“ಕಡಲಿಲೆ ರಾಜಾವು ತಿಮಿಂಗಳಾಣೆಂಕಿಲುಂ ನಮ್ಮಲೆ, ಮೀನ್ ಪನಿಕ್ಕಾರೆ ರಾಜವ್ ಮತಿಯಾನ್
[ಇಡೀ ಕಡಲಿಗೆ ರಾಜ ತಿಮಿಂಗಿಲವಾದರೂ, ನಮ್ಮಂತ ಮೀನು ಕೆಲಸಗಾರರ ರಾಜ ಮತ್ತಿ ಮೀನು]."
ಬಾಬು (ಹೆಸರು ಬದಲಾಯಿಸಲಾಗಿದೆ) ಕೇರಳದ ವಡಕರ ಪಟ್ಟಣದ ಚೊಂಬಲ್ ಫಿಶರಿ ಹಾರ್ಬರ್‌ನಲ್ಲಿ ಮೀನು ಲೋಡು ಮಾಡುವ ಕೆಲಸಗಾರ. ಕಳೆದ ಕೆಲವು ದಶಕಗಳಿಂದ ಅವರು ಮೀನುಗಳನ್ನು, ಅದರಲ್ಲೂ ಹೆಚ್ಚಾಗಿ ಎಣ್ಣೆ ಮತ್ತಿ ಮೀನುಗಳನ್ನು (ಸಾರ್ಡಿನೆಲ್ಲಾ ಲಾಂಗಿಸೆಪ್ಸ್) ಲೋಡ್ ಮಾಡುವ ಮತ್ತು ಲೋಡ್ ಇಳಿಸುವ ಕೆಲಸ ಮಾಡುತ್ತಿದ್ದಾರೆ.
ಬೆಳಿಗ್ಗೆ 7 ಗಂಟೆಗೆ ಬಂದರಿಗೆ ಬರುವ ಬಾಬು ತಮ್ಮ ಬಟ್ಟೆಗಳನ್ನು ಕಳಚಿ ಒಂದು ಬದಿಯಲ್ಲಿ ತೆಗೆದಿಟ್ಟಿರುವ ನೀಲಿ ಮುಂಡು ಮತ್ತು ಟೀ ಶರ್ಟ್, ಜೊತೆಗೆ ಚಪ್ಪಲಿಗಳನ್ನು ತೊಟ್ಟು ಕೆಲಸಕ್ಕೆ ಸಿದ್ದವಾಗುತ್ತಾರೆ. 49 ವರ್ಷ ವಯಸ್ಸಿನ ಈ ಲೋಡರ್ ಮೊಣಕಾಲೆತ್ತರ ಬಂದಿರುವ ಕೆಸರು ನೀರಿನಲ್ಲಿ ನಡೆಯುತ್ತಾ ಸಮುದ್ರದ ಕಡೆಗೆ ಬಂದು ದೋಣಿಗಳ ಬಳಿ ಬರುತ್ತಾರೆ. "ಈ ನೀರು ತುಂಬಾ ವಾಸನೆ ಬರುವುದರಿಂದಾಗಿ ನಾವೆಲ್ಲಾ [ಲೋಡರ್‌ಗಳು] ಈ ಕೆಲಸಕ್ಕಾಗಿ ಬೇರೆಯೇ ಚಪ್ಪಲಿ ಮತ್ತು ಬಟ್ಟೆಗಳನ್ನು ತೊಟ್ಟುಕೊಳ್ಳುತ್ತೇವೆ," ಎಂದು ಅವರು ಹೇಳುತ್ತಾರೆ. ಸಂಜೆಯ ವೇಳೆಗೆ ಇಡೀ ಬಂದರು ಸ್ತಬ್ಧವಾದ ಮೇಲೆ ಅವರು ಹೊರಡುತ್ತಾರೆ.
ಡಿಸೆಂಬರ್ ತಿಂಗಳ ಒಂದು ದಿನ ಆಗಲೇ ಕೆಲಸ ಶುರುಮಾಡಿದ್ದ ಬಾಬು ಅವರೊಂದಿಗೆ ಮಾತನಾಡಲು ವರದಿಗಾರರು ಬಂದರಿಗೆ ಬಂದಾಗ ಇಡೀ ಬಂದರೇ ಕೆಲಸದಲ್ಲಿ ಮುಳುಗಿ ಹೋಗಿತ್ತು. ಉದ್ದ ಕತ್ತಿನ ಬಿಳಿ ಕೊಕ್ಕರೆಗಳು ಮೀನುಗಳನ್ನು ಕದಿಯಲು ದೋಣಿಗಳಲ್ಲಿದ್ದ ಬಿದಿರಿನ ಬುಟ್ಟಿಗಳ ಸುತ್ತಲೂ ಸುಳಿದಾಡುತ್ತಿದ್ದವು. ಮೀನುಗಳಿಂದ ತುಂಬಿಹೋಗಿದ್ದ ಬಲೆಗಳು ನೆಲದ ಮೇಲೆ ಬಿದ್ದಿದ್ದವು. ಗಿಜಿಗುಡುತ್ತಿದ್ದ ಜನಗಳ ಮಾತು ಇಡೀ ಬಂದರನ್ನು ಆವರಿಸಿತ್ತು.
ಗ್ರಾಹಕರು, ಮಾರಾಟಗಾರರು, ಏಜೆಂಟ್‌ಗಳು ಮತ್ತು ದೋಣಿಗಳಿಂದ ಮೀನುಗಳನ್ನು ಬಂದರಿಗೆ ತಂದು ಅಲ್ಲೇ ಕಾಯುತ್ತಾ ನಿಂತಿರುವ ಟೆಂಪೋಗಳಿಗೆ ಲೋಡ್ - ಆಫ್‌ಲೋಡ್ ಮಾಡುವ ಬಾಬುರವರಂತಹ ಜನರಿಂದ ತುಂಬಿಹೋಗಿದ್ದ, ಗದ್ದಲದಲ್ಲಿ ಮುಳುಗಿದ್ದ ಬಂದರಿನ ಒಳಗೆ, ಹೊರಗೆ ಬೇರೆ ಬೇರೆ ಗಾತ್ರದ ದೋಣಿಗಳು ಚಲಿಸುತ್ತಿದ್ದವು. ಅವರ ಅಂದಾಜಿನ ಪ್ರಕಾರ ಇಲ್ಲಿ 200 ಜನರು ಕೆಲಸ ಮಾಡುತ್ತಾರೆ.
ಬಾಬು ಅವರು ನಿತ್ಯ ಬೆಳಿಗ್ಗೆ ಬಂದರಿಗೆ ತಲುಪಿದ ಹಾಗೇ ಮಾಡುವ ಮೊದಲ ಕೆಲಸವೆಂದರೆ ತಮ್ಮಲ್ಲಿರುವ ಕಿತ್ತಳೆ ಬಣ್ಣದ ಪ್ಲಾಸ್ಟಿಕ್ ಬುಟ್ಟಿ, ನೀರಿನ ಬಾಟಲಿ, ಚಪ್ಪಲಿ ಮತ್ತು ತೆರುವ ಎಂದು ಕರೆಯುವ ವೃತ್ತಾಕಾರದಲ್ಲಿ ಬಟ್ಟೆ ಅಥವಾ ಹಗ್ಗದ ಬಂಡಲನ್ನು ಸುತ್ತಿ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿ ಮಾಡಿರುವ ಸಿಂಬಿ ಮೊದಲಾದ ಸಲಕರಣೆಗಳನ್ನು ಎತ್ತರದ ಬಾದಾಮಿ ಮರದ ಅಡಿಯಲ್ಲಿ ಇಡುವುದು. ಈ ತೆರುವವನ್ನು ಬುಟ್ಟಿ ಮತ್ತು ತಲೆಯ ನಡುವೆ ಮೆತ್ತಗೆ ಇರಿಸಿ, ಅದರ ಮೇಲೆ ಮೀನಿನ ಹೊರೆಯನ್ನು ಹೊರುತ್ತಾರೆ.
ಇವತ್ತು ಈ ಬಂದರಿನಲ್ಲಿರುವ ಚಿಕ್ಕ ದೋಣಿಗಳಲ್ಲಿ ಒಂದಾದ ನಾಲ್ಕು ಜನ ಕೂರಬಲ್ಲ ಔಟ್‌ಬೋರ್ಡ್ ಎಂಜಿನ್ ಬೋಟ್‌ನಿಂದ ಮೀನು ಸಂಗ್ರಹಿಸುತ್ತಾರೆ. ಇನ್-ಹೌಸ್ ಲೋಡರ್‌ಗಳು ಹೆಚ್ಚಾಗಿ ಕಮರ್ಷಿಯಲ್ ಟ್ರಾಲರ್‌ಗಳನ್ನು ಬಳಸುವುದರಿಂದ ಇವರು ಟ್ರಾಲರ್ ಇಲ್ಲದ ದೋಣಿಗಳಲ್ಲಿ ಮಾತ್ರ ಕೆಲಸ ಮಾಡುತ್ತಾರೆ. "ಈ ಮೀನುಗಾರರು ದೊಡ್ಡ ದೋಣಿಗಳಲ್ಲಿ ಒಂದು ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಸಮುದ್ರಲ್ಲೇ ಇರುತ್ತಾರೆ," ಅವರು ಹೇಳುತ್ತಾರೆ, "ಆ ದೋಣಿ ದೂರ ಇರುವುದರಿಂದ ಬಂದರಿಗೆ ಬರಲು ಸಾಧ್ಯವಿಲ್ಲ. ಮೀನುಗಾರರು ಈ ಚಿಕ್ಕ ದೋಣಿಗಳಲ್ಲಿ ಮೀನುಗಳನ್ನು ನಮಗೆ ತಂದುಕೊಡುತ್ತಾರೆ,”ಎಂದು ಬಾಬು ಹೇಳುತ್ತಾರೆ.
ಬಾಬು ಮಾಲ್ ಎಂಬ ಸಣ್ಣ ಬಲೆಯಿಂದ ಎಣ್ಣೆ ಮತ್ತಿ ಮೀನುಗಳನ್ನು ತನ್ನ ಬುಟ್ಟಿಗೆ ಹೆಕ್ಕಿ ಹಾಕುತ್ತಾರೆ. ನಾವು ಬಂದರಿನಿಂದ ಹಿಂತಿರುಗುವಾಗ ಬುಟ್ಟಿಯಲ್ಲಿನ ಸಣ್ಣ ತೂತುಗಳಿಂದ ನೀರು ಹೊರಬರುತ್ತಿತ್ತು. "ಈ ತಿಂಗಳು [ಡಿಸೆಂಬರ್ 2022] ನಾವು ಮತ್ತಿ ಮೀನುಗಳ ದೊಡ್ಡ ರಾಶಿಯನ್ನೇ ಹಿಡಿದಿದ್ದೇವೆ” ಎಂದು ಅವರು ಹೇಳುತ್ತಾರೆ. ಮೀನಿನ ಬುಟ್ಟಿಯನ್ನು ಸಾಗಿಸಲು ಇವರು 40 ರುಪಾಯಿ ಪಡೆಯುತ್ತಾರೆ ಮತ್ತು ಈ ಸಂಬಳವನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಮರುಮಾರಾಟ ಮಾಡಲು ಮೀನುಗಳನ್ನು ಖರೀದಿಸುವ ದೋಣಿ ಮಾಲೀಕರು ಅಥವಾ ಏಜೆಂಟ್‌ಗಳು ಕೊಡುತ್ತಾರೆ..
"ನಾವು ದಿನಕ್ಕೆ ಎಷ್ಟು ಬುಟ್ಟಿಗಳನ್ನು ಹೊರುತ್ತೇವೆ ಎಂದು ಹೇಳುವುದು ಕಷ್ಟ, ಏಕೆಂದರೆ ಅದು ಎಷ್ಟು ಮೀನು ಬರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ" ಎಂದು ಬಾಬು ಹೇಳುತ್ತಾರೆ. ಕೆಲವೊಂದು ದಿನಗಳಲ್ಲಿ ಅವರು ಅತ್ಯಂತ ಹೆಚ್ಚು ಅಂದರೆ 2,000 ರುಪಾಯಿ ಗಳಿಸುವುದೂ ಇದೆ ಎಂದು ಅವರು ಹೇಳುತ್ತಾರೆ. "ಹೆಚ್ಚು ಹೆಚ್ಚು ಎಣ್ಣೆ ಮತ್ತಿ ಮೀನುಗಳು ಬಂದರೆ ಮಾತ್ರ ನಾನು ಅಷ್ಟು ಸಂಪಾದಿಸಬಲ್ಲೆ," ಎನ್ನುತ್ತಾರೆ.
*****
ಬಾಬು ಹದಿಹರೆಯದಲ್ಲಿಯೇ ಮೀನುಗಾರಿಕೆ ಉದ್ಯಮದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದವರು. ಮೀನುಗಾರನಾಗಿ ಕೆಲಸ ಆರಂಭಿಸಿದ ಇವರು ಕೆಲವೇ ವರ್ಷಗಳಲ್ಲಿ ಬಂದರಿನಲ್ಲಿ ಲೋಡಿಂಗ್ ಕೆಲಸವನ್ನು ಮಾಡಲು ಪ್ರಾರಂಭಿಸಿದರು. ಕೋಯಿಕ್ಕೋಡ್ ಜಿಲ್ಲೆಯ ಅರಬ್ಬಿ ಸಮುದ್ರದಿಂದ ದೋಣಿಗಳು ಹಿಂತಿರುಗಲು ಆರಂಭವಾದ ನಂತರವೇ ಅವರ ಚೋಮಾಡು ಪನಿ ಅಥವಾ ದೈನಂದಿನ ಲೋಡಿಂಗ್ ಕೆಲಸ ಪ್ರಾರಂಭವಾಗುತ್ತದೆ.
ಕಳೆದ ದಶಕದಿಂದ ಅವರು ಎಣ್ಣೆ ಮತ್ತಿ ಮೀನುಗಾರಿಕೆಯಲ್ಲಿ ಆಗಿರುವ ಅನಿರೀಕ್ಷಿತತೆಯನ್ನು ಗಮನಿಸಿದ್ದಾರೆ.
"ಕಡಿಮೆ ಎಣ್ಣೆ ಮತ್ತಿ ಮೀನುಗಳು ಸಿಕ್ಕಾಗ ನಾವು [ಲೋಡ್ ಮಾಡುವ] ಕೆಲಸವನ್ನು ಪರಸ್ಪರ ಹಂಚಿಕೊಳ್ಳುತ್ತೇವೆ. ಹೆಚ್ಚು ಖಾಲಿ ದೋಣಿಗಳು ಬಂದರೆ ನಾವೆಲ್ಲರೂ ತೀರ್ಮಾನಿಸಿದಂತೆಯೇ ಎಲ್ಲರಿಗೂ ಕನಿಷ್ಠ ಕೆಲಸವಾದರೂ ಸಿಕ್ಕಲಿ ಎಂದು ಎಲ್ಲವನ್ನೂ ನೋಡುತ್ತೇವೆ,” ಎಂದು ಅವರು ಹೇಳುತ್ತಾರೆ.
ತಾಯಿ, ಹೆಂಡತಿ ಮತ್ತು ಇಬ್ಬರು ಗಂಡುಮಕ್ಕಳ ಹೊಂದಿರುವ ಐದು ಮಂದಿ ಇರುವ ಕುಟುಂಬದಲ್ಲಿ ದುಡಿದು ತರುವ ಏಕೈಕ ಸದಸ್ಯರಾದ ಬಾಬು ಮೀನು ಕ್ಯಾಚ್‌ನಲ್ಲಿ ಆಗಿರುವ ಅನಿಶ್ಚಿತತೆಯು ಬಂದರಿನಲ್ಲಿರುವ ದೈನಂದಿನ ಕೂಲಿ ಕಾರ್ಮಿಕರ ಮೇಲೆ ತೀವ್ರವಾದ ಹೊಡೆತವನ್ನು ನೀಡಿದೆ ಎಂದು ಹೇಳುತ್ತಾರೆ.
2021 ರಲ್ಲಿ, 3,297 ಟನ್‌ಗಳಷ್ಟು ಎಣ್ಣೆ ಸಾರ್ಡೀನ್ ಮೀನುಗಳು ಸಿಗುತ್ತಿದ್ದ ಕೇರಳದಲ್ಲಿ 1995 ರಿಂದ ಕಡಿಮೆಯಾಗಿದೆ ಎಂದು ಕೊಚ್ಚಿಯ ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಎಂಎಫ್‌ಆರ್‌ಐ) ಪ್ರಕಟಿಸಿದ ಮೆರೈನ್ ಫಿಶ್ ಲ್ಯಾಂಡಿಂಗ್ಸ್ ಇನ್ ಇಂಡಿಯಾ 2021 ಹೇಳುತ್ತದೆ. "ಕಳೆದ ಹತ್ತು ವರ್ಷಗಳಲ್ಲಿ ನಾವು ಎಣ್ಣೆ ಮತ್ತಿ ಮೀನುಗಳ ಕ್ಯಾಚ್ ನಲ್ಲಿ ಕುಸಿತವನ್ನು ಕಂಡಿದ್ದೇವೆ ಮತ್ತು ಈ ಮೀನು ಕೇರಳದ ಕರಾವಳಿಯಿಂದ ಮತ್ತಷ್ಟು ದೂರ ಹೋಗುತ್ತಿರುವುದನ್ನು ಗಮನಿಸಿದ್ದೇವೆ" ಎಂದು ಹೆಸರು ಹೇಳಲು ಬಯಸದ ಸಿಎಂಎಫ್‌ಆರ್‌ಐ ಕೊಚ್ಚಿಯ ವಿಜ್ಞಾನಿಯೊಬ್ಬರು ಹೇಳುತ್ತಾರೆ. ಹವಾಮಾನ ಬದಲಾವಣೆ, ಎಣ್ಣೆ ಮತ್ತಿ ಮೀನುಗಳ ಆವರ್ತಕ ಬೆಳವಣಿಗೆ, ಲಾ ನಿನೊ ಪರಿಣಾಮ ಮತ್ತು ಹೆಚ್ಚುತ್ತಿರುವ ಜೆಲ್ಲಿ ಮೀನುಗಳು ಮತ್ತಿ ಮೀನುಗಾರಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ ಎಂದು ಅವರು ಹೇಳುತ್ತಾರೆ.
2020 ರ ಮೀನುಗಾರಿಕೆ ಅಂಕಿಅಂಶಗಳ ಕೈಪಿಡಿ ಯಲ್ಲಿ ಪಶ್ಚಿಮ ಕರಾವಳಿಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇರಳವು ಅತೀ ಹೆಚ್ಚು, ಅಂದರೆ 0.45 ಲಕ್ಷ ಟನ್ಗಳಷ್ಟು ಭಾರತೀಯ ಮತ್ತಿ ಮೀನುಗಳನ್ನು ಇಳಿಸಿದೆ ಎಂದು ಉಲ್ಲೇಖಿಸಲಾಗಿದೆ.
ಎಣ್ಣೆ ಮತ್ತಿ ಮೀನುಗಳು ಕೇರಳದಲ್ಲಿ ಸಾಮಾನ್ಯವಾಗಿ ಸಿಗುವ ಪೌಷ್ಟಿಕ ಮತ್ತು ಅಗ್ಗದ ಮೀನುಗಳಲ್ಲಿ ಒಂದು ಎಂದು ಬಾಬು ಹೇಳುತ್ತಾರೆ. ಅವುಗಳನ್ನ ಒಣಗಿಸಿ ಕೂಡ ತಿನ್ನುತ್ತಾರೆ. ಕೋಳಿಗಳ ಆಹಾರ ತಯಾರಿಸಲು ಮತ್ತು ಮೀನಿನ ಎಣ್ಣೆ ತಯಾರಿಸಲು ಮಂಗಳೂರು ಹಾಗೂ ಇತರ ಸುತ್ತಮುತ್ತಲಿನ ಪ್ರದೇಶಗಳ ಸಂಸ್ಕರಣಾ ಮಿಲ್‌ಗಳಿಗೆ ಹೋಗುವ ಮೀನುಗಳ ಪ್ರಮಾಣದಲ್ಲಿ ಆಗಿರುವ ಏರಿಕೆಯನ್ನು ಅವರು ಗಮನಿಸಿದ್ದಾರೆ. "ಇಲ್ಲಿ ಬೇರೆ ಮೀನುಗಳಿಗಿಂತ ಹೆಚ್ಚು ಎಣ್ಣೆ ಮತ್ತಿ ಮೀನುಗಳಿವೆ, ಆದ್ದರಿಂದ ನಮಗೆ ತುಂಬಾ ಬುಟ್ಟಿಗಳನ್ನು ತುಂಬಿಸಲು ಸಾಧ್ಯವಾಗುತ್ತದೆ,” ಎನ್ನುತ್ತಾರೆ ಬಾಬು.
ಅನುವಾದಕರು: ಚರಣ್ ಐವರ್ನಾಡು