಕ ಕಳೆದಿಲ್ಲ, ಪ್ರಸ್ತುತ ಶಂಕರ್ ತಮ್ಮ ಮಗನ ಆಯ್ಕೆಯ ಕುರಿತು ಭರವಸೆ ಹೊಂದುವ ಪರಿಸ್ಥಿತಿಯಲ್ಲಿ ಇಲ್ಲ. ತನ್ನ ಮಗನ ನಿರ್ಧಾರದ ಕುರಿತು ಭಾವುಕರಾಗುವುದರ ಜೊತೆಗೆ ಹೆಮ್ಮೆಯನ್ನೂ ಹೊಂದಿದ್ದ ಅವರಲ್ಲಿ ದಿನ ಕಳೆದಂತೆ ಅನುಮಾನಗಳು ಮೂಡಲಾರಂಭಿಸಿದವು. ನಿಖರವಾಗಿ ಹೇಳಬೇಕೆಂದರೆ ಜೂನ್ 14, 2022ರಿಂದ ಅವರಲ್ಲಿ ಮಗನ ನಿರ್ಧಾರದ ಬಗ್ಗೆ ಗಲಿಬಿಲಿ ಆರಂಭವಾಯಿತು.

ಇದೇ ದಿನದಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪತ್ರಿಕಾಗೋಷ್ಠಿ ನಡೆಸಿ, "ಅಗ್ನಿಪಥ್ ಯೋಜನೆಯಡಿ, ಭಾರತದ ಯುವಕರಿಗೆ ಅಗ್ನಿವೀರ್ ಆಗಿ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗುವುದು" ಎಂದು ಹೇಳಿದರು.

ಈ ಯೋಜನೆಯನ್ನು ಪರಿಚಯಿಸುವ ಮೊದಲು, 2015-2020ರ ನಡುವೆ ಸಶಸ್ತ್ರ ಪಡೆಗಳ ನೇಮಕಾತಿಯ ಐದು ವರ್ಷಗಳ ಸರಾಸರಿ 61,000 ದಷ್ಟಿತ್ತು. 2020ರಲ್ಲಿ ಸಾಂಕ್ರಾಮಿಕ ಪಿಡುಗು ಅಪ್ಪಳಿಸಿದ ನಂತರ ನೇಮಕಾತಿಯನ್ನು ನಿಲ್ಲಿಸಲಾಯಿತು.

ಅಗ್ನಿಪಥ್ ಯೋಜನೆಯಡಿ ಸುಮಾರು 46,000 ಯುವಕರನ್ನು ಅಥವಾ ಅಗ್ನಿವೀರರನ್ನು ಭಾರತೀಯ ಸೇನೆಗೆ "ಯುವ, ಸದೃಢ ಮತ್ತು ವೈವಿಧ್ಯಮಯ" ಪಡೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ನೋಂದಣಿಗೆ ಅರ್ಹ ವಯಸ್ಸನ್ನು 17.5 ರಿಂದ 21 ವರ್ಷಗಳ ನಡುವೆ ನಿರ್ಧರಿಸಲಾಯಿತು, ಇದು ಪಡೆಗಳ ಸರಾಸರಿ ವಯಸ್ಸನ್ನು 4-5 ವರ್ಷಗಳಷ್ಟು ಕಡಿಮೆ ಮಾಡುತ್ತದೆ ಎಂದು ಸರ್ಕಾರದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಈ ಯೋಜನೆಯಡಿ ಆಜೀವ ಸೇನಾ ವೃತ್ತಿಜೀವನಕ್ಕೆ ಬದಲಾಗಿ ನಾಲ್ಕು ವರ್ಷಗಳ ಸೈನ್ಯದಲ್ಲಿ ಇರಿಸಿಕೊಳ್ಳಲಾಗುತ್ತದೆ, ನಾಲ್ಕನೇ ವರ್ಷದ ಕೊನೆಯಲ್ಲಿ ಪ್ರತಿ ಬ್ಯಾಚಿನ 25 ಪ್ರತಿಶತದಷ್ಟು ಜನರು ಸಶಸ್ತ್ರ ಪಡೆಗಳ ಸಾಮಾನ್ಯ ಕೇಡರುಗಳಲ್ಲಿ ಉದ್ಯೋಗವನ್ನು ಪಡೆಯುತ್ತಾರೆ.

PHOTO • Parth M.N.
PHOTO • Parth M.N.

ಎಡ: ಸಾಂಗ್ಲಿಯ ಪಲುಸ್ ನಗರದ ಯಶ್ ಅಕಾಡೆಮಿಯಲ್ಲಿ ಯುವಕರು ಮತ್ತು ಮಹಿಳೆಯರು ರಕ್ಷಣಾ ಸೇವೆಗಳಿಗೆ ಸೇರಲು ತರಬೇತಿ ಪಡೆಯುತ್ತಿದ್ದಾರೆ. ಈ ಯೋಜನೆಯಡಿ ಆಯ್ಕೆಯಾದವರನ್ನು ಆಜೀವ ಸೇನಾ ವೃತ್ತಿಜೀವನಕ್ಕೆ ಬದಲಾಗಿ ನಾಲ್ಕು ವರ್ಷಗಳ ಸೈನ್ಯದಲ್ಲಿ ಇರಿಸಿಕೊಳ್ಳಲಾಗುತ್ತದೆ, ನಾಲ್ಕನೇ ವರ್ಷದ ಕೊನೆಯಲ್ಲಿ ಪ್ರತಿ ಬ್ಯಾಚಿನ 25 ಪ್ರತಿಶತದಷ್ಟು ಜನರು ಸಶಸ್ತ್ರ ಪಡೆಗಳ ಸಾಮಾನ್ಯ ಕೇಡರುಗಳಲ್ಲಿ ಉದ್ಯೋಗವನ್ನು ಪಡೆಯುತ್ತಾರೆ. ಬಲ: ಮಾಜಿ ಸೇನಾಧಿಕಾರಿ ಮತ್ತು ಕುಂಡಲ್ ಸೈನಿಕ್ ಒಕ್ಕೂಟದ ಅಧ್ಯಕ್ಷ ಶಿವಾಜಿ ಸೂರ್ಯವಂಶಿ  (ನೀಲಿ ಬಣ್ಣದ ಉಡುಪಿನಲ್ಲಿ) ಹೇಳುತ್ತಾರೆ, 'ಸೈನಿಕನೊಬ್ಬ ಪೂರ್ತಿಯಾಗಿ ತಯಾರಾಗಲು ನಾಲ್ಕು ವರ್ಷಗಳೆನ್ನುವುದು ತುಂಬಾ ಕಡಿಮೆ ಸಮಯ'

ಸಾಂಗ್ಲಿಯ ಕುಂಡಲ್ ನಗರದ ಸೈನಿಕ್ ಫೆಡರೇಶನ್ ಸಂಸ್ಥೆಯ ಅಧ್ಯಕ್ಷ ಮತ್ತು ಮಾಜಿ ಸೇನಾಧಿಕಾರಿ ಶಿವಾಜಿ ಸೂರ್ಯವಂಶಿ (65) ಈ ಯೋಜನೆಯು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಡುತ್ತಾರೆ. “ಸೈನಿಕನೊಬ್ಬ ಪೂರ್ಣ ಪ್ರಮಾಣದಲ್ಲಿ ತಯಾರಾಗಲು ನಾಲ್ಕು ವರ್ಷಗಳ ಅವಧಿ ಬಹಳ ಸಣ್ಣದು” ಎಂದು ಅವರು ಹೇಳುತ್ತಾರೆ. "ಈ ಅಗ್ನಿವೀರರನ್ನು ಕಾಶ್ಮೀರ ಅಥವಾ ಇತರ ಯಾವುದೇ ಸಂಘರ್ಷ ಪೀಡಿತ ಪ್ರದೇಶದಲ್ಲಿ ಕರ್ತವ್ಯಕ್ಕೆ ನಿಯೋಜಿಸಿದರೆ, ಅವರ ಅನುಭವದ ಕೊರತೆಯು ಇತರ ತರಬೇತಿ ಪಡೆದ ಸೈನಿಕರನ್ನು ಅಪಾಯಕ್ಕೆ ದೂಡಬಹುದು. ಈ ಯೋಜನೆಯು ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ದೂಡುತ್ತದೆ.”

ಇದು ಈ ಕೆಲಸಕ್ಕೆ ಸೇರುವವರಿಗೆ ತೋರುವ ಅಗೌರವ ಎಂದು ಸೂರ್ಯವಂಶಿ ಹೇಳುತ್ತಾರೆ. "ಅಗ್ನಿವೀರರು ಕರ್ತವ್ಯದ ಸಮಯದಲ್ಲಿ ಸತ್ತರೆ, ಅವರಿಗೆ ಹುತಾತ್ಮರ ಸ್ಥಾನಮಾನವೂ ಸಿಗುವುದಿಲ್ಲ" ಎಂದು ಅವರು ಹೇಳುತ್ತಾರೆ. "ಇದು ನಾಚಿಕೆಗೇಡಿನ ಸಂಗತಿ. ಒಬ್ಬ ಶಾಸಕ [ವಿಧಾನಸಭಾ ಸದಸ್ಯ] ಅಥವಾ ಸಂಸದ [ಸಂಸತ್ ಸದಸ್ಯ] ಒಂದು ತಿಂಗಳ ಕಾಲ ಅಧಿಕಾರದಲ್ಲಿದ್ದರೂ, ಅವರು ತಮ್ಮ ಪೂರ್ಣ ಅಧಿಕಾರಾವಧಿಯನ್ನು ಪೂರೈಸುವ ಶಾಸಕರಂತೆಯೇ ಪ್ರಯೋಜನಗಳನ್ನು ಪಡೆಯುತ್ತಾರೆ. ಹಾಗಾದರೆ ಸೈನಿಕರ ವಿರುದ್ಧ ಏಕೆ ಇಂತಹ ತಾರತಮ್ಯ ಮಾಡಬೇಕು?”

ವಿವಾದಾತ್ಮಕ ಯೋಜನೆಯನ್ನು ಘೋಷಿಸಿದ ನಂತರ ಭಾರತದಾದ್ಯಂತ ವ್ಯಾಪಕ ಪ್ರತಿಭಟನೆಗಳು ಕಂಡುಬಂದವು; ಈ ಯೋಜನೆಯನ್ನು ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕರು ಸಮಾನವಾಗಿ ವಿರೋಧಿಸಿದರು.

2024ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳು ಬಿಜೆಪಿಯ ಪರವಾಗಿ ಬಾರದ ಕಾರಣ ಈ ಬಾರಿಯ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಯೋಜನೆ ತಿದ್ದುಪಡಿಗಳನ್ನು ಪರಿಗಣಿಸುತ್ತಿದೆ ಎಂದು ವರದಿಯಾಗಿದೆ. ಸಶಸ್ತ್ರ ಪಡೆಗಳಲ್ಲಿ ಹೆಚ್ಚಿನ ನೇಮಕಾತಿಯನ್ನು ಹೊಂದಿರುವ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷವು ಗಂಭೀರ ನಷ್ಟವನ್ನು ಕಳೆದ ಚುನಾವಣೆಯಲ್ಲಿ ಅನುಭವಿಸಿದೆ. ಯೋಜನೆ ಘೋಷಣೆಯಾದ ಎರಡು ವರ್ಷಗಳ ನಂತರ ಇದೀಗ ಮಹಾರಾಷ್ಟ್ರದಲ್ಲಿ ಚುನಾವಣೆ ಬಂದಿದೆ. ಸಶಸ್ತ್ರ ಪಡೆಗಳಲ್ಲಿ ಹೆಚ್ಚಿನ ಸಂಖ್ಯೆಯ ನೇಮಕಾತಿಗಳಿಗೆ ಹೆಸರುವಾಸಿಯಾದ ಪಶ್ಚಿಮ ಮಹಾರಾಷ್ಟ್ರದಲ್ಲಿ ಈ ಯೋಜನೆಯ ಕುರಿತಾದ ಭ್ರಮನಿರಸನವು ಹಿಂದೆಂದಿಗಿಂತಲೂ ಸ್ಪಷ್ಟವಾಗಿ ಕಾಣುತ್ತಿದೆ. ಈ ಪ್ರದೇಶದಲ್ಲಿನ ಕೆಲವು ಹಳ್ಳಿಗಳಲ್ಲಿ ಪ್ರತಿ ಮನೆಯಿಂದ ಒಬ್ಬರಾದರೂ ಸೈನ್ಯಕ್ಕೆ ಹೋಗಿರುವ ಉದಾಹರಣೆಗಳಿವೆ.

ಜಟ್ಟಿ ಅಂತಹ ಒಂದು ಕುಟುಂಬಕ್ಕೆ ಸೇರಿದವರು. ಅವರು ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯ ಕೊನೆಯ ವರ್ಷದಲ್ಲಿದ್ದಾರೆ. ಆದರೆ ಅಗ್ನಿವೀರ್ ತರಬೇತಿ ಪಡೆಯುವ ಸಲುವಾಗಿ ಅಕಾಡೆಮಿಗೆ ಸೇರಿದಾಗಿನಿಂದ, ಅವರ ಓದು ಕುಂಟಿತಗೊಂಡಿದೆ.

PHOTO • Parth M.N.
PHOTO • Parth M.N.

ಅಕಾಡೆಮಿಯಲ್ಲಿ ದೈಹಿಕ ತರಬೇತಿಯು ತೀವ್ರವಾದ ವ್ಯಾಯಾಮಗಳನ್ನು ಒಳಗೊಂಡಿರುತ್ತದೆ: ಸ್ಪ್ರಿಂಟ್, ಪುಶ್-ಅಪ್, ನೆಲದ ಮೇಲೆ ತೆವಳುವುದು ಮತ್ತು ಒಬ್ಬರನ್ನು ಬೆನ್ನ ಮೇಲೆ ಹೊತ್ತುಕೊಂಡು ಸುತ್ತು ಬರುವುದು ಅವುಗಳಲ್ಲಿ ಕೆಲವು

"ನಾನು ದೈಹಿಕ ತರಬೇತಿಗಾಗಿ ಬೆಳಿಗ್ಗೆ ಮೂರು ಗಂಟೆ ಮತ್ತು ಸಂಜೆ ಮೂರು ಗಂಟೆಗಳ ಕಾಲವನ್ನು ಮುಡಿಪಿಡುತ್ತೇನೆ" ಎಂದು ಅವರು ಹೇಳುತ್ತಾರೆ. "ವ್ಯಾಯಾಮ ಮುಗಿಯುವ ಹೊತ್ತಿಗೆ ಬಹಳ ದಣಿವು ಕಾಡುತ್ತಿರುತ್ತದೆ. ಓದಿನತ್ತ ಗಮನಹರಿಸಲು ಶಕ್ತಿಯೇ ಉಳಿದಿರುವುದಿಲ್ಲ. ಒಂದು ವೇಳೆ ನಾನು ಆಯ್ಕೆಯಾದರೆ ಪರೀಕ್ಷೆಗೂ ಮೊದಲೇ ಇಲ್ಲಿಂದ ಹೊರಬೇಕಾಗುತ್ತದೆ.”

ಅವರ ದೈಹಿಕ ತರಬೇತಿಯು ದೈಹಿಕ ತರಬೇತಿಯು ತೀವ್ರವಾದ ವ್ಯಾಯಾಮಗಳನ್ನು ಒಳಗೊಂಡಿರುತ್ತದೆ: ಸ್ಪ್ರಿಂಟ್, ಪುಶ್-ಅಪ್, ನೆಲದ ಮೇಲೆ ತೆವಳುವುದು ಮತ್ತು ಒಬ್ಬರನ್ನು ಬೆನ್ನ ಮೇಲೆ ಹೊತ್ತುಕೊಂಡು ಸುತ್ತು ಬರುವುದನ್ನು ಒಳಗೊಂಡಿದೆ. ಪ್ರತಿ ತರಬೇತಿ ಮುಗಿಯುವಾಗಲೂ ಅವರ ಬಟ್ಟೆಗಳು ಬೆವರಿನಿಂದ ನೆನೆದಿರುತ್ತವೆ ಮತ್ತು ಕೊಳೆಯಾಗಿರುತ್ತವೆ. ಇದಾದ ಕೆಲವು ಗಂಟೆಗಳ ನಂತರ ಅವರು ಮತ್ತೆ ವ್ಯಾಯಾಮವನ್ನು ಪುನರಾವರ್ತಿಸುತ್ತಾರೆ.

ಒಂದು ವರ್ಷದ ತರಬೇತಿಯ ನಂತರ ಜಟ್ಟಿ ಅಗ್ನಿವೀರ್‌ ಆಗಿ ಆಯ್ಕೆಯಾದರೆ ತಿಂಗಳಿಗೆ 21,000 ರೂಪಾಯಿಗಳಷ್ಟು ಸಂಬಳ ಬರಲಿದೆ. ಇದು ನಾಲ್ಕನೇ ವರ್ಷದ ಹೊತ್ತಿಗೆ 28,000 ರೂಪಾಯಿಗಳಿಗೆ ತಲುಪುತ್ತದೆ. ಅವರು ತಮ್ಮ ಬ್ಯಾಚಿನಿಂದ ಆಯ್ಕೆಯಾದ 25 ಶೇಕಡಾ ಅರ್ಹರ ಗುಂಪಿನಲ್ಲಿ ಬರಲು ವಿಫಲರಾದರೆ, ಅಗ್ನಿಪಥ್‌ ಯೋಜನೆಯ ಅವರ ಕೆಲಸದ ಅವಧಿ ಮುಗಿದ ನಂತರ 11.71 ಲಕ್ಷ ರಪಾಯಿಗಳೊಂದಿಗೆ ಮನೆಗೆ ಮರಳುತ್ತಾರೆ.

ಅಷ್ಟು ಹೊತ್ತಿಗೆ ಅವರಿಗೆ 23 ವರ್ಷ ವಯಸ್ಸಾಗಿರುತ್ತದೆ. ಆದರೆ ಆ ಹೊತ್ತಿಗೆ ಹೊರಗೆ ಬಂದು ಹೊಸ ಅವಕಾಶಗಳನ್ನು ಹುಡುಕಲು ಅವರ ಬಳಿ ಪದವಿ ಇರುವುದಿಲ್ಲ.

“ಇದೇ ಕಾರಣದಿಂದಾಗಿ ನನ್ನ ತಂದೆ ಚಿಂತಿತರಾಗಿದ್ದಾರೆ. ಅವರು ಈಗ ನನ್ನ ಬಳಿ ಪೊಲೀಸ್‌ ಕೆಲಸಕ್ಕೆ ಸೇರಲು ಹೇಳುತ್ತಿದ್ದಾರೆ.” ಎಂದು ಜಟ್ಟಿ ಹೇಳುತ್ತಾರೆ.

2022ರ ಉದ್ಘಾಟನಾ ವರ್ಷದಲ್ಲಿ 46,000 ಅಗ್ನಿವೀರರನ್ನು ನೇಮಕ ಮಾಡಲಾಗುವುದು ಎಂದು ಭಾರತ ಸರ್ಕಾರ ಹೇಳಿದೆ - ಅವರಲ್ಲಿ 75 ಪ್ರತಿಶತದಷ್ಟು ಅಥವಾ 34,500ದಷ್ಟು ಇಪ್ಪತ್ನಾಲ್ಕು, ಇಪ್ಪತೈದು ವಯಸ್ಸಿನ ಯುವಕರು 2026ರಲ್ಲಿ ಯಾವುದೇ ಭವಿಷ್ಯವಿಲ್ಲದೆ ಮನೆಗೆ ಮರಳುತ್ತಾರೆ. ಅವರು ಮತ್ತೆ ತಮ್ಮ ಬದುಕಿಗೆ ಹೊಸ ನೆಲೆಯನ್ನು ಹುಡುಕಲು ಆರಂಭಿಸಬೇಕಾಗುತ್ತದೆ.

2026ರವರೆಗೆ ನೇಮಕಾತಿಯ ಗರಿಷ್ಠ ಮಿತಿ 175,000. ನೇಮಕಾತಿಗಳನ್ನು ಐದನೇ ವರ್ಷದಲ್ಲಿ 90,000ಕ್ಕೆ ಮತ್ತು ನಂತರದ ವರ್ಷದಿಂದ 125,000ಕ್ಕೆ ಹೆಚ್ಚಿಸುವ ಗುರಿ ಇದೆ.

PHOTO • Parth M.N.
PHOTO • Parth M.N.

ಎಡ: ಅಗ್ನಿಪಥ್ ಯೋಜನೆಯನ್ನು ಘೋಷಿಸಿದ ನಂತರ ಭಾರತದಾದ್ಯಂತ ವ್ಯಾಪಕ ಪ್ರತಿಭಟನೆಗಳು ಎದುರಾದವು ಮತ್ತು ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕರು ಇದನ್ನು ವಿರೋಧಿಸಿದರು. ಬಲ: ಪಲುಸ್ ಎನ್ನುವ ಊರಿನಲ್ಲಿ ಯಶ್ ಅಕಾಡೆಮಿಯನ್ನು ನಡೆಸುತ್ತಿರುವ ಪ್ರಕಾಶ್ ಭೋರ್, ಈ ಯೋಜನೆಯು ಗ್ರಾಮೀಣ ಭಾರತದಲ್ಲಿ ಉದ್ಯೋಗ ಬಿಕ್ಕಟ್ಟನ್ನು ಇನ್ನಷ್ಟು ತೀವ್ರವಾಗಿಸುತ್ತದೆ ಎಂದು ಅಭಿಪ್ರಾಯಪಡುತ್ತಾರೆ, ಏಕೆಂದರೆ ಯುವಕರು ತಮ್ಮ ಪದವಿಯನ್ನು ಪೂರ್ಣಗೊಳಿಸುವ ಮೊದಲು ಕರ್ತವ್ಯಕ್ಕೆ ಹೋಗಬೇಕಾದ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ

ಸಮವಸ್ತ್ರದಲ್ಲಿರುವ ಅನೇಕ ವ್ಯಕ್ತಿಗಳು ಕೃಷಿ ಹಿನ್ನೆಲೆಯಿಂದ ಬಂದವರು, ಇವರು ಕೃಷಿ ಬಿಕ್ಕಟ್ಟಿನಿಂದ ಎದುರಾಗುವ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹೆಚ್ಚುತ್ತಿರುವ ಸಾಲಗಳು, ಬೆಳೆಗಳ ಬೆಲೆ ಕುಸಿತ, ಸಾಲ ಸೌಲಭ್ಯದ ಕೊರತೆ ಮತ್ತು ಹವಾಮಾನ ಬದಲಾವಣೆಯ ತೀವ್ರ ಪರಿಣಾಮಗಳ ಪರಿಣಾಮವಾಗಿ ಗಮನಾರ್ಹ ಸಂಖ್ಯೆಯ ರೈತರು ತಮ್ಮ ಬದುಕಿಗೆ ದುರಂತ ಅಂತ್ಯವನ್ನು ತಂದುಕೊಂಡಿದ್ದಾರೆ. ಪರಿಣಾಮವಾಗಿ, ಕೃಷಿ ಕುಟುಂಬಗಳ ಮಕ್ಕಳಿಗೆ ಜೀವನ ಭದ್ರತೆ ನೀಡಬಲ್ಲ ಸುಸ್ಥಿರ ಉದ್ಯೋಗ ಹುಡುಕಿಕೊಳ್ಳುವುದು ಬಹಳ ಮುಖ್ಯ.

ಪಲುಸ್ ಎನ್ನುವಲ್ಲಿ ಯಶ್ ಅಕಾಡೆಮಿಯನ್ನು ನಡೆಸುತ್ತಿರುವ ಪ್ರಕಾಶ್ ಭೋರ್, ಯುವಕರು ತಮ್ಮ ಪದವಿಯನ್ನು ಪೂರ್ಣಗೊಳಿಸುವ ಮೊದಲು ಕರ್ತವ್ಯಕ್ಕೆ ಹೋಗಬೇಕಾದ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿರುವದರಿಂದಾಗಿ ಅಗ್ನಿಪಥ್ ಯೋಜನೆಯು ಗ್ರಾಮೀಣ ಭಾರತದಲ್ಲಿ ಉದ್ಯೋಗ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಡುತ್ತಾರೆ. "ಉದ್ಯೋಗ ಮಾರುಕಟ್ಟೆ ಈಗಾಗಲೇ ಭರವಸೆದಾಯಕವಾಗಿಲ್ಲ" ಎಂದು ಅವರು ಹೇಳುತ್ತಾರೆ. "ಪದವಿ ಇಲ್ಲದಿರುವುದು ಮಕ್ಕಳ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ನಾಲ್ಕು ವರ್ಷಗಳ ಗುತ್ತಿಗೆಯ ಮುಗಿಸಿ ಮನೆಗೆ ಮರಳಿದ ನಂತರ, ಅವರು ಸೊಸೈಟಿಯ ಹೊರಗೆ ಅಥವಾ ಎಟಿಎಂನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಬೇಕಷ್ಟೇ.”

ಯಾರೂ ಅವರನ್ನು ಮದುವೆಯಾಗಲು ಬಯಸುವುದಿಲ್ಲ ಎಂದು ಅವರು ಹೇಳಿದರು. "ಭಾವಿ ಪತಿಗೆ ಖಾಯಂ ಉದ್ಯೋಗವಿದೆಯೇ ಅಥವಾ ಅವರು 'ನಾಲ್ಕು ವರ್ಷಗಳ ಸೇನಾಧಿಕಾರಿಯೇ' ಎಂದು ವಧುವಿನ ಕುಟುಂಬವು ಸ್ಪಷ್ಟವಾಗಿ ಕೇಳುತ್ತದೆ. ಬಂದೂಕುಗಳನ್ನು ಬಳಸಲು ತರಬೇತಿ ಪಡೆದ ನಿರಾಶೆಗೊಂಡ ಯುವಕರ ಗುಂಪನ್ನು ಕಲ್ಪಿಸಿಕೊಳ್ಳಿ ಮತ್ತು ಮಾಡಲು ಏನೂ ಇಲ್ಲ. ನಾನು ಹೆಚ್ಚಿನದನ್ನು ಹೇಳಲು ಬಯಸುವುದಿಲ್ಲ ಆದರೆ ಇದು ಭಯಾನಕ ಚಿತ್ರ.

17 ವರ್ಷಗಳನ್ನು ಮಿಲಿಟರಿ ಸೇವೆಗೆ ಮೀಸಲಿಟ್ಟ ಮತ್ತು 2009ರಿಂದ ಸಾಂಗ್ಲಿಯಲ್ಲಿ ತರಬೇತಿ ಅಕಾಡೆಮಿಯನ್ನು ನಡೆಸುತ್ತಿರುವ ಮೇಜರ್ ಹಿಮ್ಮತ್ ಓವ್ಹಲ್, ಈ ಯೋಜನೆಯು ಯುವಜನರನ್ನು ಸೈನ್ಯದಲ್ಲಿ ವೃತ್ತಿಜೀವನವನ್ನು ಮುಂದುವರಿಸುವುದನ್ನು ತಡೆಯುತ್ತದೆ ಎಂದು ಹೇಳುತ್ತಾರೆ. ಅವರು ಹೇಳುವಂತೆ, "ಹಿಂದೆ, 2009ರಿಂದ ವಾರ್ಷಿಕವಾಗಿ ನಮ್ಮ ಅಕಾಡೆಮಿಯಲ್ಲಿ 1,500ರಿಂದ 2,000 ವಿದ್ಯಾರ್ಥಿಗಳು ದಾಖಲಾಗುತ್ತಿದ್ದರು. ಆದರೆ, ಅಗ್ನಿವೀರ್‌ ಪರಿಚಯದ ನಂತರ, ಆ ಸಂಖ್ಯೆ ಕೇವಲ 100ಕ್ಕೆ ಕುಸಿದಿದೆ. ಇದು ಗಮನಾರ್ಹ ಕುಸಿತವನ್ನು ಪ್ರತಿನಿಧಿಸುತ್ತದೆ."

ಇಂತಹ ಪರಿಸ್ಥಿತಿಯಲ್ಲೂ ತರಬೇತಿ ಮುಂದುವರಿಸುವವರು ಜತ್ತಿಯಂತೆಯೇ ತಮ್ಮ ಬ್ಯಾಚಿನ ಅಗ್ರ 25 ಪ್ರತಿಶತದ ಭಾಗವಾಗಬೇಕೆಂಬ ಆಕಾಂಕ್ಷೆಯೊಂದಿಗೆ ಸೇರುತ್ತಾರೆ. ಪರ್ಯಾಯವಾಗಿ, ರಿಯಾ ಬೆಲ್ದಾರ್ ಅವರಂತಹವರು ಭಾವನಾತ್ಮಕ ಅಂಶಗಳಿಂದಲೂ ಪ್ರೇರೇಪಿಸಲ್ಪಡಬಹುದು.

ಬೆಲ್ದಾರ್ ಸಾಂಗ್ಲಿಯ ಮಿರಜ್ ಎಂಬ ಸಣ್ಣ ಪಟ್ಟಣದ ಸಣ್ಣ ರೈತರೊಬ್ಬರ ಮಗಳು. ಅವರು ಬಾಲ್ಯದಿಂದಲೂ ತನ್ನ ಮಾವನ ಪ್ರೀತಿಯನ್ನು ಗೆದ್ದವರು ಮತ್ತು ಅವರು ಹೆಮ್ಮೆಪಡುವಂತಹ ಕೆಲಸ ಮಾಡಬೇಕೆನ್ನುವುದು ಅವರ ಬಯಕೆ. “ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಬಯಸಿದ್ದರು” ಎಂದು ಅವರು ಹೇಳುತ್ತಾರೆ. “ಇದು ಅವರ ಪಾಲಿಗೆ ಎಂದಿಗೂ ಈಡೇರಿಸಿಕೊಳ್ಳಲಾಗದ ಕನಸು. ಅವರು ನನ್ನ ಮೂಲಕ ತನ್ನ ಕನಸನ್ನು ಸಾಕಾರಗೊಳಿಸಿಕೊಳ್ಳಬೇಕೆಂದು  ನಾನು ಬಯಸುತ್ತೇನೆ.”

PHOTO • Parth M.N.
PHOTO • Parth M.N.

ಸೈನ್ಯದಲ್ಲಿರಲು ಬಯಸುವ ಯುವತಿಯರು ಜನರಿಂದ ಕೆಟ್ಟ ಟೀಕೆಗಳನ್ನು ಎದುರಿಸುತ್ತಾರೆ. ಸಾಂಗ್ಲಿಯ ಮಿರಜ್ ಎಂಬ ಸಣ್ಣ ಪಟ್ಟಣದ ಸಣ್ಣ ರೈತರೊಬ್ಬರ ಮಗಳು ಮತ್ತು ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ರಿಯಾ ಬೆಲ್ದಾರ್, ‘ನಾನು ಹಿಂತಿರುಗಿದ ನಂತರ ಹೆಣ್ಣುಮಕ್ಕಳಿಗಾಗಿ ಅಕಾಡೆಮಿ ಪ್ರಾರಂಭಿಸಲು ಬಯಸುತ್ತೇನೆ’ ಎಂದು ಹೇಳುತ್ತಾರೆ

ಓಹಾಲ್ ಅವರ ಮಾರ್ಗದರ್ಶನದಡಿಯಲ್ಲಿ ತರಬೇತಿ ಪಡೆಯುತ್ತಿರುವ ಅವರು, ಹುಡುಗಿಯಾಗಿದ್ದರೂ ಸೈನ್ಯ ಸೇರಲು ಬಯಸಿದ್ದಕ್ಕಾಗಿ ನೆರೆಹೊರೆಯವರಿಂದ ಕೇಳಿಬಂದ ಕೀಳು ಮಟ್ಟದ ಟೀಕೆಗಳನ್ನು ನಿರ್ಲಕ್ಷಿಸಿದ್ದಾರೆ. ಅವರನ್ನು ಅಪಹಾಸ್ಯ ಮಾಡಲಾಗಿದೆ ಮತ್ತು ಗೇಲಿ ಮಾಡಲಾಗಿದೆ. "ಆದರೆ ನನ್ನ ಪೋಷಕರು ನನ್ನೊಂದಿಗೆ ನಿಂತಿದ್ದರಿಂದ ನಾನು  ಜನರ ಬಗ್ಗೆ ಗಮನ ಹರಿಸಲಿಲ್ಲ" ಎಂದು ಬೆಲ್ದಾರ್ ಹೇಳುತ್ತಾರೆ.

ಅಗ್ನಿಪಥ್ ಯೋಜನೆ ತನಗೆ ಸೂಕ್ತವಲ್ಲ ಎಂದು 19 ವರ್ಷದ ಯುವತಿ ಒಪ್ಪಿಕೊಳ್ಳುತ್ತಾರೆ. " ದಿನವಿಡೀ ತರಬೇತಿ ಪಡೆಯಬೇಕು, ಟೀಕಾಕಾರರನ್ನು ಎದುರಿಸಬೇಕು, ಶಿಕ್ಷಣವನ್ನು ಅಪಾಯಕ್ಕೆ ತಳ್ಳಬೇಕು. ಇಷ್ಟೆಲ್ಲ ಮಾಡಿ ಧಿರಿಸಿದ ಸಮವಸ್ತ್ರವನ್ನು ಕೇವಲ ನಾಲ್ಕು ವರ್ಷಗಳಲ್ಲಿ ನಿಮ್ಮಿಂದ ಕಸಿದುಕೊಳ್ಳಲಾಗುತ್ತದೆ, ಮುಂದೆ ಯಾವುದೇ ಭವಿಷ್ಯವಿಲ್ಲ. ಇದು ತುಂಬಾ ಅನ್ಯಾಯ."

”ಅದೇನೇ ಇದ್ದರೂ, ಬೆಲ್ದಾರ್ ತನ್ನ ನಾಲ್ಕು ವರ್ಷಗಳ ಕೆಲಸವನ್ನು ಪೂರ್ಣಗೊಳಿಸಿದ ನಂತರ ತನ್ನದೇ ಆದ ಯೋಜನೆಗಳನ್ನು ಹೊಂದಿದ್ದಾರೆ. "ನಾನು ಹಿಂತಿರುಗಿ ಬಂದ ನಂತರ ಹುಡುಗಿಯರಿಗಾಗಿ ಅಕಾಡೆಮಿ ಪ್ರಾರಂಭಿಸಲು ಬಯಸುತ್ತೇನೆ ಮತ್ತು ನಾನು ನಮ್ಮ ಜಮೀನಿನಲ್ಲಿ ಕಬ್ಬನ್ನು ಬೆಳೆಯುತ್ತೇನೆ" ಎಂದು ಅವರು ಹೇಳುತ್ತಾರೆ. "ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿದ ನಂತರ ನನಗೆ ಖಾಯಂ ನೇಮಕಾತಿ ಸಿಗದಿದ್ದರೂ, ನಾನು ಒಮ್ಮೆ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದೇನೆ ಮತ್ತು ನನ್ನ ಮಾವನ ಕನಸನ್ನು ಈಡೇರಿಸಿದ್ದೇನೆನ್ನುವ ಸಾರ್ಥಕತೆ ನನಗೆ ಸಿಗುತ್ತದೆ."

ಕೊಲ್ಹಾಪುರ ನಗರದ 19 ವರ್ಷದ ಓಂ ವಿಭೂತೆ, ಬೆಲ್ದಾರ್ ಅವರಂತೆಯೇ ಅದೇ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದು, ಅವರು ಹೆಚ್ಚು ಪ್ರಾಯೋಗಿಕ ವಿಧಾನವನ್ನು ಆರಿಸಿಕೊಂಡಿದ್ದಾರೆ. ದೇಶಕ್ಕೆ ಸೇವೆ ಸಲ್ಲಿಸುವ ಭರವಸೆಯೊಂದಿಗೆ ಅಗ್ನಿಪಥ್ ಯೋಜನೆಯನ್ನು ಘೋಷಿಸುವ ಮೊದಲು ಅವರು ಓಹಾಲ್ ಅವರ ಅಕಾಡೆಮಿಗೆ ಸೇರಿದ್ದರು. ಆದರೆ ಎರಡು ವರ್ಷಗಳ ಹಿಂದೆ, ಅವರು ಕೋರ್ಸ್ ತಿದ್ದುಪಡಿಯನ್ನು ಮಾಡಿದರು. "ನಾನು ಈಗ ಪೊಲೀಸ್ ಅಧಿಕಾರಿಯಾಗಲು ಬಯಸುತ್ತೇನೆ" ಎಂದು ಅವರು ಹೇಳುತ್ತಾರೆ. "ಇದು ನಿಮಗೆ 58 ವರ್ಷ ವಯಸ್ಸಿನವರೆಗೆ ಉದ್ಯೋಗ ಭದ್ರತೆಯನ್ನು ನೀಡುತ್ತದೆ ಮತ್ತು ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸುವುದು ಸಹ ರಾಷ್ಟ್ರೀಯ ಹಿತದೃಷ್ಟಿಯಿಂದ ಕೂಡಿದೆ. ನಾನು ಸೇನಾಧಿಕಾರಿಯಾಗಲು ಬಯಸಿದ್ದೆ, ಆದರೆ ಅಗ್ನಿಪಥ್ ಯೋಜನೆ ನನ್ನ ಮನಸ್ಸನ್ನು ಬದಲಾಯಿಸಿತು.”

ನಾಲ್ಕು ವರ್ಷಗಳ ನಂತರ ಮನೆಗೆ ಮರಳುವ ಆಲೋಚನೆಯು ಅವರನ್ನು ತೀವ್ರ ಆತಂಕಕ್ಕೀಡು ಮಾಡಿತು ಎಂದು ವಿಭೂತೆ ಹೇಳುತ್ತಾರೆ. " ಹಿಂದಿರುಗಿದ ನಂತರ ಏನು ಮಾಡಲಿ?" ಎಂದು ಅವರು ಕೇಳಿದರು. "ನನಗೆ ಯೋಗ್ಯವಾದ ಕೆಲಸವನ್ನು ಯಾರು ನೀಡುತ್ತಾರೆ? ನಿಮ್ಮ ಭವಿಷ್ಯದ ವಿಷಯದಲ್ಲಿ ನಾವು ವಾಸ್ತವಿಕವಾಗಿರಬೇಕು.”

ಅಗ್ನಿಪಥ್ ಯೋಜನೆಯ ಅತಿದೊಡ್ಡ ಪರಿಣಾಮವೆಂದರೆ ಅದು ಮಹತ್ವಾಕಾಂಕ್ಷಿ ಸೈನಿಕರಲ್ಲಿ ರಾಷ್ಟ್ರೀಯತೆಯನ್ನು ದುರ್ಬಲಗೊಳಿಸಿದೆ ಎಂದು ಮಾಜಿ ಸೈನಿಕ ಸೂರ್ಯವಂಶಿ ಹೇಳುತ್ತಾರೆ. "ನಾನು ಕೆಲವು ಗೊಂದಲಕಾರಿ ವರದಿಗಳನ್ನು ಕೇಳುತ್ತಿದ್ದೇನೆ" ಎಂದು ಅವರು ಹೇಳುತ್ತಾರೆ. "ಮಕ್ಕಳು ಶೇಕಡಾ 25ರಲ್ಲಿ ಸ್ಥಾನ ಪಡೆಯುವುದಿಲ್ಲ ಎಂದು ತಿಳಿದಾಗ, ಅವರು ತಮ್ಮ ಪ್ರಯತ್ನವನ್ನು ನಿಲ್ಲಿಸುತ್ತಾರೆ ಮತ್ತು ತಮ್ಮ ಹಿರಿಯರಿಗೆ ಅವಿಧೇಯರಾಗುತ್ತಾರೆ. ಮತ್ತು ನಾನು ಅವರನ್ನು ದೂಷಿಸುವುದಿಲ್ಲ. ನೀವು ನಿಮ್ಮ ಜೀವವನ್ನು ಏಕೆ ಅಪಾಯಕ್ಕೆ ತಳ್ಳುತ್ತೀರಿ, ನಾಲ್ಕು ವರ್ಷಗಳಲ್ಲಿ ನಿಮ್ಮನ್ನು ತ್ಯಜಿಸುವ ಕೆಲಸಕ್ಕೆ ನಿಮ್ಮ ರಕ್ತ ಮತ್ತು ಬೆವರನ್ನು ಏಕೆ ಸುರಿಯುತ್ತೀರಿ? ಈ ಯೋಜನೆಯು ಸೈನಿಕರನ್ನು ಗುತ್ತಿಗೆ ಕಾರ್ಮಿಕರನ್ನಾಗಿ ಮಾಡಿದೆ.”

ಅನುವಾದ: ಶಂಕರ. ಎನ್. ಕೆಂಚನೂರು

Parth M.N.

پارتھ ایم این ۲۰۱۷ کے پاری فیلو اور ایک آزاد صحافی ہیں جو مختلف نیوز ویب سائٹس کے لیے رپورٹنگ کرتے ہیں۔ انہیں کرکٹ اور سفر کرنا پسند ہے۔

کے ذریعہ دیگر اسٹوریز Parth M.N.
Editor : Priti David

پریتی ڈیوڈ، پاری کی ایگزیکٹو ایڈیٹر ہیں۔ وہ جنگلات، آدیواسیوں اور معاش جیسے موضوعات پر لکھتی ہیں۔ پریتی، پاری کے ’ایجوکیشن‘ والے حصہ کی سربراہ بھی ہیں اور دیہی علاقوں کے مسائل کو کلاس روم اور نصاب تک پہنچانے کے لیے اسکولوں اور کالجوں کے ساتھ مل کر کام کرتی ہیں۔

کے ذریعہ دیگر اسٹوریز Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru