``ಈ ನೇಯುವ ಕೆಲಸವು ಸ್ಥಿರತೆಯುಳ್ಳದ್ದಲ್ಲವೆಂದು ನನ್ನ ಮಕ್ಕಳು ನನಗೆ ಹೇಳಿದ್ದರು. ಹೀಗಾಗಿ ಭಾಗಲಪುರದಲ್ಲಿ ಟೈಲರಿಂಗ್ ಅನ್ನು ಕಲಿತು ಮುಂಬೈನತ್ತ ಅವರು ಹೆಜ್ಜೆಹಾಕಿದ್ದರು. ಈಗ ಅವರು ತಿಂಗಳಿಗೆ 10,000-15,000 ರೂಪಾಯಿಗಳವರೆಗೆ ಸಂಪಾದಿಸುತ್ತಿದ್ದಾರೆ'', ಎನ್ನುತ್ತಾರೆ ಅಬ್ದುಲ್ ಸತ್ತಾರ್ ಅನ್ಸಾರಿ. ವೃತ್ತಿಯಲ್ಲಿ ನೇಕಾರರಾಗಿರುವ ಅರವತ್ತರ ವೃದ್ಧ ಸತ್ತಾರ್ ಭಾಯಿ ಕಟೋರಿಯಾ ಹಳ್ಳಿಯ ನಿವಾಸಿ.
ಈ ನೇಕಾರ ವೃತ್ತಿಯು ಕಟೋರಿಯಾದಲ್ಲಿ ಅದೆಷ್ಟು ವರ್ಷಗಳಿಂದ ನಡೆದು ಬರುತ್ತಿದೆ ಎಂಬ ಮಾಹಿತಿಯು ಸತ್ತಾರ್ ಭಾಯಿಗೆ ಇದ್ದಂತಿಲ್ಲ. ತನ್ನ ತಾತ ನೇಯುತ್ತಿದ್ದರೆಂಬುದು ಆತನಿಗೆ ನೆನಪಿದೆ. ಇನ್ನು ಅವರಿಗೂ ತನ್ನ ತಾತ ನೇಯುತ್ತಿದ್ದರೆಂಬ ನೆನಪಿತ್ತಂತೆ.ಸಾಂಪ್ರದಾಯಿಕವಾಗಿ ನೋಡಿದರೆ ಮಹಿಳೆಯರನ್ನು ಕಟೋರಿಯಾದ ನೇಕಾರರ ಸಾಲಿಗೆ ಸೇರಿಸಿ ಪರಿಗಣಿಸುವುದು ಕಷ್ಟ. ಆದರೆ ರೇಷ್ಮೆ ತಯಾರಿಕೆಯಲ್ಲಿ ಇರುವ ಮಹಿಳೆಯರ ಶ್ರಮವನ್ನು ಅಲ್ಲಗಳೆಯಲಂತೂ ಸಾಧ್ಯವಿಲ್ಲ. ಅವರು ಕಕೂನ್ ಗಳನ್ನು ಕುದಿಸಿ ನೂಲನ್ನು ಹೊರತೆಗೆಯುತ್ತಾರೆ. ಬೋಬಿನ್ ಗಳನ್ನು ತುಂಬುತ್ತಾರೆ. ಇನ್ನು ನೇಕಾರನೊಬ್ಬನು ತಾನು ನೇಯುವುದನ್ನು ಆರಂಭಿಸುವ ಮೊದಲಿನ ಬಹಳಷ್ಟು ಕೆಲಸಗಳನ್ನು ಈ ಮಹಿಳೆಯರೇ ಮಾಡುತ್ತಾರೆ. ಅಲ್ಲದೆ ಈ ಕೆಲಸಗಳು ಬಹಳ ಶ್ರಮ ಮತ್ತು ನೈಪುಣ್ಯತೆಯನ್ನು ಬೇಡುವಂಥವುಗಳು. ಇಷ್ಟಾಗಿಯೂ ಮಹಿಳೆಯರ ದಿನಗೂಲಿ ಮಾತ್ರ ಕೇವಲ 30 ರೂಪಾಯಿಗಳು. ಅಲ್ಲದೆ ರೇಷ್ಮೆ ತಯಾರಿಕೆಯಲ್ಲಿ ಮಹಿಳೆಯ ಪಾತ್ರವು ಇದ್ದೂ ಇಲ್ಲದಂತಾಗಿಬಿಟ್ಟಿದೆ.
ಹೀಗೆ ಬಿಹಾರದ ಬಂಕಾ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಪೀಳಿಗೆಯಿಂದ ಪೀಳಿಗೆಗೆ ಹರಿದುಬಂದ ಈ ವೃತ್ತಿಯು ಈಗ ನಿಧಾನವಾಗಿ ಮರೆಯಾಗುತ್ತಿದೆ. ಮುಸಲ್ಮಾನರೇ ಅಧಿಕ ಸಂಖ್ಯೆಯಲ್ಲಿರುವ ಈ ಪ್ರದೇಶದ 500-600 ಮನೆಗಳಲ್ಲಿ (2011 ರ ಜನಗಣತಿಯ ಪ್ರಕಾರ ಸುಮಾರು 8000 ದಷ್ಟಿನ ಜನಸಂಖ್ಯೆ) ಕೇವಲ ನಾಲ್ಕನೇ ಒಂದು ಭಾಗದಷ್ಟು ಜನ ಮಾತ್ರ ಈಗಲೂ ನೇಯುತ್ತಿದ್ದಾರೆ ಎನ್ನುವ ಲೆಕ್ಕವನ್ನು ಕೊಡುತ್ತಿದ್ದಾರೆ ಸತ್ತಾರ್ ಭಾಯಿ.
ತಮ್ಮ ಸಾವಿನೊಂದಿಗೇ ಈ ಪರಂಪರಾಗತ ವೃತ್ತಿಯೂ ಕೂಡ ಸಾಯಲಿದೆ ಎನ್ನುವುದು ಅಬ್ದುಲ್ ಸತ್ತಾರ್ ಅನ್ಸಾರಿಯಂತಹ ನೇಕಾರರ ಮನದಾಳದ ಮಾತು.
ಫೋಟೋ ಆಲ್ಬಮ್ ಗಾಗಿ ಇಲ್ಲಿ ನೋಡಿ: ತುಸ್ಸಾರ್:
ಕರಗುತ್ತಿರುವ ಕಕೂನ್