"ನಮಗೆ ಇದರ ಬಗ್ಗೆ ತಿಳಿದಿಲ್ಲ" ಎಂದು ಹೇಳಿದ ಬಾಬಾ ಸಾಹೇಬ್, ಬಜೆಟ್ ಕುರಿತಾದ ನನ್ನ ಪುನರಾವರ್ತಿತ ಪ್ರಶ್ನೆಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದರು.

"ನಮಗೇನು ಬೇಕು ಎಂದು ಸರ್ಕಾರ ಯಾವಾತ್ತು ಕೇಳಿತ್ತು?" ಎಂದು ಅವರ ಪತ್ನಿ ಮಂದಾ ಕೇಳುತ್ತಾರೆ. “ನಮಗೆ ಏನು ಬೇಕೆನ್ನುವುದು ಗೊತ್ತಿಲ್ಲದೆ ಅವರು ನಮಗಾಗಿ ಹೇಗೆ ನಿರ್ಧಾರ ತೆಗೆದುಕೊಳ್ಳಬಲ್ಲರು? ನಮಗೆ ಬೇಕಾಗಿರುವುದು ಎಲ್ಲಾ 30 ದಿನಗಳ ಕೆಲಸ."

ಪುಣೆ ಜಿಲ್ಲೆಯ ಶಿರೂರ್ ತಾಲ್ಲೂಕಿನ ಕುರುಲಿ ಗ್ರಾಮದ ಹೊರವಲಯದಲ್ಲಿರುವ ಅವರ ಒಂದು ಕೋಣೆಯ ತಗಡಿನ ಮನೆ ನಾನು ಹೋದ ದಿನದಂದು ಬೆಳಗ್ಗೆ ಅಸಾಮಾನ್ಯವಾಗಿ ಗಡಿಬಿಡಿಯಲ್ಲಿತ್ತು. "ನಾವು 2004ರಲ್ಲಿ ಜಲ್ನಾದಿಂದ ಇಲ್ಲಿಗೆ ವಲಸೆ ಬಂದಿದ್ದೇವೆ. ನಮಗೆ ನಮ್ಮದೇ ಆದ ಹಳ್ಳಿ ಇರಲಿಲ್ಲ. ನಾವು ವಲಸೆ ಹೋಗುತ್ತಿರುವುದರಿಂದ ನಮ್ಮ ಜನರು ಮೊದಲಿನಿಂದಲೂ  ಹಳ್ಳಿಗಳ ಹೊರಗೆ ವಾಸಿಸುತ್ತಿದ್ದರು" ಎಂದು ಬಾಬಾ ಸಾಹೇಬ್ ಹೇಳುತ್ತಾರೆ.

ಒಂದು ಕಾಲದಲ್ಲಿ ಬ್ರಿಟಿಷ್ ರಾಜ್ ನಿಂದ 'ಕ್ರಿಮಿನಲ್' ಬುಡಕಟ್ಟು ಎಂದು ಹಣೆಪಟ್ಟಿ ಕಟ್ಟಲ್ಪಟ್ಟಿದ್ದ ಭಿಲ್ ಪಾರ್ಧಿಗಳು, ಡಿನೋಟಿಫೈ ಮಾಡಿದ 70 ವರ್ಷಗಳ ನಂತರವೂ ಸಾಮಾಜಿಕ ಕಳಂಕ ಮತ್ತು ವಂಚಿತತೆಯ ಜೀವನವನ್ನು ನಡೆಸುತ್ತಿದ್ದಾರೆ ಎನ್ನುವುದನ್ನು ಅವರು ಹೇಳುವುದಿಲ್ಲ. ಮತ್ತು ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಿದ ನಂತರವೂ. ಈ ಸಮುದಾಯದ ವಲಸೆಗಳು ಹೆಚ್ಚಾಗಿ ದಬ್ಬಾಳಿಕೆಯ ಕಾರಣದಿಂದ ನಡೆಯುತ್ತವೆ.

ನಿಸ್ಸಂಶಯವಾಗಿ, ಈ ಜನರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ವಲಸೆಯ ಬಗ್ಗೆ ಮಾತನಾಡಿದ್ದನ್ನು ಕೇಳಿಲ್ಲ. ಅವರು ಹಾಗೆ ಮಾತನಾಡಿದರೂ ಅದು ಅವರನ್ನು ಮೆಚ್ಚಿಸುವುದಿಲ್ಲ. "ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿದೆ, ಇದರಿಂದ ವಲಸೆ ಒಂದು ಆಯ್ಕೆಯಾಗುತ್ತದೆ, ಆದರೆ ಅಗತ್ಯವಾಗಿ ಉಳಿಯುವುದಿಲ್ಲ" ಎಂದು ಅವರು ತಮ್ಮ 2025-26 ರ ಬಜೆಟ್ ಭಾಷಣದಲ್ಲಿ ಹೇಳಿದ್ದರು.

PHOTO • Jyoti

ಬಾಬಾ ಸಾಹೇಬ್ (57) (ಬಲ), ಮಂದಾ (ಕೆಂಪು ಮತ್ತು ನೀಲಿ ಬಣ್ಣದ ಉಡುಪಿನಲ್ಲಿ), ಅವರ ಮಗ ಆಕಾಶ್ (23) ಮತ್ತು ಸ್ವಾತಿ (22) ಎಂಬ ನಾಲ್ಕು ಜನರಿರುವ ಈ ಭಿಲ್ ಪಾರ್ಧಿ ಕುಟುಂಬಕ್ಕೆ ತಿಂಗಳಲ್ಲಿ 15 ದಿನಗಳಿಗಿಂತ ಹೆಚ್ಚು ಕೆಲಸ ಸಿಗುವುದಿಲ್ಲ. ಅವರ ಪಾಲಿಗೆ ವಲಸೆ ಎನ್ನುವುದು ಯಾವಾಗಲೂ ದಬ್ಬಾಳಿಕೆಯ ಪರಿಣಾಮವೇ ಹೊರತು ಆಯ್ಕೆಯ ವಿಷಯವಲ್ಲ

ಆಡಳಿತ ಸೌಧದಿಂದ ಸುಮಾರು 1,400 ಕಿಲೋಮೀಟರ್ ದೂರದಲ್ಲಿರುವ ಭಿಲ್ ಪಾರ್ಧಿ ಸಮುದಾಯಕ್ಕೆ ಸೇರಿದ ಬಾಬಾ ಸಾಹೇಬ್ ಮತ್ತು ಕುಟುಂಬವು ಕಡಿಮೆ ಆಯ್ಕೆ ಮತ್ತು ಕಡಿಮೆ ಅವಕಾಶಗಳ ನಡುವೆ ಜೀವನವನ್ನು ನಡೆಸುತ್ತದೆ.   ಭಾರತದ 144 ಮಿಲಿಯನ್ ಜನರಂತೆ ಇವರೂ ಭೂರಹಿತರು, ಅವರಿಗೆ ಕೆಲಸ ಹುಡುಕುವುದೇ ದೊಡ್ಡ ಸವಾಲಾಗಿದೆ.

"ನಮಗೆ ತಿಂಗಳಿಗೆ ಕೇವಲ 15 ದಿನ ಕೆಲಸ ಸಿಗುತ್ತದೆ. ಉಳಿದ ದಿನಗಳಲ್ಲಿ ನಾವು ನಿರುದ್ಯೋಗಿಗಳಾಗಿರುತ್ತೇವೆ" ಎಂದು ಬಾಬಾ ಸಾಹೇಬ್ ಅವರ ಮಗ ಆಕಾಶ್ ಹೇಳುತ್ತಾರೆ. ಆದರೆ ಇಂದು ಅಪರೂಪದ ದಿನ, ಆಕಾಶ್ (23), ಅವರ ಪತ್ನಿ ಸ್ವಾತಿ (22), ಮಂದಾ (55) ಮತ್ತು ಬಾಬಾ ಸಾಹೇಬ್ (57) ಈ ನಾಲ್ವರಿಗೂ ಹತ್ತಿರದ ಹಳ್ಳಿಯ ಈರುಳ್ಳಿ ಹೊಲಗಳಲ್ಲಿ ಕೆಲಸ ಸಿಕ್ಕಿತ್ತು.

ಈ ಕುಗ್ರಾಮದಲ್ಲಿರುವ  50 ಆದಿವಾಸಿ ಕುಟುಂಬಗಳಿಗೆ ಕುಡಿಯುವ ನೀರು, ವಿದ್ಯುತ್ ಅಥವಾ ಶೌಚಾಲಯಗಳ ಸೌಲಭ್ಯವಿಲ್ಲ. "ನಾವು ಶೌಚಾಲಯಕ್ಕಾಗಿ ಕಾಡಿಗೆ ಹೋಗುತ್ತೇವೆ. ಆರಾಮ್ [ಸೌಕರ್ಯ] ಇಲ್ಲ, ಭದ್ರತೆ ಇಲ್ಲ. ಹತ್ತಿರದ ಹಳ್ಳಿಗಳಲ್ಲಿನ ಬಗಾಯತ್ ದಾರ್ [ತೋಟಗಾರಿಕೆ ರೈತರು] ನಮ್ಮ ಏಕೈಕ ಆದಾಯದ ಮೂಲ" ಎಂದು ಸ್ವಾತಿ ಎಲ್ಲರಿಗೂ ಟಿಫಿನ್ ಪ್ಯಾಕಿಂಗ್ ಮಾಡುತ್ತಾ ಹೇಳಿದರು.

"ಈರುಳ್ಳಿ ಕೊಯ್ಲು ಮಾಡಿದರೆ ನಮಗೆ ದಿನಕ್ಕೆ 300 ರೂಪಾಯಿ ಸಿಗುತ್ತದೆ. ಸಂಪಾದನೆ ಇರುವ ಪ್ರತಿ ದಿನವೂ ನಮ್ಮ ಪಾಲಿಗೆ ಮುಖ್ಯ" ಎಂದು ಬಾಬಾ ಸಾಹೇಬ್ ಹೇಳುತ್ತಾರೆ. ಕುಟುಂಬದ ಸಂಯೋಜಿತ ಆದಾಯವು ವಾರ್ಷಿಕವಾಗಿ 1.6 ಲಕ್ಷ ರೂ.ಗಳನ್ನು ತಲುಪುವುದಿಲ್ಲ, ಇದು ಅವರಿಗೆ ಎಷ್ಟು ಬಾರಿ ಕೆಲಸ ಸಿಗುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಇದು ಅವರ ಪಾಲಿಗೆ ಆದಾಯ ತೆರಿಗೆಯ ಮೇಲಿನ 12 ಲಕ್ಷ ರೂ.ಗಳ ವಿನಾಯಿತಿಯನ್ನು ಅರ್ಥಹೀನವಾಗಿಸುತ್ತದೆ.  "ಕೆಲವೊಮ್ಮೆ ನಾವು ಆರು ಕಿಲೋಮೀಟರ್, ಕೆಲವೊಮ್ಮೆ ಅದಕ್ಕಿಂತ ಹೆಚ್ಚು ನಡೆಯುತ್ತೇವೆ. ಕೆಲಸ ಲಭ್ಯವಿರುವಲ್ಲಿಗೆ ನಾವು ಹೋಗುತ್ತೇವೆ" ಎಂದು ಆಕಾಶ್ ಹೇಳುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Jyoti

جیوتی پیپلز آرکائیو آف رورل انڈیا کی ایک رپورٹر ہیں؛ وہ پہلے ’می مراٹھی‘ اور ’مہاراشٹر۱‘ جیسے نیوز چینلوں کے ساتھ کام کر چکی ہیں۔

کے ذریعہ دیگر اسٹوریز Jyoti
Editor : Pratishtha Pandya

پرتشٹھا پانڈیہ، پاری میں بطور سینئر ایڈیٹر کام کرتی ہیں، اور پاری کے تخلیقی تحریر والے شعبہ کی سربراہ ہیں۔ وہ پاری بھاشا ٹیم کی رکن ہیں اور گجراتی میں اسٹوریز کا ترجمہ اور ایڈیٹنگ کرتی ہیں۔ پرتشٹھا گجراتی اور انگریزی زبان کی شاعرہ بھی ہیں۔

کے ذریعہ دیگر اسٹوریز Pratishtha Pandya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru